ಬೆಳೆವಿಮೆ ನೀಡುವಲ್ಲಿ ಅಧಿಕಾರಿಗಳ ನಿರಾಸಕ್ತಿ|ಅವೈಜ್ಞಾನಿಕ ದತ್ತಾಂಶ ಸಂಗ್ರಹಣೆ|ರೈತರ ಶೋಷಣೆ ಸೂಕ್ತವಲ್ಲ-ಸಂಸದ ಬಿ ವೈ ರಾಘವೇಂದ್ರ
ಶಾಂತ ಸ್ವಭಾವದ ಸಂಸದ ಬಿ ವೈ ರಾಘವೇಂದ್ರ ಇಂದು ಗರಂ ಆಗಿದ್ದರು. ರೈತರಿಗೆ ಆಗುತ್ತಿರುವ ಅನ್ಯಾಯ, ಬೆಳೆವಿಮೆ ಪರಿಹಾರದಲ್ಲಿ ವಿಳಂಬ, ಅವೈಜ್ಞಾನಿಕ ದತ್ತಾಂಶ ಸಂಗ್ರಹಣೆ, ರೈತರಿಗೆ ಆಗುತ್ತಿರುವ ಶೋಷಣೆ ಅಧಿಕಾರಿಗಳ ವಿರುದ್ದ ಅವರನ್ನು ಸಿಟ್ಟಿಗೇಳುವಂತೆ ಮಾಡಿತ್ತು.

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ ರೈತರು ಭರಿಸಿರುವ ವಿಮಾ ಹಣಕ್ಕಿಂತಲೂ ಕಡಿಮೆ ಪರಿಹಾರ ಹಣವನ್ನು ನೀಡುವ ಮೂಲಕ ಅನ್ಯಾಯ ಮಾಡಲಾಗಿದೆ ಎಂದು ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳೆ ಹಾನಿಯಾದಾಗ ರೈತರನ್ನು ಸಂಕಷ್ಟದಿಂದ ದೂರಮಾಡುವ ಉದ್ದೇಶದಿಂದ, ಜಾರಿಗೆ ತರಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇದರ ಅನುಷ್ಠಾನದಲ್ಲಿ ವ್ಯತ್ಯಯವಾಗಿದ್ದಕ್ಕೆ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಶನಿವಾರದಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಭಾಗವಹಿಸಿದ್ದ ಅವರು, ಸಮಸ್ಯೆಯ ಇತ್ಯರ್ಥಕ್ಕೆ ಅಧಿಕಾರಿಗಳು ಗಮನಹರಿಸಿಬೇಕು ಎಂದು ಹೇಳಿದ್ದಾರೆ.

ಮುಂದಿನ ವರ್ಷಕ್ಕೆ ಈ ನ್ಯೂನತೆಗಳು ಮುಂದುವರೆಯದಂತೆ ಈ ವಿಷಯವನ್ನು ಸೂಕ್ಷ್ಮವಾಗಿ ಗುರುತಿಸುವದಲ್ಲದೇ, ಆಗಿರುವ ನ್ಯೂನತೆಯನ್ನು ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಸಂಸದ ಬಿ ವೈ ರಾಘವೇಂದ್ರ ಅಧಿಕಾರಿಗಳಿಗೆ ಇದೇ ವೇಳೆ ತಾಕೀತು ಮಾಡಿದರು.
280ಮಳೆ ಮಾಪನ ಯಂತ್ರಗಳಲ್ಲಿ ಶೇ.75ರಷ್ಟು ಕಾರ್ಯನಿರ್ವಹಿಸುತ್ತಿಲ್ಲ
ದತ್ತಾಂಶ ಸಂಗ್ರಹಣೆಯಲ್ಲಿ ಅಧಿಕಾರಿಗಳ ಎಡವಟ್ಟು ಬಯಲು
ಸಂಸದ ಬಿ ವೈ ರಾಘವೇಂದ್ರ ಗರಂ!
ಶಿವಮೊಗ್ಗ ಜಿಲ್ಲೆಯಲ್ಲಿರುವ 280ಮಳೆ ಮಾಪನ ಯಂತ್ರಗಳಲ್ಲಿ ಶೇ.75ರಷ್ಟು ಯಂತ್ರಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಅಂದಾಜಿಸಲಾಗಿದೆ.
ಹಾಗಾದರೇ ಮಳೆಮಾಪನದ ದತ್ತಾಂಶವನ್ನು ಹೇಗೆ ಸಂಗ್ರಹಿಸುತ್ತಿದ್ದೀರಿ? ಎಂದು ಅಧಿಕಾರಿಗಳನ್ನು ಸಂಸದ ಬಿ ವೈ ರಾಘವೇಂದ್ರ ಪ್ರಶ್ನಿಸಿದರು.
ಇರುವ ಸ್ಥಳದ ಕುರಿತು ಅಂದಾಜು ಮಾಡದೇ ಮಳೆಮಾಪನ ದುರಸ್ಥಿ ಇದೆ ಎಂದು ನೆರೆಯ ಗ್ರಾಮ ಪಂಚಾಯಿತಿಗಳಲ್ಲಿ ಬಿದ್ದಿರುವ ಮಳೆಯ ಅಂದಾಜನ್ನು ಆಧರಿಸಿ, ಮಳೆಯ ಪ್ರಮಾಣವನ್ನು ನಿರ್ಧರಿಸುವುದು ಸರಿಯಾದ ಕ್ರಮವಲ್ಲ ಇದು ಅವೈಜ್ಞಾನಿಕ ಎಂದು ಸಂಸದ ಬಿ ವೈ ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ನೆರೆಯ ಗ್ರಾಮ ಪಂಚಾಯಿತಿಗಳಲ್ಲಿನ ಮಳೆ ಪ್ರಮಾಣವನ್ನು ಗುರುತಿಸುವುದಾದರೆ ರಸ್ತೆಯ ದೂರವನ್ನಾಧರಿಸಿ ಅಥವಾ ವೈಮಾನಿಕ ದೂರವನ್ನು ಅಂದಾಜಿಸಿ ಮಳೆಯ ಮಾಪನ ಪ್ರಮಾಣ ಗುರುತಿಸುವಿಕೆ ಕುರಿತು ಅಧಿಕಾರಿಗಳಲ್ಲಿ ನಿಖರವಾದ ಮಾಹಿತಿ ಇಲ್ಲದಿರುವುದಕ್ಕೆ ಸಂಸದ ಬಿ ವೈ ರಾಘವೇಂದ್ರ ಬೇಸರ ವ್ತಕ್ತಪಡಿಸಿದರು.
ಮಳೆ ಪ್ರಮಾಣ, ದತ್ತಾಂಶ ಸಂಗ್ರಹಣೆಯಲ್ಲಿನ ನ್ಯೂನತೆ|
ಸಂತ್ರಸ್ಥ ರೈತರಿಗೆ ಶೋಷಣೆ ಮಾಡುತ್ತಿರುವುದು ಸೂಕ್ತವಲ್ಲ|
ಸಂಸದ ಬಿ ವೈ ರಾಘವೇಂದ್ರ ಆಕ್ರೋಶ!
ಮಲೆನಾಡು, ಅರೆಮಲೆನಾಡು ಮತ್ತು ಬಯಲುಸೀಮೆ ಪ್ರದೇಶಗಳಲ್ಲಿ ಮಳೆ ಪ್ರಮಾಣ ಮತ್ತು ದತ್ತಾಂಶ ಸಂಗ್ರಹಣೆಯಲ್ಲಿನ ನ್ಯೂನತೆಗಳ ಪರಿಣಾಮ ಹಾಗೂ ಅವೈಜ್ಞಾನಿಕವಾದ ಕಾರಣಗಳಿಂದಾಗಿ ಸಂತ್ರಸ್ಥ ರೈತರಿಗೆ ಶೋಷಣೆ ಮಾಡುತ್ತಿರುವುದು ಸೂಕ್ತವಲ್ಲ ಎಂದು ಅಧಿಕಾರಿಗಳ ವಿರುದ್ದ ಸಂಸದ ಬಿ ವೈ ರಾಘವೇಂದ್ರ ಆಕ್ರೋಶ ಹೊರಹಾಕಿದರು.
ಸಂಬಂಧಿಸಿದ ಇಲಾಖೆಗಳ ಹಾಗೂ ವಿಮಾ ಕಂಪನಿಗಳ ಅಧಿಕಾರಿಗಳು ಕೂಡಲೇ ಗಮನಹರಿಸಬೇಕು ಎಂದು ಹೇಳಿದರು.

