ನವಲಗುಂದ:ಪಂಚಗೃಹ ಹಿರೇಮಠ ಪಟ್ಟದ ವಿವಾದಕ್ಕೆ ತೆರೆ ಎಳೆದ ಕಾಶಿ ಶ್ರೀಗಳು!ಮೇ 12ರಂದು ನಡೆಯಲಿದೆ ಪಟ್ಟಾಧಿಕಾರ|ಬಂಗಾರೇಶ್ ಹಿರೇಮಠ ಕಾರ್ಯಕ್ಕೆ ಶ್ರೀಗಳ ಶ್ಲಾಘನೆ
ಎರಡು ಗುಂಪುಗಳ ಮಧ್ಯೆ ಉಂಟಾಗಿದ್ದ ಭಿನ್ನಾಭಿಪ್ರಾಯ ಶಮನಕ್ಕೆ ರಾಜ್ಯ ಕಾಂಗ್ರೆಸ್ ಮುಖಂಡ ಹಾಗೂ ಈ ಭಾಗದ ವೀರಶೈವ ಲಿಂಗಾಯತ ಸಮಾಜದ ಮಂಚೂಣಿ ನಾಯಕ ಬಂಗಾರೇಶ್ ಹಿರೇಮಠ್ ಅವರ ಸತತ ಪ್ರಯತ್ನ ಕೊನೆಗೂ ಕೈಗೂಡಿದೆ.
ಹುಬ್ಬಳ್ಳಿ: ನವಲಗುಂದ ಪಟ್ಟಣದ ಪಂಚಗೃಹ ಹಿರೇಮಠದ ಪಟ್ಟಕ್ಕೆ ನೂತನ ಪೀಠಾಧಿಕಾರಿಗಳನ್ನು ನೇಮಕ ಮಾಡುವ ಘಳಿಗೆ ಕೊನೆಗೂ ಕೂಡಿ ಬಂದಿದೆ. ಈವರೆಗೆ ಎರಡು ಗುಂಪುಗಳ ಮಧ್ಯ ಇದ್ದ ಭಿನ್ನಾಭಿಪ್ರಾಯ ಅಂತ್ಯಗೊಂಡಿದೆ.
ಬುಧವಾರ ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ್ ಶಿವಾಚಾರ್ಯರ ಸಾನಿಧ್ಯದಲ್ಲಿ ಹುಬ್ಬಳ್ಳಿಯ ನವನಗರದಲ್ಲಿನ ಕಾಶಿ ಶಾಖಾ ಮಠದಲ್ಲಿ ನಡೆದ ಉನ್ನತ ಮಟ್ಟದ ಸಂಧಾನ ಸಭೆಯಲ್ಲಿ ನೂತನ ಪೀಠಾಧಿಕಾರಿಗಳ ನೇಮಕಾತಿ ವಿಚಾರದಲ್ಲಿ ಕಾಶಿ ಪೀಠದ ಶ್ರೀಗಳ ತೀರ್ಮಾನವೇ ಅಂತಿಮ ಎಂದು ನಿರ್ಧಾರಕ್ಕೆ ಬರಲಾಗಿದೆ.
ಮೇ 12 ರಂದು ಪಟ್ಟಾಧಿಕಾರ|
ಕಾಶಿ ಪೀಠದ ಶ್ರೀಗಳ ಘೋಷಣೆ|
ನವಲಗುಂದ ಪಟ್ಟಣದ ಪಂಚಗೃಹ ಹಿರೇಮಠದ ನೂತನ ಪೀಠಾಧಿಕಾರಿಗಳ ನೇಮಕಾತಿ ಕುರಿತಂತೆ ನಡೆದ ಸಭೆಯಲ್ಲಿ ಮಾತನಾಡಿದ ಕಾಶಿಪೀಠದ ಜಗದ್ಗುರು ಡಾ.ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಮಠದ ಪರಂಪರೆಯಂತೆ ನೂತನ ಪೀಠಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು.

ಈ ಕಾರ್ಯಕ್ಕೆ ಎಲ್ಲರೂ ಒಪ್ಪಿಗೆ ನೀಡಿರುವುದು ಉತ್ತಮ ಸಂಗತಿ ಎಂದರು. ಈ ಹಿಂದೆ ಮಾಹಿತಿ ಕೊರತೆಯಿಂದ ಉಂಟಾಗಿದ್ದ ಭಿನ್ನಾಭಿಪ್ರಾಯವನ್ನು ಚರ್ಚೆ ಮೂಲಕ ಬಗೆಹರಿಸಲಾಗಿದೆ. ನೂತನ ಪೀಠಾಧಿಕಾರಿಗಳ ಪಟ್ಟಾಧಿಕಾರ ಮೇ 12 ರಂದು ನಡೆಯುವುದು ಶತಃಸಿದ್ದ ಎಂದು ಹೇಳಿದರು.
