NationalNew DelhiPolitical

ಬಿಜೆಪಿ‌ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್‌ ನಬೀನ್ ಅವಿರೋಧ ಆಯ್ಕೆ|ಪಕ್ಷದ ವಿಚಾರದಲ್ಲಿ ನಿತಿನ್‌ಜೀ ನನ್ನ ಬಾಸ್-ನರೇಂದ್ರ ಮೋದಿ|ನಾಲ್ಕು ರಾಜ್ಯಗಳ ಚುನಾವಣೆ ನನ್ನ ಮುಂದಿರುವ ಸವಾಲು-ನಿತಿನ್‌ ನಬೀನ್

ನಾನು ಪ್ರಧಾನಿಯಾಗಿದ್ದರೂ ಸಹ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದೇನೆ. ನಿತೀನ್‌ ನಬೀನ್‌ ನನ್ನ ಬಾಸ್‌ ಆಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ನವದೆಹಲಿ: ಭಾರತೀಯ ಜನತಾ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿರೀಕ್ಷೆಯಂತೆ ನಿತಿನ್‌ ನಬೀನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿತಿನ್‌ ನಬೀನ್‌ ಅವರು ಸೋಮವಾರದಂದು ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದರು.

ಯಾವುದೇ ಪ್ರತಿಸ್ಪರ್ಧಿಗಳಿಲ್ಲದ ಕಾರಣ ಮಂಗಳವಾರದಂದು ನಿತಿನ್‌ ನಬೀನ್ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಕೆ.ಲಕ್ಷ್ಮಣ್‌ ಅವರು ಘೋಷಿಸಿದರು. ಉಪಸ್ಥಿತರಿದ್ದ ಪ್ರಧಾನಿ ನರೇಂದ್ರ ಮೋದಿ ಹೂಮಾಲೆ ಹಾಕಿ ಅಭಿನಂದಿಸಿದರು.

ಬಳಿಕ 12 ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಿತಿನ್‌ ನಬೀನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಶ್ಯಾಮ ಪ್ರಸಾದ್ ಮುಖರ್ಜಿ ಮತ್ತು ಪಂಡಿತ್ ದೀನದಯಾಳ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ನಂತರ ನಿತಿನ್‌ ನಬೀನ್ ಅವರು ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಂಡರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗು ಇತರೆ ನಾಯಕರು ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ ನಬೀನ್‌ ಅವರಿಗೆ ಸಿಹಿ ತಿನ್ನಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಅಮಿತ್‌ ಶಾ, ರಾಜನಾಥ್‌ಸಿಂಗ್‌, ನಿತಿನ ಗಡ್ಕರಿ, ಜೆ.ಪಿ.ನಡ್ಡಾ, ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷಜಿ ಇತರರು ಉಪಸ್ಥಿತರಿದ್ದರು.

ಬಳಿಕ ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯ ಆವರಣದಲ್ಲಿ ನಡೆದ ನಿತಿನ್‌ ನಬೀನ್ ಅವರ ಅಭಿನಂದನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸಾಂಸ್ಥಿಕ ಚುನಾವಣಾ ಪ್ರಕ್ರಿಯೆಯು ಆಂತರಿಕ ಪ್ರಜಾಪ್ರಭುತ್ವ, ಶಿಸ್ತು ಮತ್ತು ಕಾರ್ಯಕರ್ತರ ಕೇಂದ್ರಿತ ಸಂಸ್ಕೃತಿಗೆ ಬಿಜೆಪಿಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.

ಈ ಪ್ರಜಾಪ್ರಭುತ್ವದ ಕಾರ್ಯವನ್ನು ಬಲಪಡಿಸಿದ್ದಕ್ಕಾಗಿ ದೇಶಾದ್ಯಂತದ ಕಾರ್ಯಕರ್ತರನ್ನು ನಾನು ಅಭಿನಂದಿಸುತ್ತೇನೆ” ಎಂದು ಹೇಳಿದರು.

