ರೈಲು ಪ್ರಯಾಣದರ ಏರಿಕೆ ಖಂಡಿಸಿ, ಕೇಂದ್ರದ ವಿರುದ್ದ ಕಾಂಗ್ರೆಸ್ ಆಕ್ರೋಶ|ರೈಲ್ವೆ ಸ್ಟೇಷನ್‌ಗೆ ಮುತ್ತಿಗೆ ಯತ್ನ|ದರ ಇಳಿಯೋತನಕ ಪ್ರತಿದಿನ ರೈಲ್ ರೋಕೋ ಚಳುವಳಿ-ಚೇತನ್‌ಗೌಡ
ರೈಲ್ವೇ ಇಲಾಖೆ ಆರ್ಥಿಕವಾಗಿ ಬಲಿಷ್ಠವಾಗಿದೆ ಹಾಗೂ ಯಾವುದೇ ನಷ್ಟದಲ್ಲಿಲ್ಲ ಹೀಗಿರುವಾಗ ರೈಲು ಪ್ರಯಾಣದರ ಹೆಚ್ಚಳ ಮಾಡಿ ಜನರಿಗೆ ಹೊರೆಹಾಕುವುದು ಸರಿಯಲ್ಲ ಎಂದು ರಾಜ್ಯ ಜವಳಿ ಕೈಮಗ್ಗ, ಮೂಲಸೌಕರ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಚೇತನ್‌ಗೌಡ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದರು.

ಶಿವಮೊಗ್ಗ : ರೈಲು ಸಾರಿಗೆಯ ಪ್ರಯಾಣದರ ಏರಿಕೆ ಮಾಡಿರುವ ಕೇಂದ್ರ ಸರ್ಕಾರ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ ಎಂದು ಆರೋಪಿಸಿ, ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಲು ವಿಫಲ ಯತ್ನಿಸಿದ ಘಟನೆ ನಡೆದಿದೆ.

ಸೋಮವಾರ ಶಿವಮೊಗ್ಗ ರೈಲು ನಿಲ್ದಾಣದ ಬಳಿ ಜಮಾಯಿಸಿದ ನೂರಾರು ಯುವ ಕಾಂಗ್ರೆಸ್ ಕಾರ್ಯಕರ್ತರು, ಈ ವರ್ಷದಲ್ಲಿ ಎರಡನೇ ಬಾರಿ ರೈಲು ಪ್ರಯಾಣದರ ಹೆಚ್ಚಿಸಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ ಎಂದು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದರು.
ಇದೇ ವೇಳೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಶಿವಮೊಗ್ಗ ರೈಲ್ವೇಸ್ಡೇಷನ್ ಒಳಗೆ ನುಗ್ಗಲು ಯತ್ನಿಸಿದರು.

ರೈಲುನಿಲ್ದಾಣದ ಒಳಕ್ಕೆ ಹೋಗದಂತೆ ಬ್ಯಾರಿಕೇಡ್ ಹಾಕಿ ತಡೆದ ಪೊಲೀಸರು ಕಾರ್ಯಕರ್ತರ ನಡುವೆ ಭಾರೀ ಪ್ರಮಾಣದ ತಳ್ಳಾಟ ನೂಕಾಟ ನಡೆದು ಕೊನೆಗೆ ಪೊಲೀಸರು ಕೆಲ ಕಾರ್ಯಕರ್ತರನ್ನ ವಶಕ್ಕೆ ಪಡೆದರು.
ಆ ಬಳಿಕ ಹೊರಭಾಗದಲ್ಲೇ ಪ್ರತಿಭಟನೆ ನಡೆಸಿ ಸ್ಟೇಷನ್ ಮಾಸ್ಟರ್ ಮೂಲಕ ಪ್ರಧಾನಿಗೆ ಕಾಂಗ್ರೆಸ್ ಮುಖಂಡರು ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಜವಳಿ ಕೈಮಗ್ಗ, ಮೂಲಸೌಕರ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಚೇತನ್‌ಗೌಡ, ರೈಲ್ವೇ ಇಲಾಖೆ ಆರ್ಥಿಕವಾಗಿ ಬಲಿಷ್ಠವಾಗಿದೆ ಹಾಗೂ ಯಾವುದೇ ನಷ್ಟದಲ್ಲಿಲ್ಲ ಹೀಗಿರುವಾಗ ರೈಲು ಪ್ರಯಾಣದರ ಹೆಚ್ಚಳ ಮಾಡಿ ಜನರಿಗೆ ಹೊರೆಹಾಕುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದರು.
ಡಿಸೆಂಬರ್ 26 ರಿಂದಲೇ ನೂತನ ರೈಲು ಪ್ರಯಾಣ ದರ ಜಾರಿಯಾಗಿದೆ. ದರ ಇಳಿಕೆ ಮಾಡುವವರೆಗೂ ಪ್ರತಿನಿತ್ಯ ರೈಲು ತಡೆ ಹೋರಾಟ ನಡೆಸುವುದಾಗಿ ಕೇಂದ್ರ ಸರ್ಕಾರಕ್ಕೆ ಚೇತನ್‌ಗೌಡ ಎಚ್ಚರಿಕೆ ನೀಡಿದರು.
ಪಾಲಿಕೆ ಮಾಜಿ ಸದಸ್ಯ ಹೆಚ್ ಸಿ ಯೋಗೀಶ್ ಮಾತನಾಡಿ, ಈಗಾಗಲೇ ಜನ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ ಎಂದರು.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈಲು ದರ ಎರಡನೇ ಬಾರಿ ಹೆಚ್ಚಳ ಮಾಡಿ ಜನತೆಗೆ ಹೊಸ ವರ್ಷದ ಕೊಡುಗೆ ನೀಡಿದೆ ಎಂದು ಟೀಕಿಸಿದರು. ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಎಸ್ಕಲೇಟರ್ ಅವಶ್ಯಕತೆಯಿದೆ ಎಂದು ಹೆಚ್ ಸಿ ಯೋಗೀಶ್ ಹೇಳಿದರು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹರ್ಷಿತ್ ಗೌಡ, ನಗರ ಅಧ್ಯಕ್ಷ ಚರಣ್ ಜೆ ಶೆಟ್ಟಿ, ಗ್ರಾಮಾಂತರ ಅಧ್ಯಕ್ಷ ಪ್ರವೀಣ್, ಬ್ಲಾಕ್ ಅಧ್ಯಕ್ಷರುಗಳಾದ ಗಿರೀಶ್, ಸಾಕ್ಲಿನ್, ಪ್ರವೀಣ, ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ ಮುಖಂಡರಾದ ವಿಜಯ್‌ಕುಮಾರ್, ರಮೇಶ್ ಹೆಗ್ಡೆ, ಧೀರರಾಜ್ ಹೊನ್ನವಿಲೆ, ಯಮುನಾ ರಂಗೇಗೌಡ, ಗಿರೀಶ್, ಮಧುಸೂದನ್, ರಾಮು ಸೇರಿದಂತೆ ನೂರಾರು ಯುವ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂ ಇಂಡಿಯಾ ಕನ್ನಡ
ಶಿವಮೊಗ್ಗ.







