AgricultureKarnatakaShivamogga

ಬೆಳೆ ಪರಿಹಾರ ನೀಡದಿದ್ದರೇ ಗ್ರಾಹಕರ ವ್ಯಾಜ್ಯಗಳ ನ್ಯಾಯಾಲಯಕ್ಕೆ ಹೋಗ್ತಿವಿ|ವಿಮಾ ಕಂಪನಿಗಳಿಗೆ ಎಚ್ಚರಿಕೆ ನೀಡಿದ ಸಚಿವ ಮಧು ಬಂಗಾರಪ್ಪ

ನಿಷ್ಕ್ರಿಯವಾಗಿರುವ ಮಳೆಮಾಪಕ ಯಂತ್ರಗಳ ಮಾಹಿತಿ ನೀಡಿದಲ್ಲಿ ಅವುಗಳನ್ನು ಬದಲಾಯಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.

ಶಿವಮೊಗ್ಗ.ಡಿ.06, ಹವಾಮಾನಾಧಾರಿತ ಬೆಳೆ ವಿಮಾ ಯೋಜನೆಯಡಿ ತೋಟಗಾರಿಕೆ ಬೆಳೆಗಾರರಿಗೆ ಪರಿಹಾರ ಧನ ನೀಡುವಲ್ಲಿ ನ್ಯೂನತೆಗಳುಂಟಾಗಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಹೇಳಿದರು.

ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಂದ ವರದಿ ಪಡೆದು ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಶುಕ್ರವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಈ ಕುರಿತು ಸಚಿವ ಮಧು ಬಂಗಾರಪ್ಪ ಸಮಗ್ರ ಸಮಾಲೋಚನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮಳೆಮಾಪಕ ಕೇಂದ್ರಗಳ ಮೂಲಕ ಸಂಗ್ರಹಿಸಿದ ಹವಾಮಾನ ದತ್ತಾಂಶಗಳನ್ನು ಆಧರಿಸಿ ವಿಮಾ ಪರಿಹಾರವನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಆದರೆ, ಜಿಲ್ಲೆಯಲ್ಲಿರುವ 280 ಮಳೆ ಮಾಪನ ಕೇಂದ್ರಗಳಲ್ಲಿ ಕೆಲವು ದುರಸ್ತಿಯಲ್ಲಿವೆ.

ಕೆಟ್ಟು ನಿಂತಿರುವ ಮಳೆ ಮಾಪನ ಕೇಂದ್ರ.

ಇದರಿಂದ ರೈತರ ಬೆಳೆಹಾನಿಯ ಪ್ರಮಾಣ ಅಂದಾಜು ಸಿಗದದ ಪರಿಣಾಮ, ಇದರಿಂದ ವಿಮಾ ಕಂಪನಿಗಳು ಪರಿಹಾರ ಕೊಡುವಲ್ಲಿ ವಿಳಂಬ ಮಾಡುತ್ತಿರುವದರಿಂದ ರೈತರಿಗೆ ವಿಮಾ ಮೊತ್ತ ದೊರೆಯದೆ ಅತೀವ ನಷ್ಟ ಉಂಟಾಗುತ್ತಿದೆ ಎಂದು ವಿವರಣೆ ನೀಡಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಅಡಕೆ, ಶುಂಠಿ, ಕಾಳುಮೆಣಸು, ಮಾವಿನಂತಹ ಬೆಳೆಗಳನ್ನು ವಿಮಾ ವ್ಯಾಪ್ತಿಗೆ ಪರಿಗಣಿಸಲಾಗುತ್ತಿದೆ.

ವಿಮಾಪಾಲಿಸಿಯಲ್ಲಿ ನಿರ್ದಿಷ್ಟಪಡಿಸಿದ ಹವಾಮಾನ ಘಟಕಗಳು ಇಳುವರಿ ನಷ್ಟವನ್ನು ಲೆಕ್ಕಿಸಿ ರೈತರಿಗೆ ಸ್ವಯಂಚಾಲಿತವಾಗಿ ಮತ್ತು ತ್ವರಿತವಾಗಿ ಪರಿಹಾರ ನೀಡುವಲ್ಲಿ ಸಹಕಾರಿಯಾಗಿದೆ.

ಕೆಟ್ಟು ನಿಂತಿರುವ ಮಳೆ ಮಾಪನ ಕೇಂದ್ರ

ಆದರೆ, ಮಳೆಮಾಪನ ಘಟಕಗಳ ದುರಸ್ಥಿ ಮತ್ತು ಸಮರ್ಪಕ ಮಾಹಿತಿ ನೀಡದಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ತಿಳಿಸಿದರು.

