DharwadDistrictKarnatakaNationalPoliticalSpecial Stories
Trending

Delhi: ಮುಂದುವರೆದ ಸಂಪುಟ ಪುನಾರಚನೆ ಸರ್ಕಸ್| ಸಂತೋಷ್ ಲಾಡ್‌ ಹರಕು ಬಾಯಿಗೆ ರಾಹುಲ್‌ ಗಾಂಧಿ ಗರಂ|‌ ಸಂಡೂರು”ಧಣಿ”ಗೆ ಸಚಿವ ಸ್ಥಾನದಿಂದ ಗೇಟ್‌ ಪಾಸ್‌..?

ರಾಜಕಾರಣ ಮಾಡಲಿ, ಬೇರೆ ವಿಷಯಗಳಲ್ಲಿ ಚರ್ಚೆಗಳಿರಲಿ, ಆದರೆ ಕೊಳಕು ಭಾಷೆ ಸಹಿಸಲು ಆಗಲ್ಲ ಎಂದಿರುವ ರಾಹುಲ್‌ ಗಾಂಧಿ, ತಮ್ಮ ಪರಮಾಪ್ತ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್‌ ಮೂಲಕ ವಿಡಿಯೋ ತುಣುಕು ತರಿಸಿ ಸ್ವತಃ ಹಿಂದಿಗೆ ಅನುವಾದ ಮಾಡಿಸಿ ನೋಡಿದ್ದಾರೆ ಎನ್ನಲಾಗಿದೆ.

ಅಕ್ರಮ ಗಣಿಗಾರಿಕೆ ದಂಧೆಯಿಂದ ಬಂದ ದುಡ್ಡಿನಿಂದ ಅಮಲು ನೆತ್ತಿಗೇರಿಸಿಕೊಂಡಿರುವ ಸಂತೋಷ್‌ ಲಾಡ್‌ ಸಾಹೇಬರು, ಈ ಹಿಂದೆ ಇದೇ ಕಾರಣಕ್ಕೆ ಒಮ್ಮೆ ಮಂತ್ರಿಗಿರಿ ಕಳೆದುಕೊಂಡಿದ್ದರು.

ಈಗ ಮತ್ತೆ ಅದೇ ಧಿಮಾಕು, ಹೊಲಸು ಭಾಷೆಯಿಂದ ಮತ್ತೊಮ್ಮೆ ಸಚಿವ ಸ್ಥಾನವನ್ನು ಕಳೆದುಕೊಳ್ಳುವ ಹಂತ ತಲುಪಿದ್ದಾರೆ.

ಸಂತೋಷ್‌ ಲಾಡ್‌ ಅವರಿಗೆ ಹಣದ ಅಮಲು ಎಷ್ಟರ ಮಟ್ಟಿಗೆ ನೆತ್ತಿಗೆ ಏರಿದೆ ಎಂದರೇ, ತಾನೊಬ್ಬ ಸರ್ವಜ್ಞ, ಯಾರನ್ನು ಬೇಕಾದರೂ ಟೀಕೆ ಮಾಡಬಹುದು, ಏನು ಬೇಕಾದರೂ ಬಯ್ಯಬಹುದು ಎಂಬ ಧಿಮಾಕು ಬೆಳೆಸಿಕೊಂಡಿದ್ದಾರೆ.

ಈಗ ಅದೇ ಗಮ್ಮತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗು ಬಿಜೆಪಿಯನ್ನು ಟೀಕೆ ಮಾಡಲು ಹೋಗಿ ಉ…ಕುಡಿಸಿ ಎಂದು ಪದ ಬಳಸಿದ್ದು, ಮುಳುವಾಗಿ ಪರಿಣಮಿಸಲಿದೆ.

