ಸುಸ್ಥಿರ ಕೃಷಿಗೆ ಪೂರಕವಾಗಿ ಅಧ್ಯಯನಗಳು ನಡೆಯಬೇಕಿದೆ-ಕೃಷಿ ವಿಶ್ವವಿದ್ಯಾಲಯಗಳಿಗೆ ಸಿದ್ದರಾಮಯ್ಯ ಸೂಚನೆ
ಕೃಷಿ ವಿವಿಗಳು Lab to Land ಜೊತೆಗೆ Land to Lab ಕಡೆಗೆ ಗಮನ ಹರಿಸುವ ಕೆಲಸ ಮಾಡಬೇಕು. ಕಡಿಮೆ ಮಳೆಯಲ್ಲೂ ಉತ್ತಮ ಬೆಳೆ ಬೆಳೆಯುವ ರೀತಿ ಸುಸ್ಥಿರ ಕೃಷಿಗೆ ಪೂರಕವಾಗಿ ಅಧ್ಯಯನಗಳು ನಡೆಯಬೇಕಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಬೆಣ್ಣೆಹಳ್ಳಕ್ಕೆ 200 ಕೋಟಿ ಕೊಟ್ಟಿದ್ದೇವೆ. ಟೆಂಡರ್ ಕರೆಯಲಾಗಿದೆ. ಸದ್ಯದಲ್ಲೇ ಕೆಲಸ ಕೂಡ ಆರಂಭವಾಗಲಿದೆ ಎಂದು ತಿಳಿಸಿದರು.

ಇತ್ತೀಚೆಗೆ ಫಲವತ್ತತೆ ಕಡಿಮೆ ಆಗುತ್ತಿರುವದರಿಂದ ಆಹಾರ ಉತ್ಪಾದನಾ ಪ್ರಮಾಣ ಕಡಿಮೆ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಸ್ಪಷ್ಟ ಕಾರಣಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳುವ ದಿಕ್ಕಿನಲ್ಲಿ ಕೃಷಿ ವಿವಿಗಳು ಹೆಚ್ಚೆಚ್ಚು ಅಧ್ಯಯನ ನಡೆಸಬೇಕು ಎಂದು ಕರೆ ನೀಡಿದ್ದಾರೆ. ಇದಕ್ಕೆ ಅಗತ್ಯವಾದ ಹಣಕಾಸಿನ ನೆರವನ್ನು ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದ್ದಾರೆ.

ಸೋಮವಾರದಂದು ಧಾರವಾಡದಲ್ಲಿ ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ್ದ ಕೃಷಿ ಮೇಳ-2025 ರಲ್ಲಿ ಭಾಗವಹಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ಸದ್ಯ ರಾಜ್ಯ ಹಾಲಿನ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಸದ್ಯದಲ್ಲೇ ಮಹಾರಾಷ್ಟ್ರ ರಾಜ್ಯವನ್ನು ಹಿಂದಿಕ್ಕಿ ನಾವೇ ನಂಬರ್ ಆದರೂ ಆಶ್ಚರ್ಯವಿಲ್ಲ. ಹೈನುಗಾರಿಕೆಯಲ್ಲಿ ನಾವು ಅಪಾರ ಪ್ರಗತಿ ಸಾಧಿಸಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

ಅಕ್ಕಿ, ರಾಗಿ, ಗೋಧಿಯಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗಿದ್ದು ಡಯಾಬಿಟಿಕ್ ಸಮಸ್ಯೆ ಇರುವವರ ಪ್ರಮಾಣ ಹೆಚ್ಚುತ್ತಿದೆ. ಆದ್ದರಿಂದ ಸಕ್ಕರೆ ಪ್ರಮಾಣ ಕಡಿಮೆ ಇರುವ ಸಿರಿಧಾನ್ಯ ಕೃಷಿಗೆ ಹೆಚ್ಚೆಚ್ಚು ಪ್ರೋತ್ಸಾಹ ನೀಡುತ್ತಿದ್ದೇವೆ ಎಂದು ಸಿಎಂ ತಿಳಿಸಿದರು.

