ಶಿವಮೊಗ್ಗ: ನಾಗಮೋಹನದಾಸ್ ವರದಿ ಜಾರಿಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ|ಮಾದಿಗ ಮಹಾಸಭಾದಿಂದ ಡಿಸಿ ಕಚೇರಿ ನುಗ್ಗಲು ವಿಫಲ ಯತ್ನ|ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ
ಸಾವಿರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರನ್ನು, ಜಿಲ್ಲಾಧಿಕಾರಿಗಳ ಕಚೇರಿ ಆವರಣ ಪ್ರವೇಶಿಸದಂತೇ ತಡೆಗೋಡೆಗಳನ್ನು ಆಳವಡಿಸಲಾಗಿತ್ತು. ಇದರಿಂದ ಸಿಟ್ಟಿಗೆದ್ದ ಪ್ರತಿಭಟನಾಕಾರರು, ತಡೆಗೋಡೆಗಳನ್ನು ಬೇಧಿಸಿ ಜಿಲ್ಲಾಧಿಕಾರಿಗಳ ಕಚೇರಿ ಒಳಗೆ ನುಗ್ಗಲು ಯತ್ನಿಸಿದರು.

ಶಿವಮೊಗ್ಗ: ನಾಗಮೋಹನದಾಸ್ ನೀಡಿರುವ ವರದಿ ಪ್ರಕಾರ ಸರ್ಕಾರಿ ಹುದ್ದೆ ಭರ್ತಿ ಮಾಡಿಕೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಮಾದರ ಮಹಾಸಭಾ ಸೋಮವಾರದಂದು ಬೃಹತ್ ಪ್ರತಿಭಟನೆ ನಡೆಸಿತು. ಹಿಂದಿನ ಒಳಮೀಸಲಾತಿ ನೀತಿಯನ್ನು ಸರ್ಕಾರವು ಕೈಬಿಡಬೇಕೆಂದು ಒತ್ತಾಯಿಸಿದ ಪ್ರತಿಭಟನಾಕಾರರು ಡಿಸಿ ಕಚೇರಿಗೆ ನುಗ್ಗುವ ವಿಫಲ ಯತ್ನ ಸಹ ನಡೆಸಿದ ಘಟನೆ ನಡೆದಿದೆ.


ಇದಕ್ಕೂ ಮುನ್ನ ಮಹಾನಗರಪಾಲಿಕೆ ಆವರಣದಲ್ಲಿ ಜಮಾಯಿಸಿದ್ದ ಸಾವಿರಾರು ಪ್ರತಿಭಟನಾಕಾರರು ಡಾ.ಅಂಬೇಡ್ಕರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಆರಂಭಗೊಂಡ ಮೆರವಣಿಗೆ ವಿವಿಧ ವೃತ್ತಗಳ ಮೂಲಕ ಸಾಗಿ ಶೀನಪ್ಪ ಶೆಟ್ಟಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿದರು. ಇದರಿಂದಾಗಿ ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ!

ಜಿಲ್ಲಾ ಮಾದಾರ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಆರ್.ತೇಜಸ್ ಮಾತನಾಡಿ, ಸುಪ್ರೀಂಕೋರ್ಟು ಒಳಮೀಸಲಾತಿ ಪರ ತೀರ್ಪು ನೀಡಿದ್ದರೂ, ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸುವಲ್ಲಿ ಅನಗತ್ಯ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶೇ.17 ರಷ್ಟು ಮೀಸಲಾತಿ ಏರಿಕೆ ವಿಚಾರ ನ್ಯಾಯಾಲಯದಲ್ಲಿ ಇತ್ಯರ್ಥವಾಗಬೇಕಿದೆ. ಆದರೆ ಹಾಲಿ ಇರುವ 15 ರಷ್ಟು ಮೀಸಲಾತಿಯಲ್ಲಿ ಒಳಮೀಸಲಾತಿ ನೀಡಲು ಯಾವ ತೊಂದರೆ ಇಲ್ಲ ಎಂದು ಹೇಳಿದರು.

ಮಾರ್ಚ್ 27 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರವು ಒಳಮೀಸಲಾತಿ ಜಾರಿಗೊಳಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಇದೇ ವೇಳೆ ಅವರು ಎಚ್ಚರಿಕೆ ನೀಡಿದರು.
ವಕೀಲ ನಿರಂಜನ್ ಮಾತನಾಡಿ, ರಾಜ್ಯ ಸರ್ಕಾರ 56 ಸಾವಿರ ಹುದ್ದೆಗಳನ್ನು ನೇಮಕ ಮಾಡಲು ಮುಂದಾಗಿದ್ದು, ಅದರಲ್ಲಿ ಒಳಮೀಸಲಾತಿ ಅಳವಡಿಸದೆ ಇರುವುದು ಮಾದಿಗ ಸಮುದಾಯಕ್ಕೆ ಘೋರ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ ಯಾವುದೇ ಕಾರಣಕ್ಕೂ ನೇಮಕಾತಿ ಪ್ರಕ್ರಿಯೆ ನಡೆಸಬಾರದು ಎಂದು ಆಗ್ರಹಿಸಿದರು.
ಡಿಸಿ ಆವರಣದಲ್ಲಿ ಉದ್ವಿಗ್ನ ಸ್ಥಿತಿ!

ಸಾವಿರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರನ್ನು, ಜಿಲ್ಲಾಧಿಕಾರಿಗಳ ಕಚೇರಿ ಆವರಣ ಪ್ರವೇಶಿಸದಂತೇ ತಡೆಗೋಡೆಗಳನ್ನು ಆಳವಡಿಸಲಾಗಿತ್ತು. ಇದರಿಂದ ಸಿಟ್ಟಿಗೆದ್ದ ಪ್ರತಿಭಟನಾಕಾರರು, ತಡೆಗೋಡೆಗಳನ್ನು ಬೇಧಿಸಿ ಜಿಲ್ಲಾಧಿಕಾರಿಗಳ ಕಚೇರಿ ಒಳಗೆ ನುಗ್ಗಲು ಯತ್ನಿಸಿದರು.
ಇದರಿಂದ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟ ನೂಕಾಟ ನಡೆದ ಘಟನೆ ನಡೆಯಿತು. ಬಳಿಕ ಕೆಲ ಮುಖಂಡರು ಮಧ್ಯಪ್ರವೇಶಿಸಿ ಸಮಾಧಾನ ಪಡಿಸಿದ್ದರಿಂದ ಪರಿಸ್ಥಿತಿ ತಹಬದಿಗೆ ಬಂದಿತು.

ಬಳಿಕ ಜಿಲ್ಲಾಧಿಕಾರಿಗಳ ಪರವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಅಭಿಷೇಕ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಪತ್ರಕರ್ತ ಟೆಲೆಕ್ಸ್ ರವಿಕುಮಾರ್, ಜಿಲ್ಲಾ ಮಾದಾರ ಮಹಾಸಭಾ ಮುಖಂಡರಾದ ತಿಮ್ಲಾಪುರ ಲೋಕೇಶ್, ಶಿವಣ್ಣ, ಸೂಲಯ್ಯ, ಮಂಜುನಾಥ್, ಪಿ,ಅಣ್ಣಪ್ಪ, ಕೆ ಅಣ್ಣಪ್ಪ, ಹೊಳೆಹೊನ್ನೂರು ರಮೇಶ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







