ಕಾರ್ಮಿಕ ಇಲಾಖೆಯಲ್ಲಿ ಬಹುಕೋಟಿರೂ ಹಗರಣ|ಬರೋಬ್ಬರಿ 900 ಕೋಟಿರೂ ಗುಳುಂ..ಶಂಕೆ|ಸಚಿವ ಸಂತೋಷ್ ಲಾಡ್ ವಿರುದ್ದ ಕ್ರಮ ಕೈಗೊಳ್ತಾರಾ ಸಿಎಂ! Part-01
ಅತ್ಯಂತ ವ್ಯವಸ್ಥಿತವಾಗಿ ದಾಖಲೆ ಪಡೆದು ಮೊದಲಿಗೆ ಈ ಹಗರಣವನ್ನು ಬಯಲಿಗೆ ತಂದವರೇ ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್. ಕಾರ್ಮಿಕ ಇಲಾಖೆಯಲ್ಲಿ ನಡೆದಿರುವ ಈ ಹಗರಣದ ಇಂಚಿಂಚು ಮಾಹಿತಿ ಪಡೆದ ಅವರು ಟೆಂಡರ್ ಪಡೆದವರ ಅವ್ಯವಹಾರದ ದಾಖಲೆಗಳನ್ನು ಹೆಕ್ಕಿ ತೆಗೆಯುವಲ್ಲಿ ಯಶಸ್ವಿಯಾಗಿದ್ದರು.

ಬಡವರಿಗೆ ಚಿಕಿತ್ಸೆ ಕೊಡಿಸ್ತೇನೆ ಎಂದು ವರುಷಕ್ಕೆ ನೂರಾರು ಕೋಟಿ ರೂಗಳನ್ನು ಗುಳುಂ ಮಾಡುತ್ತಿರುವ ಬಹುದೊಡ್ಡ ಹಗರಣ ಇವತ್ತಿಗೂ ರಾಜ್ಯದಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ಎಂದರೇ ನಂಬಲೇಬೇಕು.
ಕಳೆದ ಎರಡುವರೆ ವರುಷಗಳಿಂದಲೂ ನಿರಂತರವಾಗಿ ಬೋಗಸ್ ಬಿಲ್ ಸೃಷ್ಟಿಸುವ ಮೂಲಕ ಸುಮಾರು 900 ಕೋಟಿರೂ. ಗಿಂತಲೂ ಹೆಚ್ಚಿನ ಹಣವನ್ನು ಹಂತ ಹಂತವಾಗಿ ಸ್ವಾಹಾ ಮಾಡಲಾಗಿದೆ.
ಕಟ್ಟಡ ಕಾರ್ಮಿಕರಿಗೆ ಅನುಕೂಲವಾಗಲಿ ಎಂದು ಜಾರಿಗೆ ತರಲಾದ ಯೋಜನೆಯನ್ನು ದುಡ್ಡು ಮಾಡುವ ದಂಧೆಯನ್ನಾಗಿ ಮಾಡಿಕೊಳ್ಳಲಾಗಿದೆ ಎಂಬುದು ಮಾತ್ರ ದೊಡ್ಡ ವಿಪರಾಸ್ಯವೇ ಸರಿ.
ಈ ಬಗ್ಗೆ ಅನೇಕ ಬಾರಿ ವಿರೋಧಪಕ್ಷಗಳು ಬಹಿರಂಗವಾಗಿ ಪ್ರತಿಭಟನೆ ನಡೆಸಿವೆ. ವಿಧಾನಸಭೆ ಹಾಗು ವಿಧಾನಪರಿಷತ್ ಕಲಾಪಗಳಲ್ಲಿ ಪ್ರಶ್ನೆ ಎತ್ತಲಾಗಿದೆ. ಆದರೆ ನಂತರ ಮೌನವಾಗಿದ್ದು ಹಲವು ಅನುಮಾಗಳೀಗೆ ಕಾರಣವಾಗಿದೆ.
ಸಚಿವರಾಗಿದ್ದ ಬಿ ನಾಗೇಂದ್ರ ಅವರ ಇಲಾಖೆಯಡಿ ಬರುತ್ತಿದ್ದ ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಾಗ ಭಾರಿ ಗಲಾಟೆ ನಡೆದಿತ್ತು. ಕೊನೆಗೆ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ತನಕ ವಿಪಕ್ಷಗಳು ಬಿಟ್ಟಿರಲಿಲ್ಲ.
ಆದರೆ ಬರೋಬ್ಬರಿ 900 ಕೋಟಿರೂ ಗುಳುಂ ಆರೋಪ ಕೇಳಿಬಂದರೂ ಆ ಇಲಾಖೆಯ ಸಚಿವರು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ವಿಪಕ್ಷಗಳು ಕಾಟಾಚಾರಕ್ಕೆ ಎಂಬಂತೇ ಆರೋಪಿಸಿವೆ ಹೊರತು ಸಂಘಟಿತ ಹೋರಾಟ ನಡೆಸದೇ ಇರುವುದು ಗಮನಾರ್ಹವಾಗಿದೆ.
