ಉನ್ನತ ಶಿಕ್ಷಣ ಪಡೆದರೂ ಕೈದಿಗಿಂತಲೂ ಕಡಿಮೆ ಸಂಬಳ!ಸರ್ಕಾರಿ ಪಿಯುಸಿ ಅತಿಥಿ ಉಪನ್ಯಾಸಕರ ನಿಲ್ಲದ ಅರಣ್ಯರೋಧನ!30 ಸಾವಿರ ವೇತನ ನೀಡುವಂತೆ ಸರ್ಕಾರಕ್ಕೆ ಮೊರೆ..
ಕೇವಲ 14 ಸಾವಿರರೂ. ಸಂಬಳದಲ್ಲಿ ಬದುಕು ಸಾಗಿಸಲು ಹೆಣಗಾಡುತ್ತಿರುವ ಅತಿಥಿ ಉಪನ್ಯಾಸಕರು ಕನಿಷ್ಟ 30 ಸಾವಿರರೂ ಸಂಬಳ ನೀಡಿ ಎಂದು ಸರ್ಕಾರದ ಮುಂದೆ ಗೋಗರೆಯುವಂತಹ ಸ್ಥಿತಿ ನಿರ್ಮಾಣವಾಗಿದೆ.

ಸೇವಾ ಭದ್ರತೆ ಇಲ್ಲದೇ ಕಳೆದ ಹಲವಾರು ವರುಷಗಳಿಂದ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರು ಸಂಬಳ ಹೆಚ್ಚಿಸುವಂತೇ ಆಗ್ರಹಿಸಿ ಮತ್ತೆ ಸರ್ಕಾರದ ಮೊರೆ ಹೋಗಿದ್ದಾರೆ.
ಕನಿಷ್ಟ 30 ಸಾವಿರ ರೂ ಸಂಬಳವನ್ನು ನೀಡುವಂತೆ ಆಗ್ರಹಿಸಿರುವ ಅತಿಥಿ ಉಪನ್ಯಾಸಕರು, ಮುಂಬರುವ ಬಜೆಟ್ನಲ್ಲಿ ಈ ಕುರಿತು ಅನುದಾನ ಒದಗಿಸುವಂತೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.
ಕೈದಿಗಳಿಗಿಂತಲೂ ಕಡಿಮೆ ಸಂಬಳ|
ವಿಚಿತ್ರ ಆದರೂ ಸತ್ಯ. ಶಿಕ್ಷೆಗೆ ಗುರಿಯಾಗುವ ಜೈಲಿನ ಕೈದಿಗಳಿಗಿಂತಲೂ ಸರ್ಕಾರಿ ಅತಿಥಿ ಉಪನ್ಯಾಸಕರ ಪಾಡು ಹೇಳತೀರದು.
ಕೈದಿಗೆ ದಿನಕ್ಕೆ 548 ರೂ ಸಂಬಳ ಇದ್ದರೇ ಅತಿಥಿ ಉಪನ್ಯಾಸಕರಿಗೆ ಅದಕ್ಕಿಂತ ಕಡಿಮೆ, ತಿಂಗಳಿಗೆ 31 ದಿನ ಹಿಡಿದರೂ 438 ರೂ ಸಂಬಳ ಪಡೆಯುತ್ತಾರೆ.

ಹಾಗೆ ನೋಡಿದರೇ ಪಕ್ಕದ ಆಂದ್ರ ಪ್ರದೇಶದಲ್ಲಿ ತಿಂಗಳಿಗೆ 27 ಸಾವಿರ ರೂ. ಸಂಬಳ ನೀಡುತ್ತಿದ್ದರೇ, ಕೇರಳ ಸರ್ಕಾರವು 41,310 ರೂ. ಸಂಬಳವನ್ನು ಅತಿಥಿ ಉಪನ್ಯಾಸಕರಿಗೆ ನೀಡುತ್ತಿದೆ.
ಅತಿಥಿ ಉಪನ್ಯಾಸಕರ ಸ್ಥಿತಿ ಅಧೋಗತಿ|
ಕೇವಲ 14 ಸಾವಿರರೂ. ಸಂಬಳದಲ್ಲಿ ಬದುಕು ಸಾಗಿಸಲು ಹೆಣಗಾಡುತ್ತಿರುವ ಅತಿಥಿ ಉಪನ್ಯಾಸಕರು ಕನಿಷ್ಟ 30 ಸಾವಿರರೂ ಸಂಬಳ ನೀಡಿ ಎಂದು ಸರ್ಕಾರದ ಮುಂದೆ ಗೋಗರೆಯುವಂತಹ ಸ್ಥಿತಿ ನಿರ್ಮಾಣವಾಗಿದೆ.

