Bengaluru UrbanDistrictKarnatakaPoliticalSpecial Stories

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025ಕ್ಕೆ ಮುಹೂತ೯ ಫಿಕ್ಸ್‌-ಅಸಮಾನತೆ ತೊಲಗಿಸಲು ಸಕಾ೯ರ ಬದ್ಧ-ಸಿದ್ದರಾಮಯ್ಯ

ಸಮೀಕ್ಷೆ ಕಾರ್ಯದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಯಾರೂ ಕೂಡಾ ಸಮೀಕ್ಷೆಯಿಂದ ಹೊರಗುಳಿಯಬಾರದು ಎಂದು ಸಿಎಂ ಸಿದ್ದರಾಮಯ್ಯ ಎಂದು ರಾಜ್ಯದ ಜನತೆಯಲ್ಲಿ ಮನವಿ ಮಾಡಿದರು. ಸಮೀಕ್ಷೆಯಲ್ಲಿ 60 ಪ್ರಶ್ನೆಗಳನ್ನು ಕೇಳಲಾಗುವುದು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಸೆಪ್ಟಂಬರ್ 22 ರಿಂದ ಅಕ್ಟೋಬರ್ 7ರ ವರೆಗೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶುಕ್ರವಾರದಂದು ಬೆಂಗಳೂರಿನ ತಮ್ಮ ಅಧಿಕೃತ ನಿವಾಸ “ಕೃಷ್ಣಾ” ದಲ್ಲಿ ಮಾಧ್ಯಮ ಗೋಷ್ಠಿ ನಡೆಸಿದ ಸಿಎಂ, 2015ರಲ್ಲಿ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್ ಅವರು ವರದಿ ಸಲ್ಲಿಸಿ 10 ವರ್ಷ ಆದ ಕಾರಣ ಹೊಸ ಸಮೀಕ್ಷೆಗೆ ತೀರ್ಮಾನ ಮಾಡಿ ಆ ಕಾರ್ಯವನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಈಗ ವಹಿಸಲಾಗಿದೆ ಎಂದರು.

ಹಿಂದುಳಿದ ವಗ೯ಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್‌

ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳಾದರೂ ಅಸಮಾನತೆಯನ್ನು ಸಂಪೂರ್ಣವಾಗಿ ತೊಲಗಿಸಲು ನಮಗೆ ಸಾಧ್ಯವಾಗಿಲ್ಲ. ಸಮಾನತೆಯನ್ನು, ಸಮಾನ ಅವಕಾಶವನ್ನು ಒದಗಿಸುವ ನಿಟ್ಟಿನಲ್ಲಿ ನಾವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯವನ್ನು ಕೈಗೊಂಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ರಾಜ್ಯದಲ್ಲಿ ಸುಮಾರು 7 ಕೋಟಿ ಜನಸಂಖ್ಯೆಯಿದ್ದು, ಸುಮಾರು 2 ಕೋಟಿಯಷ್ಟು ಕುಟುಂಬಗಳಿವೆ. ಇವರೆಲ್ಲರಿಗೂ ಸಮಾನ ಅವಕಾಶ ಒದಗಿಸುವುದು ನಮ್ಮ ಕರ್ತವ್ಯ ಎಂದು ಹೇಳಿದ ಸಿದ್ದರಾಮಯ್ಯ, ಪ್ರತಿಯೊಬ್ಬರ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಸ್ಥಿತಿಗತಿ ಗೊತ್ತಾದರೆ ಮಾತ್ರ ಕಲ್ಯಾಣ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ದತ್ತಾಂಶ ಸರಿಯಾಗಿ ಗೊತ್ತಾದರೆ ಮಾತ್ರ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯ. ಗ್ಯಾರಂಟಿ ಯೋಜನೆಗಳ ಮೂಲಕ ಅಸಮಾನತೆಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಲು ಪ್ರಯತ್ನ ಮಾಡಿದ್ದೇವೆ.

ನಾವು ಹಿಂದೆ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಭಾಗ್ಯ ಯೋಜನೆಗಳ ಮೂಲಕ ಸಹ ಇದನ್ನು ಸಾಧಿಸಲು ಪ್ರಯತ್ನಿಸಿದ್ದೇವೆ. ಹಿಂದುಳಿದವರ ಬಡತನ, ನಿರುದ್ಯೋಗ, ಅನಕ್ಷರತೆ ಹೋಗಬೇಕಾದರೆ ವಿಶೇಷ ಪ್ರಯತ್ನದ ಅಗತ್ಯವಿದೆ ಎಂದು ಹೇಳಿದರು.