ಬಲ್ಲ ಮೂಲಗಳ ಪ್ರಕಾರ ಸಚಿವ ಲಾಡ್‌ ಬಳಸಿದ್ದ ಕೊಳಕು ಭಾಷೆಗೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸಹ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ವಿಶ್ವಾಸ ಕಳೆದುಕೊಂಡರಾ? ಸಚಿವ ಸಂತೋಷ್‌ ಲಾಡ್‌

ರಾಜಕಾರಣ ಮಾಡಲಿ, ಬೇರೆ ವಿಷಯಗಳಲ್ಲಿ ಚರ್ಚೆಗಳಿರಲಿ, ಆದರೆ ಕೊಳಕು ಭಾಷೆ ಸಹಿಸಲು ಆಗಲ್ಲ ಎಂದಿರುವ ರಾಹುಲ್‌ ಗಾಂಧಿ, ತಮ್ಮ ಪರಮಾಪ್ತ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್‌ ಮೂಲಕ ವಿಡಿಯೋ ತುಣುಕು ತರಿಸಿ ಸ್ವತಃ ಹಿಂದಿಗೆ ಅನುವಾದ ಮಾಡಿಸಿ ನೋಡಿದ್ದಾರೆ ಎನ್ನಲಾಗಿದೆ.

ಇದೇ ವಿಧೇಯತೆ, ಸಭ್ಯತೆ ನೀವು ಆಡುವ ಭಾಷೆಯಲ್ಲಿರಬೇಕು ಎನ್ನುತ್ತಾರೆ ಜನರು

ಹರಕು ಬಾಯಿಯಿಂದ ಆಡಿರುವ ಮಾತುಗಳು, ಕಾಂಗ್ರೆಸ್‌ನ ವರ್ಚಸ್ಸಿಗೆ ಭಾರಿ ಹೊಡೆತ ಬಿದ್ದಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯನವರ ವಿಶ್ವಾಸಕ್ಕೆ ಸಂತೋಷ್‌ ಲಾಡ್‌ ಧಕ್ಕೆ ತಂದಿದ್ದಾರೆ.

ಈ ಮಧ್ಯೆ ತಾವು ಆಡಿದ ಮಾತು ತಪ್ಪು, ಇದರ ಪರಿಣಾಮ ಏನಾಗಬಹುದು? ಎಂಬ ಮುಂದಾಲೋಚನೆ ಇಲ್ಲದ ಸಂತೋಷ್‌ ಲಾಡ್‌, ಈ ರೀತಿ ಮಾತನಾಡಿದ್ದು ಸಭ್ಯತೆ ಅಲ್ಲ ಎಂದು ಬಿ ವೈ ವಿಜಯೇಂದ್ರ ಹೇಳಿದರೇ, ರಾತ್ರೋರಾತ್ರಿ ನಾನು ಮಾಡಿದ್ದೇ ಸರಿ ಎಂದು ಫೇಸ್‌ಬುಕ್‌ ಪೇಜ್ನಲ್ಲಿ ಸಮರ್ಥಿಸಿಕೊಂಡಿದ್ದಾರೆ.

ಈ ಹಿಂದೆ ಜೆಡಿಎಸ್‌ನಿಂದ ಶಾಸಕರಾಗಿದ್ದ ಸಂತೋಷ್‌ಲಾಡ್‌ , ಅಧಿಕಾರಕ್ಕಾಗಿಯೇ ಬಳ್ಳಾರಿಯಿಂದ ಧಾರವಾಡ ಜಿಲ್ಲೆಗೆ ಬಂದಿರುವ ಹಿಂದೆ ಹಲವು ಕಥೆಗಳಿವೆ.

ಸಂಡೂರಿನ ದೊರೆ ಬಳಿ ಕೆಲಸಕ್ಕಿದ್ದ ಈ “ಲಾಡ್‌ ಫ್ಯಾಮಿಲಿ” ಸಂಡೂರಿನಲ್ಲಿ ಮಾಡಿದ್ದೇನು? ಕಲಘಟಗಿ ಕ್ಷೇತ್ರಕ್ಕೆ ಬಂದು ಸಾಧಿಸಿದ್ದೇನು? ಇವರು ನಡೆದು ಬಂದ ದಾರಿಯ ಎಂಥಹದ್ದು? ಕೆಲವೊಂದು ವಿಚಾರಗಳನ್ನು ಈ ಸಂಚಿಕೆಯಲ್ಲಿ ನೀಡಲಾಗಿದೆ.

