JAIL: ಕೈದಿಗಳಿಗೆ ರಾಜಾತಿಥ್ಯ ಹಿಂದೆ ಜೈಲು ಮಾಫಿಯಾದ ಕೈವಾಡ?-ನಿಜವಾಯ್ತು ಐಪಿಎಸ್ ರೂಪಾ ಮೌದ್ಗಿಲ್ ಆರೋಪ! ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ-ಡಾ.ಜಿ.ಪರಮೇಶ್ವರ್
ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಸಾಕ್ಷ್ಯ ಸಮೇತ ಬಯಲಿಗೆ ತಂದಿದ್ದರು. ಆದರೆ ಅವರು ಹಿರಿಯ ಅಧಿಕಾರಿ ವಿರುದ್ದ ಸಮರ ಸಾರಿದ್ದಾರೆ ಎಂಬ ಕಾರಣ ನೀಡಿ ಆಗ ಇಂತಹ ಗಂಭೀರ ವಿಷಯವನ್ನು ತಿಪ್ಪೆಗೆ ಸೇರುವಂತೆ ಮಾಡುವಲ್ಲಿ ಜೈಲು ಮಾಫಿಯಾ ಯಶಸ್ವಿಯಾಗಿತ್ತು.

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಹಾಡಹಗಲೇ ಅಕ್ರಮಗಳು ನಡೆಯುತ್ತಿವೆ ಎಂದು ಕೆಲ ವರುಷಗಳ ಹಿಂದೆ ಐಪಿಎಸ್ ಅಧಿಕಾರಿ ಶ್ರೀಮತಿ ರೂಪಾ ಮೌದ್ಗಿಲ್ ಅವರು ಆರೋಪ ಮಾಡಿದ್ದು ಸುಳ್ಳಲ್ಲ ಎಂಬುದು ಈಗ ಖಚಿತಗೊಂಡಿದೆ.
ಬಹುಷಃ ಆವಾಗಲೇ ಖಡಕ್ಕಾಗಿ ಕ್ರಮ ಕೈಗೊಂಡಿದ್ದರೇ ಈಗ ನಡೆದಿರುವ ಗುಂಡು ತುಂಡು ಪಾರ್ಟಿ, ಉಗ್ರರ ಕೈಯಲ್ಲಿ ಮೊಬೈಲ್ ಫೋನ್ ಬರುತ್ತಿರಲಿಲ್ಲ.

ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಸಾಕ್ಷ್ಯ ಸಮೇತ ಬಯಲಿಗೆ ತಂದಿದ್ದರು.
ಆದರೆ ಅವರು ಹಿರಿಯ ಅಧಿಕಾರಿ ವಿರುದ್ದ ಸಮರ ಸಾರಿದ್ದಾರೆ ಎಂಬ ಕಾರಣ ನೀಡಿ ಆಗ ಇಂತಹ ಗಂಭೀರ ವಿಷಯವನ್ನು ತಿಪ್ಪೆಗೆ ಸೇರುವಂತೆ ಮಾಡುವಲ್ಲಿ ಜೈಲು ಮಾಫಿಯಾ ಯಶಸ್ವಿಯಾಗಿತ್ತು.
ಮತ್ತದೇ ರಾಜಾತಿಥ್ಯ: ಕೈದಿಗಳ ಕೈಯಲ್ಲಿ ಮೊಬೈಲ್
ಜೈಲ್ ಅಧೀಕ್ಷಕ ಎತ್ತಂಗಡಿ-ಇಬ್ಬರು ಸಸ್ಪೆಂಡ್
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಬಹುಷಃ ಸ್ಫಾಪನೆಯಾದಾಗಿನಿಂದ ಒಂದಿಲ್ಲೊಂದು ವಿವಾದ ಮೈದಡವಿಕೊಂಡೇ ಸಾಗಿದೆ.
ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರು ಪ್ರಕರಣವೊಂದರಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ ನಂತರ ಈ ಜೈಲು ಇಡಿ ರಾಷ್ಟ್ರವೇ ಇಲ್ಲಿ ಗಮನಿಸುವಂತಾಗಿತ್ತು.

ವಿವಿಧ ಕಾರಣಗಳಿಂದ ರಾಜಕಾರಣಿಗಳು, ಕುಖ್ಯಾತ ರೌಡಿಗಳು, ಸೆಲಿಬ್ರೆಟಿಗಳು, ದೇಶದ್ರೋಹಿಗಳು, ಉಗ್ರರು ಈ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
ಇಂತಹ ಘಟಾನುಘಟಿಗಳು ಜೈಲು ಸೇರಿದ್ದಾಗ ಅವರ ಘನತೆಗೆ ತಕ್ಕಂತೆ ಜೈಲಿನೊಳಗೆ ಶುರುವಾದ ಸಕಲ ವ್ಯವಸ್ಥೆ ಇಂದಿಗೂ ಮುಂದುವರೆದಿದೆ.
ಈಗ ನಿನ್ನೆ ಮೊನ್ನೆ ಪರಪ್ಪನ ಅಗ್ರಹಾರ ಜೈಲಿನೊಳಗೆ ನಡೆದ ಪ್ರಕರಣ ಹೊಸದೇನಲ್ಲ. ಇದು ಜೈಲಿನೊಳಗೆ ಇರುವ ಮಾಫಿಯಾದವರೇ ಈ ಪ್ರಕರಣವನ್ನು ಹುಟ್ಟು ಹಾಕಿ ಅದನ್ನು ಬಯಲಿಗೆ ತಂದಿರುವುದು ಈಗ ಮೇಲ್ನೋಟಕ್ಕೆ ಬಯಲಾಗಿದೆ.