ಹಗರಣದ ಬಗ್ಗೆ ಕಲಾಪಗಳಲ್ಲಿ ವಿಪಕ್ಷಗಳು ಪ್ರಶ್ನೆ ಕೇಳಿದರೇ, ಉಡಾಫೆ ಉತ್ತರ ಕೊಡುವ ಈ ಘಮಿಂಡಿ ಸಚಿವ. ಹಗರಣದ ವಿರುದ್ದ ಧ್ವನಿ(?) ಎತ್ತಿದ ಬಹುತೇಕರನ್ನು ಥಣ್ಣಗಾಗಿಸಿದ್ದು ಇವರ ದೊಡ್ಡ ಸಾಧನೆಯೇ ಎನ್ನಬಹುದು.
ಅಗೆದಷ್ಟು..ಬಗೆದಷ್ಟು ಬಾಚಿಕೊಂಡಿರುವ ಈ ಇಲಾಖೆಯ ಸಚಿವ, ತನ್ನ ಇಲಾಖೆಯಲ್ಲಿ ಅದ್ಹೇಗೆ ಕೈಚಳಕ ತೋರಿಸಿದ್ದಾರೆ, ಬಡವರ ಹೆಸರಿನಲ್ಲಿ ಏನೇನು ದಾಖಲೆ ಸೃಷ್ಟಿಸಲಾಗಿದೆ.
ಇಡೀ ರಾಜ್ಯದಲ್ಲಿ ಈ ಯೋಜನೆಯಡಿ ನಡೆದ ಗೋಲ್ಮಾಲ್ ದಂಧೆಯ ಬಗ್ಗೆ “ನ್ಯೂಇಂಡಿಯಾ ಕನ್ನಡ ಡಿಜಿಟಲ್ ಪತ್ರಿಕೆ”ಯ ತನಿಖಾ ತಂಡವು ಎಲ್ಲ ದಾಖಲೆಗಳನ್ನು ಇಟ್ಟುಕೊಂಡೇ ಈ ಹಗರಣದ ಸ್ಪೋಟಕ ಮಾಹಿತಿಯನ್ನು ನಿಮಗೆ ನೀಡಲಿದೆ.
ಬಡವರ ಚಿಕಿತ್ಸೆ ನೆಪದಲ್ಲಿ ನುಂಗಿದೇಷ್ಟು? ಕುಡಿದಿದ್ದೇಷ್ಟು?
ಕಾರ್ಮಿಕ ಇಲಾಖೆಯಲ್ಲಿ ನಡೆದಿದೆ ಹಗಲು ದರೋಡೆ
ಅಮಾಯಕರ ಹೆಸರಿನಲ್ಲಿ ನುಂಗಿ ನೀರು ಕುಡಿದ “ಲಾಡ್”
ಚಿಕಿತ್ಸೆ ನೀಡುವ ಹೆಸರಿನಲ್ಲಿ ಭೋಗಸ್ ಬಿಲ್ ಮೂಲಕ ಒಂದೇ ಏಟಿಗೆ ನೂರಾರು ಕೋಟಿ ಗುಳುಂ ಮಾಡಿರುವ ಈ ಪ್ರಕರಣವೀಗ ಕರ್ನಾಟಕ ಕಂಡ ಅತಿದೊಡ್ಡ ಹಗರಣಗಳ ಪಟ್ಟಿಗೆ ಸೇರ್ಪಡೆಯಾಗಿದೆ.
ಈ ಹಗರಣದ ಮೂಲ ರೂವಾರಿ ಎಂದು ಹೇಳಲಾಗುತ್ತಿರು ಈ ವ್ಯಕ್ತಿಯ ಹೆಸರು ಮಿಸ್ಟರ್ ಸಂತೋಷ್ ಲಾಡ್. ಬಾಯಲ್ಲಿ ಹರಕು ಮುರಕು ಇಂಗ್ಲೀಷ್, ವಿಚಿತ್ರ ಹಾವಭಾವದ ಇವರು, ಕರ್ನಾಟಕದ ಹಾಲಿ ಕಾರ್ಮಿಕ ಖಾತೆಯ ಸಂಪುಟದರ್ಜೆ ಸಚಿವ ಎಂಬುದು ನಮ್ಮ ನಾಡಿನ ದೊಡ್ಡ ದೌರ್ಭಾಗ್ಯವೇ ಸರಿ.

ಹಣಬಲದಿಂದಲೇ ನಾಲ್ಕು ಬಾರಿ ಶಾಸಕ, ಮೂರು ಬಾರಿ ಮಂತ್ರಿಯಾಗಿ ಮೆರೆಯುತ್ತಿರುವ ಈ ಸಂತೋಷ್ ಲಾಡ್..ಇನ್ನು ಎತ್ತರಕ್ಕೆ ಬೆಳೆಯುವ ಎಲ್ಲ ಅವಕಾಶಗಳಿವೆ.
