ಮೋದಿ ಆಹ್ವಾನ-ವಾರಣಾಸಿಗೆ ಬಂದಿಳಿದ ಮಾರಿಷಸ್ ಪ್ರಧಾನಿ ರಾಮಗೂಲಂ – ವಿಶೇಷ ಆರ್ಥಿಕ ಪ್ಯಾಕೇಜ್ಗೆ ಅಸ್ತು ಎಂದ ಪ್ರಧಾನಿ MODI
ನಾವು ಕಾಶಿಯಲ್ಲಿ ಮಾರಿಷಸ್ನ ಸ್ನೇಹಿತರನ್ನು ಸ್ವಾಗತಿಸುತ್ತಿರುವುದು ಕೇವಲ ಔಪಚಾರಿಕತೆಯಲ್ಲ, ಬದಲಾಗಿ ಆಧ್ಯಾತ್ಮಿಕ ಒಕ್ಕೂಟವಾಗಿದೆ. ಅದಕ್ಕಾಗಿಯೇ ಭಾರತ ಮತ್ತು ಮಾರಿಷಸ್ ಕೇವಲ ಪಾಲುದಾರರಲ್ಲ, ಬದಲಾಗಿ ಒಂದು ಕುಟುಂಬ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಭಾರತ ಹಾಗೂ ನೆರೆಯ ಮಾರಿಷಸ್ ಗುರುವಾರದಂದು ಹಲವು ವಿಷಯಗಳ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿವೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ವಾರಣಾಸಿ ನಗರಕ್ಕೆ ಆಗಮಿಸಿದ್ದ ಮಾರಿಷಸ್ ಪ್ರಧಾನ ಮಂತ್ರಿ ಡಾ. ನವೀನ್ಚಂದ್ರ ರಾಮಗೂಲಂ , ಭಾರತದ ಜೊತೆ ವ್ಯಾಪಕ ಶ್ರೇಣಿಯ ದ್ವಿಪಕ್ಷೀಯ ವಿಷಯಗಳ ಕುರಿತು ಫಲಪ್ರದ ಚರ್ಚೆ ನಡೆಸಿದರು.

ಇದೇ ವೇಳೆ ಮಾರಿಷಸ್ ಸರ್ಕಾರ ಸಲ್ಲಿಸಿದ ವಿನಂತಿಗಳ ಆಧಾರದ ಮೇಲೆ, ಭಾರತ ಮತ್ತು ಮಾರಿಷಸ್ ಜಂಟಿಯಾಗಿ ಕಾರ್ಯಗತಗೊಳಿಸಲು ಹಲವು ಯೋಜನೆಗಳಿಗೆ ಪರಸ್ಪರ ಒಪ್ಪಂದಗಳಿಗೆ ಎರಡು ದೇಶಗಳು ಸಹಿ ಹಾಕಿವೆ.