ಸಂಡೂರು ನಗರ (ವೈಮಾನಿಕ ದೃಶ್ಯ)

ಘಟಾನುಘಟಿ ರಾಜಕಾರಣಿ ಹಾಗು ಜನಾನುರಾಗಿಯಾಗಿದ್ದ ಸಂಡೂರಿನ ದೊರೆ ಮಾಜಿ ಸಚಿವ ಎಂ ವೈ ಘೋರ್ಪಡೆ ಅವರು ಪ್ರತಿನಿಧಿಸಿದ್ದ ಕ್ಷೇತ್ರದಿಂದ ಗೆದ್ದಿದ್ದ ಲಾಡ್‌. ಅದ್ಹೇಗೆ ಶಾಸಕರಾದರೂ ಎಂಬುದಕ್ಕೆ ಒಂದು ದೊಡ್ಡ ಕಥೆಯಿದೆ. ಅದನ್ನು ಇನ್ನೊಂದು ಸಂಚಿಕೆಯಲ್ಲಿ ತಿಳಿಸುತ್ತೇನೆ.

ಸಂಡೂರಿನ ರಾಜ ಎಂ ವೈ ಘೋರ್ಪಡೆ ಅವರ ಬಳಿ ಸಂತೋಷ್‌ಲಾಡ್‌‌ ಹಾಗು ಅನಿಲ್‌ಲಾಡ್‌ ಅವರ ಪಾಲಕರು ಸಂಬಳಕ್ಕೆ ಕೆಲಸಕ್ಕಿದ್ದರೂ ಎಂದರೇ ಈಗಿನ ಪೀಳೀಗೆಯ ಜನರು ನಂಬಲೇಬೇಕು.

ಘೋರ್ಪಡೆ ಸಾಹೇಬರು ದಾನವಾಗಿ? ನೀಡಿದ್ದ ಕೆಲ ತುಂಡು ಭೂಮಿಯೇ ಮುಂದೆ ಗಣಿಗಾರಿಕೆ ಉತ್ತುಂಗದಲ್ಲಿದ್ದಾಗ ಅದೇ ಭೂಮಿಯಿಂದ ಕೋಟಿಗಟ್ಟಲೇ ದುಡಿದಿದ್ದು ಈಗ ಇತಿಹಾಸ.

ಮುಂದೆ ಇದೇ ಲಾಡ್‌ ಫ್ಯಾಮಿಲಿಗಳು ಎಂ ವೈ ಘೋರ್ಪಡೆ ಅವರಿಗೆ “ಗುನ್ನ” ಇಟ್ಟಿದ್ದೂ ಇವತ್ತಿಗೂ ಸಂಡೂರಿನಲ್ಲಿ ಜನರು ಮಾತಾಡಿಕೊಳ್ಳುತ್ತಾರೆ.

ಘೋರ್ಪಡೆ ರಾಜರ ಕೃಪಾರ್ಶೀವಾದದಿಂದಲೇ ಇಂದು ಅನಿಲ್‌ಲಾಡ್‌ ಮತ್ತು ಸಂತೋಷ್‌ಲಾಡ್‌ ಶಾಸಕರಾಗಿ ಸಂಸದರಾಗಿ ಸಚಿವರಾಗಲು ಸಾಧ್ಯವಾಯಿತು ಎಂಬುದಕ್ಕೆ ಪುರಾವೆ ಇದೆ.