ಕೃಷಿ ವಿವಿಗಳು Lab to Land ಜೊತೆಗೆ Land to Lab ಕಡೆಗೆ ಗಮನ ಹರಿಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದ ಸಿಎಂ ಸಿದ್ದರಾಮಯ್ಯ, ಕಡಿಮೆ ಮಳೆಯಲ್ಲೂ ಉತ್ತಮ ಬೆಳೆ ಬೆಳೆಯುವ ರೀತಿ ಸುಸ್ಥಿರ ಕೃಷಿಗೆ ಪೂರಕವಾಗಿ ಅಧ್ಯಯನಗಳು ನಡೆಯಬೇಕಿದೆ ಎಂದು ಹೇಳಿದರು.
ಮೊದಲೆಲ್ಲಾ ಕೃಷಿ ಚಟುವಟಿಕೆಗೆ ಪೂರಕವಾಗಿ ಗ್ರಾಮ ಸಹಾಯಕರು ಇದ್ದು, ಅವರು ಗ್ರಾಮಗಳಲ್ಲೇ ನೆಲೆಸುತ್ತಿದ್ದರು. ಈಗ ಅವರ ಸಂಖ್ಯೆ ಕಡಿಮೆ ಆಗಿದ್ದು ಮತ್ತೆ ಇವರ ಪ್ರಮಾಣ ಹೆಚ್ಚಾಗುವ ದಿಕ್ಕಿನಲ್ಲಿ ಕೃಷಿ ಸಚಿವರು ಕ್ರಮ ತೆಗೆದುಕೊಳ್ಳಬೇಕಿದೆ ತಿಳಿಸಿದರು.

ಕೃಷಿ ಭೂಮಿಗಳು ಹೆಚ್ಚಾಗದೆ, ಕೃಷಿಯ ಪ್ರಮಾಣ ಹೆಚ್ಚಾಗದೆ ಕೇವಲ ಕೃಷಿ ವಿವಿಗಳನ್ನು ಹೆಚ್ಚಿಸಿದರೆ ಹೆಚ್ಚಿನ ಅನುಕೂಲಗಳು ಆಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಬೆಣ್ಣೆಹಳ್ಳಕ್ಕೆ 200 ಕೋಟಿ ಕೊಟ್ಟಿದ್ದೇವೆ. ಟೆಂಡರ್ ಕರೆಯಲಾಗಿದೆ. ಸದ್ಯದಲ್ಲೇ ಕೆಲಸ ಕೂಡ ಆರಂಭವಾಗಲಿದೆ ಎಂದು ತಿಳಿಸಿದ ಸಿಎಂ, ಮಳೆಹಾನಿಯಿಂದ ಆಗಿರುವ ಬೆಳೆ ಹಾನಿ ಮತ್ತು ಅನಾಹುತಗಳ ಬಗ್ಗೆ ಧಾರವಾಡ ಜಿಲ್ಲಾಡಳಿತ ಶೇ.90 ಪರಿಹಾರ ನೀಡಿ, ಪ್ರಗತಿಯ ವರದಿ ನೀಡಿದೆ ಎಂದರು.
ಇದೇ ವೇಳೆ ಶ್ರೇಷ್ಠ ಕೃಷಿಕ ಮತ್ತು ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಮಾಡಿ, ಕೃಷಿ ಸಾಧಕರನ್ನು ಸಿಎಂ ಸಿದ್ದರಾಮಯ್ಯ ಗೌರವಿಸಿದರು.
ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ, ಕೃಷಿ ಸಚಿವ ಚೆಲುವರಾಯಸ್ವಾಮಿ, ಕಾಮಿ೯ಕ ಸಚಿವ ಸಂತೋಷ್ ಲಾಡ್, ಶಾಸಕರಾದ ಅಶೋಕ್ ಪಟ್ಟಣ, ಪ್ರಸಾದ್ ಅಬ್ಬಯ್ಯ, ಎನ್ ಎಚ್ ಕೋನರೆಡ್ಡಿ, ಜಿಲ್ಲಾಧಿಕಾರಿ ದಿವ್ಯಪ್ರಭಾ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ವರದಿ: ವಿಜಯೀಂದ್ರ ಹುನಗುಂದ್
ಪ್ರಧಾನ ಸಂಪಾದಕರು
ನ್ಯೂಇಂಡಿಯಾ ಕನ್ನಡ
ಬೆಂಗಳೂರು