ನಾಡಿನ 7 ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಯನ್ನು ತಿಳಿದುಕೊಳ್ಳುವ ಉದ್ದೇಶದಿಂದ ಮಧುಸೂಧನ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ಆಯೋಗ ಸಮೀಕ್ಷೆ ಕಾರ್ಯ ಕೈಗೊಳ್ಳಲಿದೆ ಎಂದು ಹೇಳಿದ ಸಿಎಂ, ಆದಷ್ಟು ಎಚ್ಚರಿಕೆಯಿಂದ, ಪ್ರತಿಯೊಬ್ಬರನ್ನೂ ಒಳಗೊಂಡಂತೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಡಿಸೆಂಬರ್ ಒಳಗಾಗಿ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ.‌

ದಸರಾ ರಜೆ ಅವಧಿಯಲ್ಲಿ ಶಿಕ್ಷಕರ ಸೇವೆಯನ್ನು ಬಳಸಿಕೊಂಡು ಸಮೀಕ್ಷೆ ಕಾರ್ಯ ನಡೆಯಲಿದೆ. 1.75 ಲಕ್ಷ ಶಿಕ್ಷಕರನ್ನು ಈ ಕಾರ್ಯಕ್ಕೆ ಬಳಸಲಾಗುವುದು. ಅವರಿಗೆ ರೂ.20 ಸಾವಿರವರೆಗೆ ಗೌರವ ಸಂಭಾವನೆ ನೀಡಲಾಗುವುದು. ಪ್ರತಿ ಶಿಕ್ಷಕರಿಗೆ 120ರಿಂದ 150ಮನೆಗಳ ವ್ಯಾಪ್ತಿಯನ್ನು ನಿಗದಿಪಡಿಸಲಾಗಿದೆ

ಶಿಕ್ಷಕರ ಸಂಭಾವನೆಗೆ ರೂ. 325 ಕೋಟಿ ವೆಚ್ಚವಾಗಲಿದೆ. ತಾತ್ಕಾಲಿಕವಾಗಿ ರೂ.420 ಕೋಟಿ ಸಮೀಕ್ಷೆ ಕಾರ್ಯಕ್ಕೆ ನಿಗದಿಪಡಿಸಲಾಗಿದೆ. ಅಗತ್ಯ ಬಿದ್ದರೆ ಹೆಚ್ಚುವರಿ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.

ಆಯೋಗ ವೈಜ್ಞಾನಿಕವಾಗಿ, ಯಾವುದೇ ಲೋಪವಾಗದಂತೆ ಸಮೀಕ್ಷೆ ಕಾರ್ಯ ನಡೆಸಬೇಕು. ನಿಗದಿತ ಅವಧಿಯ ಒಳಗಾಗಿ ಸಮೀಕ್ಷೆ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ನಾಗಮೋಹನ ದಾಸ್ ಅವರು ಒಳಮೀಸಲಾತಿ ಸಮೀಕ್ಷೆಗೆ ವಿಶೇಷ ತಂತ್ರಜ್ಞಾನ ಬಳಸಿಕೊಂಡ ರೀತಿಯಲ್ಲಿ ಈ ಸಮೀಕ್ಷೆಯನ್ನು ಸಹ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು.

ಪ್ರತಿಯೊಂದು ಮನೆಯ ವಿದ್ಯುತ್ ಮೀಟರ್ ಆಧಾರದಲ್ಲಿ ಮನೆಯ ಜಿಯೋ ಟ್ಯಾಗ್ ಮಾಡಿ UHID ವಿಶೇಷ ಸಂಖ್ಯೆಯನ್ನು ನಮೂದಿಸಲಾಗುವುದು.

ಈಗಾಗಲೇ 1.55 ಲಕ್ಷ ಮನೆಗಳಿಗೆ ಸಂಖ್ಯೆಯನ್ನು ಅಳವಡಿಸಲಾಗಿದೆ. ವಿದ್ಯುತ್ ಸಂಪರ್ಕ ಇಲ್ಲದ ಮನೆಗಳ ಸಮೀಕ್ಷೆಯನ್ನು ಸಹ ಮಾಡಲಾಗುವುದು.

ಸಮೀಕ್ಷೆ ಸಂದರ್ಭದಲ್ಲಿ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಅನ್ನು ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡುವ ಕಾರ್ಯವನ್ನು ಮಾಡಲಾಗುವುದು ಎಂದು ತಿಳಿಸಿದರು.

ಸಮೀಕ್ಷೆ ಕಾರ್ಯದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಯಾರೂ ಕೂಡಾ ಸಮೀಕ್ಷೆಯಿಂದ ಹೊರಗುಳಿಯಬಾರದು ಎಂದು ಸಿಎಂ ಸಿದ್ದರಾಮಯ್ಯ , ರಾಜ್ಯದ ಜನತೆಯಲ್ಲಿ ಮನವಿ ಮಾಡಿದರು. ಸಮೀಕ್ಷೆಯಲ್ಲಿ 60 ಪ್ರಶ್ನೆಗಳನ್ನು ಕೇಳಲಾಗುವುದು.

