SSLC-PUC ತೇರ್ಗಡೆ ಅಂಕ ಶೇ33ಕ್ಕೆ ಇಳಿಕೆ ವಿವಾದ- ಸರ್ಕಾರದಿಂದ ಆತುರದ ತೀರ್ಮಾನ-ಶಿಕ್ಷಣ ತಜ್ಞ ಎಚ್ ಕೆ ಮಂಜುನಾಥ್
ಕೋವಿಡ್ ಬಳಿಕ ಮಕ್ಕಳ ಕಲಿಕಾ ಆಸಕ್ತಿ ಕಡಿಮೆಯಾಗಿದೆ. ಈ ಹಿಂದೆ ಇದ್ದ ಮಾನದಂಡಕ್ಕೆ ಮಕ್ಕಳು ತಯಾರಿ ನಡೆಸಲು ಹಿಂದೇಟು ಹಾಕುತ್ತಿದ್ದರು. ಈಗಾಗಲೇ ಕಲಿಕಾ ಮಟ್ಟ ಕುಸಿದಿದೆ. ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಿದರೆ ಫಲಿತಾಂಶ ತಾನಾಗಿಯೇ ಹೆಚ್ಚಳವಾಲಿದೆ.

ಎಸ್‌ಎಸ್‌ಎಲ್‌ಸಿಯಲ್ಲಿ 625 ಕ್ಕೆ 210 ಅಂಕ ಬಂದ್ರೆ ಪಾಸ್. ಪಿಯುಸಿಯಲ್ಲಿ 600 ಕ್ಕೆ 198 ಅಂಕ ಬಂದ್ರೆ ಪಾಸ್.
ಇದು ಬೆರಳಣಿಕೆ ವಿದ್ಯಾರ್ಥಿಗಳಿಗಾಗಿ ರಾಜ್ಯ ಸರ್ಕಾರ ತಂದಿರುವ ಕ್ರಾಂತಿಕಾರಕ ಹೆಜ್ಜೆಯಂತೇ?.
ಪ್ರಸಕ್ತ 2025-26 ರಿಂದಲೇ ಈ ನಿಯಮ ಜಾರಿಗೆ ಬರಲಿದ್ದು, ಇದು ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿಗಳ ಪಾಲಿಗೆ ಕಂಟಕ, ಮಾರಕ ಹಾಗು ದುರಾದೃಷ್ಟಕರವಾಗಲಿದೆ.

ಕಲಿಕಾ ಗುಣಮಟ್ಟ ಕುಸಿಯುವಂತೆ ಮಾಡಲಿರುವ ಸರ್ಕಾರದ ಈ ನಿರ್ಧಾರ ಮತ್ತು ಮೊಂಡು ಸಮರ್ಥನೆ, ಸಮಗ್ರ ಶಿಕ್ಷಣ ವ್ಯವಸ್ಥೆ ಹಾಳಾಗಲು ಕಾರಣವಾಗಲಿದೆ ಎಂದು ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಸಿಬಿಎಸ್ಸಿ ಹಾಗು ಐಸಿಎಸ್ಸಿ ಪಠ್ಯಕ್ರಮದಲ್ಲಿ ಪಾಸಿಂಗ್ ಮಾರ್ಕ್ಸ್ ಶೇ 33 ಇದೆ. ಹೀಗಾಗಿ ರಾಜ್ಯದ ಮಕ್ಕಳಿಗಾಗುತ್ತಿದ್ದ ತಾರತಮ್ಯ ನಿವಾರಣೆ ಮಾಡಿದ್ದೀವಿ ಅಂತಿದೆ ಸಿದ್ದರಾಮಯ್ಯ ಸರ್ಕಾರ.

ಆದರೆ ಕೇಂದ್ರೀಯ ಪಠ್ಯಕ್ರಮ ತುಲನೆ, ಕೇವಲ ಪಾಸಿಂಗ್ ಮಾರ್ಕ್ಸ್ ಅಂಕ ಇಳಿಕೆಗೆ ಸೀಮಿತವಾದ್ರೆ ಸಾಕಾ? ಎಂಬ ಪ್ರಶ್ನೆಯೊಂದಿಗೆ ಶುರುವಾಗುತ್ತದೆ.
ಇನ್ನು ಕೇಂದ್ರಿಯ ಪಠ್ಯಕ್ರಮವು ಸುಧೀರ್ಘವಾಗಿದ್ದು. ಕೌಶಲ್ಯಯುತ ಪಠ್ಯಭೋದನೆ ಒಳಗೊಂಡಿದೆ ಎಂಬುದನ್ನು ರಾಜ್ಯ ಸರ್ಕಾರವು ಪರಿಗಣಿಸಬೇಕಾಗುತ್ತದೆ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.
ಸರ್ಕಾರಕ್ಕೀಗ ಫಲಿತಾಂಶ ಹೆಚ್ಚಳ ತೋರ್ಪಡಿಸಬೇಕೆಂಬ ಗುರಿಯೊಂದೇ ಮುಖ್ಯವಾಗಿರೋದು ಸ್ಪಷ್ಟವಾಗಿ ಕಾಣಿಸುತ್ತಿದೆ.