ಯಾರನ್ನೊ ಬಲಿಕೊಡಲು ಜೈಲು ಅಧಿಕಾರಿಗಳ ಒಂದು ಗುಂಪು ರೌಡಿಗಳ ಜೊತೆ ಸೇರಿ ಮಾಡುವ ವ್ಯವಸ್ಥಿತ ಕುತಂತ್ರ. ಈ ಕುಕೃತ್ಯ ಯಾರಿಂದಲೂ ತಡೆಯಲು ಸಾಧ್ಯವಿಲ್ಲ.
ಜೈಲು ಮಾಫಿಯಾದವರಿಗೆ ಭಾರಿ ಕುಳಗಳ ಬೆಂಬಲವಿರುವದರಿಂದ ಈ ಮಾಫಿಯಾವನ್ನು ಅಷ್ಟು ಸುಲಭವಾಗಿ ಮಣಿಸಲು ಸಾಧ್ಯವಿಲ್ಲದಂತಹ ಸ್ಥಿತಿಯಿದೆ.
ಇಂತಹದರ ಮಧ್ಯೆ ಈ ಜೈಲು ಮಾಫಿಯಾದ ಕೈವಾಡದಂತೇ ಬಯಲಿಗೆ ಬಂದಿರುವ ವಿಡಿಯೋ ಹಾಗೂ ಫೋಟೋಗಳನ್ನು ಇಟ್ಟುಕೊಂಡು ರಾಜ್ಯ ಸರ್ಕಾರವು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ.

ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವ ವಿಡಿಯೋಗಳು ವೈರಲ್ ಆಗಿರುವ ಹಿನ್ನೆಲೆಯಲ್ಲಿ ರಾಜ್ಯ ಗೃಹ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.
ಜೈಲಿನ ಮುಖ್ಯ ಅಧೀಕ್ಷಕ ಸುರೇಶ್ ಅವರನ್ನು ಎತ್ತಂಗಡಿ ಮಾಡಲಾಗಿದೆ. ಅಧೀಕ್ಷಕ ಮ್ಯಾಗೇರಿ ಮತ್ತು ಉಪಾಧೀಕ್ಷಕ ಅಶೋಕ್ ಭಜಂತ್ರಿ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ಇನ್ನುಈ ಪ್ರಕರಣದ ಸತ್ಯಾಸತ್ಯತೆ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ ಮಾಡಿ ಗೃಹ ಸಚಿವ ಡಾ. ಜಿ ಪರಮೇಶ್ವರ ಆದೇಶ ನೀಡಿದ್ದಾರೆ.
ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ, ಸಂದೀಪ್ ಪಾಟೀಲ್, ಅಮರನಾಥ್ ರೆಡ್ಡಿ, ರಿಷ್ಯಂತ್ ಸಮಿತಿಗೆ ಒಂದು ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಭ್ರಷ್ಟಚಾರ, ಮೋಜು ಗೋಜುಗಳನ್ನು ತಡೆಯಲು ರಾಜ್ಯ ಸರ್ಕಾರವು ಜೈಲಿನ ಮುಖ್ಯಸ್ಥರನ್ನಾಗಿ ಐಪಿಎಸ್ ಅಧಿಕಾರಿಯನ್ನು ನೇಮಕ ಮಾಡಲು ನಿರ್ಧರಿಸಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನ ಮೋಜು-ಗೋಜು ಪ್ರಕರಣ
ಜೈಲಿಗೆ ಮುಖ್ಯಸ್ಥರಾಗಿ ಶೀಘ್ರದಲ್ಲೇ ಬರಲಿದ್ದಾರೆ ಐಪಿಎಸ್ ಅಧಿಕಾರಿ

ಅಪರಾಧಿಗಳು ಮತ್ತು ವಿಚಾರಣಾಧೀನ ಕೈದಿಗಳು ಒಟ್ಟಿಗೆ ಇರುವದರಿಂದ ಜೈಲುಗಳ ಮೇಲೆ ನಿಗಾವಹಿಸಲು ಕಮಾಂಡ್ ಸೆಂಟರ್ ಸ್ಥಾಪನೆ ಮಾಡಲು ತೀರ್ಮಾನಿಸಲಾಗಿದೆ.
15 ದಿನದೊಳಗೆ ಕಮಾಂಡ್ ಸೆಂಟರ್ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಜೈಲು ಅಧಿಕಾರಿಗಳು, ಸಿಬ್ಬಂದಿ ವರ್ಗಾವಣೆ ಕಡ್ಡಾಯ
-ಡಾ.ಜಿ.ಪರಮೇಶ್ವರ್
ಹಿರಿಯ ಅಧಿಕಾರಿಗಳೊಂದಿಗೆ ನಡೆದ ಮಹತ್ವದ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ 5,000 ಕೈದಿಗಳಿದ್ದಾರೆ.

ಜೈಲುಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗು ಸಿಬ್ಬಂದಿ 5 ವರ್ಷಗಳಿಗೊಮ್ಮೆ ವರ್ಗಾವಣೆ ಕಡ್ಡಾಯವಾಗಲಿದ್ದು, ದೀರ್ಘಕಾಲ ಒಂದೇ ಕಡೆ ಕೆಲಸ ಮಾಡಿದರೆ ಬೇರು ಬಿಡುತ್ತಾರೆ.
ಅವರು ಪ್ರಭಾವ ಬೀರುವ ಸಾಧ್ಯತೆ ಹಿನ್ನಲೆ ಅಂತವರನ್ನು ಬೇರೆಡೆಗೆ ವರ್ಗಾವಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜೈಲಿನ ಮೋಜು ಗೋಜು ಹೊಸದಲ್ಲ-ಡಾ.ಪರಮೇಶ್ವರ್
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೆಲ ಕಾನೂನು ಬಾಹಿರ ಚಟುವಟಿಕೆಗಳು ಮಾಧ್ಯಮಗಳಲ್ಲಿ ಬಂದಿದ್ದನ್ನು ಗಮನಿಸಿದ್ದೇನೆ ಎಂದು ಡಾ.ಪರಮೇಶ್ವರ್ ಹೇಳಿದರು.
ಮುಖ್ಯವಾದ ಕೆಲವು ವಿಡಿಯೋಗಳು 2023ರಲ್ಲಿ ಆಗಿವೆ. ಒಂದೆರಡು ವಿಡಿಯೋಗಳು ಮಾತ್ರ 3-4 ತಿಂಗಳ ಹಿಂದೆ ಆಗಿದ್ದು. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಎಂದು ಹೇಳಿದರು.
ಸೋಮವಾರದಂದು ಬೆಂಗಳೂರಿನ ಗಾಂಧಿನಗರದಲ್ಲಿರುವ ಕಾರಾಗೃಹಗಳ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ.ಸಲೀಂ, ಗೃಹ ಇಲಾಖೆಯ ಕಾರ್ಯದರ್ಶಿ ಕೆ.ವಿ.ಶರತ್ಚಂದ್ರ, ಪೊಲೀಸ್ ಅಯುಕ್ತ ಸೀಮಂತ್ಕುಮಾರ್ ಸಿಂಗ್ , ಐಎಸ್ಡಿ ವಿಭಾಗದ ಎಡಿಜಿಪಿ ಚಂದ್ರಶೇಖರ್ ಉಪಸ್ಥಿತರಿದ್ದರು.
ಪರಪ್ಪನ ಅಗ್ರಹಾರ ಮೋಜು ಗೋಜು ವಿಡಿಯೋ
ವೈರಲ್ ಹಿಂದೆ ನಟ ಧನ್ವೀರ್ ?

ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಸಿಸ್ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ ಹಾಗೂ ವಿಕೃತ ಕಾಮಿ ಉಮೇಶ್ರೆಡ್ಡಿ ಸೇರಿ ಹಲವರಿಗೆ ಮೊಬೈಲ್ ಫೋನ್, ಟಿವಿ ಸೇರಿದಂತೆ ರಾಜಾತಿಥ್ಯ ನೀಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದರ ಹಿಂದೆ ನಟ ದರ್ಶನ್ ಅವರ ಆಪ್ತ ಹಾಗು ನಟ ಧನ್ವೀರ ಇದ್ದಾರಾ? ಇಂತಹದೊಂದು ಖಚಿತ ಸಂಶಯದ ಮೇರೆಗೆ ಸಿಸಿಬಿ ಪೊಲೀಸರು ನಟ ಧನ್ವೀರ ಅವರನ್ನು ವಶಕ್ಕೆ ಪಡೆದಿದ್ದಾರೆ.
ಈ ವಿಡಿಯೋಗಳನ್ನು ಧನ್ವೀರ್ ಬಿಡುಗಡೆ ಮಾಡಿದ್ದಾರೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಭಾನುವಾರದಿಂದಲೇ ಪೊಲೀಸರು ವಿಚಾರಣೆ ನಡೆಸುತ್ತಿದ್ದು ಧನ್ವೀರ್ಅವರ ಮೊಬೈಲ್ ಅನ್ನು ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಕ್ಕೆ ಕಳುಹಿಸಲಾಗಿದೆ ಎಂದು ಮೂಲಗಳು ಹೇಳಿವೆ.
ವರದಿ: ವಿಜಯೀಂದ್ರ ಹುನಗುಂದ್
ಪ್ರಧಾನ ಸಂಪಾದಕ
ನ್ಯೂಇಂಡಿಯಾ ಕನ್ನಡ
ಬೆಂಗಳೂರು.