ಆದರೆ ಇವತ್ತಿಗೂ ಈ ಲಾಡ್‌ಬ್ರದರ್ಸ ಎಲ್ಲಿಯೂ , ತಪ್ಪಿಯು ಘೋರ್ಪಡೆ ಅವರನ್ನು ನೆನಸಿಕೊಳ್ಳುವದಿಲ್ಲ. ಇದು ಅವರ ಕೃತಘ್ನಗೇಡಿತನ ತೋರಿಸುತ್ತದೆ.

ಈ ವಿಷಯ ಬಳ್ಳಾರಿಯ ಬಹುತೇಕ ರಾಜಕಾರಣಿಗಳೀಗೆ ಗೊತ್ತಿದೆ. ಮೊದಲ ಬಾರಿ ಸಂಡೂರಿನಿಂದ ಗೆದ್ದು ಶಾಸಕರಾಗಿದ್ದ ಸಂತೋಷ್‌ಲಾಡ್‌, ಎಚ್‌ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ನಂತರ ಸಂತೋಷ್‌ ಲಾಡ್‌ ಯಾರು ಎಂದು “ಬೆಂಗಳೂರು ಹಗಲು ರಾತ್ರಿ?” ರಾಜಕಾರಣಕ್ಕೆ ಪರಿಚಯವಾದವರು.

ಯಾವಾಗಲು ಕುಮಾರಸ್ವಾಮಿ ಅವರ ಸುತ್ತ ಮುತ್ತ , “ಹಗಲು ರಾತ್ರಿ?” ತಿರುಗಾಡಿಕೊಂಡಿದ್ದರಿಂದ ಸಂತೋಷ್‌ಲಾಡ್‌ ಖದರು ಬೆಳೆಯತೊಡಗಿತ್ತು. ಕುಮಾರಸ್ವಾಮಿ ಅವರಿಂದ ಸಾಕಷ್ಟು ಅನುಕೂಲ ಮಾಡಿಕೊಂಡಿದ್ದರು ಸಂತೋಷ್‌ ಲಾಡ್‌.

ಆದರೆ, ಕುಮಾರಣ್ಣ ಅಧಿಕಾರದಿಂದ ಇಳಿದಿದ್ದೇ ತಡ. ಅವರಿಗೆ ಕೈಕೊಟ್ಟು ಕಾಂಗ್ರೆಸ್‌ಗೆ ಜಿಗಿದುಬಿಟ್ಟರು. ಮುಂದೆ ಧಾರವಾಡದ ಕಲಘಟಗಿಗೆ ಬಂದು ವಕ್ಕರಿಸಿದ್ದು ಈಗ ಇತಿಹಾಸ.

ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಸಚಿವರಾಗಿದ್ದ ಸಜ್ಜನ ರಾಜಕಾರಣಿ ಎಂ ಪಿ ಪ್ರಕಾಶ್‌ ಅವರು, ಈ ಸಂತೋಷ್‌ ಲಾಡ್‌ ಹಾಗು ಅನಿಲ್‌ ಲಾಡ್‌ನ ವಿವಿಧ ಅವತಾರಗಳು ಮತ್ತು “ಸೇವೆ?” “ಬೆಂಬಲ?” ಕಂಡು ಬೇಸರಗೊಂಡಿದ್ದರು ಎನ್ನಲಾಗಿದೆ.

ಅದು 2013. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಸಂಡೂರಿನಿಂದ ಕಲಘಟಗಿ ಕ್ಷೇತ್ರಕ್ಕೆ ಬಂದು ಶಾಸಕರಾಗಿದ್ದ ಸಂತೋಷ್‌ಲಾಡ್‌ ಸಹ ಸಿದ್ದರಾಮಯ್ಯ ಸಂಪುಟ ಸೇರಿ ಬಿಟ್ಟಿದ್ದರು.

