ಶಿವಮೊಗ್ಗ: ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದ ಚಿರತೆ|ನಡುರಾತ್ರಿ ಚಿರತೆಗೆ ಸ್ಕ್ಯಾನಿಂಗ್ ಮಾಡಿದ ವೈದ್ಯರು|ಮೃಗಾಲಯದಲ್ಲಿ ಚಿಕಿತ್ಸೆ ಮುಂದುವರಿಕೆ
ಬೆಳಗಿನ ಹೊತ್ತು ಆಸ್ಪತ್ರೆಯಲ್ಲಿ ಜನ ಸಂದಣಿ ಹೆಚ್ಚಿರುವ ಕಾರಣ ಚಿರತೆಗೆ ನಡುರಾತ್ರಿ ಸ್ಕ್ಯಾನಿಂಗ್ಗೆ ವ್ಯವಸ್ಥೆ ಮಾಡಲಾಗಿತ್ತು.

ಶಿವಮೊಗ್ಗ: ಈವರೆಗೆ ಮನುಷ್ಯರ ಸ್ಕ್ಯಾನಿಂಗ್ ಮಾಡುತ್ತಿದ್ದ ನಂಜಪ್ಪ ಆಸ್ಪತ್ರೆ ಮೊದಲ ಬಾರಿಗೆ ಕಾಡು ಪ್ರಾಣಿ ಚಿರತೆಯ ಸ್ಕ್ಯಾನಿಂಗ್ ಮಾಡುವ ಮೂಲಕ ದಾಖಲೆ ನಿರ್ಮಿಸಿದೆ.
ಅನಾರೋಗ್ಯಕ್ಕೀಡಾಗಿರುವ ತ್ಯಾವರೆಕೊಪ್ಪ ಮೃಗಾಲಯದಲ್ಲಿರುವ 15 ವರ್ಷದ ಗಂಡು ಚಿರತೆ ಕಳೆದೆರಡು ದಿನಗಳಿಂದ ನಿತ್ರಾಣಗೊಂಡ ಸ್ಥಿತಿಯಲ್ಲಿದ್ದರಿಂದ ಎಂಆರ್ಐ ಸ್ಕ್ಯಾನಿಂಗ್ನ ಅಗತ್ಯವಿದ್ದರಿಂದ ನಂಜಪ್ಪ ಆಸ್ಪತ್ರೆಗೆ ಕರೆತರಲಾಗಿತ್ತು.

ಮೃಗಾಲಯದಲ್ಲಿ ಎಂಆರ್ಐ ಸ್ಕ್ಯಾನಿಂಗ್ ವ್ಯವಸ್ಥೆ ಇರದಿರುವುದು ಹಾಗೂ ಇತ್ತ ಪಶುವೈದ್ಯಕೀಯ ಕಾಲೇಜಿನಲ್ಲಿಯು ಈ ಸೌಲಭ್ಯವಿಲ್ಲದ್ದರಿಂದ ನಂಜಪ್ಪ ಆಸ್ಪತ್ರೆಯಲ್ಲಿಯೇ ಎಂಆರ್ಐ ಸ್ಕ್ಯಾನಿಂಗ್ ಮಾಡಲು ನಿರ್ಧರಿಸಲಾಯಿತು ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗಿನ ಹೊತ್ತು ಆಸ್ಪತ್ರೆಯಲ್ಲಿ ಜನ ಸಂದಣಿ ಹೆಚ್ಚಿರುವ ಕಾರಣ ಚಿರತೆಗೆ ನಡುರಾತ್ರಿ ಸ್ಕ್ಯಾನಿಂಗ್ಗೆ ವ್ಯವಸ್ಥೆ ಮಾಡಲಾಗಿತ್ತು. ಚಿರತೆಗೆ ಮಂಪರು ಇಂಜೆಕ್ಷನ್ ನೀಡಿ ಮೃಗಾಲಯದ ವಾಹನದಲ್ಲಿಯೇ ಕುವೆಂಪು ರಸ್ತೆಯ ನಂಜಪ್ಪ ಆಸ್ಪತ್ರೆಗೆ ಕರೆತರಲಾಗಿತ್ತು.

ಸ್ಕ್ಯಾನಿಂಗ್ ಪ್ರಕ್ರಿಯೆ ಆರಂಭವಾಗುವ ಹೊತ್ತಿಗೆ ಪುನಃ ಮಂಪರು ಇಂಜೆಕ್ಷನ್ ನೀಡಲಾಯಿತು. ಸುಮಾರು ಅರ್ಧ ಗಂಟೆ ಸ್ಕ್ಯಾನಿಂಗ್ ಪ್ರಕ್ರಿಯೆ ನಡೆಯಿತು.
ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷರ ಮಾತನಾಡಿ, ಕಾಡಿನಲ್ಲಿ ಚಿರತೆಗಳು ಸಮಾನ್ಯವಾಗಿ 10 ವರ್ಷ ಬದುಕುತ್ತವೆ. ಇಲ್ಲಿನ ಮೃಗಾಲಯದಲ್ಲಿ 15 ವರ್ಷ ಬದುಕಿದೆ ಎಂದರು.
ಕಳೆದ ಎರಡು ದಿನದಿಂದ ಅನಾರೋಗ್ಯ ಉಂಟಾಗಿದೆ. ಸ್ಕ್ಯಾನಿಂಗ್ನ ಅಗತ್ಯವಿದ್ದರಿಂದ ನಂಜಪ್ಪ ಆಸ್ಪತ್ರೆಗೆ ಕರೆತರಲಾಗಿದೆ. ಮನುಷ್ಯರು ಮತ್ತು ಪ್ರಾಣಿಗಳ ಸ್ಕ್ಯಾನಿಂಗ್ ಪ್ರಕ್ರಿಯೆ ಒಂದೇ ರೀತಿಯದ್ದು. ಆದ್ದರಿಂದ ಇಲ್ಲಿಗೆ ಕರೆತಂದಿದ್ದೇನೆ. ಮೃಗಾಲಯದಲ್ಲಿ ಮುಂದಿನ ಚಿಕಿತ್ಸೆ ಮುಂದುವರೆಯಲಿದೆ ಎಂದು ತಿಳಿಸಿದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







