ಶಿವಮೊಗ್ಗ: ಕೋಟೆ ಮಾರಿಕಾಂಬ ಜಾತ್ರೆ ಹಿನ್ನೆಲೆ|ರಾಷ್ಟ್ರ ಮಟ್ಟದ ಟಗರು ಕಾಳಗ ಆಯೋಜನೆ|ದೇಶದ ಆರು ರಾಜ್ಯಗಳಿಂದ ಬರಲಿವೆ ಟಗುರುಗಳು..
ರಾಷ್ಟ್ರಮಟ್ಟದ ಟಗರು ಕಾಳಗ ಪಂದ್ಯಾವಳಿಯಲ್ಲಿ ಒಟ್ಟು 4 ವಿಭಾಗಗಳನ್ನು ಮಾಡಲಾಗಿದೆ. ಇದರಲ್ಲಿ 8 ಹಲ್ಲಿನ ಟಗರು, 6 ಹಲ್ಲಿನ ಟಗರು, 4 ಮತ್ತು 2 ಹಲ್ಲಿನ ಟಗರುಗಳಿಗೆ ರೋಚಕ ಹಣಾಹಣಿ ನಡೆಯಲಿದೆ.

ಶಿವಮೊಗ್ಗ: ಇಲ್ಲಿನ ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವದ ಅಂಗವಾಗಿ ಶಿವಮೊಗ್ಗದಲ್ಲಿ ಪ್ರಥಮಬಾರಿಗೆ ರಾಷ್ಟ್ರ ಮಟ್ಟದ ಟಗರು ಕಾಳಗದ ಪಂದ್ಯಾವಳಿ ನಡೆಯಲಿದೆ.
ಫೆಬ್ರವರಿ 15 ರಂದು ಶಿವಮೊಗ್ಗದ ಫ್ರೀಡಂ ಪಾರ್ಕಿನಲ್ಲಿ ಟಗರು ಕಾಳಗ ಸ್ಪರ್ಧೆ ಆಯೋಜಿಸಲಾಗಿದೆ ಎಂದು ನಮ್ಮೂರು ಬಳಗದ ಪ್ರಧಾನ ಸಂಚಾಲಕ ಕೆ.ರಂಗನಾಥ್ ಹೇಳಿದ್ದಾರೆ.
ಸೋಮವಾರ ನಗರದ ಕೋಟೆ ಮಾರಿಕಾಂಬ ದೇವಾಲಯದಲ್ಲಿ ರಾಷ್ಟ್ರೀಯ ಮಟ್ಟದ ಟಗರು ಕಾಳಗ” ಪಂದ್ಯಾವಳಿಗಳ ಪ್ರಚಾರದ ಪೋಸ್ಟರ್ ಬಿಡುಗಡೆ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಕೋಟೆ ಮಾರಿಕಾಂಬ ಸಮಿತಿಯ ಅಧ್ಯಕ್ಷ ಎಸ್ ಕೆ ಮರಿಯಪ್ಪ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಕೆ.ರಂಗನಾಥ್, ರಾಷ್ಟ್ರೀಯ ಮಟ್ಟದ ಟಗರು ಕಾಳಗ ಪಂದ್ಯಾವಳಿಯಲ್ಲಿ ನೆರೆಯ ಆಂದ್ರ, ತೆಲಂಗಾಣ, ಮಹಾರಾಷ್ಟ್ರ , ತಮಿಳುನಾಡು ಸೇರಿದಂತೆ 6 ರಾಜ್ಯದ ಟಗರುಗಳು ಪ್ರದರ್ಶನ ನೀಡಲಿವೆ ಎಂದು ತಿಳಿಸಿದರು.
ವಿವಿಧ ಬಗೆಯ ಟಗರುಗಳು-ರೋಚಕ ಹಣಾಹಣಿ|
ರಾಷ್ಟ್ರಮಟ್ಟದ ಟಗರು ಕಾಳಗ ಪಂದ್ಯಾವಳಿಯಲ್ಲಿ ಒಟ್ಟು 4 ವಿಭಾಗಗಳನ್ನು ಮಾಡಲಾಗಿದೆ. ಇದರಲ್ಲಿ 8 ಹಲ್ಲಿನ ಟಗರು, 6 ಹಲ್ಲಿನ ಟಗರು, 4 ಮತ್ತು 2 ಹಲ್ಲಿನ ಟಗರುಗಳಿಗೆ ರೋಚಕ ಹಣಾಹಣಿ ನಡೆಯಲಿದೆ.