ಆದರೆ ದುರಾಸೆಗೆ ಬಿದ್ದಿರುವ ಈ ವ್ಯಕ್ತಿ ಬಡವರಿಗೆ ವಂಚಿಸಿ, ಅನ್ಯಾಯ ಮಾಡಿದ್ದರ ಪರಿಣಾಮ, ಬಡವರ ಹಿಡಿಶಾಪ ಎದುರಿಸುವ ಪರಿಸ್ಥಿತಿ ಬಂದೊದಗಿದೆ.
ಪ್ರೀವೆಂಟಿವ್ ಹೆಲ್ತ್ ಯೋಜನೆ!
ಚಿಕಿತ್ಸೆ ಮಾಡಲು ಜಿಲ್ಲಾವಾರು ಪ್ರತ್ಯೇಕ ಟೆಂಡರ್|
ಹಗಲು ದರೋಡೆ ನಡೆಸಿದ ಆಸ್ಪತ್ರೆಗಳು|
ಕಟ್ಟಡ ಕಾರ್ಮಿಕರು ಇತರೆ ಕಾರ್ಮಿಕರ ಹಿತದೃಷ್ಟಿಯಿಂದ ಕಾರ್ಮಿಕ ಇಲಾಖೆಯಲ್ಲಿ ಅಧಿಕೃತ ಕಾರ್ಡ್ ಪಡೆದಿರುವಂತಹ ವ್ಯಕ್ತಿಗಳಿಗೆ ವರುಷಕ್ಕೊಮ್ಮೆ ಪ್ರೀವೆಂಟಿವ್ ಹೆಲ್ತ್ ಯೋಜನೆಯಡಿ 20 ಬಗೆಯ ಚಿಕಿತ್ಸೆ ನೀಡಲಾಗುತ್ತದೆ.

ಅದೇ ರೀತಿ ಅನೀಮಿಯಾದಿಂದ ಬಳಲುತ್ತಿರುವ ಪುರುಷ ಹಾಗು ಮಹಿಳಾ ಕಾರ್ಮಿಕರಿಗೆ ನ್ಯೂಟ್ರೀಷನ್ ಕಿಟ್ಗಳನ್ನು ನೀಡಲಾಗುತ್ತದೆ.
ಇನ್ನು ಕಾರ್ಮಿಕರು ಸ್ವ ಉದ್ಯೋಗ ಕೈಗೊಳ್ಳಲು ವಿವಿಧ ವೃತ್ತಿಗೆ ಅನುಗುಣವಾಗಿ ಟೂಲ್ಕಿಟ್ಗಳನ್ನು ನೀಡಲಾಗುತ್ತದೆ. ಅಲ್ಲದೇ ವಿವಿಧ ವೃತ್ತಿಗಳಗನುಗುಣವಾಗಿ ಸುರಕ್ಷತಾ ಕಿಟ್ಗಳನ್ನು ಸಹ ಒದಗಿಸುವ ಮಹತ್ತರ ಯೋಜನೆ ಇದಾಗಿದೆ.

ಇದು ಅಲ್ಲದೇ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ಆರ್ಪಿಎಲ್ ತರಬೇತಿ ಪಡೆದ ಫಲಾನುಭವಿಗಳಿಗೂ ಟೂಲ್ಕಿಟ್ಗಳನ್ನು ನೀಡಲಾಗುತ್ತದೆ.
ಇದರಲ್ಲಿ ಅದ್ಹೇಗೆ ದುಡ್ಡು ಕೊಳ್ಳೆ ಹೊಡೆಯಲಾಗಿದೆ ಎಂಬುದರ ಕುತೂಹಲ ಇಲ್ಲಿಂದ ಶುರು ಆಗುತ್ತದೆ.
ಮೊದಲಿಗೆ ನಾವು ಪ್ರೀವೆಂಟಿವ್ ಹೆಲ್ತ್ ಯೋಜನೆಯಲ್ಲಿ ಮಾಡಿರುವ ಭಾನಗಡಿಗಳನ್ನು ಒಂದೊಂದೆ ನೋಡುತ್ತಾ ಹೋದಾಗ ಅಗೆದಷ್ಟು, ಬಗೆದಷ್ಟು ಈ ಹಗರಣ ಅನಾವರಣಗೊಳ್ಳುತ್ತ ಸಾಗುತ್ತದೆ.

ಈ ಮೊದಲೇ ತಿಳಿಸಿದಂತೇ ಪ್ರೀವೆಂಟಿವ್ ಹೆಲ್ತ್ ಯೋಜನೆಯಡಿ 20 ಬಗೆಯ ಚಿಕಿತ್ಸೆಯನ್ನು ನೊಂದಾಯಿತ ಕಟ್ಟಡ ಕಾರ್ಮಿಕರು ಇತರೆ ಕಾರ್ಮಿಕರಿಗೆ ಅವರು ಇರುವ ಸ್ಥಳದಲ್ಲಿಯೇ ನೀಡಲಾಗುತ್ತದೆ.
