CrimeDistrictShivamogga

ಭದ್ರಾವತಿ: ಹಣಕ್ಕಾಗಿ ವೃದ್ಧರಿಬ್ಬರನ್ನು ಯಮಲೋಕಕ್ಕೆ ಅಟ್ಟಿದ್ದ ವೈದ್ಯ!ಕೊಲೆಗೆ ಬಳಸಿದ್ದು ಅನಸ್ತೇಶೀಯಾ ಹೈಡೋಸೆಜ್‌ ಇಂಜೆಕ್ಷನ್|‌ಜಿ.ಪಿ ಮಲ್ಲೇಶ್‌ನನ್ನು ಹೆಡೆಮುರಿ ಕಟ್ಟಿದ ಹಳೇನಗರ ಪೊಲೀಸರು

ಭದ್ರಾವತಿ ನಗರದ ಭೂತನಗುಡಿ ಬಡಾವಣೆಯಲ್ಲಿರುವ ನಿವಾಸಿಗಳಾದ ಚಂದ್ರಪ್ಪ (80) ಹಾಗೂ ಅವರ ಪತ್ನಿ ಜಯಮ್ಮ (70) ಎಂದಿನಂತೆ ತಮ್ಮ ಮನೆಯಲ್ಲಿ ಸಹಜವಾಗಿಯೇ ಇದ್ದರು. ತಮ್ಮ ಸ್ವಂತ ತಮ್ಮನ ಮಗನೇ ಕೊಲೆ ಮಾಡಲು ಬರುತ್ತಾನೆ ಎಂಬ ಸಣ್ಣ ಸಂಶಯವು ಅವರಲ್ಲಿ ಇರಲಿಲ್ಲ.

ಭದ್ರಾವತಿ: ಸಾಲ ತೀರಿಸಲು ತನ್ನ ಸ್ವಂತ ದೊಡ್ಡಪ್ಪ ಹಾಗೂ ದೊಡ್ಡಮ್ಮನನ್ನೇ ಯಮಲೋಕಕ್ಕೆ ಅಟ್ಟಿದ್ದ ವೈದ್ಯ ಜಿ.ಪಿ ಮಲ್ಲೇಶ್‌ ಎಂಬುವನನ್ನು ಹೆಡೆಮುರಿ ಕಟ್ಟುವಲ್ಲಿ ಭದ್ರಾವತಿಯ ಹಳೇನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ಬೆಳಕಿಗೆ ಬಂದು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ಹಣಕ್ಕಾಗಿ ಈ ವೈದ್ಯ ಮಾಡಿದ ಖತರನಾಕ ಐಡಿಯಾ ಮೃತ ವೃದ್ಧರ ಇಡಿ ಕುಟುಂಬವನ್ನು ಭಯ ಬೀಳುವಂತೆ ಮಾಡಿದೆ. ಅಸಲಿಗೆ ಈ ನಾಲಾಯಕ ವೈದ್ಯ ಕೊಲೆ ಮಾಡಿದ ರೀತಿ ಹೇಗಿತ್ತು? ಬಳಿಕ ನೈಸಾಗಿ ಆತ ಅಲ್ಲಿಂದ ಪರಾರಿಯಾಗಿದ್ದು ಹೇಗೆ?

ಬಹುತೇಕ ಯಾವುದೇ ಸಾಕ್ಷಾಧಾರ ಸಿಗದೇ ಬಚಾವ್‌ ಆಗಬಹುದಾಗಿದ್ದ ಈ ಪ್ರಕರಣದಲ್ಲಿ ಆ ಖದೀಮ ವೈದ್ಯ ಪೊಲೀಸರ ಕೈಗೆ ಲಾಕ್‌ ಆಗಿದ್ದು ಹೇಗೆ? ಸಂಪೂರ್ಣ ವಿವರ ಇಲ್ಲಿದೆ.

ಅಂದು ಜನೆವರಿ 19. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಭೂತನಗುಡಿ ಬಡಾವಣೆಯಲ್ಲಿರುವ ನಿವಾಸಿಗಳಾದ ಚಂದ್ರಪ್ಪ (80) ಹಾಗೂ ಅವರ ಪತ್ನಿ ಜಯಮ್ಮ (70) ಎಂದಿನಂತೆ ತಮ್ಮ ಮನೆಯಲ್ಲಿ ಸಹಜವಾಗಿಯೇ ಇದ್ದರು. ತಮ್ಮ ಸ್ವಂತ ತಮ್ಮನ ಮಗನೇ ಕೊಲೆ ಮಾಡಲು ಬರುತ್ತಾನೆ ಎಂಬ ಸಣ್ಣ ಸಂಶಯವು ಅವರಲ್ಲಿ ಇರಲಿಲ್ಲ.