ಎಲ್ಲರೂ ಪ್ರತಿಯೊಂದು ಪ್ರಶ್ನೆಗಳಿಗೆ ಸಮರ್ಪಕವಾದ ಮಾಹಿತಿಯನ್ನು ಒದಗಿಸಬೇಕು. ಸರಿಯಾದ ಮಾಹಿತಿ ನೀಡಿದರೆ ಮಾತ್ರ ವೈಜ್ಞಾನಿಕ ಸಮೀಕ್ಷೆ ಸಾಧ್ಯವಿದೆ ಎಂದು ಸಿಎಂ ಅಭಿಪ್ರಾಯಪಟ್ಟರು.

ಆಯೋಗದ ಸಹಾಯವಾಣಿ ಸಂಖ್ಯೆ 8050770004 ಗೆ ಕರೆ ಮಾಡಿ ಸಾರ್ವಜನಿಕರು ಸಮೀಕ್ಷೆ ಕುರಿತು ಯಾವುದೇ ದೂರು ಅಥವಾ ಮಾಹಿತಿಯನ್ನು ಪಡೆಯಬಹುದು. ಆನ್ ಲೈನ್ ಮೂಲಕ ಸಹ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸಮೀಕ್ಷೆ ಆರಂಭವಾಗುವ ಪೂರ್ವದಲ್ಲೇ ಆಶಾ ಕಾರ್ಯಕರ್ತರು ಎಲ್ಲರ ಮನೆಗಳಿಗೆ ಹೋಗಿ ಸಮೀಕ್ಷೆಯ ನಮೂನೆಯನ್ನು ಒದಗಿಸಲಿದ್ದಾರೆ. ಇದರಿಂದ ಸರಿಯಾದ ಮಾಹಿತಿಯನ್ನು ಒದಗಿಸುವ ಬಗ್ಗೆ ಜಾಗೃತಿ ಮೂಡಲು ಸಾಧ್ಯವಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Vijayeendra Hungund

ನ್ಯೂ ಇಂಡಿಯಾ ಕನ್ನಡ" ಇದು ಸತ್ಯದ ಜಯ..ಎಂಬ ಧ್ಯೇಯದೊಂದಿಗೆ ಆರಂಭಿಸಲಾಗಿರುವ ಕನ್ನಡ ನ್ಯೂಸ್‌ ವೆಬ್‌ಸೈಟ್‌. ಸಂಜೆವಾಣಿ, ಹಾಯ್ ಬೆಂಗಳೂರು, ಲಂಕೇಶ್ ಪತ್ರಿಕೆ, ಟಿವಿ೯, ಕಸ್ತೂರಿ ನ್ಯೂಸ್, ಸುವರ್ಣ ನ್ಯೂಸ್ , ಜನಶ್ರೀ ನ್ಯೂಸ್ ಸಂಸ್ಥೆಗಳಲ್ಲಿ ಹಾಗೂ ದೂರದರ್ಶನ ಚಂದನ ಕನ್ನಡ ವಾಹಿನಿಯಲ್ಲಿ ಜಿಲ್ಲಾ ವರದಿಗಾರನಾಗಿ, ವಿಭಾಗೀಯ ಮುಖ್ಯಸ್ಥನಾಗಿ , ಇನ್ ಪುಟ್ ಹಾಗೂ ಔಟ್ ಪುಟ್ ಮುಖ್ಯಸ್ಥನಾಗಿ , ಮುಖ್ಯ ಉಪ ಸಂಪಾದಕನಾಗಿ ಹಾಗೂ ಸಹಾಯಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದೇನೆ. ನಿಷ್ಪಕ್ಷಪಾತ, ನಿರ್ಭಿಡೆಯಿಂದ ಸುದ್ದಿ ವಿಶ್ಲೇಷಣೆ ಮಾಡುವ ಉದ್ದೇಶದೊಂದಿಗೆ ಆರಂಭಿಸಿರುವ ಈ ನ್ಯೂಸ್‌ ಪೋಟ೯ಲಗೆ ತಮ್ಮ ಬೆಂಬಲವಿರಲಿ.. ವಿಜಯೀಂದ್ರ ಪಿ ಹುನಗುಂದ್‌ ಪ್ರಧಾನ ಸಂಪಾದಕರು, ನ್ಯೂ ಇಂಡಿಯಾ ಕನ್ನಡ, Email- editor@newindiakannada.com

Leave a Reply

Your email address will not be published. Required fields are marked *

Back to top button