ಈ ಯೋಜನೆ ಅನ್ವಯ ಕಾರ್ಮಿಕರು ಇರುವ ಸ್ಥಳಕ್ಕೆ ಟೆಂಡರ್ ಪಡೆದಿರುವ ಆಸ್ಪತ್ರೆಗಳು, ಸಂಸ್ಥೆಗಳು ಅಂಬ್ಯುಲೆನ್ಸ್ ಮೂಲಕ ತೆರಳಿ ರಕ್ತ ಪರೀಕ್ಷೆ ನಡೆಸಬೇಕು. ಆ ನಂತರ ಸರ್ಕಾರ ಸೂಚಿಸಿರುವ 20 ಬಗೆಯ ಚಿಕಿತ್ಸೆಯ ವರದಿಯನ್ನು ತಯಾರಿಸಬೇಕು.
ಮತ್ತು ಆ ನಂತರ ಚಿಕಿತ್ಸೆಗೊಳಪಟ್ಟ ಕಾರ್ಮಿಕರಿಗೆ ಸಾಫ್ಟ್ ಕಾಪಿ ನೀಡುವುದು ಹಾಗೂ ಒಂದು ಪ್ರತಿಯನ್ನು ಜಿಲ್ಲೆಯ ಕಾರ್ಮಿಕ ಇಲಾಖೆಗೆ ಬಿಲ್ ಜೊತೆ ಚಿಕಿತ್ಸೆಗೊಳಪಟ್ಟ ಕಾರ್ಮಿಕರ ವಿವರಗಳನ್ನು ನೀಡಬೇಕು.
ಇಷ್ಟು ಟೆಂಡರ್ ಪಡೆದವರ ಕೆಲಸ. ಆದರೆ ಇಲ್ಲಿ ಕುತೂಹಲಕರ ಸಂಗತಿ ಎಂದರೇ, ಸರ್ಕಾರದ ಈ ಮಹತ್ತರ ಯೋಜನೆ ಕೇವಲ ಕಾಗದದಲ್ಲಿಯೇ ಮಾತ್ರ ಉಳಿದಿದೆ ಏಂದರೇ ನಂಬಲೇಬೇಕು.
ಯೋಜನೆಯ ಪ್ರಕಾರ ನಡೆಯಬೇಕಾದ ಯಾವು ಚಿಕಿತ್ಸೆಗಳು, ಪರೀಕ್ಷೆಗಳು ನಡೆಯುವದೇ ಇಲ್ಲ. ಇದಕ್ಕೆ ಹಲವು ದಾಖಲೆಗಳು ಹಾಗು ಉದಾಹರಣೆಗಳು ಸಾಕ್ಷ್ಯರೂಪದಲ್ಲಿ ನಮ್ಮ ನ್ಯೂಇಂಡಿಯಾ ಕನ್ನಡ ಡಿಜಿಟಲ್ ಪತ್ರಿಕೆ ಬಳಿ ಇವೆ.
ಚಿಕಿತ್ಸೆ ನೆಪದಲ್ಲಿ ಮೋಸ ಹೇಗೆ ನಡೆಯುತ್ತಾ ಗೊತ್ತಾ?
ಈ ಮೊದಲೇ ತಿಳಿಸಿದಂತೆ, ಪ್ರೀವೆಂಟಿವ್ ಹೆಲ್ತ್ ಯೋಜನೆಯಡಿ ಆಯಾ ಗ್ರಾಮಗಳಿಗೆ ಟೆಂಡರ್ ಪಡೆದವರು ಹೋಗಿ ಕಾರ್ಮಿಕರ ಚಿಕಿತ್ಸೆ ಮಾಡಬೇಕು ಇದು ನಿಯಮ. ಆದರೆ ಬಹುತೇಕ ಯಾರು ಅಲ್ಲಿಗೆ ಹೋಗುವದೇ ಇಲ್ಲ ಎಂಬ ಆರೋಪ ಇದೆ.

ಟೆಂಡರ್ ಪಡೆದ ನಂತರ ನೀಡಲಾಗುವ ನೊಂದಾಯಿತ ಕಾರ್ಮಿಕರ ಪಟ್ಟಿಯಂತೇ ಇಂತಹವರಿಗೆ ಚಿಕಿತ್ಸೆ, ಪರೀಕ್ಷೆ ಮಾಡಲಾಗಿದೆ ಎಂದು ಕೆಲವೇ ದಿನಗಳಲ್ಲಿ ಕಾರ್ಮಿಕ ಇಲಾಖೆಗೆ ವರದಿ ನೀಡುತ್ತಾರೆ.
ಬಳೀಕ ಟೆಂಡರ್ ಪಡೆದವರು ನೀಡುವ ವರದಿಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಸಹಿ, ಮುದ್ರೆ ಹಾಕಿ, ಸರ್ಕಾರಕ್ಕೆ ಕಳುಹಿಸಿಕೊಡುತ್ತಾರೆ. ಆ ನಂತರ ಟೆಂಡರ್ ಪಡೆದವರಿಗೆ ಬಿಲ್ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.