ಇವುಗಳಲ್ಲಿ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಮಾರಿಷಸ್ ಗಣರಾಜ್ಯದ ತೃತೀಯ ಶಿಕ್ಷಣ, ವಿಜ್ಞಾನ ಮತ್ತು ಸಂಶೋಧನಾ ಸಚಿವಾಲಯದ ನಡುವೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕೆ ಒಪ್ಪಂದ ಸೇರಿದಂತೆ, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ – ರಾಷ್ಟ್ರೀಯ ಸಾಗರಶಾಸ್ತ್ರ ಸಂಸ್ಥೆ ಮತ್ತು ಮಾರಿಷಸ್ ಸಾಗರಶಾಸ್ತ್ರ ಸಂಸ್ಥೆ ನಡುವೆ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಇನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಅಡಿಯಲ್ಲಿ ಬರುವ ಕರ್ಮಯೋಗಿ ಭಾರತ್ ಮತ್ತು ಮಾರಿಷಸ್ ಸರ್ಕಾರದ ಸಾರ್ವಜನಿಕ ಸೇವೆ ಮತ್ತು ಆಡಳಿತ ಸುಧಾರಣಾ ಸಚಿವಾಲಯದ ನಡುವೆ ತಿಳುವಳಿಕೆ,
ವಿದ್ಯುತ ವಲಯದ ಸಹಕಾರಕ್ಕಾಗಿ ತಿಳಿವಳಿಕೆ ಮತ್ತು ಸಣ್ಣ ಅಭಿವೃದ್ಧಿ ಯೋಜನೆಗಳ ಎರಡನೇ ಹಂತದ ಅನುಷ್ಠಾನಕ್ಕಾಗಿ ಭಾರತೀಯ ಅನುದಾನ ಸಹಾಯದ ಕುರಿತು ತಿಳುವಳಿಕೆ ಒಪ್ಪಂದಗಳಿಗೆ ಉಭಯ ದೇಶಗಳ ಪ್ರಧಾನಿಗಳ ಸಮ್ಮುಖದಲ್ಲಿ ಅಧಿಕಾರಿಗಳು ಸಹಿ ಹಾಕಿದರು.
ಇನ್ನು ಅನುದಾನದ ಆಧಾರದ ಮೇಲೆ ಕೈಗೊಳ್ಳಬೇಕಾದ ಯೋಜನೆಗಳು ಮತ್ತು ಸಹಾಯಗಳ ಬಗ್ಗೆ ಭಾರತದೊಂದಿಗೆ ಮಾರಿಷಸ್ ಜಂಟಿಯಾಗಿ ತಾತ್ವಿಕ ಒಪ್ಪಿಗೆ ನೀಡಿವೆ.

ಅವುಗಳಲ್ಲಿ ನ್ಯೂ ಸರ್ ಸೀವೂಸಗೂರ್ ರಾಮಗೂಲಂ ರಾಷ್ಟ್ರೀಯ ಆಸ್ಪತ್ರೆ, ಆಯುಷ್ ಶ್ರೇಷ್ಠತಾ ಕೇಂದ್ರ, ಪಶುವೈದ್ಯಕೀಯ ಶಾಲೆ ಮತ್ತು ಪಶು ಆಸ್ಪತ್ರೆ ಮತ್ತು ಹೆಲಿಕಾಪ್ಟರ್ಗಳ ಪೂರೈಕೆಗಳು ಸೇರಿವೆ.
ಈ ಯೋಜನೆಗಳ ವೆಚ್ಚ ಮತ್ತು ವಿನಂತಿಸಿದ ಸಹಾಯವು ಸುಮಾರು USD 215 ಮಿಲಿಯನ್/MUR 9.80 ಬಿಲಿಯನ್ ಎಂದು ಅಂದಾಜಿಸಲಾಗಿದೆ.
ಭಾರತ ಸರ್ಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿ 25 ಮಿಲಿಯನ್ ಅಮೆರಿಕನ್ ಡಾಲರ್ ಬಜೆಟ್ ಸಹಾಯವನ್ನು ನೀಡುತ್ತದೆ ಎಂದು ತಾತ್ವಿಕವಾಗಿ ಒಪ್ಪಿಕೊಳ್ಳಲಾಯಿತು.
ಭಾರತ – ಮಾರಿಷಸ್, ಜಂಟಿ ಪತ್ರಿಕಾಗೋಷ್ಠಿ
ಇದಕ್ಕೂ ಮುನ್ನ ಮಾರಿಷಸ್ ದೇಶದ ಪ್ರಧಾನಿ ಡಾ. ನವೀನಚಂದ್ರ ರಾಮಗೂಲಂ ಜೀ ಅವರನ್ನು ಸ್ವಾಗತಿಸಿದ ಪ್ರಧಾನಿ ನರೇಂದ್ರ ಮೋದಿ, ಬಳಿಕ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಉಭಯ ನಾಯಕರು ಮಾತನಾಡಿದರು.
