Updated: GST ಮಂಡಳಿಯಿಂದ ದೀಪಾವಳಿ GIFT..ಸಾಮಾನ್ಯ ಜನರು ಬಳಸುವ ವಸ್ತುಗಳಿಗೆ ತೆರಿಗೆ ವಿನಾಯಿತಿ
ಕೇಂದ್ರ ಸರ್ಕಾರ ಸಲ್ಲಿಸಿದ ಜಿಎಸ್ಟಿ ದರ ಕಡಿತ ಮತ್ತು ಸುಧಾರಣೆಗಳ ಪ್ರಸ್ತಾವನೆಗಳಿಗೆ ಸಾಮೂಹಿಕವಾಗಿ ಒಪ್ಪಿಗೆ ನೀಡಿದ್ದಕ್ಕಾಗಿ ಜಿಎಸ್ಟಿ ಮಂಡಳಿಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಇತ್ತೀಚೆಗೆ ಆಗಸ್ಟ್ 15 ರಂದು ಕೆಂಪುಕೋಟೆಯ ಮೇಲೆ ಸ್ವಾತಂತ್ರ್ಯೋತ್ಸವ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆಯನ್ನು ಬುಧವಾರದಂದು ನಡೆದ ಜಿಎಸ್ಟಿ ಮಂಡಳಿ ಸಭೆ ಒಕ್ಕೊರೊಲಿನಿಂದ ಒಪ್ಪಿಗೆ ನೀಡಿದೆ.

ಅಂದಿನ ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ, ಜಿಎಸ್ಟಿ ಯಲ್ಲಿ ಮುಂದಿನ ಪೀಳಿಗೆಯ ಸುಧಾರಣೆಗಳನ್ನು ತರುವ ಉದ್ದೇಶದ ಬಗ್ಗೆ ಸೂಚ್ಯವಾಗಿ ಹೇಳಿದ್ದರು.
ಈ ಕುರಿತು ಕೇಂದ್ರ ಸರ್ಕಾರ, ಜಿಎಸ್ಟಿ ಮಂಡಳಿಗೆ ಜಿಎಸ್ಟಿ ದರ ಕಡಿತ ಮತ್ತು ಸುಧಾರಣೆಗಳ ಪ್ರಸ್ತಾವನೆ ಸಲ್ಲಿಸಿತ್ತು. ಪ್ರಧಾನಿ ಮೋದಿ ಆಶಯದಂತೆ, ಜಿಎಸ್ಟಿ ಮಂಡಳಿ ಸಭೆಯಲ್ಲಿ ಬಹುತೇಕ ಎಲ್ಲಕ್ಕೂ ಅನುಮೋದನೆ ನೀಡಲಾಗಿದೆ.

ಇದರೊಂದಿಗೆ ಈವರೆಗೆ ಇದ್ದ ನಾಲ್ಕು ಹಂತದ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಪ್ರಕಾರಗಳಲ್ಲಿ ಬದಲಾವಣೆ ತರಲಾಗಿದೆ.
ಬುಧವಾರದಂದು ನಡೆದ ಕೇಂದ್ರ ಜಿಎಸ್ಟಿ ಮಂಡಳಿಯ ಸಭೆಯಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದ ಸಲಹೆಗಳನ್ನು ಯಥಾವತ್ತಾಗಿ ಜಾರಿಗೆ ತರಲು ಒಪ್ಪಿಗೆ ನೀಡಿದೆ.
ಇನ್ಮುಂದೆ ಕೇವಲ ಎರಡು ಪ್ರಕಾರಗಳ ಜಿಎಸ್ಟಿ ತೆರಿಗೆ ವಿಧಿಸಲು ನಿಧ೯ರಿಸಿದೆ. ಇದರಿಂದ ಸಾಮಾನ್ಯ ಜನರು ಈಗ ನಿಟ್ಟಿಸಿರು ಬಿಡುವಂತಾಗಿದೆ.
ಒಂದೊಂದು ದರದ ಖರೀದಿಗೂ ವಿವಿಧ ಹಂತದ ಜಿಎಸ್ಟಿ ತೆರಿಗೆ ಇದ್ದಿದ್ದರಿಂದ ಈವರೆಗೆ ಜನರಿಗೆ ಅನಿವಾಯ೯ವಾಗಿ ತೆರಿಗೆ ಭರಿಸುವ ಪರಿಸ್ಥಿತಿ ಇತ್ತು.
ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ 56ನೇ ಜಿಎಸ್ಟಿ ಮಂಡಳಿ ಸಭೆ, ಪ್ರಸ್ತುತ ಇರುವ ನಾಲ್ಕು ಜಿಎಸ್ಟಿ ಪ್ರಕಾರಗಳಲ್ಲಿ ಶೇ. 5, ಶೇ, 12, ಶೇ. 18 ಮತ್ತು ಶೇ, 28 ರಷ್ಟು ಎಂದು ಈವರೆಗೆ ಇದ್ದ ತೆರಿಗೆಯ ಪ್ರಕಾರಗಳನ್ನು ಹಿಂಪಡೆದಿದ್ದು, ಇನ್ನು ಮುಂದೆ ಶೇ. 12 ಮತ್ತು ಶೇ. 28ರ ತೆರಿಗೆ ಸ್ಲ್ಯಾಬ್ಗಳನ್ನು ತೆಗೆದುಹಾಕಿ, ಕೇವಲ ಶೇ. 5 ಮತ್ತು ಶೇ. 18ರ ಎರಡು ಹಂತದ ತೆರಿಗೆ ಪ್ರಕಾರಗಳನ್ನು ಜಾರಿಗೆ ತರಲು ಸಭೆ ಒಪ್ಪಿಗೆ ಸೂಚಿಸಿದೆ. ಇದು ಸೆಪ್ಟೆಂಬರ್ 22 ರಿಂದಲೇ ಜಾರಿಗೆ ಬರಲಿದೆ.
56ನೇ ಜಿಎಸ್ಟಿ ಮಂಡಳಿ ಸಭೆ-ತೆರಿಗೆ ಬದಲಾವಣೆಗಳಿಗೆ ಅನುಮೋದನೆ

“ಸಾಮಾನ್ಯ ಜನರು ಮತ್ತು ಮಧ್ಯಮ ವರ್ಗದವರು ಬಳಸುವ ವಸ್ತುಗಳ ಮೇಲೆ “ಸಂಪೂರ್ಣ ತೆರಿಗೆ ಕಡಿತ ಮಾಡಲಾಗಿದೆ” ಎಂದು ತಿಳಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೂದಲಿನ ಎಣ್ಣೆ, ಸೋಪು, ಶಾಂಪೂಗಳು, ಹಲ್ಲುಜ್ಜುವ ಬ್ರಷ್ಗಳು, ಟೂತ್ಪೇಸ್ಟ್, ಸೈಕಲ್ಗಳು ಮತ್ತು ಅಡುಗೆ ಸಾಮಾನುಗಳ ಮೇಲಿನ ಜಿಎಸ್ಟಿಯನ್ನು ಶೇಕಡಾ 5 ಕ್ಕೆ ಇಳಿಸಲಾಗಿದೆ ಎಂದು ತಿಳಿಸಿದ್ದಾರೆ.“
ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಎಲ್ಲ ರಾಜ್ಯಗಳು ಜಿಎಸ್ ಟಿ ಹೊಸ ಪ್ರಕಾರಗಳಿಗೆ ಬೆಂಬಲ ನೀಡಿವೆ ಮತ್ತು ಇದು ಒಮ್ಮತದ ನಿರ್ಧಾರವಾಗಿದೆ ಎಂದು ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಜಿಎಸ್ಟಿ ದರ ತರ್ಕಬದ್ಧಗೊಳಿಸುವಿಕೆಯಿಂದ ಒಟ್ಟು 47,700 ಕೋಟಿ ರೂ. ನಷ್ಟವಾಗುತ್ತದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಪಶ್ಚಿಮ ಬಂಗಾಳ ಹಣಕಾಸು ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರು ತಿಳಿಸಿದ್ದಾರೆ.
ಪಾದರಕ್ಷೆ ಮತ್ತು ಉಡುಪುಗಳಿಗ ಮೇಲಿನ ಜಿಎಸ್ಟಿ ಇಳಿಕೆಗೆ ಮುಖ್ಯವಾಗಿ ಸಭೆ ಅನುಮೋದನೆ ನೀಡಿದ್ದು, 2,500 ವರೆಗಿನ ಬೆಲೆಯ ಪಾದರಕ್ಷೆಗಳು ಮತ್ತು ಸಿದ್ಧ ಉಡುಪುಗಳ ಮೇಲಿನ ತೆರಿಗೆಯನ್ನು ಶೇ. 5ಕ್ಕೆ ಇಳಿಸಲು ಜಿಎಸ್ಟಿ ಮಂಡಳಿಯು ಒಪ್ಪಿಗೆ ನೀಡಿದೆ.
