ಗೃಹಬಳಕೆ ಸಿಲಿಂಡರ್ ಪೂರೈಕೆ-ಭಯಬೇಡ| ಬುಕ್ ಮಾಡಿದ ಎರಡೇ ದಿನಕ್ಕೆ ಬರಲಿದೆ ಸಿಲಿಂಡರ್|ರಾಜ್ಯದಲ್ಲಿ ಹೊಟೇಲ್ಗಳು ಬಂದ್ ಆಗಲ್ಲ|
ಕೊಲ್ಲಿ ಯುದ್ದದ ಪರಿಣಾಮ ದೇಶದಲ್ಲಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಕೊರತೆಯಾಗಿದೆ ಎಂಬ ಆರೋಪಗಳು ಊಹಾಪೋಹಗಳ ವರದಿಗಳ ಬಗ್ಗೆ ಕೇಂದ್ರ ಸರ್ಕಾರವು ಕೊನೆಗೂ ಸ್ಪಷ್ಟೀಕರಣ ನೀಡಿದೆ.

ಶಿವಮೊಗ್ಗ: ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಭಾರೀ ಕೊರತೆ ಎಂಬ ಸುದ್ದಿ ಹಿಂದಿನ ಸತ್ಯ ಮಿಥ್ಯ ಗಳೆಷ್ಟು?. ಶಿವಮೊಗ್ಗದಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಸ್ಥಗಿತದ ನಂತರ ಹೋಟೆಲ್ಗಳ ಪರಿಸ್ಥಿತಿ, ಇನ್ನು ಗೃಹಬಳಕೆ ಸಿಲಿಂಡರ್ ಪೂರೈಕೆ ಬಗ್ಗೆ ಜಿಲ್ಲಾಧಿಕಾರಿ ಏನಂತಾರೆ?
ಬೆಂಗಳೂರಿನಲ್ಲಿ ರಾಜ್ಯ ಹೋಟೆಲ್ ಮಾಲೀಕರ ಸಂಘ ದಿಢೀರ್ ಸುದ್ದಿಗೋಷ್ಠಿ ಮಾಡಿ ಹೋಟೆಲ್ ಬಂದ್ ಮಾಡುವದಿಲ್ಲ ಎಂದು ಹೇಳಿದ್ದು ಸೇರಿದಂತೆ ಗ್ಯಾಸ್ ಎಮರ್ಜೆನ್ಸಿಯ ಕುರಿತ ಗುರುವಾರದ ಪ್ರಮುಖ ಬೆಳವಣಿಗೆ ಬಗ್ಗೆ ಬೆಳಕು ಚೆಲ್ಲುವ ವಿಶೇಷ ವರದಿ ಇಲ್ಲಿದೆ.
ಎಲ್ಪಿಜಿ ಗೊಂದಲಗಳಿಗೆ ತೆರೆ ಎಳೆದ ಕೇಂದ್ರ ಸಚಿವ|

ಕೊಲ್ಲಿ ಯುದ್ದದ ಪರಿಣಾಮ ದೇಶದಲ್ಲಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಕೊರತೆಯಾಗಿದೆ ಎಂಬ ಆರೋಪಗಳು ಊಹಾಪೋಹಗಳ ವರದಿಗಳ ಬಗ್ಗೆ ಕೊನೆಗೂ ಕೇಂದ್ರ ಸರ್ಕಾರವು ಸ್ಪಷ್ಟೀಕರಣ ನೀಡಿದೆ.
ಗೃಹಬಳಕೆ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟಪಡಿಸಿದೆ.
ದೇಶೀಯ ಎಲ್ಪಿಜಿ ಪೂರೈಕೆ ಪೂರ್ಣ ಸಂರಕ್ಷಿತವಾಗಿದೆ. ಜಾಗತಿಕ ರಾಜಕೀಯ ಬಿಕ್ಕಟ್ಟು, ಇಂಧನ ಮಾರುಕಟ್ಟೆಗಳ ವ್ಯತ್ಯಯಗಳ ನಡುವೆಯೂ ಎಲ್ಪಿಜಿ ಪೂರೈಕೆ ಸಮತೋಲನ ಕಾಯ್ದುಕೊಂಡಿದ್ದೇವೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಹೇಳಿದ್ದಾರೆ.
ವಿದೇಶದಿಂದ ಕಚ್ಚಾತೈಲ ಆಮದಾಗುತ್ತಿದೆ. ಹಾರ್ಮುಜ್ ಜಲಸಂಧಿ ಹೊರತುಪಡಿಸಿ ಬೇರೆ ಕಡೆಯಿಂದ ಅಮದು ಮಾಡಿಕೊಳ್ಳಲಾಗುತ್ತಿದೆ ಎಂದರು. ಇಂದಿನಿಂದಲೇ ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಮಾಡುತ್ತೇವೆ ಎಂದು ಹೇಳಿದರು
ಗ್ಯಾಸ್ ಕೊರತೆ ಬಿಜೆಪಿ ಮುಖಂಡರಿಂದ ಡಿಸಿ ಭೇಟಿ|