ಈ ಮಧ್ಯೆ ಒಂದಿಡಿ ದಿನ ತಂದೆ ತಾಯಿ ಅವರುಗಳು ಫೋನ್‌ ಕರೆ ಸ್ವೀಕರಿಸಿಲ್ಲ. ಹೀಗಾಗಿ ಅನುಮಾನ ಬಂದು ಮೃತ ಚಂದ್ರಪ್ಪ ಅವರ ಪುತ್ರರೊಬ್ಬರು ಜನೆವರಿ 20 ರಂದು ಅಕ್ಕಪಕ್ಕದವರಿಗೆ ವಿಷಯ ತಿಳಿಸಿದ್ದಾರೆ.

ಆಗ ಮೃತ ಚಂದ್ರಪ್ಪನವರ ಮನೆಗೆ ಬಂದು ನೋಡಿದವರಿಗೆ ಕಂಡಿದ್ದು ಇಬ್ಬರು ವೃದ್ಧರು ಮಂಚದ ಮೇಲೆ ಮಲಗಿದ್ದ ಸ್ಥಿತಿಯಲ್ಲಿ ಸಾವನ್ನಪ್ಪಿರುವ ವಿಷಯ ಬೆಳಕಿಗೆ ಬಂದಿದೆ.

ಯಾವುದೇ ಅನುಮಾನ ಬರದಂತೆ ವೃದ್ಧ ದಂಪತಿಗಳ ಸಾವಾಗಿದ್ದು ಹೇಗೆ? ಎಂಬ ತಲೆ ನೋವು ಭದ್ರಾವತಿ ಹಳೇನಗರ ಪೊಲೀಸರಿಗೆ ಅದಾಗಲೇ ಶುರು ಆಗಿತ್ತು.

ಯಾಕೆಂದರೇ ಮೃತ ಚಂದ್ರಪ್ಪ ಅವರ ಪುತ್ರ ತಮ್ಮ ಪಾಲಕರ ಸಾವು ಅನುಮಾನಸ್ಪದವಾಗಿದೆ ಎಂದು ಎರಡನೇ ದೂರಿನಲ್ಲಿ ತಿಳಿಸಿದ್ದರು. ಹೀಗಾಗಿ ಕೊಲೆಗಡುಕನನ್ನು ಪತ್ತೆ ಹಚ್ಚಲು ಶುರು ಮಾಡಿದ್ದರು.

ಹೀಗೆ ಪೊಲೀಸರು ಮನೆ ಪ್ರವೇಶಿಸಿ ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಾಗ ಸಿಕ್ಕಿದ್ದು ಎಳ್ಳು ಬೆಲ್ಲ ಹಾಗೂ ಜ್ಯೂಸ್‌. ಮೃತ ಚಂದ್ರಪ್ಪನವರ ಪುತ್ರನ ಹೇಳಿಕೆ ಪ್ರಕಾರ, ಕೊಲೆಗೈಯುವ ಮುನ್ನ ಖದೀಮ ಡಾಕ್ಟರ್‌ ಜಿ.ಪಿ ಮಲ್ಲೇಶ್‌ಗೆ ತಮ್ಮ ತಾಯಿ ಎಳ್ಳು ಬೆಲ್ಲ ನೀಡಿದ್ದಾರೆ. ಮತ್ತು ಕುಡಿಯಲು ಜ್ಯೂಸ್‌ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಕೊಲೆ ಮಾಡಲು ಪ್ಲ್ಯಾನ್‌ ಮಾಡಿಕೊಂಡೆ ಬಂದಿದ್ದ ಖದೀಮ ಡಾಕ್ಟರ್‌ ಜಿ.ಪಿ ಮಲ್ಲೇಶ್‌. ಹದಿನೈದು ನಿಮಿಷಗಳ ಕಾಲ ದೊಡ್ಡಪ್ಪ ಹಾಗೂ ದೊಡ್ಡಮ್ಮನೊಂದಿಗೆ ಮಾತನಾಡಿದ್ದಾನೆ.