ಭಿನ್ನಾಭಿಪ್ರಾಯ ಶಮನ ಮಾಡುವಲ್ಲಿ
ಬಂಗಾರೇಶ್ ಹಿರೇಮಠ ಯಶಸ್ವಿ!
ಬಂಗಾರೇಶ್ ಬಗ್ಗೆ ಶ್ರೀಗಳ ಮೆಚ್ಚುಗೆ|
ಪಂಚಗೃಹ ಹಿರೇಮಠದ ನೂತನ ಪೀಠಾಧಿಕಾರಿಗಳ ನೇಮಕಾತಿ ವಿಚಾರದಲ್ಲಿ ಎರಡು ಗುಂಪುಗಳ ಮಧ್ಯೆ ಉಂಟಾಗಿದ್ದ ಭಿನ್ನಾಭಿಪ್ರಾಯ ಶಮನಕ್ಕೆ ರಾಜ್ಯ ಕಾಂಗ್ರೆಸ್ ಮುಖಂಡ ಹಾಗೂ ಈ ಭಾಗದ ವೀರಶೈವ ಲಿಂಗಾಯತ ಸಮಾಜದ ಮಂಚೂಣಿ ನಾಯಕ ಬಂಗಾರೇಶ್ ಹಿರೇಮಠ್ ಅವರ ಸತತ ಪ್ರಯತ್ನ ಕೊನೆಗೂ ಕೈಗೂಡಿದೆ.

ಸ್ಥಳೀಯ ಶಾಸಕ ಎನ್.ಎಚ್.ಕೋನರೆಡ್ಡಿ ಸೇರಿದಂತೆ ಮಾಜಿ ಶಾಸಕ ಡಾ.ಆರ್.ಬಿ.ಶಿರಿಯಣ್ಣವರ, ಬಾಪುಗೌಡ ಪಾಟೀಲ್ ಹಾಗೂ ವಿಜಯ ಕುಲಕರ್ಣಿ ಸಹ ಈ ಪ್ರಯತ್ನದಲ್ಲಿ ಬಂಗಾರೇಶ್ ಹಿರೇಮಠ್ ಅವರ ಜೊತೆ ಕೈಜೋಡಿಸಿದ್ದರು. ಇದರ ಫಲವಾಗಿ ತೀವ್ರ ವಿವಾದಕ್ಕೆ ಈಡಾಗಿದ್ದ ಈ ಪ್ರಕರಣ ಶಾಂತ ರೀತಿಯಲ್ಲಿ ಬಗೆಹರಿದಿದೆ ಎಂದು ಹೇಳಲಾಗಿದೆ.
ನವನಗರದಲ್ಲಿ ನಡೆದ ಸಂಧಾನ ಸಭೆಯಲ್ಲಿ ಪಂಚಗೃಹ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು, ವೀರಬಸವದೇವರು, ಕಾಶಿ ಶಾಖಾ ಮಠದ ಡಾ.ರಾಜಶೇಖರ ಸ್ವಾಮೀಜಿ, ತಹಶೀಲ್ದಾರ ಸುಧೀರ ಸಾಹುಕಾರ, ಸಿಪಿಐ ರವಿಕುಮಾರ್ ಕಪ್ಪತ್ತನವರ, ಅಣ್ಣಪ್ಪ ಬಾಗಿ, ಪಾಂಡಪ್ಪ ಕೋನರೆಡ್ಡಿ, ಯಲಪ್ಪ ಭೋವಿ, ಶ್ರೀಶೈಲ್ ಮೂಲಿಮನಿ ಮತ್ತಿತರರು ಉಪಸ್ಥಿತರಿದ್ದರು.
ವರದಿ: ವಿಜಯೀಂದ್ರ ಹುನಗುಂದ್
ಪ್ರಧಾನ ಸಂಪಾದಕ
ನ್ಯೂಇಂಡಿಯಾ ಕನ್ನಡ
ಬೆಂಗಳೂರು.







