ನಿರ್ಗಮಿತ ಡಿಸಿ ಗುರುದತ್ತ ಹೆಗಡೆ ಅವರಿಗೆ ಬೀಳ್ಕೊಡುಗೆ|ಪ್ರೆಸ್ ಟ್ರಸ್ಟ್ ಸ್ನೇಹಕೂಟದಲ್ಲಿ ಪರ್ತಕರ್ತರಿಂದ ಸನ್ಮಾನ|ಮಂಗನ ಕಾಯಿಲೆ ತಡೆಗೆ ಅಗತ್ಯ ಕ್ರಮ-ಗುರುದತ್ತ ಹೆಗಡೆ
ಶರಾವತಿ ಸಂತ್ರಸ್ಥರ ಸಮಸ್ಯೆಗೆ ಇನ್ನು ಎಂಟು ಹತ್ತು ದಿನಗಳಲ್ಲಿ ಪರಿಹಾರ ಸಿಗುವ ಭರವಸೆ ಇದೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಎರಡು ವರುಷಗಳ ಕಾಲ ಜನರೊಂದಿಗೆ ಬೆರೆತು ಹಲವು ಸಮಾಜಮುಖಿ ಕೆಲಸ ಮಾಡುವ ಮೂಲಕ ಯಾವುದೇ ವಿವಾದದಲ್ಲಿ ಸಿಲುಕದೇ ಕಾರ್ಯನಿರ್ವಹಿಸಿದ ಜನಸ್ನೇಹಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಸ್ನೇಹಕೂಟದಲ್ಲಿ ಸನ್ಮಾನಿಸಿ, ಬೀಳ್ಕೊಡಲಾಯಿತು.

ಜಿಲ್ಲಾಧಿಕಾರಿಯಾಗಿ ಎಲ್ಲಾ ಸಮಾಜದೊಂದಿಗೆ, ಸಾರ್ವಜನಿಕರೊಂದಿಗೆ ಯಾವುದೇ ತಾರತಮ್ಯ ಮಾಡದೇ ಸೇವೆ ಸಲ್ಲಿಸಿದ ಗುರುದತ್ತ ಹೆಗಡೆ ಅವರ ಕಾರ್ಯನಿರ್ವಹಣೆಯನ್ನು ಈ ಸಂದರ್ಭದಲ್ಲಿ ಹಿರಿಯ ಪರ್ತಕರ್ತರು ಶ್ಲಾಘಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿರ್ಗಮಿತ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಶರಾವತಿ ಸಂತ್ರಸ್ಥರ ಸಮಸ್ಯೆಗೆ ಇನ್ನು ಎಂಟು ಹತ್ತು ದಿನಗಳಲ್ಲಿ ಪರಿಹಾರ ಸಿಗುವ ಭರವಸೆ ಇದೆ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು. ಈ ಸಮಸ್ಯೆಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಎಲ್ಲ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಎರಡು ವರುಷಗಳ ಕಾಲದ ಅಧಿಕಾರವಧಿಯಲ್ಲಿ ಬಿ.ಹೆಚ್.ರಸ್ತೆಯ ಹೆದ್ದಾರಿಗೆ ಸಂಬಂಧಿಸಿದಂತೇ 30 ಜಾಗೆಗಳಲ್ಲಿನ ಭೂಮಿ ಸ್ವಾಧೀನ ಸಮಸ್ಯೆ ಬಗೆಹರಿಸಲಾಗಿದೆ ಎಂದರು.
ವಿಶ್ವಪ್ರಸಿದ್ದ ಜೋಗ ಜಲಪಾತದ ಅಭಿವೃದ್ದಿಗೆ ಒತ್ತು ನೀಡಲಾಗಿದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈವರೆಗೆ ಎಸ್.ಪಿಯಾಗಿದ್ದ ಜಿ.ಕೆ.ಮಿಥುನ್‌ಕುಮಾರ್ ಅವರ ಜೊತೆ ಕಾರ್ಯನಿರ್ವಹಿಸಿದ್ದೇನೆ ಎಂದು ಗುರುದತ್ತ ಹೆಗಡೆ ತಿಳಿಸಿದರು.
ಮುಜರಾಯಿ ಇಲಾಖೆಗೆ ಸೇರಿದ 300 ದೇವಾಲಯಗಳ ಸರ್ವೆ ಕಾರ್ಯ ಪೂರ್ಣಗೊಂಡಿದ್ದು ಉಸ್ತುವಾರಿ ಸಮಿತಿ ರಚಿಸಲಾಗಿದೆ ಎಂದು ಗುರುದತ್ತ ಹೆಗಡೆ ವಿವರಿಸಿದರು.
ಮಂಗನ ಕಾಯಿಲೆ ತಡೆಗೆ ಅಗತ್ಯ ಕ್ರಮ
ಜಿಲ್ಲೆಯಲ್ಲಿ ಮಂಗನ ಕಾಯಿಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕೆ ಬೇಕಾಗುವ ಲಸಿಕೆಯ ಬಗ್ಗೆ ಹೆಚ್ಚಿನ ಗಮನ ನೀಡುವದಾಗಿ ಗುರುದತ್ತ ಹೆಗಡೆ ಹೇಳಿದರು.
ಆರೋಗ್ಯ ಇಲಾಖೆಯ ಆಯುಕ್ತರಾಗಿ ನೇಮಕಗೊಂಡಿರುವದರಿಂದ ಶೀಘ್ರದಲ್ಲಿಯೇ ಮತ್ತೆ ಶಿವಮೊಗ್ಗಕ್ಕೆ ಭೇಟಿ ನೀಡುವದಲ್ಲದೇ ಕೆಎಫ್‌ಡಿ ಭೀಕರತೆಯನ್ನು ಕಡಿಮೆ ಮಾಡಲು ಪ್ರಯತ್ನಿಸುವದಾಗಿ ತಿಳಿಸಿದರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಹಾಗು ಕ್ರಾಂತಿದೀಪ್ ಪತ್ರಿಕೆ ಸಂಪಾದಕ ಎನ್ ಮಂಜುನಾಥ್ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ, ಮ್ಯಾನೇಜಿಂಗ್ ಟ್ರಸ್ಟಿ ಗೋಪಾಲ್ ಯಡಗೇರಿ ಮತ್ತಿತರರು ಉಪಸ್ಥಿತರಿದ್ದರು.
ನೂತನ ಡಿಸಿಗೆ ಅಧಿಕಾರ ಹಸ್ತಾಂತರ|

ಶಿವಮೊಗ್ಗ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಕಚೇರಿಗೆ ಆಗಮಿಸಿದ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ನಿರ್ಗಮಿತ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರ ಹಸ್ತಾಂತರಿಸಿದರು.
ಬಳಿಕ ನೂತನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅಧಿಕಾರಿಗಳೊಂದಿಗೆ ಜತೆಗೆ ಸಭೆ ನಡೆಸಿದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂ ಇಂಡಿಯಾ ಕನ್ನಡ
ಶಿವಮೊಗ್ಗ.