ಬಳಿಕ ಅವರು ಕೊಟ್ಟ ಎಳ್ಳು ಬೆಲ್ಲ ಹಾಗೂ ಜ್ಯೂಸ್‌ ಕುಡಿದಿದ್ದಾನೆ. ಬಳಿಕ ನಿಮ್ಮ ಮಂಡಿನೋವಿಗೆ ಒಳ್ಳೆಯ ಔಷದ ಬಂದಿದೆ. ಇಂಜೆಕ್ಷನ್‌ ಮಾಡುತ್ತೇನೆ ಎಂದಿದ್ದಾನೆ. ಆಯ್ತು ಇಂಜೆಕ್ಷನ್‌ ಮಾಡು ಎಂದಿದ್ದಾರೆ ಅಷ್ಟೇ! ಇಬ್ಬರನ್ನು ಬೇರೆ ಬೇರೆ ಮಂಚಗಳಲ್ಲಿ ಮಲಗು ಎಂದು ತಿಳಿಸಿದ್ದಾನೆ ಖದೀಮ ಮಲ್ಲೇಶ್.‌

ಬಳಿಕ propofol ಎಂಬ ಅನಸ್ತೇಶಿಯಾ ಇಂಜಕ್ಷೆನ್‌ (50 ಎಂಜಿ ಹೈಡೋಸೇಜ್) ಅನ್ನು ನೀಡಿದ್ದಾನೆ. ಕೆಲವೇ ಕ್ಷಣಗಳಲ್ಲಿ ಇಬ್ಬರು ವೃದ್ಧರಿಗೆ ರಕ್ತದ ಒತ್ತಡ ಕುಸಿಯತೊಡಗಿದೆ. ಏನಾಯಿತು ಎಂದು ವೃದ್ಧರಿಗೆ ಗೊತ್ತಾಗುವಷ್ಟರಲ್ಲಿ ಸಾವು ಅವರನ್ನು ಬರಮಾಡಿಕೊಂಡು ಬಿಟ್ಟಿತ್ತು.

ಯಾವಾಗ ದೊಡ್ಡಪ್ಪ ಹಾಗೂ ದೊಡ್ಡಮ್ಮ ಸಾವನ್ನಪ್ಪಿದ್ದು ಖಚಿತವಾದ ಕೂಡಲೇ ಖದೀಮ ಜಿ.ಪಿ.ಮಲ್ಲೇಶ್‌ ತಡ ಮಾಡಿಲ್ಲ. ಬೀರುವಿನಲ್ಲಿ ಇಟ್ಟಿದ್ದ ಹಾಗೂ ದೊಡ್ಡಮ್ಮನ ಕೊರಳಲಿದ್ದ ಬಂಗಾರದ ಒಡವೆಗಳನ್ನು ಎತ್ತಿಕೊಂಡಿದ್ದಾನೆ.

ಯಾರಿಗೂ ಅನುಮಾನ ಬರದಂತೆ ಮನೆಯಲ್ಲಿ ಯಾವ ವಸ್ತುವನ್ನು ಚೆಲ್ಲಾಪಿಲ್ಲಿ ಮಾಡದೇ ಜಾಣತನದಿಂದ ಅಲ್ಲಿಂದ ಪೇರಿ ಕಿತ್ತಿದ್ದಾನೆ. ಇಷ್ಟಲ್ಲ ನಡೆದಿದ್ದು ಜನೆವರಿ 19ರಂದು ಮಧ್ಯಾಹ 12,45ರಿಂದ 1ಗಂಟೆ ತನಕ ಎಂದು ಈಗ ಬಂಧಿತನಾಗಿರುವ ಆರೋಪಿ ಮಲ್ಲೇಶ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ.

ತಂದೆ ತಾಯಿಯವರ ಹಠಾತ ಸಾವು ಪುತ್ರರ ಸಮೇತ ಕುಟುಂಬದಲ್ಲಿ ಒಂದೆಡೆ ದಿಗ್ಬ್ರಮೆ. ಮತ್ತೊಂದೆಡೆ ದುಃಖ ಮನೆ ಮಾಡಿತ್ತು. ಯಾವ ಕಾರಣಕ್ಕೆ ಸಾವು ಆಯಿತು ಎಂದು ಯಾರಿಗೂ ತಿಳಿಯಲಿಲ್ಲ. ಇನ್ನು ಕೊಲೆ ಎಂದು ಯಾರು ಊಹಿಸುವಂತಹ ಪರಿಸ್ಥಿತಿ ಅಲ್ಲಿರಲಿಲ್ಲ.

ಆದರೆ ಮೃತ ಚಂದ್ರಪ್ಪನವರ ಪುತ್ರ ವಿಶ್ವನಾಥ್‌ ಜಿ.ಸಿ ಅವರಿಗೆ ಪೊಲೀಸರು ಮನೆಗೆ ಬಂದಾಗ ಕೇಳಿದ ಹಲವು ಪ್ರಶ್ನೆಗಳು ಅವರಲ್ಲಿ ಕೆಲವು ಅನುಮಾನ ಹುಟ್ಟುವಂತೆ ಮಾಡಿತ್ತು.

