BagalkotDistrictKarnataka

ಮಾಜಿ ಸಚಿವ ಹುಲ್ಲಪ್ಪ ಮೇಟಿ ನಿಧನ-ಆಪ್ತ ಶಿಷ್ಯನ ದರ್ಶನ ಪಡೆದ ಸಿದ್ದರಾಮಯ್ಯ ಗದ್ಗಗದಿತ-ಸರ್ಕಾರಿ ಗೌರವದೊಂದಿಗೆ ನಾಳೆ ಅಂತ್ಯಕ್ರಿಯೆ, ಸಿಎಂ ಭಾಗಿ

ಸಿಎಂ ಸಿದ್ದರಾಮಯ್ಯ ಸಹ ಎಂದಿಗೂ ತಮ್ಮನ್ನು ನಂಬಿದವರನ್ನು ಕೈ ಬಿಟ್ಟವರಲ್ಲ. ಮೇಟಿ ಅವರ ಮೇಲೆ ಗುರುತರ ಆರೋಪ ಬಂದಾಗ ಗದರಿ ಸಂಪುಟದಿಂದ ಅವರನ್ನು ಕೈ ಬಿಟ್ಟಿದ್ದರೂ ಸಹ ಮೇಟಿ ಅವರ ಮೇಲೆ ಅವರಿಗೆ ಅದೇ ಪ್ರೀತಿಯಿತ್ತು.

ಸಿಎಂ ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದ ರಾಜ್ಯದ ಹಿರಿಯ ರಾಜಕಾರಣಿ, ಬಾಗಲಕೋಟೆ ಶಾಸಕ ಹಾಗೂ ಮಾಜಿ ಸಚಿವ ಎಚ್.ವೈ. ಮೇಟಿ (79) ಮಂಗಳವಾರದಂದು ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ 12.30ಕ್ಕೆ ನಿಧನರಾಗಿದ್ದಾರೆ.

1946ರ ಅಕ್ಟೋಬರ್ 9ರಂದು ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರದಲ್ಲಿ ಜನಿಸಿದ ಹುಲ್ಲಪ್ಪ ಯಲ್ಲಪ್ಪ ಮೇಟಿ. 1989ರಲ್ಲಿ ಮೊದಲ ಬಾರಿಗೆ ಗುಳೇದಗುಡ್ಡ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದರು.

ಬಳಿಕ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. 1994ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಎರಡನೇ ಬಾರಿಗೆ ಗೆಲುವು ಸಾಧಿಸಿದ ಮೇಟಿ ಅವರಿಗೆ ದೇವೇಗೌಡರ ಸಂಪುಟದಲ್ಲಿ ಅರಣ್ಯ ಸಚಿವರಾಗಿ ಕಾರ್ಯನಿರ್ವಹಿಸಲು ಅವಕಾಶ ದೊರೆಯಿತು.

ನಂತರ 1996ರಲ್ಲಿ ನಡೆದ ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿಯೂ ಜಯಗಳಿಸಿದರು.

ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ ಮಾಜಿ ಸಚಿವ ಹುಲ್ಲಪ್ಪ ಮೇಟಿ

ದೇವೇಗೌಡರ ಜೊತೆ ಸಿದ್ದರಾಮಯ್ಯ ಮುನಿಸಿಕೊಂಡು ಜೆಡಿಎಸ್‌ ತೊರೆದಾಗ ಅವರೊಂದಿಗೆ ಹೆಚ್‌ ವೈ ಮೇಟಿ ಸಹ ಹಿಂಬಾಲಿಸಿದರು. ಸಿದ್ದರಾಮಯ್ಯನವರನ್ನು ಅತಿಯಾಗಿ ಗೌರವದಿಂದ ಕಾಣುತ್ತಿದ್ದ ಕೆಲವೇ ವ್ಯಕ್ತಿಗಳಲ್ಲಿ ಮೇಟಿ ಅವರು ಸಹ ಒಬ್ಬರು.

ತಮಗಿಂತ ಸಿದ್ದರಾಮಯ್ಯನವರು ಚಿಕ್ಕವರಿದ್ದರೂ ಸಹ ಅವರು ಗದರಿದಾಗ ಅವರ ಮೇಲೆ ಎಂದಿಗೂ ಮುನಿಸಿಕೊಳ್ಳಲೇ ಇಲ್ಲ. ಸಿದ್ದರಾಮಯ್ಯ ಅವರ ಸಂಪುಟದಿಂದ ಈ ಹಿಂದೆ ರಾಜೀನಾಮೆ ಕೊಡುವ ಸಂದರ್ಭದಲ್ಲಿಯು ಸಹ ಸಿದ್ದರಾಮಯ್ಯನವರು ಗದರಿದ್ದು ವೈರಲ್‌ ಸಹ ಆಗಿತ್ತು.