ವಯಸ್ಸಾದ ಪೋಷಕರ ಅನಾರೋಗ್ಯ, ಮನೆ ಬಾಡಿಗೆ, ರೇಷನ್ ಇವೆಲ್ಲವನ್ನು ತೂಗಿಸಲು ಸಾಧ್ಯವೇ ಇಲ್ಲ ಅನ್ನುತ್ತಾರೆ ಅತಿಥಿ ಉಪನ್ಯಾಸಕರು. ಇವರುಗಳು ಕೆಲಸ ಮಾಡುವ ಕಾಲೇಜುಗಳಲ್ಲಿ ಡಿ ದರ್ಜೆ ನೌಕರರು ಪಡೆಯುವ ಸಂಬಳ ಇವರಿಗಿಂತ ದುಪ್ಪಟ್ಟು ಇದೆ.
ಸ್ನಾತಕೋತ್ತರದಿಂದ ಪಿಹೆಚ್ ಡಿ ವರೆಗೆ ಶಿಕ್ಷಣ ಪಡೆದಿದ್ದಲ್ಲದೇ ನೆಟ್ ಸ್ಲೇಟ್ ಅನ್ನು ಪಾಸಾದ ವಿದ್ಯಾವಂತ ಅತಿಥಿ ಉಪನ್ಯಾಸಕರಿಗೆ ವಯೋಮಿತಿ ಮೀರುತ್ತಿರುವ ಆತಂಕದೊಂದಿಗೆ ಕಾರ್ಯನಿರ್ವಹಿಸುವಂತಹ ಪರಿಸ್ಥಿತಿ ಇದೆ.
ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರ
ವೇತನ ನಮಗೂ ಕೊಡಿ!
ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ಕಳೆದ 2024ರಲ್ಲಿ ಗರಿಷ್ಠ ಗಂಟೆಗಳ ಕಾರ್ಯಭಾರವನ್ನು ನೀಡುವ ಮೂಲಕ ಯುಜಿಸಿ ನಿಗದಿಪಡಿಸಿದ ಗೌರವ ಧನವನ್ನು ನೀಡಲಾಗುತ್ತಿದೆ.
ಉಪನ್ಯಾಸಕರ ವಿದ್ಯಾರ್ಹತೆ ಅನುಗುಣವಾಗಿ 26ಸಾವಿರ, 28ಸಾವಿರ, 30 ಹಾಗೂ 32 ಸಾವಿರರೂ ವೇತನವನ್ನು ರಾಜ್ಯ ಸರ್ಕಾರವು ನೀಡುತ್ತಿದೆ.

ಇದೇ ಪ್ರಕಾರ ನಮಗೂ ವೇತನ ನೀಡಬೇಕೆಂದು ಆಗ್ರಹಿಸಿರುವ ಪದವಿ ಪೂರ್ವ ಕಾಲೇಜು ಉಪನ್ಯಾಸಕರು, ಈಗ ವಾರದಲ್ಲಿ 10ರಿಂದ 12 ಗಂಟೆಗಳ ಕಾಲ ನೀಡಿರುವ ಕಾರ್ಯಭಾರವನ್ನು ಪೂರ್ಣವಾಗಿ ನೀಡುವದರ ಮೂಲಕ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ನೀಡಲಾಗುವ ವೇತನವನ್ನು ತಮಗೆ ನೀಡಬೇಕು ಎಂಬುದು ರಾಜ್ಯ ಪದವಿ ಪೂರ್ವ ಕಾಲೇಜು ಅತಿಥಿ ಉಪನ್ಯಾಸಕರ ಮನವಿಯಾಗಿದೆ.
ಪದವಿಪೂರ್ವ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರಿಲ್ಲ!
ಉತ್ತಮ ಫಲಿತಾಂಶದ ಜವಾಬ್ದಾರಿ ನಮ್ಮದು|
ಅಂಕಿ ಅಂಶಗಳ ಪ್ರಕಾರ ನೋಡಲಾಗಿ ಇವತ್ತು ರಾಜ್ಯದ ಅನೇಕ ಸರ್ಕಾರಿ ಪಿಯುಸಿ ಕಾಲೇಜುಗಳಲ್ಲಿ ಬೋಧನಾ ಹುದ್ದೆಗಳಿಗೆ ಖಾಯಂ ಉಪನ್ಯಾಸಕರೇ ಇಲ್ಲ.
ಇಂತಹ ಕಡೆ ಅತಿಥಿ ಉಪನ್ಯಾಸಕರಿಂದಲೇ ಬೋಧನಾ ತರಗತಿಗಳು ನಡೆಯುತ್ತಿದೆಯೆಲ್ಲದೇ ವಿದ್ಯಾರ್ಥಿಗಳ ದಾಖಲಾತಿ ಹಾಗೂ ಉತ್ತಮ ಫಲಿತಾಂಶ ಬರೋತನಕ ಅತಿಥಿ ಉಪನ್ಯಾಸಕರು ಶ್ರಮವಹಿಸಿ ದುಡಿಯುತ್ತಿದ್ದಾರೆ.
ಖಾಯಂ ಉಪನ್ಯಾಸಕರಿಗಿಂತಲೂ ಹೆಚ್ಚು ಕಾರ್ಯನಿರ್ವಹಿಸುವ ಅತಿಥಿ ಉಪನ್ಯಾಸಕರ ಗೌರವ ಧನವನ್ನು ಹೆಚ್ಚಿಸಬೇಕೆಂದು ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ವಿಶೇಷ ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