ಈ ಕುರಿತು ಅಭಿವೃದ್ದಿ ಆಯುಕ್ತರು ಹಾಗೂ ವಿಮಾ ಕಂಪನಿಗಳ ನಡುವೆ ಸಮಾಲೋಚನೆ ನಡೆಸಿ, ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಚಿವ ಎಸ್. ಮಧು ಬಂಗಾರಪ್ಪ ಭರವಸೆ ನೀಡಿದರು.

ಮಳೆಮಾಪನ ಘಟಕಗಳ ದುರಸ್ಥಿಯ ನಂತರವೂ ವಿಮಾ ಕಂಪನಿಗಳು ಪರಿಹಾರ ನೀಡಲು ಮುಂದಾಗದಿದ್ದಲ್ಲಿ ಅನಿವಾರ್ಯವಾಗಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಮೊರೆ ಹೋಗಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

ಈ ಹಿಂದೆಯೂ ರೈತರು ನ್ಯಾಯಾಲಯಕ್ಕೆ ಹೋಗಿ ಪರಿಹಾರಧನ ಪಡೆದ ಉದಾಹರಣೆಗಳಿವೆ ಎಂದು ಹೇಳಿದರು.

ದುರಸ್ತಿಯಲ್ಲಿರುವ ಘಟಕಗಳಲ್ಲಿ ಆಧುನಿಕ ಯಂತ್ರಗಳನ್ನು ಅಳವಡಿಸಲು ಈಗಾಗಲೇ ಕೃಷಿ ಸಚಿವ ಚೆಲುವರಾಯಸ್ವಾಮಿ ನಿರ್ಧರಿಸಿದ್ದಾರೆ.

ಆದ್ದರಿಂದ ಜಿಲ್ಲೆಯಲ್ಲಿ ನಿಷ್ಕ್ರಿಯವಾಗಿರುವ ಮಳೆಮಾಪಕ ಯಂತ್ರಗಳ ಮಾಹಿತಿ ನೀಡಿದಲ್ಲಿ ಅವುಗಳನ್ನು ಬದಲಾಯಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.

ರೈತರು ಸಕಾಲದಲ್ಲಿ ತಮಗೆ ಆಗಿರುವ ನಷ್ಟದ ಅಂದಾಜನ್ನು ಮತ್ತು ಪರಿಹಾರ ಬರದೇ ಇರುವದನ್ನು ತಿಳಿಸಿದ್ದಲ್ಲಿ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.

ವಿಮಾ ಕಂಪನಿಗಳ ಪ್ರತಿನಿಧಿಗಳು ಸದಾ ಜಿಲ್ಲಾ ಕೇಂದ್ರದಲ್ಲಿ ಇದ್ದು ನಷ್ಟದ ಮಾಹಿತಿಯನ್ನು ಪಡೆಯುತ್ತಿರಬೇಕು ಎಂದು ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ಮುಂಗಾರು ಮಳೆಯ ಪರಿಣಾಮ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಅಡಿಕೆ ಬೆಳೆಗೆ ಕಂಡುಬಂದ ಎಲೆಚುಕ್ಕೆ ರೋಗ ಮತ್ತು ಕೊಳೆರೋಗದಿಂದಾಗಿ ಅತೀವ ಪ್ರಮಾಣ ಬೆಳೆ ಹಾನಿ ಹಾಗೂ ಇಳುವರಿ ಕುಂಠಿತವಾಗಿದೆ.

ಪ್ರತಿ ಹೆಕ್ಟರ್‌ಗೆ 42,000ರೂ. ಪರಿಹಾರಧನ ನೀಡುವಂತೆ ತೋಟಗಾರಿಕೆ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ನೆರೆಯ ಕಾರವಾರ, ಚಿಕ್ಕಮಗಳೂರು, ಚಿತ್ರದುರ್ಗ ಮತ್ತಿತರ ಜಿಲ್ಲೆಗಳಲ್ಲಿಯೂ ಮಳೆ ಮಾಪನ ಯಂತ್ರಗಳು ದುರಸ್ತಿಯಲ್ಲಿವೆ.

ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ದತ್ತಾಂಶ ಸಂಗ್ರಹದಲ್ಲಿ ವ್ಯತ್ಯಯಗಳಾಗಿರುವುದನ್ನು ಸಂಘಟಿತವಾಗಿ ಸರ್ಕಾರದ ಗಮನಕ್ಕೆ ತಂದು ಪರಿಹಾರ ಧನ ಒದಗಿಸಲು ಮನವಿ ಮಾಡಿಕೊಳ್ಳಲಾಗುವುದು ಎಂದು ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಹೇಮಂತ್, ಅಪರ ಜಿಲ್ಲಾಧಿಕಾರಿ ಅಭಿಷೇಕ್‌, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕಿರಣ್‌ಕುಮಾರ್‌, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಡಾ. ಸಂಜಯ್ಎ.ಬಿ., ಸೇರಿದಂತೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button