ನೋಡಲು ಸಣಕಲು, ತಲೆಯಲ್ಲಿ ಕೂದಲು ಉದರಿದ್ದ ಸ್ಥಿತಿಯಲ್ಲಿ ಕಾಣುತ್ತಿದ್ದ ಸಂತೋಷ್‌ಲಾಡ್‌, ಮಂತ್ರಿಯಾಗುತ್ತಿದ್ದಂತೇ ಅವರ ಶೈಲಿಯೇ ಬದಲಾಯಿತು. ಅವರ ಮಾತು, ವರ್ತನೆ, ಭಾಷೆ, ಉಡುಗೆ ತೊಡುಗೆ ಎಲ್ಲವು ಬದಲಾಗಿಬಿಟ್ಟವು.

ಈ ಸಂತೋಷ್‌ಲಾಡ್‌ ಅವರಲ್ಲಿ ಸಿದ್ದರಾಮಯ್ಯ ಅದೇನು ಕಂಡಿದ್ದರೋ ಗೊತ್ತಿಲ್ಲ. ಗಣಿಗಾರಿಕೆ ಮಾಡಿಕೊಂಡು ಹಲವು ರಾಜಕಾರಣಿಗಳ ಜೊತೆ ಹಗಲು? ರಾತ್ರಿ? ಓಡಾಡಿಕೊಂಡಿದ್ದ ಈ ಸಂತೋಷ್‌ಲಾಡ್‌ ಅವರಿಗೆ ಕ್ಯಾಬಿನೆಟ್‌ದರ್ಜೆ ಮಂತ್ರಿಗಿರಿ ನೀಡಿ ವಾರ್ತಾ ಇಲಾಖೆಯಂತಹ ಖಾತೆಯನ್ನು ನೀಡಿದ್ದರು.

ಮಂತ್ರಿಯಾಗಿದ್ದೇ ತಡ. ತನ್ನಷ್ಟು ತಿಳಿದವರೇ ಇಲ್ಲ ಎಂದು ಸಂತೋಷ್‌ಲಾಡ್‌ ಮೆರೆಯತೊಡಗಿದ್ದರು. ಇದೇ ವೇಳೆ ಜನಾರ್ಧನ್‌ರೆಡ್ಡಿ ಅವರಿಗೆ ಕೃಷ್ಣನ ಜನ್ಮಸ್ಥಾನಕ್ಕೆ ಅಟ್ಟಿದ್ದ ಸಾಮಾಜಿಕ ಹೋರಾಟಗಾರ ಎಸ್‌ಆರ್‌ಹಿರೇಮಠ್‌ ಅವರು, ಈ ಸಂತೋಷ್‌ಲಾಡ್‌ನ ಆಟಾಟೋಪಗಳನ್ನು ಗಮನಿಸುತ್ತಲೇ ಅವರ ಗಣಿಗಾರಿಕೆ ದಂಧೆಯ ಇಂಚಿಂಚು ಮಾಹಿತಿ ತೆಗೆದಿದ್ದರು.

ಜನಾರ್ಧನ್‌ರೆಡ್ಡಿ ಅವರು ಜೈಲು ಪಾಲಾದ ನಂತರ ಅದೇ ಜಿಲ್ಲೆಯ ಸಂಡೂರಿನ ಶಾಸಕರಾಗಿದ್ದ ಸಂತೋಷ್‌ಲಾಡ್‌ ಅವರ ಅಕ್ರಮ ಗಣಿಗಾರಿಕೆ ದಾಖಲೆಗಳು ಸಹ ಎಸ್‌ ಆರ್‌ ಹಿರೇಮಠ್‌ ಅವರ ಕೈ ಸೇರಿತ್ತು.

ಎಸ್‌ ಆರ್‌ ಹಿರೇಮಠ್‌ ಅವರನ್ನು ನನ್ನ ವಿರುದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಎತ್ತಿಕಟ್ಟಿದ್ದಾರೆ ಎಂದು ಆಗ ಈ ಲಾಡ್‌ ಆರೋಪ ಮಾಡಿದ್ದರು.