ಈಗಾಗಲೇ ವರ್ಷದಿಂದ ವರ್ಷಕ್ಕೆ ಫಲಿತಾಂಶ ಕಡಿಮೆಯಾಗುತ್ತಿರುವುದು ಪರೀಕ್ಷೆಯಲ್ಲಿನ ಲೋಪದೋಷದಿಂದ ಗ್ರೇಸ್ ಮಾರ್ಕ್ಸ್ ಕೊಟ್ಟಂತಹ ಉದಾಹರಣೆ ನಮ್ಮ ಮುಂದಿವೆ.
ಈಗ ಸಮಸ್ಯೆಯ ಮೂಲ ಸರಿಪಡಿಸದೇ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಮತ್ತು ಶಿಕ್ಷಣದ ಗುಣಮಟ್ಟ ಕಳಪೆ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ.

ಶಿಕ್ಷಣದ ಗುಣಮಟ್ಟ ಕುಸಿಯಬಾರದು ಎಂಬ ಕಳಕಳಿಯೊಂದಿಗೆ “ನ್ಯೂ ಇಂಡಿಯಾ ಕನ್ನಡ” ಡಿಜಿಟಲ್ ಕನ್ನಡ ಪತ್ರಿಕೆಯು, “ಶಿಕ್ಷಣ ಗುಣಮಟ್ಟ ಉಳಿಸಿ” ಅಭಿಯಾನ ಆರಂಭಿಸಿದೆ.
ಇದರ ಅಂಗವಾಗಿ ಅಂಕ ಇಳಿಕೆ ಕ್ರಮದ ಬಗ್ಗೆ, ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಕ್ಕಳ ಮಾನಸಿಕತೆ ಬಲ್ಲ ರಾಜ್ಯಾದ್ಯಂತ ಶಿಕ್ಷಣ ತಜ್ಞರುಗಳು ಹಾಗು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವನ್ನು ಕ್ರೋಢಿಕರಿಸುತ್ತಿದೆ.
ನಮ್ಮ ಅಭಿಯಾನದ ಎರಡನೇ ಲೇಖನ ಸರಣಿಯಲ್ಲಿ ಕರ್ನಾಟಕ ರಾಜ್ಯ ಪ್ರೌಡಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಎಚ್ ಕೆ ಮಂಜುನಾಥ್ ಅವರು ತಮ್ಮ ಅಭಿಪ್ರಾಯವನ್ನು “ನ್ಯೂ ಇಂಡಿಯಾ ಕನ್ನಡ” ಡಿಜಿಟಲ್ ಕನ್ನಡ ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಅವರ ಹೇಳಿಕೆಯನ್ನು ಇಲ್ಲಿ ಯಥಾವತ್ತಾಗಿ ಪ್ರಕಟಿಸಲಾಗಿದೆ.
“ತೇರ್ಗಡೆ ಅಂಕ ಕಡಿತ ನಿರ್ಧಾರ ಸೂಕ್ತವಲ್ಲ”
ಗುಣಮಟ್ಟದ ಶಿಕ್ಷಣಕ್ಕೆ ಒತ್ತುಕೊಟ್ಟರೇ ಫಲಿತಾಂಶ ಹೆಚ್ಚಳ
-ಎಚ್ ಕೆ ಮಂಜುನಾಥ್

