ಶಿವಮೊಗ್ಗ: ಸೂಡಾದಲ್ಲಿ ಕೋಟ್ಯಾಂತರ ರೂ. ಹೇರಾಪೇರಿ|ಗುತ್ತಿಗೆದಾರರಿಂದ ಲೋಕಾಯುಕ್ತಕ್ಕೆ ದೂರು|ಸಮಗ್ರ ತನಿಖೆಗೆ ಕೆ.ಬಿ.ಪ್ರಸನ್ನಕುಮಾರ್ ಒತ್ತಾಯ
ಸೂಡಾ ಪ್ರಾಧಿಕಾರದ ಕಚೇರಿ ನವೀಕರಣದ ಹೆಸರಲ್ಲಿ 1ಕೋಟಿರೂ. ಹಣ ದುರುಪಯೋಗವಾಗಿದೆ. ನಗರಲ್ಲಿ ಹಲವು ಕಳಪೆ ಮತ್ತು ಅವೈಜ್ಞಾನಿಕ ಕಾಮಗಾರಿಗಳನ್ನು ಮಾಡುವ ಮೂಲಕ ಭ್ರಷ್ಟಾಚಾರ ನಡೆಸಲಾಗಿದೆ.

ಶಿವಮೊಗ್ಗ: ಇಲ್ಲಿಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಸೂಡಾ) ನಡೆದಿದೆ ಎನ್ನಲಾಗಿರುವ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸೋಮವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠೀಯನ್ನುದ್ದೇಶಿಸಿ ಮಾತನಾಡಿದ ಅವರು, ಹೆಚ್.ಎಸ್. ಸುಂದರೇಶ್ ಅವರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಬಳಿಕ ನಡೆದ 13 ಕಾಮಗಾರಿಗಳಲ್ಲಿ 10 ಕೋಟಿರೂ.ಕ್ಕೂ ಹೆಚ್ಚು ಭ್ರಷ್ಟಾಚಾರ ನಡೆದಿದ್ದು, ಸೂಡಾ ವತಿಯಿಂದ ನಡೆಸಲಾದ ಎಲ್ಲಾ ಕಾಮಗಾರಿಗಳ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಗುರುಸಾಯಿ ಹಾಗೂ ಬಸವರಾಜ್ ಎಂಬ ಗುತ್ತಿಗೆದಾರರು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರು, ಲೋಕೋಪಯೋಗಿ ಇಲಾಖೆ ಸೇರಿದಂತೆ ಎಲ್ಲಾಕಡೆ ದೂರು ನೀಡಿ ಸ್ಪಂದನೆ ಸಿಗದೇ ಅಂತಿಮವಾಗಿ ಸೂಡಾ ಅಕ್ರಮ ಕಾಮಗಾರಿಗಳ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ ಎಂದರು.
ಸೂಡಾ, ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಅವರು ಆಪಾದಿಸಿದರು.
ದೂರು ನೀಡಿದ ಗುತ್ತಿಗೆದಾರರಿಗೆ ಬೆದರಿಕೆ?
ಲೋಕಾಯುಕ್ತಕ್ಕೆ ದೂರು ನೀಡಿದ ಬಳಿಕ ಆ ಗುತ್ತಿಗೆದಾರರಿಗೆ ಸಾಕಷ್ಟು ಬೆದರಿಕೆ ಕರೆಗಳು , ಹಾಗೂ ಲಂಚದ ಆಮಿಷವನ್ನೂ ಒಡ್ಡಲಾಗಿದೆ. ಆದರೂ ಯಾವುದಕ್ಕೂ ಮಣಿದಿಲ್ಲ. ಇಬ್ಬರು ಗುತ್ತಿಗೆದಾರರಿಂದಾಗಿ ಅಕ್ರಮಗಳು ಬಯಲಿಗೆ ಬಂದಿದೆ ಎಂದರು.
40 ಕೋಟಿ ರೂಪಾಯಿ ವೆಚ್ಚದ 13 ಕಾಮಗಾರಿಗಳಲ್ಲಿ ಕೇವಲ 30 ಕೋಟಿ ರೂಪಾಯಿ ಮಾತ್ರ ಬಿಡುಗಡೆಯಾಗಿದೆ. ಇನ್ನುಳಿದ 10 ಕೋಟಿ ರೂಪಾಯಿ ಮೊತ್ತದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂಬುದು ದೂರುದಾರರ ಪ್ರಮುಖ ಆರೋಪವಾಗಿದೆ ಎಂದರು.
ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ಪಾರ್ಕಿನ ಕಾಮಗಾರಿಯೊಂದನ್ನ ಗಮನಿಸಿದರೆ ಅಲ್ಲಿ ನಿಯಮದ ಪ್ರಕಾರ 1441 ಮೀಟರ್ ಕಾಮಗಾರಿ ನಡೆಸಬೇಕಿದ್ದು, ಕೇವಲ 518 ಮೀಟರ್ ಕಾಮಗಾರಿ ನಡೆದಿದೆ ಎಂದು ಆರೋಪಿಸಿದರು.
ಬಡವರಿಗೆ ಕಡಿಮೆ ದರದಲ್ಲಿ ನಿವೇಶನ ಹಂಚುವ ಜನಹಿತ ಮರೆತ ನಗರಾಭಿವೃದ್ಧಿ ಪ್ರಾಧಿಕಾರಗಳು ಇವತ್ತು ರಿಯಲ್ ಎಸ್ಟೇಟ್ ಕಛೇರಿಗಳಾಗಿವೆ ಎಂದು ಪ್ರಸನ್ನಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಸೂಡಾ ಪ್ರಾಧಿಕಾರದ ಕಚೇರಿ ನವೀಕರಣದ ಹೆಸರಲ್ಲಿ 1ಕೋಟಿರೂ. ಹಣ ದುರುಪಯೋಗವಾಗಿದೆ. ನಗರಲ್ಲಿ ಹಲವು ಕಳಪೆ ಮತ್ತು ಅವೈಜ್ಞಾನಿಕ ಕಾಮಗಾರಿಗಳನ್ನು ಮಾಡುವ ಮೂಲಕ ಭ್ರಷ್ಟಾಚಾರ ನಡೆಸಲಾಗಿದೆ.
ಹೀಗಾಗಿ 2023ರಲ್ಲಿ ಹೆಚ್.ಎಸ್. ಸುಂದರೇಶ್ ಸೂಡಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ನಡೆಸಲಾಗಿರುವ ಎಲ್ಲಾ ಕಾಮಗಾರಿಗಳ ಬಗ್ಗೆ ಜಿಲ್ಲಾಧಿಕಾರಿಗಳು ಉನ್ನತ ಮಟ್ಟದ ತನಿಖೆ ನಡೆಸಬೇಕು.
ಹಾಗೂ ಹೊಸ ಕಾಮಗಾರಿ ಹೆಸರಿನ ಲೂಟಿ ನಿಯಂತ್ರಿಸಿ ಪ್ರಾಧಿಕಾರದ ಹಣವನ್ನು ಲೂಟಿ ಮಾಡಿದವರಿಂದ ವಸೂಲಿ ಮಾಡಿ ಮತ್ತೆ ಪ್ರಾಧಿಕಾರಕ್ಕೆ ಮರಳಿಸುವಂತೆ ಆಗ್ರಹಿಸಿದರು.
ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್, ಮುಖಂಡರಾದ ರಘು, ವೆಂಕಟೇಶ್, ನರಸಿಂಹ ಗಂಧದ ಮನೆ, ಸುನೀಲ್, ಉಮಾಶಂಕರ್ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







