ವಿಬಿಜಿ ರಾಮ್ಜೀ ವಿರುದ್ದ ಬಂಡೆದ್ದ ಸಿದ್ದರಾಮಯ್ಯ|ಗ್ರಾಮೀಣ ಜನರ ಬದುಕಿನ ಮೇಲೆ ಕೇಂದ್ರದ ಗದಾಪ್ರಹಾರ|ಬಡವರ ಮೇಲೆ “ಮನುಸ್ಮೃತಿ” ಶೋಷಣೆ-ಸಿಎಂ ಗಂಭೀರ ಆರೋಪ
ಮನುಸ್ಮೃತಿ ಪ್ರಕಾರ ಶೂದ್ರರಿಗೆ ಆರ್ಥಿಕವಾಗಿ ಶಕ್ತಿ ಬಂದರೆ ಸೇವಕರಾಗಿ ಉಳಿಯುವುದಿಲ್ಲ. ಅದನ್ನೇ ಈಗ ಕೇಂದ್ರ ಸರ್ಕಾರವು ಮಾಡಲು ಹೊರಟಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಬೆಂಗಳೂರು: ವಿಬಿಜಿ ರಾಮ್ಜೀ ಯೋಜನೆಯಿಂದ ಉದ್ಯೋಗವಿಲ್ಲದೆ ಗ್ರಾಮೀಣ ಜನರು ಈಗ ವಲಸೆ ಹೋಗಲು ಪ್ರಾರಂಭಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮಂಗಳವಾರದಂದು ವಿಧಾನಸಭೆಯ ಕಲಾಪದಲ್ಲಿ ವಿಬಿಜಿ ರಾಮ್ಜೀ ಯೋಜನೆ ಕುರಿತಂತೆ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು, ಹೊಸ ಯೋಜನೆಯಿಂದ ಗ್ರಾಮೀಣ ಜನರ ಬದುಕನ್ನು ಸಾಂವಿಧಾನಿಕ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾಯ್ದೆ ಜಾರಿಗೆ ತರುವ ಮುನ್ನ ಯಾವ ರಾಜ್ಯಗಳೊಂದಿಗೆ ಕೇಂದ್ರ ಸರ್ಕಾರವು ಚರ್ಚೆ ಮಾಡಿಲ್ಲ. 60: 40 ಅನುದಾನದ ಅನುಪಾತ ತರುವ ಮುನ್ನ ಚರ್ಚೆಯಾಗಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಸಿಎಂ ಸಿದ್ದರಾಮಯ್ಯ ಭಾಷಣಕ್ಕೂ ಮುನ್ನ ಕೇಂದ್ರ ಸರ್ಕಾರದ ನೂತನ ವಿಬಿ ಜಿ ರಾಮ್ ಜಿ ಯೋಜನೆಯನ್ನು ರದ್ದುಪಡಿಸಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆಯನ್ನು ಮರುಸ್ಥಾಪಿಸಲು ಒತ್ತಾಯಿಸಿ ವಿಧಾನಸಭಾ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಣಯ ಮಂಡಿಸಿದರು.
ಮಹಿಳೆಯರು, ಸಣ್ಣ ರೈತರು, ಆದಿವಾಸಿಗಳಿಗೆ ಆರ್ಥಿಕವಾಗಿ ಶಕ್ತಿ ಬರಬಾರದು ಎಂದು ಮನುಸ್ಮೃತಿ ಹೇಳುತ್ತದೆ. ಮನುಸ್ಮೃತಿ ಪ್ರಕಾರ ಶೂದ್ರರಿಗೆ ಆರ್ಥಿಕವಾಗಿ ಶಕ್ತಿ ಬಂದರೆ ಸೇವಕರಾಗಿ ಉಳಿಯುವುದಿಲ್ಲ. ಅದನ್ನೇ ಈಗ ಕೇಂದ್ರ ಸರ್ಕಾರವು ಮಾಡಲು ಹೊರಟಿದೆ ಎಂದರು
ವಿಬಿಜಿ ರಾಮ್ ಜಿ ಯೋಜನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಮನರೇಗಾ ಯೋಜನೆ ಮರುಜಾರಿಗೊಳಿಸಬೇಕು ಎಂದು ಒತ್ತಾಯಿಸಿದ ಸಿಎಂ, ಜನರ ಉದ್ಯೋಗದ ಹಕ್ಕನ್ನು ಮರುಸ್ಥಾಪಿಸಬೇಕು. ಪಂಚಾಯಿಗಳ ಅಧಿಕಾರ ಪುನರ್ ಸ್ಥಾಪನೆಯಾಗಬೇಕು.