ಈ ಮಧ್ಯೆ ಶಿವಮೊಗ್ಗ ಜಿಲ್ಲೆಯಲ್ಲಿ ಗೃಹಬಳಕೆ ಸಿಲಿಂಡರ್ ಗ್ರಾಹಕರಿಗೆ ಸಮರ್ಪಕವಾಗಿ ಪೂರೈಕೆಯಾಗುತ್ತಿಯಾ? ಕೊರತೆ ಇದೆಯಾ ಎಂದು ಮಾಹಿತಿ ಪಡೆಯಲು ಜಿಲ್ಲಾ ಬಿಜೆಪಿ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರನ್ನು ಗುರುವಾರದಂದು ಭೇಟಿ ಮಾಡಿದ್ದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಪ್ರಭುಲಿಂಗ್ ಕವಳಿಕಟ್ಟಿ, ಜಿಲ್ಲೆಯಲ್ಲಿ ಅಡುಗೆ ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆಯಾಗಿಲ್ಲ ಎಂದು ತಿಳಿಸಿದ್ದಾರೆ. ಇನ್ನೂ ರೋಗಿಗಳಿಗೆ ಅನಾನುಕೂಲವಾಗದಂತೆ ಆಸ್ಪತ್ರೆಗಳ ಸಮೀಪವಿರುವ ಹೋಟೆಲ್ಗಳಿಗೆ ವಾಣಿಜ್ಯ ಸಿಲಿಂಡರ್ ಲಭ್ಯತೆಗೆ ವಿಶೇಷ ಕ್ರಮವಹಿಸಲಾಗಿದೆ ಎಂದು ಹೇಳಲಾಗಿದೆ.
ಇನ್ನೂ ವಾಣಿಜ್ಯ ಸಿಲಿಂಡರ್ ಲಭ್ಯತೆ ಕೊರತೆ ಹಿನ್ನಲೆಯಲ್ಲಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘ ಸಭೆ ನಡೆಸಿ ಹೊಟೇಲ್ಗಳನ್ನು ಬಂದ್ ಮಾಡಬೇಕಾದ ಆತಂಕ ವ್ಯಕ್ತಪಡಿಸಿತ್ತು.
ಶಿವಮೊಗ್ಗದಲ್ಲಿ 2 ಸಾವಿರ ಹೋಟೆಲ್ಗಳಿದ್ದು, ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ನಿಲ್ಲುವಂತಾಗಿತ್ತು. ಕೆಲವು ಹೊಟೇಲ್ ಮೆನುವಿನಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದ್ದು, ಇದರಿಂದ ಕಡಿಮೆ ಅನಿಲ ಬಳಕೆ ಮಾಡಿ ಎರಡು ದಿನ ವ್ಯಾಪಾರ ನಡೆಸುವ ಬಗ್ಗೆ ಮಾಹಿತಿ ಸಿಕ್ಕಿದೆ.
ಶಿವಮೊಗ್ಗದಲ್ಲಿ ಹೊಟೇಲ್ ಬಂದ ಮಾಡಲ್ಲ!

ಇನ್ನೊಂದು ವಾರ ಶಿವಮೊಗ್ಗದ ಹೋಟೆಲ್ಗಳನ್ನು ಬಂದ್ ಮಾಡುವದಿಲ್ಲ. ಅಷ್ಟರೊಳಗೆ ಸಮಸ್ಯೆ ಸಂಪೂರ್ಣ ಬಗೆಹರಿಯಲಿದೆ ಎಂದು ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ಗೋಪಿನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಹಾಸ್ಟೆಲ್ ಪರಿಸ್ಥಿತಿ|
ಕಾಂಗ್ರೆಸ್ ಮುಖಂಡರಿಂದ ಅವಲೋಕನ|
ಇನ್ನು ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ಆವರಣದಲ್ಲಿರುವ ಸಹ್ಯಾದ್ರಿ ವಿದ್ಯಾರ್ಥಿಗಳ ಹಾಸ್ಟೆಲ್ ಹಾಗೂ ಸಹ್ಯಾದ್ರಿ ಮಹಿಳಾ ವಿದ್ಯಾರ್ಥಿನಿಯರ ಹಾಸ್ಟೆಲ್ ಹಾಗೂ ರಾಗಿಗುಡ್ಡ ಕುವೆಂಪು ನಗರದ ವಿದ್ಯಾರ್ಥಿಗಳ ಸ್ಪೋರ್ಟ್ಸ್ ಹಾಸ್ಟೆಲ್ನಲ್ಲಿ ಸಿಲಿಂಡರ್ ಪೂರೈಕೆ ಬಗ್ಗೆ ವಾರ್ಡನ್ ಹಾಗೂ ಸಂಬಂಧಪಟ್ಟ ಸಿಬ್ಬಂದಿ ಅಧಿಕಾರಿಗಳಿಂದ ಕಾಂಗ್ರೆಸ್ ಪಕ್ಷದ ಮುಖಂಡರು ಮಾಹಿತಿ ಪಡೆದರು.