ಇದರಲ್ಲಿ ನಾವು ಗಮನಿಸಬೇಕಾದ ಅಂಶವೇನೆಂದರೇ, ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯಲ್ಲಿ ನೊಂದಾಯಿತ 53ಲಕ್ಷದಷ್ಟು(?) (ಈಗ ಕಡಿಮೆ ಮಾಡಲಾಗಿದೆ ಎಂದು ಹೇಳಲಾಗಿದೆ.) ಕಾರ್ಮಿಕರನ್ನು ಒಂದು ವರುಷದಷ್ಟು ಕಡಿಮೆ ಅವಧಿಯಲ್ಲಿ ಎಲ್ಲರಿಗೂ ಹೇಗೆ ಚಿಕಿತ್ಸೆ ನೀಡಲಾಯಿತು ಎಂಬುದೇ ಯಕ್ಷಪ್ರಶ್ನೆ?.
ಪ್ರತಿ ಜಿಲ್ಲೆಯಲ್ಲಿಯು ನೊಂದಾಯಿತ ಕಟ್ಟಡ ಹಾಗು ಇತರೆ ಕಾರ್ಮಿಕರಿಗೆ ಚಿಕಿತ್ಸೆ, ಪರೀಕ್ಷೆ ಮಾಡಲಾಗಿದೆ. ಟೂಲ್ಕಿಟ್ಗಳ ವಿತರಣೆ ಮಾಡಲಾಗಿದೆ ಎಂದು ಭೋಗಸ್ ಬಿಲ್ ನೀಡಿದವರಿಗೆ ನೂರಾರು ಕೋಟಿ ರೂಗಳನ್ನು ಈಗಾಗಲೇ ನೀಡಲಾಗಿದೆ.
ಒಂದೇ ಹೆಸರು, ಅಷ್ಟೇ ಸಂಖ್ಯೆಯ ಕಾರ್ಮಿಕರು
ಸತತ ಎರಡು ವರುಷವೂ ಒಂದೇ ಅಂಕಿ ಸಂಖ್ಯೆ
ಚಿತ್ರದುರ್ಗದಲ್ಲಿ ಬಯಲಿಗೆ ಬಂದ ಅವ್ಯವಹಾರ
ಈ ಹಗರಣವನ್ನು ಅತ್ಯಂತ ವ್ಯವಸ್ಥಿತವಾಗಿ ದಾಖಲೆ ಪಡೆದು ಮೊದಲಿಗೆ ಬಯಲಿಗೆ ತಂದವರೇ ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್.
ಕಾರ್ಮಿಕ ಇಲಾಖೆಯಲ್ಲಿ ನಡೆದಿರುವ ಈ ಹಗರಣದ ಇಂಚಿಂಚು ಮಾಹಿತಿ ಪಡೆದ ಅವರು ಟೆಂಡರ್ ಪಡೆದವರ ಅವ್ಯವಹಾರದ ದಾಖಲೆಗಳನ್ನು ಹೆಕ್ಕಿ ತೆಗೆಯುವಲ್ಲಿ ಯಶಸ್ವಿಯಾಗಿದ್ದರು.
ಎಲ್ಲ ದಾಖಲೆಗಳನ್ನು ಇಟ್ಟುಕೊಂಡೇ ಒಂದು ಪ್ರಶ್ನಾವಳಿಯನ್ನು ಸಿದ್ದಪಡಿಸಿಕೊಂಡು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್. ಅವರು ಪತ್ರಿಕಾಗೋಷ್ಟಿ ಮುಖಾಂತರ ಹಗರಣದ ಹೂರಣವನ್ನು ತೆಗೆದಿಟ್ಟಿದ್ದರು.
ಆದರೆ ಇವತ್ತಿಗೂ ಇದರ ಬಗ್ಗೆ ತನಿಖೆಯಾಗಲೇ ಇಲ್ಲ. ಅಷ್ಟರಮಟ್ಟಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸೇಫ್ ಆಗಿದ್ದಾರೆ. ಶಾಸಕ ಕೆ.ಎಸ್.ನವೀನ್ ಅವರು ಸಿದ್ದಪಡಿಸಿದ ಪ್ರಶ್ನಾವಳಿಯ ಯಥಾವತ್ತು ಈ ಕೆಳಗಿನಂತಿದೆ.


ಚಿತ್ರದುರ್ಗದ ಕಾರ್ಮಿಕ ಅಧಿಕಾರಿಯ ಕರಾಮತ್ತು |
ಅಶ್ವಿನಿ ಹಾಸ್ಪಿಟಲ್ಗೆ ಕೋಟಿಗಟ್ಟಲೇ ಹಣ ಬಿಡುಗಡೆ|
ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಆರೋಪ

ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಅವರ ಪ್ರಶ್ನಾವಳಿಯಲ್ಲಿ ಕೇಳಿರುವಂತೇ, ಟೆಂಡರ್ ಪಡೆದ ಚಿತ್ರದುರ್ಗದ ಅಶ್ವೀನಿ ಹಾಸ್ಪಿಟಲ್ನವರು ಇಡೀ ಜಿಲ್ಲೆಯಲ್ಲಿಯೆ ಇಂತಿಂತಹ ಗ್ರಾಮಗಳಿಗೆ ತೆರಳಿ ಕಾರ್ಮಿಕರ ರಕ್ಷ ಪರೀಕ್ಷೆ ಮಾಡಿದ್ದೇವೆ ಎಂದು ನೀಡಿರುವ ಬಿಲ್ನಲ್ಲಿ ಸಹಿ ಮಾಡಿರುವದಿಲ್ಲ ಎಂದು ಆರೋಪಿಸಿದ್ದರು.