ಆದರೆ ಎಸ್‌ಆರ್‌ಹಿರೇಮಠ್‌ ಅವರು ಯಾರಿಗೂ ಬಗ್ಗದ ವ್ಯಕ್ತಿ. ಒಮ್ಮೆ ಹೋರಾಟಕ್ಕೆ ಇಳಿದರೇ ಅದು ಅಂತಿಮ ಹಂತಕ್ಕೆ ತಲುಪುವ ತನಕ ಅವರು ವಿಶ್ರಮಿಸಿದ್ದ ದಾಖಲೇನೆ ಇಲ್ಲ.

ಒಂದೇ ಪ್ರೆಸ್‌ಮೀಟ್‌ನಲ್ಲಿ ಸಂತೋಷ್‌ ಲಾಡ್‌ನ ಅಕ್ರಮ ಗಣಿಗಾರಿಕೆ ದಂಧೆಯ ಎಲ್ಲ ಹಗರಣಗಳನ್ನು ಬಯಲಿಗೆ ತಂದು ಬಿಟ್ಟರು. ಎಸ್‌ಆರ್‌ಹಿರೇಮಠ ಅವರ ಆರೋಪಕ್ಕೆ ಸಂತೋಷ್‌ಲಾಡ್‌ ಭಂಡತನದಿಂದಲೇ ಉತ್ತರಿಸುತ್ತ ಹೊರಟಿದ್ದರು.

ಹಿರೇಮಠ್‌ ಅವರ ದಾಖಲೆಗಳು ಅಂತಹ ಜನಾರ್ಧನ್‌ರೆಡ್ಡಿ ಅವರನ್ನೆ ಜೈಲಿಗೆ ಅಟ್ಟುವಂತೆ ಮಾಡಿದೆ. ನಿನ್ಯಾವ ಲೆಕ್ಕ ಎಂದು ಜನ ಮಾತಾಡತೊಡಗಿದರು. ಸಂತೋಷ್‌ಲಾಡ್‌ನ ಹಿಂದಿನ ಕಥೆಗಳನ್ನು ಕೇಳಿದ ಖುದ್ದು ಸಿಎಂ ಸಿದ್ದರಾಮಯ್ಯ ಅವಾಕ್ಕಾಗಿದ್ದರು.

ಏನ್ರೀ.. ಈ ಸಂತೋಷ್‌ಲಾಡ್‌? ಎಂದು ಆಪ್ತರ ಮುಂದೆ ಉದ್ಘಾರ ತೆಗೆದಿದ್ದರು. ನಿನ್ನಿಂದ ನಮ್ಮ ಸರ್ಕಾರಕ್ಕೆ ತೊಂದರೆಯಾಗುತ್ತೆ, ಸಚಿವ ಸ್ಥಾನದಿಂದ ಕೆಳಗಿಳಿದು ಬಿಡು ಎಂದರು.

ಸಿಎಂ ಹೇಳಿದ್ದೇ ತಡ ಒಲ್ಲದ ಮನಸ್ಸಿನಿಂದ ಸಂತೋಷ್‌ಲಾಡ್‌ ರಾಜೀನಾಮೆ ನೀಡಿ ನಂತರ ಎರಡುವರೆ ವರುಷ ತೆರೆಮೆರೆ ಸರಿದು ಬಿಟ್ಟಿದ್ದರು.

ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಇಳಿಯುವ ಕೆಲವು ತಿಂಗಳು ಮೊದಲು ಮತ್ತೆ ಈ ಸಂತೋಷ್‌ಲಾಡ್‌ ಅವರನ್ನು ಮಂತ್ರಿಯಾಗಿ ಸೇರಿಸಿಕೊಂಡಿದ್ದರು.