ಈ ಸಂದಭ೯ದಲ್ಲಿ ಮಾತನಾಡಿದ ಮೋದಿ, ನನ್ನ ಸಂಸದೀಯ ಕ್ಷೇತ್ರಕ್ಕೆ ನಿಮ್ಮನ್ನು ಸ್ವಾಗತಿಸಲು ನನಗೆ ಹೆಮ್ಮೆಯ ವಿಷಯ.
ಕಾಶಿ ಯಾವಾಗಲೂ ಭಾರತದ ನಾಗರಿಕತೆ ಮತ್ತು ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ. ಶತಮಾನಗಳ ಹಿಂದೆ, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳು ಭಾರತದಿಂದ ಮಾರಿಷಸ್ಗೆ ಪ್ರಯಾಣಿಸಿ, ಅಲ್ಲಿನ ದೈನಂದಿನ ಜೀವನದ ಭಾಗವಾದವು.
ಕಾಶಿಯಲ್ಲಿ ಗಂಗಾ ಮಾತೆಯ ಶಾಶ್ವತ ಹರಿವಿನಂತೆ, ಭಾರತೀಯ ಸಂಸ್ಕೃತಿಯ ನಿರಂತರ ಪ್ರವಾಹವು ಮಾರಿಷಸ್ ಅನ್ನು ಶ್ರೀಮಂತಗೊಳಿಸಿದೆ ಎಂದು ಹೇಳಿದರು.
ಇಂದು, ನಾವು ಕಾಶಿಯಲ್ಲಿ ಮಾರಿಷಸ್ನ ಸ್ನೇಹಿತರನ್ನು ಸ್ವಾಗತಿಸುತ್ತಿರುವುದು ಕೇವಲ ಔಪಚಾರಿಕತೆಯಲ್ಲ, ಬದಲಾಗಿ ಆಧ್ಯಾತ್ಮಿಕ ಒಕ್ಕೂಟವಾಗಿದೆ. ಅದಕ್ಕಾಗಿಯೇ ಭಾರತ ಮತ್ತು ಮಾರಿಷಸ್ ಕೇವಲ ಪಾಲುದಾರರಲ್ಲ, ಬದಲಾಗಿ ಒಂದು ಕುಟುಂಬ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಭಾರತದ ಹೊರಗಿನ ಮೊದಲ ಜನೌಷಧಿ ಕೇಂದ್ರವನ್ನು ಈಗ ಮಾರಿಷಸ್ನಲ್ಲಿ ಸ್ಥಾಪಿಸಲಾಗಿದೆ. ಇಂದು, ಮಾರಿಷಸ್ನಲ್ಲಿ ಆಯುಷ್ ಸೆಂಟರ್ ಆಫ್ ಎಕ್ಸಲೆನ್ಸ್, 500 ಹಾಸಿಗೆಗಳ ಸರ್ ಸೀವೂಸಾಗುರ್ ರಾಮ್ಗೂಲಂ ರಾಷ್ಟ್ರೀಯ ಆಸ್ಪತ್ರೆ ಹಾಗೂ ಪಶುವೈದ್ಯಕೀಯ ಶಾಲೆ ಮತ್ತು ಪ್ರಾಣಿ ಆಸ್ಪತ್ರೆಯನ್ನು ಸ್ಥಾಪಿಸುವಲ್ಲಿ ಭಾರತವು ತನ್ನ ಸಹಕಾರವನ್ನು ವಿಸ್ತರಿಸಲಿದೆ ಎಂದು ನಾವು ನಿರ್ಧರಿಸಿದ್ದೇವೆ ಎಂದು ಮೋದಿ ಹೇಳಿದರು.
ವರದಿ: ವಿಜಯೀಂದ್ರ ಹುನಗುಂದ್
ಪ್ರಧಾನ ಸಂಪಾದಕ
ನ್ಯೂಇಂಡಿಯಾ ಕನ್ನಡ
ಬೆಂಗಳೂರು