ಮತ್ತು ಅದಕ್ಕೆ ದಾಖಲೆಯನ್ನು ಸಹ ಅವರು ನೀಡಿದ್ದಾರೆ. ಅಶ್ವೀನಿ ಹಾಸ್ಪಿಟಲ್ ನೀಡಿರುವ ಬಿಲ್ನಲ್ಲಿ ಕೇವಲ ಚಿತ್ರದುರ್ಗ ಜಿಲ್ಲಾ ಕಾರ್ಮಿಕ ಅಧಿಕಾರಿಯ ಸಹಿ ಮಾತ್ರ ಇರುತ್ತದೆ.
ಆದರೂ ಈ ಟೆಂಡರ್ ಪಡೆದ ಅಶ್ವೀನಿ ಹಾಸ್ಪಿಟಲ್ನವರಿಗೆ 9ಕೋಟಿ84ಲಕ್ಷ90ಸಾವಿರರೂ. ಹಣವನ್ನು ಸರ್ಕಾರ ಹಣ ಸಂದಾಯ ಮಾಡಿರುತ್ತದೆ.


ಇಲ್ಲಿ ವಿಚಿತ್ರ ಹಾಗೂ ಮೋಸ ನಡೆದಿರುವದಕ್ಕೆ ವಿಪ ಸದಸ್ಯ ಕೆ.ಎಸ್.ನವೀನ್ ಅವರು ದಾಖಲೆ ನೀಡುತ್ತಾರೆ.
ವಿಧಾನಸಭೆ ವಿರೋಧಪಕ್ಷದ ನಾಯಕ ಆರ್ ಅಶೋಕ್ ಅವರ ಓಎಸ್ಡಿ ಅವರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಗೆ ಕೇಳಿದ ಮಾಹಿತಿಯಲ್ಲಿ ಸ್ವತಃ ಮಂಡಳಿಯವರೇ ಉತ್ತರ ನೀಡಿ ಸಿಕ್ಕಿಹಾಕಿಕೊಂಡಿದ್ದನ್ನು ಮಂಡಳಿ ನೀಡಿರುವ ಪತ್ರದ ಪ್ರತಿಯಲ್ಲಿ ಕಾಣಬಹುದಾಗಿದೆ.
2022-23ರ ಸಾಲಿನಲ್ಲಿ ಟೆಂಡರ್ ಪಡೆದಿದ್ದ ಬಸಪ್ಪ ಮಲ್ಟಿಸ್ಪೆಶಾಲಿಟಿ ಹಾಸ್ಪಿಟಲ್ನವರಿಗೆ 33ಸಾವಿರ500ಮಂದಿಗೆ ತಪಾಸಣೆ ಮಾಡಿದ್ದಕ್ಕೆ 9ಕೋಟಿ89ಲಕ್ಷ 59ಸಾವಿರ ಹಣ ಸಂದಾಯ ಮಾಡಲಾಗಿದೆ.
ಇನ್ನು 2023-24ರಲ್ಲಿ ಟೆಂಡರ್ ಪಡೆದ ಅಶ್ವೀನಿ ಹಾಸ್ಪಿಟಲ್ನವರು ಸಹ 33ಸಾವಿರ500ಮಂದಿಗೆ ತಪಾಸಣೆ ಮಾಡಿದ್ದಾರೆ ಎಂದು ವರದಿ ನೀಡಿದ್ದಾರೆ. ಈ ಬಗ್ಗೆ ಯಾವುದೇ ವೆರಿಫೀಕೇಶನ್ ಮಾಡದೇ 9ಕೋಟಿ84ಲಕ್ಷ90ಸಾವಿರರೂ. ಹಣವನ್ನು ಸಂದಾಯ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ನೋಡಿ, ಈ ಒಂದು ಘಟನೆಯಿಂದಲೇ ಇಲ್ಲಿ ಹೇಗೆ ಗೋಲ್ಮಾಲ್ ಮಾಡಲಾಗಿದೆ ಎಂದು ಗಮನಿಸಬಹುದಾಗಿದೆ.
ಇಲ್ಲಿ ಸ್ಪಷ್ಟವಾಗುವದೆನೆಂದರೇ 2022-23ರಲ್ಲಿ ಮಾಡಲಾಗಿದೆ ಎಂದು ಹೇಳುವ ಚಿಕಿತ್ಸೆ, ರಕ್ಷಪರೀಕ್ಷೆಯ ಕಾರ್ಮಿಕರ ಲಿಸ್ಟ್ ಅನ್ನೇ 2023-24ರ ಕಾಫಿ ಪೇಸ್ಟ್ ಮಾಡಿ, ಬಿಲ್ ಪಡೆಯಲಾಗಿದೆ ಎಂದು ವಿಪ ಸದಸ್ಯ ಕೆ.ಎಸ್.ನವೀನ್ ಅವರು ಮಾಡಿದ ಆರೋಪ ಖಚಿತವಾಗುತ್ತದೆ.