ಬಿಜೆಪಿಯ ನಾಯಕತ್ವದ ಪರಂಪರೆಯನ್ನು ಎತ್ತಿ ತೋರಿಸಿದ ಪ್ರಧಾನಿ ಮೋದಿ, “ಡಾ. ಶ್ಯಾಮ ಪ್ರಸಾದ್ ಮುಖರ್ಜಿಯಿಂದ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ ಮತ್ತು ಇತರ ಹಿರಿಯ ನಾಯಕರವರೆಗೆ, ಬಿಜೆಪಿ ಅನುಭವ, ಸೇವೆ ಮತ್ತು ಸಂಘಟನಾ ಬಲದ ಮೂಲಕ ಬೆಳೆದಿದೆ. ಕೇಂದ್ರದಲ್ಲಿ ಸತತ ಮೂರು ಬಿಜೆಪಿ-ಎನ್‌ಡಿಎ ಸರ್ಕಾರಗಳು ಈ ಶ್ರೀಮಂತ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತವೆ” ಎಂದರು.

ನಿತಿನ್‌ ನಬೀನ್‌ ಅವರ ನಾಯಕತ್ವದ ಕುರಿತು ಮಾತನಾಡಿದ ಪ್ರಧಾನಿ, “ಸಂಘಟನಾತ್ಮಕ ವಿಸ್ತರಣೆ ಮತ್ತು ಕಾರ್ಯಕರ್ತರ ಅಭಿವೃದ್ಧಿ ಬಿಜೆಪಿಯ ಪ್ರಮುಖ ಆದ್ಯತೆಗಳಾಗಿವೆ” ಎಂದು ಹೇಳಿದರು. ನಾನು ಪ್ರಧಾನಿಯಾಗಿದ್ದರೂ ಸಹ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದೇನೆ. ನಿತೀನ್‌ ನಬೀನ್‌ ನನ್ನ ಬಾಸ್‌ ಆಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ಪಕ್ಷವು ಕಾರ್ಮಿಕರಿಗೆ ಮೊದಲ ಆದ್ಯತೆ ಎಂಬ ತತ್ವವನ್ನು ಅನುಸರಿಸುತ್ತದೆ ಎಂದು ಒತ್ತಿ ಹೇಳಿದ ಅವರು, ಭಾರತವು ವಿಕ್ಷಿತ ಭಾರತದ ಹಾದಿಯಲ್ಲಿ ನಿರ್ಣಾಯಕ ಹಂತವನ್ನು ಪ್ರವೇಶಿಸುತ್ತಿರುವಾಗ ನಿತಿನ್‌ ನಬೀನ್‌ ಅವರ ಸರಳತೆ, ಸಂಘಟನಾ ಅನುಭವ ಮತ್ತು ಯುವ ಶಕ್ತಿಯು ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದರು.

ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬೀನ್‌ ಮಾತನಾಡಿ, ಬಿಜೆಪಿಯಲ್ಲಿ ತಮ್ಮ ಇತಿಹಾಸದ ಬಗ್ಗೆ ಮಾತನಾಡಿದರು ಮತ್ತು ಅಧ್ಯಕ್ಷ ಹುದ್ದೆಗೆ ಬಡ್ತಿ ಪಡೆದಿದ್ದಕ್ಕಾಗಿ ಪಕ್ಷದ ಕೇಂದ್ರ ನಾಯಕತ್ವ ಮತ್ತು ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.

ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಜನಸಂಖ್ಯಾಶಾಸ್ತ್ರ ಬದಲಾಗುತ್ತಿದೆ. ಭವಿಷ್ಯದ ಸವಾಲುಗಳ ಪಟ್ಟಿಯಲ್ಲಿ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳು ಸೇರಿವೆ ಎಂದರು.

ಮುಂದಿನ ಕೆಲವು ತಿಂಗಳುಗಳಲ್ಲಿ, ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ ಮತ್ತು ಪುದುಚೇರಿಯಲ್ಲಿ ಚುನಾವಣೆಗಳು ನಡೆಯಲಿವೆ ಮತ್ತು ಈ ರಾಜ್ಯಗಳ ಜನಸಂಖ್ಯಾಶಾಸ್ತ್ರವನ್ನು ವ್ಯಾಪಕವಾಗಿ ಚರ್ಚಿಸಲಾಗುತ್ತಿದೆ ಎಂದು ತಿಳಿಸಿದರು.

