Shivmogga:ಮಹಿಳೆಯರ ರಕ್ಷಣೆಗೆ “ಅಕ್ಕ”ಪಡೆ ಸಜ್ಜು|ದೌರ್ಜನ್ಯವೆಸಗುವವರ ವಿರುದ್ದ ಪರಿಣಾಮಕಾರಿ ಕ್ರಮ|ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಲು ಎಸ್.ಪಿ ಬಿ.ನಿಖಿಲ್ ಕರೆ
ವಿಶೇಷವಾಗಿ ಶಾಲಾ ಕಾಲೇಜು ಹೆಣ್ಣುಮಕ್ಕಳು, ಮಹಿಳೆಯರ ರಕ್ಷಣೆಗಾಗಿ ಹಾಗೂ ಅವರಿಗೆ ಮಾನಸಿಕ ಧೈರ್ಯ ನೀಡಲು ಪಡೆ ರಚನೆಯಾಗಿದೆ ಎಂದು ಎಸ್.ಪಿ ಬಿ ನಿಖಿಲ್ ತಿಳಿಸಿದರು.

ಶಿವಮೊಗ್ಗ : ಮಹಿಳೆಯರಿಗೆ ಕಿರುಕುಳ ಹಾಗೂ ಅವರೊಂದಿಗೆ ಅಸಭ್ಯವಾಗಿ ವರ್ತಿಸುವ ಮತ್ತು ದೌರ್ಜನ್ಯವೆಸಗುವವರ ವಿರುದ್ದ ಪರಿಣಾಮಕಾರಿ ಕ್ರಮ ಕೈಗೊಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರ “ಅಕ್ಕ” ಪಡೆ ರಚಿಸಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಜಾರಿಗೆ ಬಂದಿರುವ ಅಕ್ಕ ಪಡೆಗೆ, ಶಿವಮೊಗ್ಗ ಜಿಲ್ಲೆಯಲ್ಲಿಯು ಬುಧವಾರದಂದು ಅಧಿಕೃತವಾಗಿ ಚಾಲನೆ ನೀಡಲಾಯಿತು.

ಜಿಲ್ಲಾ ಪೊಲೀಸ್ ಕಚೇರಿಯ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್.ಪಿ ಬಿ.ನಿಖಿಲ್ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್ ಜಂಟಿಯಾಗಿ ಅಕ್ಕ ಪಡೆಯ ವಾಹನಕ್ಕೆ ಹಸಿರು ನಿಶಾನೆ ತೋರಿದರು.
ಅಪಾಯದಲ್ಲಿರುವ ಮತ್ತು ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವುದು ಅಕ್ಕ ಪಡೆಯ ಪ್ರಾಥಮಿಕ ಉದ್ದೇಶವಾಗಿದೆ ಎಂದು ಹೇಳಿದರು.

ವಿಶೇಷವಾಗಿ ಶಾಲಾ ಕಾಲೇಜು ಹೆಣ್ಣುಮಕ್ಕಳು, ಮಹಿಳೆಯರ ರಕ್ಷಣೆಗಾಗಿ ಹಾಗೂ ಅವರಿಗೆ ಮಾನಸಿಕ ಧೈರ್ಯ ನೀಡಲು ಪಡೆ ರಚನೆಯಾಗಿದೆ ಎಂದು ಎಸ್.ಪಿ ಬಿ ನಿಖಿಲ್ ತಿಳಿಸಿದರು.
ಪ್ರತಿ ದಿನ ಎರಡು ಪಾಳಿಗಳಲ್ಲಿ ಅಕ್ಕ ಪಡೆ ಕೆಲಸ ಮಾಡಲಿದ್ದು, ಈ ಪಡೆ ಕಾರ್ಯನಿರ್ವಹಣೆಗಾಗಿ ಹೊಸ ವಾಹನವನ್ನು ನೀಡಲಾಗಿದೆ.
ಈ ವಾಹನವು ಶಾಲಾ-ಕಾಲೇಜು, ಜನನಬಿಡ ಹಾಗೂ ಸೂಕ್ಕ್ಮಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲಿದೆ. ಸಹಾಯವಾಣಿ ಸಂಖ್ಯೆಗಳಾದ 112 ಮತ್ತು 1098 ಕುರಿತು ಹಾಗೂ ಕಾನೂನುಗಳ ಬಗ್ಗೆಯೂ ಜಾಗೃತಿ ಮೂಡಿಸಲಿದೆ ಎಂದು ಎಸ್.ಪಿ ಬಿ ನಿಖಿಲ್ ಹೇಳಿದರು.

ಮಹಿಳಾ ಗೃಹರಕ್ಷಕಿಯರು ಹಾಗೂ ಮಹಿಳಾ ಅಧಿಕಾರಿಗಳನ್ನೇ ಈ ಪಡೆಗೆ ನೇಮಿಸಲಾಗಿದ್ದು, ಮಹಿಳೆಯರು, ನಿರ್ಭೀತಿಯಿಂದ ಕರೆ ಮಾಡಿ, ಅಕ್ಕ ಪಡೆಯ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಎಸ್.ಪಿ ಬಿ ನಿಖಿಲ್ ಕರೆ ನೀಡಿದರು.
ಎಎಸ್‌ಪಿ ಕಾರಿಯಪ್ಪ, ಕೆಎಸ್‌ಆರ್ ಪಿ ಕಮಾಂಡೆಂಟ್ ಯುವಕುಮಾರ್, ಗೃಹರಕ್ಷಕ ಕಮಾಂಡೆಂಟ್ ಚೇತನ್, ಡಿವೈಎಸ್‌ಪಿ ಬಾಬು ಅಂಜಿನಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಶಶಿರೇಖಾ, ಡಿಸಿಪಿಓ ಮಂಜುನಾಥ್, ಡಾ.ಸಂತೋಷ್ ಕುಮಾರ್ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