ಆದರೆ ಯಾವ ಸುಧಾರಣೆಗಳು ಕಂಡು ಬರಲಿಲ್ಲ. ಅದೇ ಧಿಮಾಕು, ಅದೇ ಹಳೇ ಶೈಲಿ ಮುಂದುವರೆದಿದ್ದವು. ಗೆಲ್ಲಿಸಿದ್ದ ಕ್ಷೇತ್ರದಿಂದ ದೂರವಾಗಿದ್ದ ಸಂತೋಷ್‌ಲಾಡ್‌, ಅಲ್ಲಿಯ ಮತದಾರರ ವಿಶ್ವಾಸ ಕಳೆದುಕೊಳ್ಳತೊಡಗಿದ್ದರು.

ಹೀಗಾಗಿ 2018ರಲ್ಲಿ ಬಿಜೆಪಿ ಅಭ್ಯರ್ಥಿ ಎದುರು ಸಂತೋಷ್‌ ಲಾಡ್‌ ಹೀನಾಯ ಸೋಲು ಅನುಭವಿಸಿದರು.

ಬಳಿಕ ಬರೋಬ್ಬರಿ ಮುಂದಿನ ನಾಲ್ಕೂವರೆ ವರುಷ ಕ್ಷೇತ್ರದಿಂದ ಗಾಯಬ್ ಆಗಿದ್ದ ಸಂತೋಷ್‌ಲಾಡ್‌, ಇನ್ನೇನು ಚುನಾವಣೆ ಆರು ತಿಂಗಳು ಇರುವಾಗ ಮತ್ತೆ ಕಲಘಟಗಿಗೆ ಬಂದು ಪ್ರತ್ಯಕ್ಷರಾದರು. ಮತದಾರರಲ್ಲಿ ಏನೋ ತಪ್ಪಾಗಿದೆ ಎಂದು ಕ್ಷಮೆ ಕೇಳಿದರು. ಜನ ಸಹ ಮತ್ತೆ ನಂಬಿದರು.

2023ರಲ್ಲಿ ಮತ್ತೆ ಕಲಘಟಗಿಯಿಂದ ಗೆದ್ದ ಸಂತೋಷ್‌ಲಾಡ್‌, ಸಿದ್ದರಾಮಯ್ಯ ಸರ್ಕಾರದಲ್ಲಿ ಕಳೆದ ಎರಡುವರೆ ವರುಷದಿಂದ ಕಾರ್ಮಿಕ ಮಂತ್ರಿಯಾಗಿದ್ದಾರೆ.

ಆದರೆ ಈ ಅವಧಿಯಲ್ಲಿ ಅವರು ಮಂತ್ರಿಯಾಗಿ ಮತ್ತಷ್ಟು ದುಂಡಗಾಗಿದ್ದು ನಿಜ. ಈ ಬಗ್ಗೆ ಸ್ಪೋಟಕ ದಾಖಲೆ, ಈಗಾಗಲೇ ಒಂದು ಸಲ ಸಾರ್ವಜನಿಕವಾಗಿ ಬಿಡುಗಡೆಯಾಗಿದೆ.

ಇನ್ನು ಕಾರ್ಮಿಕ ಇಲಾಖೆಯಲ್ಲಿ ಸಂತೋಷ್‌ಲಾಡ್‌, ಯಾವ್ಯಾವ ಘನಂದಾರಿ ಕೆಲಸ ಮಾಡಿದ್ದಾರೆ? ಈ ಎರಡುವರೆ ವರುಷದಲ್ಲಿ ದುಂಡುಗಾಗಲು ಮಾಡಿದ್ದ ಕೈಚಳಕ ಹೇಗಿತ್ತು? ಎಲ್ಲದರ ವಿವರಣೆ ಶೀಘ್ರದಲ್ಲಿಯೇ ಹಿರಿಯ ರಾಜಕಾರಣಿಯೊಬ್ಬರು ನಾಡಿನ ಜನರ ಮುಂದೆ ಇಡಲಿದ್ದಾರೆ.