ತರಗತಿಯಲ್ಲಿ ವಿದ್ಯಾರ್ಥಿಗಳು ಹಿಂದುಳಿದಿದ್ದಾರೋ ಅವರಿಗೆ ಹೆಚ್ಚಿನ ತರಗತಿ , ಶಿಬಿರ ನಡೆಸಿ ಕಲಿಕಾ ಗುಣಮಟ್ಟ ಹೆಚ್ಚಿಸುವ ಬದಲು ಪರೀಕ್ಷೆ ಅಂಕ ವ್ಯತ್ಯಾಸ ಮಾಡುವುದರಿಂದ ಪ್ರಯೋಜನವಿಲ್ಲ.
ಕೋವಿಡ್ ಬಳಿಕ ಮಕ್ಕಳ ಕಲಿಕಾ ಆಸಕ್ತಿ ಕಡಿಮೆಯಾಗಿದೆ. ಈ ಹಿಂದೆ ಇದ್ದ ಮಾನದಂಡಕ್ಕೆ ಮಕ್ಕಳು ತಯಾರಿ ನಡೆಸಲು ಹಿಂದೇಟು ಹಾಕುತ್ತಿದ್ದರು. ಈಗಾಗಲೇ ಕಲಿಕಾ ಮಟ್ಟ ಕುಸಿದಿದೆ.
ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಿದರೆ ಫಲಿತಾಂಶ ತಾನಾಗಿಯೇ ಹೆಚ್ಚಳವಾಲಿದೆ. ಅದನ್ನ ಬಿಟ್ಟು ಅಂಕ ಗಳಿಕೆಯನ್ನೇ ಸರಳೀಕರಿಸಿದ್ರೆ ವಿದ್ಯಾರ್ಥಿಯ ಭವಿಷ್ಯಕ್ಕೆ ಮಾರಕವಾಗಲಿದೆ.

ಶಿಕ್ಷಣ ಇಲಾಖೆಗೆ ಕನಿಷ್ಠ ಶೇ50ರಷ್ಟು ಫಲಿತಾಂಶ ಬರಲೇಬೇಕೆಂಬ ಒತ್ತಡ ಹಾಕಲಾಗುತ್ತಿದೆ. ಅದರ ಬದಲು ಶಿಕ್ಷಕರ ಕೊರತೆ ನೀಗಿಸಿ, ಶಾಲೆಗಳಲ್ಲಿ ಹೆಚ್ಚಿನ ಶಿಕ್ಷಕರ ನೇಮಕಾತಿ ಮಾಡಿ, ಕಾಲಕಾಲಕ್ಕೆ ಪಠ್ಯಪುಸ್ತಕ ಪೂರಕ ಸಾಮಗ್ರಿ ಒದಗಿಸಿ, ಭೋದಕರಿಗೆ ಇತರೆ ಕಾರ್ಯಭಾರ ಹೊರೆ ಇಳಿಸಿ, ಗುಣಮಟ್ಟದ ಶಿಕ್ಷಣಕ್ಕೆ ಒತ್ತುಕೊಟ್ಟಿದ್ದೇ ಆದರೆ ಫಲಿತಾಂಶ ಹೆಚ್ಚಳ ತಾನಾಗಿಯೇ ಆಗಲಿದೆ.
ಸರ್ಕಾರದ ತನ್ನ ಆತುರ ನಿರ್ಧಾರ ಮರುಪರಿಶೀಲಿಸಬೇಕು. ಹೀಗೆ ಕಡಿಮೆ ಅಂಕ ಪಡಯುವ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗಳಲ್ಲಿ ಇದು ಕ್ಲಿಷ್ಟಕರ ಮತ್ತು ಮಾರಕವಾಗಿ ಪರಿಣಮಿಸಲಿದೆ. ಗುಣಮಟ್ಟಕ್ಕೆ ಪೆಟ್ಟು ಬೀಳದಂತೆ ಸರ್ಕಾರ ನಿಲುವು ತೆಗೆದುಕೊಳ್ಳಬೇಕಿದೆ.
ಸರ್ಕಾರ ಆತುರಕ್ಕೆ ಬಿದ್ದು ತೀರ್ಮಾನ ಕೈಗೊಂಡಿದೆ. ಶಿಕ್ಷಣ ತಜ್ಞರು ಮತ್ತು ವಿವಿಧ ಸಂಘಟನೆಗಳ ಜೊತೆ ಹಲವು ಸುತ್ತಿನ ಸುಧೀರ್ಘ ಚರ್ಚೆ ನಡೆಸಬಹುದಾಗಿತ್ತು ಕಾಲಾವಕಾಶ ತೆಗೆದುಕೊಂಡು ತೀರ್ಮಾನಕ್ಕೆ ಬರಬೇಕಿತ್ತು.
ವಿಶೇಷ ವರದಿ ಹಾಗೂ ನಿರೂಪಣೆ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ



