ʼವಂತಾರಾʼ ಪ್ರಾಣಿಗಳ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರದ ವ್ಯವಹಾರಗಳ ತನಿಖೆ-ಸುಪ್ರೀಂ ಕೋರ್ಟ್ ಆದೇಶ
ಮುಕೇಶ್ ಅಂಬಾನಿ ಒಡೆತನದ -ʼವಂತಾರಾʼ Mukesh ambani-Vantara
ಮುಕೇಶ್ ಅಂಬಾನಿ ಒಡೆತನದ ಗುಜರಾತ್ನ ಜಾಮ್ನಗರದಲ್ಲಿರುವ ʼವಂತಾರಾʼ ಪ್ರಾಣಿಗಳ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರದ ವ್ಯವಹಾರಗಳ ಕುರಿತ ತನಿಖೆಗೆ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಚೆಲಮೇಶ್ವರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ಎಸ್ ಐ ಟಿ ರಚಿಸಿ ಸುಪ್ರೀಂಕೋರ್ಟ್ಆದೇಶ ಹೊರಡಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ರಿಲಯನ್ಸ್ ಫೌಂಡಷನ್ನಿಂದ ಆರಂಭಿಸಲಾಗಿರುವ ‘ವಂತಾರ’ ಕೇಂದ್ರದಲ್ಲಿ ಪ್ರಾಣಿಗಳ ಕಳ್ಳಸಾಗಣೆ, ವನ್ಯಜೀವಿಗಳ ಅಕ್ರಮ ಸಾಕಣೆ, ವಿಶೇಷವಾಗಿ ಆನೆಗಳನ್ನು ಕಾನೂನುಬಾಹಿರವಾಗಿ ಸ್ವಾಧೀನಪಡಿಸಿಕೊಂಡ ಗಂಭೀರ ಆರೋಪಗಳು ಕೇಳಿಬಂದ ಹಿನ್ನಲೆಯಲ್ಲಿ ಸತ್ಯಾಸತ್ಯತೆ ಅರಿಯಲು ಸುಪ್ರೀಂ ಕೋರ್ಟ್ ವಿಶೇಷ ತನಿಖಾ ತಂಡ ರಚಿಸಿ ಆದೇಶಿಸಿದೆ.
ಎನ್ಜಿಒಗಳು ಮತ್ತು ವನ್ಯಜೀವಿ ಸಂಸ್ಥೆಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಪಂಕಜ್ ಮಿಥಲ್ ಮತ್ತು ಪಿ.ಬಿ.ವರಾಲೆ ಅವರಿದ್ದ ಪೀಠ ಉತ್ತರಾಖಂಡ ಮತ್ತು ತೆಲಂಗಾಣ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್, ಮುಂಬೈನ ಮಾಜಿ ಪೊಲೀಸ್ ಆಯುಕ್ತರಾದ ಹೇಮಂತ್ ನಾಗ್ರಾಲೆ, ಕಸ್ಟಮ್ಸ್ ಹೆಚ್ಚುವರಿ ಆಯುಕ್ತರಾದ ಅನೀಶ್ ಗುಪ್ತಾ ಅವರನ್ನೊಳಗೊಂಡ ಎಸ್ಐಟಿಗೆ ಸುಪ್ರೀಂ ಕೋರ್ಟ್ ನೇಮಿಸಿದೆ.
“ ವಿಶೇಷವಾಗಿ ಭಾರತ ಮತ್ತು ವಿದೇಶಗಳಿಂದ ಪ್ರಾಣಿಗಳನ್ನು,ಆನೆಗಳನ್ನು ತರಿಸುವ ವೇಳೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಇತರ ಸಂಬಂಧಿತ ಕಾನೂನುಗಳ ನಿಬಂಧನೆಗಳ ಅನುಸರಣೆ ಬಗ್ಗೆ ತನಿಖೆ ನಡೆಸಬೇಕು ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಭೇದಗಳ ಸಂರಕ್ಷಣೆ ಕಾಯ್ದೆ, ಜೀವಂತ ಪ್ರಾಣಿಗಳ ಆಮದು ಮತ್ತು ರಫ್ತಿಗೆ ಸಂಬಂಧಿಸಿದ ಇತರ ಶಾಸನಬದ್ಧ ನಿಯಮಗಳ ಕುರಿತು ಪರಶೀಲಿಸಿ ಸೆಪ್ಟೆಂಬರ್ 12 ರೊಳಗೆ ವರದಿಯನ್ನು ಸಲ್ಲಿಸಬೇಕು ಎಂದು ನ್ಯಾಯಾಲಯ ಎಸ್ ಐ ಟಿಗೆ ಸೂಚಿಸಿದೆ.