ಪ್ರಸ್ತುತ, 1,000 ರೂ.ವರೆಗಿನ ವಸ್ತುಗಳಿಗೆ ಶೇ. 5 ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ವಸ್ತುಗಳಿಗೆ ಶೇ. 12ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಹೊಸ ಜಿಎಸ್ಟಿ ತೆರಿಗೆ ಅನ್ವಯ ಕಾರುಗಳು ಬೆಲೆ ಕಡಿಮೆಯಾಗುವ ಸಾಧ್ಯತೆ ಹೆಚ್ಚಿದೆ. ಈಗಿರುವ ಶೇ.೨೮ ರಿಂದ ಶೇ. ೧೮ಕ್ಕೆ ತೆರಿಗೆ ಇಳಿಸಲಾಗಿದೆ.
ಜಿಎಸ್ಟಿ ಮಂಡಳಿ ತೀಮಾ೯ನಕ್ಕೆ ಪ್ರಧಾನಿ ಮೋದಿ ಶ್ಲಾಘನೆ

ಕೇಂದ್ರ ಸರ್ಕಾರ ಸಲ್ಲಿಸಿದ ಜಿಎಸ್ಟಿ ದರ ಕಡಿತ ಮತ್ತು ಸುಧಾರಣೆಗಳ ಪ್ರಸ್ತಾವನೆಗಳಿಗೆ ಸಾಮೂಹಿಕವಾಗಿ ಒಪ್ಪಿಗೆ ನೀಡಿದ್ದಕ್ಕಾಗಿ ಜಿಎಸ್ಟಿ ಮಂಡಳಿಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಇದು ಸಾಮಾನ್ಯ ಜನರು, ರೈತರು, ಎಂಎಸ್ಎಂಇಗಳು, ಮಧ್ಯಮ ವರ್ಗ, ಮಹಿಳೆಯರು ಮತ್ತು ಯುವಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಜಿಎಸ್ಟಿ ಮಂಡಳಿ ತೀಮಾ೯ನ ಕೈಗೊಳ್ಳುತ್ತಿದ್ದಂತೆ, ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶಾಲ ಶ್ರೇಣಿಯ ಸುಧಾರಣೆಗಳು ನಮ್ಮ ನಾಗರಿಕರ ಜೀವನವನ್ನು ಸುಧಾರಿಸುತ್ತದೆ ಮತ್ತು ಎಲ್ಲರಿಗೂ, ವಿಶೇಷವಾಗಿ ಸಣ್ಣ ವ್ಯಾಪಾರಿಗಳು ಮತ್ತು ವ್ಯವಹಾರಗಳಿಗೆ ವ್ಯಾಪಾರ ಮಾಡುವ ಸುಲಭತೆಯನ್ನು ಖಚಿತಪಡಿಸುತ್ತದೆ ಎಂದು ಹೇಳಿದ್ದಾರೆ.
ಸಾಮಾನ್ಯ ಜನರಿಗೆ ಸುಲಭ ಜೀವನ ಮತ್ತು ಆರ್ಥಿಕತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ವಿಶಾಲ ಆಧಾರಿತ ಜಿಎಸ್ಟಿ ದರ ತರ್ಕಬದ್ಧಗೊಳಿಸುವಿಕೆ ಮತ್ತು ಪ್ರಕ್ರಿಯೆ ಸುಧಾರಣೆಗಳಿಗಾಗಿ ಕೇಂದ್ರ ಸರ್ಕಾರವು ವಿವರವಾದ ಪ್ರಸ್ತಾವನೆಯನ್ನು ಸಿದ್ಧಪಡಿಸಿತ್ತು ಎಂದಿರುವ ಅವರು,
ಕೇಂದ್ರ ಸರ್ಕಾರ, ರೈತರು, ಸಣ್ಣ ಮತ್ತು ಮಧ್ಯಮ ವರ್ಗದವರು, ಮಹಿಳೆಯರು ಮತ್ತು ಯುವಕರಿಗೆ ಪ್ರಯೋಜನಕಾರಿಯಾಗುವ ಜಿಎಸ್ಟಿ ದರ ಕಡಿತ ಮತ್ತು ಸುಧಾರಣೆಗಳ ಕುರಿತು ಕೇಂದ್ರ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಗಳಿಗೆ ಕೇಂದ್ರ ಮತ್ತು ರಾಜ್ಯಗಳನ್ನು ಒಳಗೊಂಡ ಜಿಎಸ್ಟಿ ಮಂಡಳಿ ಸಾಮೂಹಿಕವಾಗಿ ಒಪ್ಪಿಗೆ ನೀಡಿರುವುದು ಸ್ವಾಗತಾಹ೯ ಎಂದು ಹೇಳಲು ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ.
ವರದಿ: ವಿಜಯೀಂದ್ರ ಹುನಗುಂದ್
ಪ್ರಧಾನ ಸಂಪಾದಕರು,
ನ್ಯೂ ಇಂಡಿಯಾ ಕನ್ನಡ.ಕಾಮ್