ಬದಲಾಗುತ್ತಿರುವ ಜನಸಂಖ್ಯಾಶಾಸ್ತ್ರವು ಅಲ್ಲಿನ ಪರಿಸ್ಥಿತಿಯನ್ನು ಬದಲಾಯಿಸುತ್ತಿದೆ ಮತ್ತು ಇದು ನಮಗೆ ಒಂದು ಸವಾಲನ್ನು ಒದಗಿಸುತ್ತದೆ” ಎಂದು ನಿತೀನ ನಬಿನ್ ಹೇಳಿದರು.

ಬಿಜೆಪಿ ನೂತನ ಅಧ್ಯಕ್ಷ ನಿತಿನ್‌ ನಬೀನ್‌ ಅವರನ್ನು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಅಭಿನಂದಿಸಿದರು.
ಬಿಜೆಪಿ ಕಾರ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ನಿತಿನ್‌ ನಬೀನ್‌ ಅವರನ್ನು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಭೇಟಿಯಾಗಿ ಅಭಿನಂದಿಸಿದ ಕ್ಷಣ..

ಬಿಜೆಪಿ ಪಕ್ಷದ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಮುಖ್ಯಮಂತ್ರಿಗಳು, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೇ ರಾಷ್ಟ್ರೀಯ ಪದಾಧಿಕಾರಿಗಳು, ರಾಜ್ಯ ಘಟಕದ ಪದಾಧಿಕಾರಿಗಳು ಸೇರಿದಂತೇ ಅಸಂಖ್ಯಾತ ಕಾರ್ಯಕರ್ತರು ಭಾಗವಹಿಸಿದ್ದರು.

Follow Us

Vijayeendra Hungund

ನ್ಯೂ ಇಂಡಿಯಾ ಕನ್ನಡ" ಇದು ಸತ್ಯದ ಜಯ..ಎಂಬ ಧ್ಯೇಯದೊಂದಿಗೆ ಆರಂಭಿಸಲಾಗಿರುವ ಕನ್ನಡ ನ್ಯೂಸ್‌ ವೆಬ್‌ಸೈಟ್‌. ಸಂಜೆವಾಣಿ, ಹಾಯ್ ಬೆಂಗಳೂರು, ಲಂಕೇಶ್ ಪತ್ರಿಕೆ, ಟಿವಿ೯, ಕಸ್ತೂರಿ ನ್ಯೂಸ್, ಸುವರ್ಣ ನ್ಯೂಸ್ , ಜನಶ್ರೀ ನ್ಯೂಸ್ ಸಂಸ್ಥೆಗಳಲ್ಲಿ ಹಾಗೂ ದೂರದರ್ಶನ ಚಂದನ ಕನ್ನಡ ವಾಹಿನಿಯಲ್ಲಿ ಜಿಲ್ಲಾ ವರದಿಗಾರನಾಗಿ, ವಿಭಾಗೀಯ ಮುಖ್ಯಸ್ಥನಾಗಿ , ಇನ್ ಪುಟ್ ಹಾಗೂ ಔಟ್ ಪುಟ್ ಮುಖ್ಯಸ್ಥನಾಗಿ , ಮುಖ್ಯ ಉಪ ಸಂಪಾದಕನಾಗಿ ಹಾಗೂ ಸಹಾಯಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದೇನೆ. ನಿಷ್ಪಕ್ಷಪಾತ, ನಿರ್ಭಿಡೆಯಿಂದ ಸುದ್ದಿ ವಿಶ್ಲೇಷಣೆ ಮಾಡುವ ಉದ್ದೇಶದೊಂದಿಗೆ ಆರಂಭಿಸಿರುವ ಈ ನ್ಯೂಸ್‌ ಪೋಟ೯ಲಗೆ ತಮ್ಮ ಬೆಂಬಲವಿರಲಿ.. ವಿಜಯೀಂದ್ರ ಪಿ ಹುನಗುಂದ್‌ ಪ್ರಧಾನ ಸಂಪಾದಕರು, ನ್ಯೂ ಇಂಡಿಯಾ ಕನ್ನಡ, Email- editor@newindiakannada.com

Leave a Reply

Your email address will not be published. Required fields are marked *

Back to top button