
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗಳಿಗೆ ಅಂಕಗಳನ್ನು ತೆಗೆದು ಗ್ರೇಡಿಂಗ್ ಪದ್ದತಿ ಜಾರಿಗೆ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ತೀರ್ಮಾನದ ವಿರುದ್ದ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ.
ಈ ಕುರಿತು “ನ್ಯೂಇಂಡಿಯಾ ಕನ್ನಡ” ಡಿಜಿಟಲ್ ಪತ್ರಿಕೆಯು ಅಭಿಪ್ರಾಯ ಸಂಗ್ರಹಣೆ ಮಾಡುತ್ತಿದೆ.

ತೃತೀಯ ಭಾಷೆಗಳ ಮೇಲಿನ ಅಂಕಗಳನ್ನು ಕೈಬಿಟ್ಟಿದ್ದರಿಂದ ಆಗುವ ಪರಿಣಾಮಗಳೇನು? ವಿದ್ಯಾರ್ಥಿಗಳಿಗೆ ಇದರಿಂದಾಗುವ ಶೈಕ್ಷಣಿಕ ತೊಂದರೆಗಳೇನು? ಎಂಬುದರ ಕುರಿತು ಹಲವು ಶಿಕ್ಷಣ ತಜ್ಞರು ಹಾಗೂ ರಾಜಕೀಯ ನಾಯಕರು ಮತ್ತು ಸಾರ್ವಜನಿಕರು ತಮ್ಮ ಅನಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.
ಪೋಷಕರ ಆಕ್ರೋಶ!
ಪಿಐಎಲ್ಗೆ ಸಿದ್ಧತೆ|
ತೃತೀಯ ಭಾಷೆ ಅಂಕ ಪದ್ದತಿ ಕೈಬಿಟ್ಟು ಗ್ರೇಡಿಂಗ್ ಪದ್ದತಿ ಅಳವಡಿಸಿರೋದು ಹಿಟ್ಲರ್ ಧೋರಣೆ ಎಂದು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ಬೆಂಗಳೂರಿನ ವಿದ್ಯಾರ್ಥಿನಿ ಸಹನಾ ನಾಯಕ್ ಅವರ ತಂದೆ ರಾಜಾ ನಾಯಕ್ ಅವರ ಆಕ್ರೋಶದ ಮಾತಿದು.

ಶಿಕ್ಷಣ ವ್ಯವಸ್ಥೆಯ ಮುಖ್ಯ ಭಾಗಿದಾರರಾದ ಪೋಷಕರು ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಿಸದೆ, ಹಿಟ್ಲರ್ ನೀತಿ ಅನುಸರಿಸಿ ಪರೀಕ್ಷೆಗೆ ಎರಡು ದಿನ ಇರುವಾಗ ತೃತೀಯ ಭಾಷೆಗಳಿಗೆ ಅಂಕವಿಲ್ಲ ಎಂದು ಘೋಷಿದಿರುವುದರಿಂದ ತಮ್ಮ ಮಗಳು ಸಹನಾಗೆ ತೀವ್ರ ಆಘಾತವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಶಾಲೆ ಆರಂಭದಲ್ಲೋ ಅಥವಾ ಪರೀಕ್ಷೆಗೆ ಶುಲ್ಕ ಕಟ್ಟುವ ಮುನ್ನ ಇಂತಹ ಬದಲಾವಣೆ ಬಗ್ಗೆ ನಿರ್ಧಾರ ಮಾಡಿದ್ದರೇ, ವಿದ್ಯಾರ್ಥಿಗಳಿಗೆ ಕನಿಷ್ಟ ಅನುಕೂಲವಾಗುತ್ತಿತ್ತು.

ಆದರೆ ತೃತೀಯ ಭಾಷೆಯಲ್ಲಿ ಗಣಿತ ಹಾಗೂ ವಿಜ್ಞಾನಕ್ಕಿಂತ ಹೆಚ್ಚು ಅಂಕ ಗಳಿಸಲು ತಯಾರಿ ನಡೆಸಿದ್ದ ಮಗಳಿಗೆ ಒಟ್ಟು ಅಂಕದಲ್ಲಿ ಗ್ರೇಡಿಂಗ್ನಿಂದ ಅಂಕ ಕುಸಿಯುವ ಆತಂಕ ಎದುರಾಗಿದೆ.
ಹೀಗಾಗಿ ನೊಂದ ಪೋಷಕರ ಪರವಾಗಿ ಹೈಕೋರ್ಟ್ನಲ್ಲಿ ಪಿಐಎಲ್ ದಾಖಲಿಸಲು ಸಿದ್ದತೆ ನಡೆಸಿರುವದಾಗಿ ಪೋಷಕ ರಾಜಾ ನಾಯಕ್ ಹೇಳಿದ್ದಾರೆ.
ವಿದ್ಯಾರ್ಥಿಗಳ ಪಾಲಿಗೆ ಶಾಪ!
ಒಟ್ಟು ಅಂಕಗಳನ್ನು ಕ್ರೋಢಿಕರಿಸುವಾಗ ತೃತೀಯ ಭಾಷೆಗಳ ಅಂಕಗಳು ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದ್ದವು. ಬೇರೆ ವಿಷಯದಲ್ಲಿ ಹಿಂದಿದ್ದರೂ ತೃತೀಯ ಭಾಷೆಗಳಲ್ಲಿ ಹೆಚ್ಚು ಅಂಕಗಳಿಸಬಹುದೆಂಬ ವಿಶ್ವಾಸವಿತ್ತು.