ಇಂದು ಮುಂಜಾನೆ (ಜನೆವರಿ 21) ತಮ್ಮ ತಂದೆಯ ಸಾವಿನ ಹಿಂದೆ ಅನುಮಾನವಿದೆ ಎಂದು ಪುತ್ರ ವಿಶ್ವನಾಥ್‌ ಜಿ.ಸಿ ದೂರು ನೀಡಿದರು. ಪೊಲೀಸರು ಮನೆಗೆ ಬಂದು ತನಿಖೆ ಕೈಗೊಂಡಾಗ ಟೇಬಲ್‌ ಮೇಲೆ ಇದ್ದ ಮೆಡಿಕಲ್‌ ರಿಪೋರ್ಟ್‌ ಕಂಡಿದೆ.

ಇದರ ಜಾಡು ಹಿಡಿದು ಹೊರಟ ಪೊಲೀಸರಿಗೆ ಸಿಕ್ಕಿದ್ದು ಈ ಖದೀಮ ಡಾಕ್ಟರ್‌ ಜಿ.ಪಿ.ಮಲ್ಲೇಶ್‌. ಪೊಲೀಸರ ಶೈಲಿಯಲ್ಲಿ ಕೇಳಿದ ಒಂದೇ ಪ್ರಶ್ನೆ! ತಾನೇ ಕೊಲೆ ಮಾಡಿದ್ದೇನೆಂದು ಖದೀಮ ಜಿ.ಪಿ.ಮಲ್ಲೇಶ್‌ ಒಪ್ಪಿಕೊಂಡಿದ್ದ.

ಇನ್ನು ವೃದ್ದ ದಂಪತಿಗಳ ಅಂತ್ಯಕ್ರಿಯೆ ನಡೆದಿಲ್ಲ. ಅಷ್ಟರೊಳಗೆ ಪೊಲೀಸರು ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿತ್ತು. ಖದೀಮ್‌ ಡಾಕ್ಟರ್‌ ಜಿ.ಪಿ.ಮಲ್ಲೇಶ್‌ನನ್ನು ಪೊಲೀಸರು ವಿಚಾರಣೆ ನಡೆಸಿದಾಗ ತಾನು ಕೊಲೆ ಹೇಗೆ ಮಾಡಿದೆ ಎಂದು ಬಾಯಿ ಬಿಟ್ಟಿದ್ದಾನೆ.

ಸಾಲದ ಸುಳಿಯಲ್ಲಿ ಸಿಲುಕಿದ್ದರಿಂದಲೇ ಈ ಕೊಲೆ ಮಾಡಿರುವುದು ಈಗ ಬಹುತೇಕ ಖಚಿತಗೊಂಡಿದೆ. ಸುಮಾರು 80 ಗ್ರಾಂ ಅಷ್ಟು ಚಿನ್ನವನ್ನು ಆತ ಈಗಾಗಲೇ ಮಾರಾಟ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಅನುಮಾಸ್ಪದ ಸಾವು ಆ ನಂತರ ಕೊಲೆ ಎಂದು ಗೊತ್ತಾದ ಕೂಡಲೇ ಹೆಚ್ಚುವರಿ ಎಸ್‌ಪಿ ಕಾರ್ಯಪ್ಪ ಹಾಗೂ ರಮೇಶ್‌ ಬಿ ಅವರ ಮಾರ್ಗದರ್ಶನದಲ್ಲಿ ಭದ್ರಾವತಿ ಡಿವೈಎಸ್‌ಪಿ ಪ್ರಕಾಶ್‌ ರಾಠೋಡ, ನಗರ ಸಿಪಿಐ ಶ್ರೀಮತಿ ನಾಗಮ್ಮ, ಹಳೆನಗರ ಪಿಎಸ್‌ಐ ಸುನೀಲ್‌ ತೇಲಿ ಮತ್ತು ಸಿಬ್ಬಂದಿ ಅವರು ಕೆಲವೇ ಗಂಟೆಯಲ್ಲಿ ಆರೋಪಿಯನ್ನು ಪತ್ತೆ ಹಚ್ಚಲು ಯಶಸ್ವಿಯಾಗಿದ್ದನ್ನು ಶಿವಮೊಗ್ಗ ಎಸ್‌ಪಿ ಬಿ.ನಿಖಿಲ್‌ ಶ್ಲಾಘಿಸಿದ್ದಾರೆ.

ಈ ಕುರಿತು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯನ್ನು ಕರೆದಿದ್ದ ಎಸ್‌ಪಿ ಬಿ.ನಿಖಿಲ್‌, ತನಿಖಾ ತಂಡಕ್ಕೆ ಪ್ರಶಂಸನಾ ಪತ್ರ ಹಾಗೂ ನಗದನ್ನು ನೀಡುವದಾಗಿ ಹೇಳಿದರು.

Follow Us

Leave a Reply

Your email address will not be published. Required fields are marked *

Back to top button