ಅಟ್ರಾಸಿಟಿ ಕೇಸ್ ವಿಚಾರ-ಕರ್ನಾಟಕ ಸರ್ಕಾರ ಮಹತ್ವದ ತೀರ್ಮಾನ
ಆರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಲು ಸಿಎಂ ಸೂಚನೆ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ 60 ದಿನಗಳ ಒಳಗಾಗಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸೂಚನೆ ನೀಡಲಾಗಿದ್ದು ಅಟ್ರಾಸಿಟಿ ಕೇಸ್ ವಿಚಾರದಲ್ಲಿ ಮಂಗಳವಾರದಂದು ಕರ್ನಾಟಕ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರಾಜ್ಯ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಕಳೆದ ಆರು ತಿಂಗಳಲ್ಲಿ ಶೇ.84 ರಷ್ಟು ಮಾತ್ರ ಪ್ರಕರಣಗಳಲ್ಲಿ ನಿಗದಿತ ಅವಧಿಯ ಒಳಗಾಗಿ ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ಶೇ.100 ಪ್ರಕರಣಗಳಲ್ಲಿ 60 ದಿನಗಳ ಒಳಗಾಗಿ ಕಡ್ಡಾಯವಾಗಿ ಆರೋಪ ಪಟ್ಟಿ ಸಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ತೀಮಾ೯ನಿಸಲಾಗಿದೆ. ಪೊಲೀಸರು ಇದರಲ್ಲಿ ಯಾವುದೇ ನೆಪ ಹೇಳಬಾರದು ಎಂದಿರುವ ಸಿಎಂ, ನ್ಯಾಯಾಲಯದಲ್ಲಿ 56 ಪ್ರಕರಣಗಳಲ್ಲಿ ತಡೆಯಾಜ್ಞೆ ಇದ್ದು, ಇದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ರಾಜ್ಯದಲ್ಲಿ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗಾಗಿ 11 ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದ್ದು, ಪ್ರಕರಣಗಳ ಸರಿಯಾದ ವಿಚಾರಣೆ ನಡೆಸಿ, ತ್ವರಿತವಾಗಿ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಬೇಕಿದೆ. ಸದ್ಯ ಶಿಕ್ಷೆಯ ಪ್ರಮಾಣ ಶೇ.10ರಷ್ಟಿದ್ದು, ಇದು ಹೆಚ್ಚಾಗಬೇಕಿದೆ ಎಂದು ಅಭಿಪ್ರಾಯಪಟ್ಟರು. ಆರೋಪಿಗಳ ಜೊತೆ ಪೊಲೀಸರು ಶಾಮೀಲಾಗಿರುವುದು ಕಂಡು ಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಎಚ್ಚರಿಕೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ದೌರ್ಜ್ಯನ್ಯ ಪ್ರಕರಣಗಳಲ್ಲಿ ಅಂಗವೈಕಲ್ಯತೆ ಉಂಟಾದಲ್ಲಿ ನೀಡಲಾಗುವ ವೈದ್ಯಕೀಯ ಪರಿಹಾರದ ಮೊತ್ತವನ್ನು ಹೆಚ್ಚಿಸುವ ಕುರಿತು ಪರಿಶೀಲನೆ ಮಾಡಲಾಗುವುದು ಎಂದು ಸಭೆಯಲ್ಲಿ ಹೇಳಿದ ಸಿದ್ದರಾಮಯ್ಯ , ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಎಷ್ಟು ದೌಜ೯ನ್ಯ ಪ್ರಕರಣಗಳು;
- 2023ರಿಂದ ಕಳೆದ ಮೂರು ವರ್ಷಗಳಲ್ಲಿ ಒಟ್ಟು 6,635 ಪ್ರಕರಣಗಳು ದಾಖಲು
- 4912 ಪ್ರಕರಣಗಳಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಕೆ
- 60 ದಿನಗಳ ಒಳಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದು 4,149 ಪ್ರಕರಣಗಳಲ್ಲಿ ಮಾತ್ರ
- ಶಿಕ್ಷೆಯಾದ ಪ್ರಕರಣಗಳು ಕೇವಲ 36. ತನಿಖಾ ಹಂತದಲ್ಲಿ ಸುಮಾರು 679 ಪ್ರಕರಣ
- ಪ್ರಸ್ತುತ ಸುಳ್ಳು ಜಾತಿ ಪ್ರಮಾಣ ಪತ್ರ ಸಾಬೀತಾಗಿರುವ 170 ಪ್ರಕರಣ