ಪ್ರತಿ ಜಿಲ್ಲೆಗೆ ೯ ಕೋಟಿರೂ ಹಣ ಬಿಡುಗಡೆ
30 ಜಿಲ್ಲೆಗಳಿಗೆ ಕನಿಷ್ಟ 270 ಕೋಟಿ ರೂ ಸಂದಾಯ?
ಮೂರು ವರುಷದಲ್ಲಿ ನಡೆದದ್ದು 900 ಕೋಟಿ ಹಗರಣ?
ಸಂತೋಷ್ ಲಾಡ್ ಈಗಲೂ ಸೇಫ್!
ಚಿತ್ರದುರ್ಗ ಜಿಲ್ಲೆಯೊಂದರಲ್ಲಿಯೇ 9 ಕೋಟಿರೂ. ಕ್ಕಿಂತಲೂ ಹೆಚ್ಚಿನ ಹಣದ ಅವ್ಯವಹಾರ ನೋಡಿದರೇ ರಾಜ್ಯದ ಒಟ್ಟು 30 ಜಿಲ್ಲೆಗಳಿಗೆ ಕನಿಷ್ಟ 270ರಿಂದ 300 ಕೋಟಿ ರೂ ಹಣವನ್ನು ಪ್ರತಿ ವರುಷ ಗುಳುಂ ಮಾಡುತ್ತಿರುವುದು ಚಿತ್ರದುರ್ಗ ಜಿಲ್ಲೆಯೊಂದರ ಮಾಹಿತಿಯಿಂದ ಸ್ಪಷ್ಟವಾಗುತ್ತದೆ.
ವಿಪ ಸದಸ್ಯ ನವೀನ ಅವರು ಮಾಡಿದ ಆರೋಪದ ಬಗ್ಗೆ ಸರ್ಕಾರ ಈಗಲೇ ತನಿಖೆ ಮಾಡಿದರೂ ಸರಿಸುಮಾರು 900 ಕೋಟಿರೂ ಗೋಲ್ಮಾಲ್ ನಡೆದಿರುವುದು ಬಯಲಿಗೆ ಬರಲಿದೆ.

ಸಿ ಎಂ ಸಿದ್ದರಾಮಯ್ಯನವರಿಗೆ ಈ ಹಗರಣದ ಗಾಳಿಯು ಸೂಸದಂತೇ ನೋಡಿಕೊಳ್ಳುವಲ್ಲಿ ಸಚಿವ ಸಂತೋಷ್ ಲಾಡ್ ನೋಡಿಕೊಂಡಿದ್ದು ನಿಜಕ್ಕೂ ಆಶ್ಚರ್ಯವೇ ಹೌದು.
ನಾಗೇಂದ್ರ ವಿಷಯದಲ್ಲಿ ಖಡಕ ನಿರ್ಧಾರ ಕೈಗೊಂಡಿದ್ದ ಸಿದ್ದರಾಮಯ್ಯ, ಹತ್ತಿರ ಹತ್ತಿರ 900ಕೋಟಿರೂ ನಷ್ಟು ಕಾರ್ಮಿಕ ಇಲಾಖೆಯಲ್ಲಿ ಹಗರಣ ನಡೆದಿದ್ದರೂ, ಇನ್ನು ಯಾಕೆ? ತನಿಖೆ ಮುಂದಾಗಲಿಲ್ಲ? ಎಂಬುದು ಈಗ ಯಕ್ಷ ಪ್ರಶ್ನೆಯಾಗಿದೆ.

ವಾಲ್ಮೀಕಿ ನಿಗಮದ ಹಗರಣಕ್ಕಿಂತಲೂ ನೂರಾರು ಕೋಟಿರೂಗಳನ್ನು ನುಂಗಿ ಕುಡಿದು ಅರಗಿಸಿಕೊಂಡಿರುವ ಸಚಿವ ಸಂತೋಷ್ ಲಾಡ್ ಅವರನ್ನು ಇನ್ನು ಯಾಕೆ ಸಿದ್ದರಾಮಯ್ಯ ತಮ್ಮ ಸಂಪುಟದಲ್ಲಿ ಇಟ್ಟುಕೊಂಡಿದ್ದಾರೆ ಎಂಬುದೇ ಈಗ ಸಂಶಯಕ್ಕೀಡು ಮಾಡಿದೆ.
ಬಹುಶಃ ಸಿದ್ದರಾಮಯ್ಯನವರಿಗೆ ಯಮಾರಿಸಿ, ಈ ಹಗರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುವಲ್ಲಿ ಯಶಸ್ವಿಯಾಗುತ್ತ ಬಂದಿರುವ ಸಂತೋಷ್ ಲಾಡ್, ಸಿಎಂ ಸಿದ್ದರಾಮಯ್ಯನವರ ನಂಬಿಕೆಗೆ ಮೋಸ ಮಾಡುತ್ತಿದ್ದಾರೆ.