ಈ ಬಗ್ಗೆ ಸಮಗ್ರ ದಾಖಲೆಗಳನ್ನು ಕ್ರೋಢಿಕರಿಸಿದ್ದು ಸ್ವತಃ ಸಂತೋಷ್‌ ಲಾಡ್‌ ಅವರಿಗೂ ವಿಷಯ ಮುಟ್ಟಿದೆ ಎನ್ನಲಾಗಿದೆ. ಈ ರೀತಿ ದಾಖಲೆಗಳು ಬಹಿರಂಗಗೊಳ್ಳದಂತೆ ತೆರೆ ಮೆರೆಯಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಲಾಗಿದೆ.

ಒಟ್ಟಾರೇ, ಇನ್ನು ಕೆಲ ಕಾಲ ಮಂತ್ರಿಯಾಗಿ ಅಭಿವೃದ್ದಿ ಪರ ಕೆಲಸ ಮಾಡಬಹುದಾಗಿದ್ದ ಸಚಿವ ಸಂತೋಷ್‌ ಲಾಡ್‌, ತಮ್ಮ ನಡೆ ನುಡಿಯಿಂದಲೇ ಸಚಿವ ಸ್ಥಾನ ತೊರೆಯುವಂತಹ ಪರಿಸ್ಥಿತಿ ಬಂದಿದ್ದು ಮಾತ್ರ ಸುಳ್ಳಲ್ಲ.

Follow Us

Vijayeendra Hungund

ನ್ಯೂ ಇಂಡಿಯಾ ಕನ್ನಡ" ಇದು ಸತ್ಯದ ಜಯ..ಎಂಬ ಧ್ಯೇಯದೊಂದಿಗೆ ಆರಂಭಿಸಲಾಗಿರುವ ಕನ್ನಡ ನ್ಯೂಸ್‌ ವೆಬ್‌ಸೈಟ್‌. ಸಂಜೆವಾಣಿ, ಹಾಯ್ ಬೆಂಗಳೂರು, ಲಂಕೇಶ್ ಪತ್ರಿಕೆ, ಟಿವಿ೯, ಕಸ್ತೂರಿ ನ್ಯೂಸ್, ಸುವರ್ಣ ನ್ಯೂಸ್ , ಜನಶ್ರೀ ನ್ಯೂಸ್ ಸಂಸ್ಥೆಗಳಲ್ಲಿ ಹಾಗೂ ದೂರದರ್ಶನ ಚಂದನ ಕನ್ನಡ ವಾಹಿನಿಯಲ್ಲಿ ಜಿಲ್ಲಾ ವರದಿಗಾರನಾಗಿ, ವಿಭಾಗೀಯ ಮುಖ್ಯಸ್ಥನಾಗಿ , ಇನ್ ಪುಟ್ ಹಾಗೂ ಔಟ್ ಪುಟ್ ಮುಖ್ಯಸ್ಥನಾಗಿ , ಮುಖ್ಯ ಉಪ ಸಂಪಾದಕನಾಗಿ ಹಾಗೂ ಸಹಾಯಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದೇನೆ. ನಿಷ್ಪಕ್ಷಪಾತ, ನಿರ್ಭಿಡೆಯಿಂದ ಸುದ್ದಿ ವಿಶ್ಲೇಷಣೆ ಮಾಡುವ ಉದ್ದೇಶದೊಂದಿಗೆ ಆರಂಭಿಸಿರುವ ಈ ನ್ಯೂಸ್‌ ಪೋಟ೯ಲಗೆ ತಮ್ಮ ಬೆಂಬಲವಿರಲಿ.. ವಿಜಯೀಂದ್ರ ಪಿ ಹುನಗುಂದ್‌ ಪ್ರಧಾನ ಸಂಪಾದಕರು, ನ್ಯೂ ಇಂಡಿಯಾ ಕನ್ನಡ, Email- editor@newindiakannada.com

Leave a Reply

Your email address will not be published. Required fields are marked *

Back to top button