ಶಿಷ್ಯನ ಅಗಲಿಕೆಯಿಂದ ಗದ್ಗಗತಿತರಾದಂತೇ ಕಂಡು ಬಂದ ಸಿಎಂ ಸಿದ್ದರಾಮಯ್ಯ

ಆದರೆ ತಮ್ಮ ನಾಯಕನ ಬಗ್ಗೆ ಮೇಟಿ ಅವರು ಎಲ್ಲಿಯು ಅಸಮಾಧಾನ ತೋರ್ಪಡಿಸಿಕೊಂಡ ಉದಾಹರಣೆಯೇ ಇರಲಿಲ್ಲ.

ಎಂದಿಗೂ ಶಿಷ್ಯನನ್ನು ಬಿಟ್ಟುಕೊಡದ ಸಿದ್ದರಾಮ್ಯಯ್ಯ

ಆಪ್ತ ಶಿಷ್ಯನ ನಿಧನದ ಸುದ್ದಿ ತಿಳಿಯುತ್ತಿದ್ದಂತಲೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದೌಡಾಯಿಸಿದ ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಸಹ ಎಂದಿಗೂ ತಮ್ಮನ್ನು ನಂಬಿದವರನ್ನು ಕೈ ಬಿಟ್ಟವರಲ್ಲ. ಮೇಟಿ ಅವರ ಮೇಲೆ ಗುರುತರ ಆರೋಪ ಬಂದಾಗ ಗದರಿ ಸಂಪುಟದಿಂದ ಅವರನ್ನು ಕೈ ಬಿಟ್ಟಿದ್ದರೂ ಸಹ ಮೇಟಿ ಅವರ ಮೇಲೆ ಅವರಿಗೆ ಅದೇ ಪ್ರೀತಿಯಿತ್ತು.

ದಡ್ಡ ಅವನು…ಎಂದು ಸಲುಗೆಯಿಂದಲೇ ಕರೆಯುತ್ತಿದ್ದರು. ಬಳಿಕ 2018ರಲ್ಲಿ ತೀವ್ರ ವಿರೋಧವಿದ್ದರೂ ಸಹ ಮತ್ತೆ ತಮ್ಮ ಶಿಷ್ಯನಿಗೆ ಬಾಗಲಕೋಟೆಯಿಂದ ಕಾಂಗ್ರೆಸ್‌ ಟಿಕೆಟ್‌ ಕೊಡಿಸಿದರು.

ಆ ಚುನಾವಣೆಯಲ್ಲಿ ಸೋತಿದ್ದ ಮೇಟಿ ಅವರು ನಂತರ 2023 ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ಟಿಕೆಟ್‌ ಪಡೆದು ಬಾಗಲಕೋಟೆ ಕ್ಷೇತ್ರದಿಂದ ಗೆಲುವು ಸಾಧಿಸಿದರು.

ಶಿಷ್ಯನನ್ನು ಕೊನೆ ಬಾರಿ ಭೇಟಿ ಮಾಡಿದ್ದ ಸಿದ್ದರಾಮಯ್ಯ

ಅನಾರೋಗ್ಯದಿಂದ ತಮ್ಮ ಶಿಷ್ಯ ಮೇಟಿ ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊನ್ನೆಯಷ್ಟೇ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಬೇಗ ಗುಣಮುಖನಾಗು ಎಂದು ಗತ್ತಿನಲ್ಲಿ ಹೇಳಿ ಬಂದಿದ್ದರು ಸಿದ್ದರಾಮಯ್ಯ.

ಆದರೆ ವಿಧಿ, ಮೇಟಿ ಅವರನ್ನು ಬಾರದ ಲೋಕಕ್ಕೆ ಕರೆದುಕೊಂಡು ಹೋಗಿದೆ. ಮಾಜಿ ಸಚಿವ ಮೇಟಿ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೇ ಸಿಎಂ ಸಿದ್ದರಾಮಯ್ಯ , ಆಸ್ಪತ್ರೆಗೆ ತೆರಳಿ ಅಂತಿಮ ದರ್ಶನ ಪಡೆದರು.