ಇದರಿಂದ ಕಾಂಗ್ರೆಸ್ಗೆ ಕೆಟ್ಟ ಹೆಸರು ಬರುವ ಮೊದಲೇ ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ಕಿತ್ತೊಗೆಯಬೇಕು ಎಂದು ಕಾಂಗ್ರೆಸ್ ವಲಯಗಳಲ್ಲಿ ಮಾತು ಕೇಳಿ ಬರುತ್ತಿದೆ.
ಬರೋಬ್ಬರಿ 900 ಕೋಟಿರೂ ಹಗರಣ|
ಬಿಜೆಪಿಯ ರವಿಕುಮಾರ್ ಹಿಂದೆ ಸರಿದಿದ್ದೇಕೆ?
ಅನುಮಾನಕ್ಕೆ ಎಡೆ ಮಾಡಿದ ರವಿಕುಮಾರ್ ನಡೆ|
ಕಳೆದ ಅಧಿವೇಶನದಲ್ಲಿ ಕಾರ್ಮಿಕ ಇಲಾಖೆಯ ಹಗರಣದ ಕುರಿತು ಮಾಹಿತಿ ನೀಡುವಂತೆ ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಪ್ರಶ್ನೆ ಎತ್ತಿದ್ದರು.
ಆದರೆ ನಂತರ ರವಿಕುಮಾರ್ ತಟಸ್ಥರಾಗಿದ್ದು ಈಗಲೂ ಹಲವು ಅನುಮಾನಗಳಿಗೆ ಕಾರಣವಾಗಿದ್ದು ಸುಳ್ಳಲ್ಲ.

ಎಬಿವಿಪಿಯಿಂದ ಬಂದ ಶಿಸ್ತಿನ ವ್ಯಕ್ತಿತ್ವದ ಎನ್ ರವಿಕುಮಾರ್ ಅವರ ನಡೆ ಈಗ ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.
ಸಿದ್ದರಾಮಯ್ಯ ಆಡಳಿತದ ವಿರುದ್ದ ಮಾತನಾಡುವವರಲ್ಲಿ ವಿಪಕ್ಷಗಳ ಸಾಲಿನಲ್ಲಿ ಎನ್ ರವಿಕುಮಾರ್ ಅಗ್ರಪಂಕ್ತಿಯ ನಾಯಕ.
ಸಂತೋಷ್ ಲಾಡ್ ಹಾಗೂ ಕಾರ್ಮಿಕ ಇಲಾಖೆಯಲ್ಲಿನ ಹಗರಣದಲ್ಲಿ ಅವರು ಹಾಲಿ ಬೆಳಗಾವಿ ಅಧಿವೇಶನದಲ್ಲಿ ತಮ್ಮಲ್ಲಿರುವ ದಾಖಲೆಗಳನ್ನು ಇಟ್ಟುಕೊಂಡು ಈ ಹಗರಣವನ್ನು ಬಯಲಿಗೆ ತರುವ ಕೆಲಸ ಎನ್ ರವಿಕುಮಾರ್ ಮಾಡಬೇಕಿದೆ.
ಆ ಮೂಲಕ ತಮ್ಮ ಮೇಲಿರುವ ಅನುಮಾನಗಳನ್ನು ಅವರು ತೊಡೆದು ಹಾಕುವ ಕೆಲಸ ಮಾಡಬೇಕಿದೆ.
ಓದುಗರೇ, ಈಗ ನೀಡಲಾಗಿರುವ ಮಾಹಿತಿ ಕೇವಲ ಶೇ.01ರಷ್ಟು ಮಾತ್ರ ಇದೆ.
ಬಡ ಕಾರ್ಮಿಕರಿಗೆ ಎಷ್ಟು ಲಕ್ಷ ಟೂಲ್ಕಿಟ್ಗಳನ್ನು ನೀಡಲಾಗಿದೆ. ಲೆಕ್ಕದಲ್ಲಿ ಎಷ್ಟು ತೋರಿಸಲಾಗಿದೆ? ? ಮಾರುಕಟ್ಟೆಯಲ್ಲಿ ಅವುಗಳ ಅಸಲಿ ಬೆಲೆ ಎಷ್ಟು? ಸಂತೋಷ್ ಲಾಡ್ ನಿಗದಿಪಡಿಸಿದ ದರ ಎಷ್ಟು?ಎಂಬುದರ ಕುರಿತು ಪಿನ್ ಟೂ ಪಿನ್ ಸ್ಪೋಟಕ್ ಮಾಹಿತಿಯನ್ನು ಮುಂದಿನ ಸಂಚಿಕೆಗಳಲ್ಲಿ ನಿಮಗೆ ನಿರಂತರವಾಗಿ ನೀಡಲಿದ್ದೇವೆ.
ವರದಿ: ಇನ್ವೆಸ್ಟಿಗೇಟಿವ್ ಟೀಮ್
ನ್ಯೂಇಂಡಿಯಾ ಕನ್ನಡ
ಬೆಂಗಳೂರು.