ಪರೀಕ್ಷೆ ಬರೆದರೂ ಲೆಕ್ಕಕ್ಕೆ ಬಾರದಂತೇ ಮಾಡಿರೋದು ಇಡೀ ವರ್ಷ ಅಭ್ಯಾಸ ಮಾಡಿ ಕಷ್ಟ ಪಟ್ಟ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂಬುದು ಈಗ ಪೋಷಕ ವಲಯದಿಂದ ವ್ಯಕ್ತವಾಗಿದೆ. ಈ ಬಗ್ಗೆ ಖಾಸಗಿ ಶಾಲಾ ಕಾಲೇಜು ಪೋಷಕ ಸಂಘ ಸಮನ್ವಯ ಸಮಿತಿ ಅಧ್ಯಕ್ಷ ಯೋಗಾನಂದ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
ಶೈಕ್ಷಣಿಕವಾಗಿ ಯಾವುದೇ ಮಹತ್ತರ ಬದಲಾವಣೆ ಸಂದರ್ಭದಲ್ಲಿ ಶಿಕ್ಷಣ ತಜ್ಞರು ಹಾಗೂ ಇದರ ನೇರ ಪರಿಣಾಮ ಎದುರಿಸುವ ಪೋಷಕರ ಅಭಿಪ್ರಾಯ ಪಡೆಯಬೇಕು ಎಂದು ಹೇಳಿದ್ದಾರೆ.

ಈಗಾಗಲೇ ರಾಜ್ಯ ಪಠ್ಯಕ್ರಮದಲ್ಲಿ ದಿನಕ್ಕೊಂದು ಅವೈಜ್ಞಾನಿಕ ನಿಯಮಗಳಿಂದಾಗಿ ಕನ್ನಡ ಮಾಧ್ಯಮ ಶಾಲೆಗಳು ಸಂಕಷ್ಟದಲ್ಲಿವೆ.
ಪೋಷಕರು ವರ್ಷದಿಂದ ವರ್ಷಕ್ಕೆ ರಾಜ್ಯಪಠ್ಯಕ್ರಮ ತೊರೆದು ಬೇರೆ ಕೇಂದ್ರೀಯ ಪಠ್ಯಕ್ರಮಕ್ಕೆ ವಲಸೆ ಹೋಗುತ್ತಿದ್ದಾರೆ. ತೃತೀಯ ಭಾಷೆ ವಿಚಾರದಲ್ಲಿ ಹಕ್ಕು ನಿರ್ಧಾರ ಆಯ್ಕೆಯಲ್ಲಿ ಸರ್ಕಾರ ಮೂಗುತೂರಿಸದೇ ತಟಸ್ಥವಾಗಿದದ್ದು ಪೋಷಕರ ಆಯ್ಕೆಗೆ ಬಿಡುವಂತೆ ಅವರು ಆಗ್ರಹಿಸಿದ್ದಾರೆ.
ವಿದ್ಯಾರ್ಥಿಗಳಲ್ಲಿ ಬೇಸರ ಮೂಡಿಸಿದ ನಿರ್ಧಾರ!
ರಾಜ್ಯಸರ್ಕಾರ ತೃತೀಯ ಭಾಷೆ ಹಿಂದಿ ಅಂಕಪದ್ದತಿ ತೆಗೆದುಹಾಕಿರುವುದು ಅವೈಜ್ಞಾನಿಕ ಎಂದು ಆರೋಪಿಸಿ, ಶಿವಮೊಗ್ಗದ ಹೊಸನಗರ ಪದವಿಪೂರ್ವ ಕಾಲೇಜಿನ 10ನೇ ತರಗತಿ ವಿದ್ಯಾರ್ಥಿಗಳು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಸರ್ಕಾರದ ತೀರ್ಮಾನ ಏಕಪಕ್ಷೀಯವಾಗಿದೆ. ಕಲಿತ ವಿಷಯಗಳಿಗೆ ಅಂಕದ ಮೂಲಕ ಫಲಿತಾಂಶ ನೀಡದಿರುವುದು ಮಕ್ಕಳಿಗೆ ಎಸಗುವ ತಾರತಮ್ಯ ಹಾಗೂ ಮಕ್ಕಳ ಹಕ್ಕನ್ನ ಮೊಟಕುಗೊಳಿಸಿದಂತಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ರೀತಿ ಬದಲಾವಣೆ ಮಾಡಲು ಯಾವ ಸಮಿತಿಯೂ ವರದಿ ನೀಡಲಿಲ್ಲ. ಬೇರಾವ ವಿಷಯಗಳಿಗೂ ಇಲ್ಲದ ಗ್ರೇಡಿಂಗ್ ಪದ್ದತಿ ತೃತೀಯ ವಿಷಯಕ್ಕೆ ಮಾತ್ರ ಏಕೆ?.
ನಮಗೆ ಬೇಕಾದ ವಿಷಯ ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಿ ಫಲಿತಾಂಶ ಪಡೆಯುವ ಹಕ್ಕು ಮಕ್ಕಳಿಗಿದೆ. ಸರ್ಕಾರ ತನ್ನ ನಿಲುವು ಬದಲಿಸಿ ಮೊದಲಿದ್ದಂತೆ ಅಂಕಪದ್ದತಿನ್ನು ಮುಂದುವರೆಸಬೇಕೆಂದು ವಿದ್ಯಾರ್ಥಿಗಳು ಸರ್ಕಾರಕ್ಕೆ ಬರೆದಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ವರದಿ: ಸೌಮ್ಯ ರೆಡ್ಡಿ
ಎಜ್ಯುಕೇಶನ್ ಬ್ಯುರೋ
ನ್ಯೂಇಂಡಿಯಾ ಕನ್ನಡ