ಮುಂದಿನ ಒಂದು ವಾರದೊಳಗಾಗಿ ದಾಖಲೆಗಳನ್ನು ಸರಿಪಡಿಸಿಕೊಂಡು ಸಂತ್ರಸ್ಥ ರೈತರಿಗೆ ನ್ಯಾಯೋಚಿತವಾದ ಪರಿಹಾರ ಮೊತ್ತವನ್ನು ಪಾವತಿಸಲು ಕ್ರಮ ಕೈಗೊಳ್ಳುವಂತೆ ಸಂಸದ ಬಿ ವೈ ರಾಘವೇಂದ್ರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಹಾಗೂ ವಿಮಾ ಕಂಪನಿಗಳ ಮುಖ್ಯಸ್ಥರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮಾತನಾಡಿ,
ಬೆಳೆವಿಮೆ ಪರಿಹಾರ ಮೊತ್ತವನ್ನು ಸಂಗ್ರಹಿಸಲು ಪಂಚಾಯಿತಿವಾರು ಮಳೆವರದಿಯ ದತ್ತಾಂಶವನ್ನು ಪರಿಗಣಿಸಲಾಗುವುದು ಎಂದು ಹೇಳಿದರು.
ನೆರೆಯ ಜಿಲ್ಲೆಗಳಲ್ಲಿಯೂ ಇದೇ ರೀತಿಯ ವ್ಯತ್ಯಾಸಗಳಾಗಿರುವುದನ್ನು ಗಮನಿಸಲಾಗಿದೆ.
ಅಂತಹ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿ ಸರ್ಕಾರಕ್ಕೆ ವಾಸ್ತವ ವಿಷಯದ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಸರ್ಕಾರಕ್ಕೆ ವರದಿ ಸಲ್ಲಿಸಲು ತೀರ್ಮಾನ ಕೈಗೊಂಡ ಸಭೆ
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರೈತರಿಗೆ ಅನ್ಯಾಯವಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ, ತಪ್ಪಾಗಿರುವುದನ್ನು ಸರಿಪಡಿಸಿ ಒಂದು ವಾರದೊಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲು, ಹಾಗೂ ಬೆಳೆ ವಿಮೆಯನ್ನು ಮರು ಜಮೆ ಮಾಡಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎನ್.ಹೇಮಂತ್, ಮಾಜಿ ಶಾಸಕ ಕೆ.ಬಿ.ಅಶೋಕನಾಯ್ಕ್, ಕೆ.ಎಸ್.ಗುರುಮೂರ್ತಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ.ಸಂಜಯ್ಎ.ಬಿ., ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕಿರಣ್‌ಕುಮಾರ್, ವಿಮಾ ಕಂಪನಿಯ ಮುಖ್ಯಸ್ಥ ಅಜಿತ್ ಹಾಗು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.