ಮೇಟಿ ಅವರ ನಿಧನಕ್ಕೆ ಕಾಂಗ್ರೆಸ್ ನಾಯಕರು ಸೇರಿದಂತೆ ರಾಜ್ಯದ ಗಣ್ಯರು ಕಂಬನಿ ಮಿಡಿದಿದ್ದಾರೆ. ಎಚ್.ವೈ. ಮೇಟಿ ಅವರ ಸರಳ ವ್ಯಕ್ತಿತ್ವ, ನೇರ ನುಡಿ ಮತ್ತು ಅಭಿವೃದ್ಧಿ ಪರ ಚಿಂತನೆಗಳಿಂದಾಗಿ ಅವರು ಬಾಗಲಕೋಟೆ ಭಾಗದಲ್ಲಿ ಅಪಾರ ಜನಮನ್ನಣೆ ಗಳಿಸಿದ್ದರು.

ಅವರ ಅಗಲಿಕೆಯು ರಾಜ್ಯ ರಾಜಕೀಯಕ್ಕೆ ಮತ್ತು ವಿಶೇಷವಾಗಿ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ಇಂದು ಬೆಳಗ್ಗೆ ನಿಧನರಾಗಿರುವ ಮಾಜಿ ಸಚಿವ ಹುಲ್ಲಪ್ಪ ಮೇಟಿ ಅವರ ಅಂತ್ಯಕ್ರಿಯೆ ನಾಳೆ ಅವರ ಜನ್ಮ ಸ್ಥಳ ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮಧ್ಯಾಹ 2 ಗಂಟೆಗೆ ನಡೆಯಲಿದೆ.

ಸ್ವತಃ ಸಿಎಂ ಸಿದ್ದರಾಮಯ್ಯ ತಮ್ಮ ಶಿಷ್ಯನ ಅಂತ್ಯಕ್ರಿಯೆಯಲ್ಲಿ ಖುದ್ದು ಭಾಗವಹಿಸಲಿದ್ದಾರೆ. ಸಿದ್ದರಾಮಯ್ಯನವರ ಜೊತೆ ಸಂಪುಟದ ಅನೇಕ ಸಚಿವರು, ಶಾಸಕರು ಹಾಗೂ ಮೇಟಿ ಅವರ ಆಪ್ತರು ಪಾಲ್ಗೊಳ್ಳಲಿದ್ದಾರೆ.

Vijayeendra Hungund

ನ್ಯೂ ಇಂಡಿಯಾ ಕನ್ನಡ" ಇದು ಸತ್ಯದ ಜಯ..ಎಂಬ ಧ್ಯೇಯದೊಂದಿಗೆ ಆರಂಭಿಸಲಾಗಿರುವ ಕನ್ನಡ ನ್ಯೂಸ್‌ ವೆಬ್‌ಸೈಟ್‌. ಸಂಜೆವಾಣಿ, ಹಾಯ್ ಬೆಂಗಳೂರು, ಲಂಕೇಶ್ ಪತ್ರಿಕೆ, ಟಿವಿ೯, ಕಸ್ತೂರಿ ನ್ಯೂಸ್, ಸುವರ್ಣ ನ್ಯೂಸ್ , ಜನಶ್ರೀ ನ್ಯೂಸ್ ಸಂಸ್ಥೆಗಳಲ್ಲಿ ಹಾಗೂ ದೂರದರ್ಶನ ಚಂದನ ಕನ್ನಡ ವಾಹಿನಿಯಲ್ಲಿ ಜಿಲ್ಲಾ ವರದಿಗಾರನಾಗಿ, ವಿಭಾಗೀಯ ಮುಖ್ಯಸ್ಥನಾಗಿ , ಇನ್ ಪುಟ್ ಹಾಗೂ ಔಟ್ ಪುಟ್ ಮುಖ್ಯಸ್ಥನಾಗಿ , ಮುಖ್ಯ ಉಪ ಸಂಪಾದಕನಾಗಿ ಹಾಗೂ ಸಹಾಯಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದೇನೆ. ನಿಷ್ಪಕ್ಷಪಾತ, ನಿರ್ಭಿಡೆಯಿಂದ ಸುದ್ದಿ ವಿಶ್ಲೇಷಣೆ ಮಾಡುವ ಉದ್ದೇಶದೊಂದಿಗೆ ಆರಂಭಿಸಿರುವ ಈ ನ್ಯೂಸ್‌ ಪೋಟ೯ಲಗೆ ತಮ್ಮ ಬೆಂಬಲವಿರಲಿ.. ವಿಜಯೀಂದ್ರ ಪಿ ಹುನಗುಂದ್‌ ಪ್ರಧಾನ ಸಂಪಾದಕರು, ನ್ಯೂ ಇಂಡಿಯಾ ಕನ್ನಡ, Email- editor@newindiakannada.com

Leave a Reply

Your email address will not be published. Required fields are marked *

Back to top button