ಪ್ರಥಮ ಬಹುಮಾನ ಗೆದ್ದ ಟಗರಿಗೆ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಬಿರುದಿನ ಟ್ರೋಫಿ ಜೊತೆ 1ಲಕ್ಷ ನಗದು ಬಹುಮಾನ ಘೋಷಿಸಲಾಗಿದೆ.
ತೀರ್ಪು ಪಾರದರ್ಶಕವಾಗಿರಬೇಕೆಂಬ ದೃಷ್ಟಿಯಿಂದ ಬೇರೆ ರಾಜ್ಯಗಳಿಂದ ತೀರ್ಪುಗಾರರನ್ನು ಕರೆಸಲಾಗುತ್ತಿರುವುದು ವಿಶೇಷ.
ನಾಲ್ಕು ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಿದ ಟಗರುಗಳಿಗೆ ಶಿವಪ್ಪ ನಾಯಕ , ಭಗೀರಥ, ವೀರ ಸಿಂಧೂರ ಲಕ್ಷ್ಮಣ ಬಿರುದು ಹಾಗೂ ಟ್ರೋಫಿ ಜೊತೆಗೆ ಪ್ರಥಮ, ದ್ವಿತೀಯ ತೃತೀಯ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ನಮ್ಮೂರ ಬಳಗದ ಪ್ರಧಾನ ಸಂಚಾಲಕ ಕೆ.ರಂಗನಾಥ್ ತಿಳಿಸಿದರು.
ಹಣಾಹಣಿಗೆ ತಯಾರಾಗುವ ಟಗರುಗಳಿಗೆ
ವಿಶೇಷ ತರಬೇತಿ ನೀಡುವ ಮಾಲೀಕರು|
ಹೀಗೆ ಪಂದ್ಯಾವಳಿಯಲ್ಲಿ ಭಾಗವಹಿಸುವ ಟಗರುಗಳನ್ನು ಅದರ ಮಾಲೀಕರುಗಳು ವರುಷಗಟ್ಟಲೇ ವಿಶೇಷ ತರಬೇತಿ ಹಾಗೂ ಆಹಾರ ನೀಡಿ ತಯಾರು ಮಾಡುತ್ತಾರೆ.
ವರುಷವಿಡಿ ಹುರುಳಿ ಶೇಂಗಾ, ಹೆಸರು ಕಾಳು ಹೊಟ್ಟು ಗರಿಕೆ ಹಾಗೂ ಎಲ್ಲ ಬಗೆಯ ಡ್ರೈಪ್ರೂಟ್ಸ್ ಜೊತೆಗೆ ದಿನಕ್ಕೆ ಇಂತಿಷ್ಟು ಗಂಟೆ ಈಜು ತರಬೇತಿ ಸಹ ನೀಡುತ್ತಾರೆ.
100. ಕೆಜಿ ತೂಕದವರೆಗೂ ದಷ್ಟ ಪುಷ್ಟವಾಗಿ ಬೆಳೆಸುತ್ತಾರೆ ಆ ನಂತರವೇ ಸ್ಪರ್ಧೆಗೆ ಟಗುರುಗಳನ್ನು ಕರೆದುಕೊಂಡು ಬರಲಾಗುತ್ತದೆ.
“ಸುಗ್ರೀವ”ಗೆ ಗೆಲುವಿನ ನಿರೀಕ್ಷೆ!

ಕಳೆದ ಐದಾರು ವರ್ಷಗಳಿಂದ ವಿವಿಧೆಡೆ ಟಗರು ಕಾಳಗದಲ್ಲಿ ಭಾಗವಹಿಸಿರುವ ಶಿವಮೊಗ್ಗದ ನ್ಯೂಮಂಡ್ಲಿಯ ಚೌಡೇಶ್ವರಿ ಮಚ್ಚಾಬಾಯ್ಸ್ ತಂಡದ ಸುಗ್ರೀವ ಹೆಸರಿನ ಟಗರು ಶಿವಮೊಗ್ಗದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕಾಳಗದಲ್ಲಿ ಟ್ರೋಫಿ ಗೆಲ್ಲುವ ಭರವಸೆ ಇದೆ ಎಂದು ಟಗರು ಮಾಲೀಕ ಸೂರಿ ವಿಶ್ವಾಸದಿಂದ ಹೇಳಿದರು.
ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಸುಗ್ರೀವ ಟಗರಿನ ಜೊತೆ ಕೋಟೆ ಮಾರಿಕಾಂಬ ದೇವಾಲಯದಲ್ಲಿ ನಡೆದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಆಗಮಿಸಿದ್ದರು. ಈ ವೇಳೆ ಸುಗ್ರೀವ ಟಗರು ಎಲ್ಲರ ಆಕರ್ಷಣೆ ಒಳಗಾಗಿತ್ತು.
ನಮ್ಮೂರ ಬಳಗದ ಗೌರವಾಧ್ಯಕ್ಷ ಐಡಿಯಲ್ ಗೋಪಿ, ಕೋಟೆ ಶ್ರೀಮಾರಿಕಾಂಬ ಸಮಿತಿಯ ಪದಾಧಿಕಾರಿಗಳಾದ ಎನ್.ಉಮಾಪತಿ, ನಮ್ಮೂರ ಬಳಗ ಸಂಘಟನೆಯ ಗೌರವ ಸಂಚಾಲಕರುಗಳಾದ ನಾಗರಾಜ್ ಕಂಕಾರಿ, ಎಚ್ ಪಾಲಾಕ್ಷಿ, ಸಿ ಎಚ್ ಮಾಲತೇಶ್, ಜಿ.ಡಿ.ಮಂಜುನಾಥ್, ಸಿ ರವಿ, ಕೆ.ಆರ್.ಸುರೇಶ್, ಆರ್.ವಿಜಯ್‌ಕುಮಾರ್, ಹೆಚ್.ಪಿ.ಗಿರೀಶ್, ಬಿ.ಲೋಕೇಶ್ ಮತ್ತಿತರು ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