ಈ ಹಿಂದೆ ಜಾರಿಯಲ್ಲಿದ್ದ ಮನರೇಗಾ ಅಡಿಯಲ್ಲಿ ಎಲ್ಲಾ ವರ್ಗದ ಜನರಿಗೆ ಕೆಲಸವಿತ್ತು. ಮನರೇಗಾ ಬರುವ ಮುನ್ನ ಕೆಲಸ ಹುಡುಕಿಕೊಂಡು ಜನ ವಲಸೆ ಹೋಗುತ್ತಿದ್ದರು ಎಂದ ಸಿಎಂ, ಮನರೇಗಾ ಅಡಿಯಲ್ಲಿ ಬೇಡಿಕೆಗೆ ಅನುಸಾರವಾಗಿ ಕೆಲಸ ಒದಗಿಸಲಾಗುತ್ತಿತ್ತು.

ಮನಮೋಹನ್ ಸಿಂಗ್ ಅವರು ಪ್ರಧಾನಿಗಳಾಗಿದ್ದಾಗ ಆಹಾರ ಭದ್ರತೆ, ಶಿಕ್ಷಣದ ಹಕ್ಕು, ಮಾಹಿತಿ ಹಕ್ಕು ನೀಡಿದರು. ಈ ಮೂಲಕ ಬಡ ವರ್ಗದ ಜನರಿಗೆ ಅನುಕೂಲ ಕಲ್ಪಿಸಲಾಯಿತು ಎಂದು ಹೇಳಿದರು.
ಮಹಾತ್ಮ ಗಾಂಧಿಯವರು ಗ್ರಾಮಗಳು ಪ್ರಗತಿಯಾಗದೆ ದೇಶ ಪ್ರಗತಿಯಾಗುವುದಿಲ್ಲ ಎಂದಿದ್ದರು. ಈಗ ಅದಕ್ಕೆ ಕೇಂದ್ರ ಸರ್ಕಾರವು ತಿಲಾಂಜಲಿ ಇಟ್ಟಿದೆ. ಗ್ರಾಮಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿಯುತವಾಗಬೇಕು ಎಂದರು.
ಈಗ ಅನೇಕ ರಾಜ್ಯಗಳು ಅನುದಾನದ ಕೊರತೆಯನ್ನು ಎದುರಿಸುತ್ತಿವೆ. ಈಗಿನ ಪ್ರಧಾನಿಗಳು ಗುಜರಾತ್ ಮುಖ್ಯಮಂತ್ರಿಗಳಾಗಿದ್ದಾಗ ಶೇ. 50 ದಿನಗಳ ಕೆಲಸ ನೀಡಬೇಕೆಂದು ಒತ್ತಾಯಿಸಿದರು.
ಮುಖ್ಯಮಂತ್ರಿಗಳಾಗಿದ್ದಾಗ ಒಂದು ನಿಲುವು, ಪ್ರಧಾನಿಗಳಾದಾಗ ಮತ್ತೊಂದು ನಿಲುವೇ? ಎಂದು ಸಿಎಂ ಪ್ರಶ್ನಿಸಿದರು. ಒಟ್ಟಾರೇ, ವಿಬಿಜಿ ರಾಮ್ ಜಿ ಯೋಜನೆ ಜಾರಿಗೆ ತಂದು ಗ್ರಾಮ ಸ್ವರಾಜ್ಯ ಪರಿಕಲ್ಪನೆಯನ್ನು ಕೇಂದ್ರ ಸರ್ಕಾರವು ಸಂಪೂರ್ಣ ಧ್ವಂಸ ಮಾಡಿದೆ ಎಂದು ಆರೋಪಿಸಿದರು.
ವರದಿ: ವಿಜಯೀಂದ್ರ ಹುನಗುಂದ್
ಪ್ರಧಾನ ಸಂಪಾದಕ
ನ್ಯೂಇಂಡಿಯಾ ಕನ್ನಡ
ಬೆಂಗಳೂರು.