250 ರಿಂದ 300 ವಿದ್ಯಾರ್ಥಿಗಳಿದ್ದು ಪ್ರತಿನಿತ್ಯ ಊಟ ತಿಂಡಿಗೆ ತೊಂದರೆಯಾಗದಂತೆ ಕ್ರಮವಹಿಸಲು ಜಿಲ್ಲಾಧಿಕಾರಿ ಅವರನ್ನು ಕಾಂಗ್ರೆಸ್ ಮುಖಂಡರು ಭೇಟಿ ಮಾಡಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಹೆಚ್. ಸಿ. ಯೋಗೇಶ್, ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಶಿವಕುಮಾರ್, ಪಾಲಿಕೆ ಮಾಜಿ ಸದಸ್ಯ ವಿಶ್ವನಾಥ್ ಕಾಶಿ ಉಪಸ್ಥಿತರಿದ್ದರು.
ಬೆಂಗಳೂರಿನಲ್ಲಿ ಹೊಟೇಲ್ ಮುಂದುವರಿಕೆ ಅಭಾಧಿತ!

ಈ ಮಧ್ಯೆ ಬೆಂಗಳೂರಿನಲ್ಲಿ ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ಗುರುವಾರ ಸಂಜೆ ದಿಢೀರ್ ಸುದ್ದಿಗೋಷ್ಠಿ ನಡೆಸಿದರು.
ಬೆಂಗಳೂರಿನ ಯಾವ ಹೊಟೆಲ್ ಕೂಡ ನಾಳೆಯಿಂದ ಬಂದ್ ಮಾಡಲ್ಲ ಎಂದು ಹೇಳಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲೀನಿ ರಜನೀಶ್ ಜೊತೆ ಸಭೆ ನಡೆಸಿದ್ದೇವೆ.

ಕೇಂದ್ರ ಸರ್ಕಾರದ ಪೆಟ್ರೋಲಿಯಂ ಸಚಿವಾಲಯದಿಂದ ಕಮರ್ಶಿಯಲ್ ಗ್ಯಾಸ್ ಸಮರ್ಪಕ ಪೂರೈಕೆ ಭರವಸೆ ಸಿಕ್ಕಿದೆ ಹೀಗಾಗಿ ಸಧ್ಯ ಹೊಟೇಲ್ಗಳನ್ನು ಮುಚ್ಚದೇ ಮುನ್ನಡೆಸುವ ತೀರ್ಮಾನ ಪ್ರಕಟಿಸಿದರು..

ಒಟ್ಟಾರೇ, ಯುದ್ದದ ಸಂದಿಗ್ಧ ಪರಿಸ್ಥಿತಿಯಲ್ಲಿಯು ಜನರ ದೈನಂದಿನ ಅನಿವಾರ್ಯವಾದ ಸಿಲಿಂಡರ್ ಅನ್ನು ಪೂರೈಸುವದಾಗಿ ಕೇಂದ್ರ ಸರ್ಕಾರವು ಅಭಯ ನೀಡಿರುವದರಿಂದ ಜನರಲ್ಲಿ ಮನೆ ಮಾಡಿದ್ದ ಆತಂಕ ಕೊಂಚ ಮಟ್ಟಿಗೆ ಕಡಿಮೆ ಆಗಿದೆ.
ಸಾರ್ವಜನಿಕರು ಸಹ ಮುಂದೆ ಸಿಗುತ್ತೋ ಇಲ್ಲವೋ ಎಂದು ಸಿಲಿಂಡರ್ ಅನ್ನು ಸಂಗ್ರಹಿಸಿಡುವ ಮೂಲಕ ಅಭಾವ ಸೃಷ್ಟಿ ಮಾಡದೇ ಅಗತ್ಯಕ್ಕೆ ತಕ್ಕಂತೇ ಸಿಲಿಂಡರ್ ಪಡೆಯುವ ಜವಾಬ್ದಾರಿಯನ್ನು ತೋರಿಸಬೇಕಿದೆ.
ವಿಶೇಷ ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂ ಇಂಡಿಯಾ ಕನ್ನಡ
ಶಿವಮೊಗ್ಗ.







