"ಶಿಕ್ಷಣ ಗುಣಮಟ್ಟ ಉಳಿಸಿ" ಅಭಿಯಾನDistrictKarnatakaPoliticalShivamoggaSpecial Stories
Trending

ಎಸ್‌ಎಸ್‌ಎಲ್‌ಸಿ, ಪಿಯುಸಿ ತೇರ್ಗಡೆ ಅಂಕ ಇಳಿಕೆ-ಸರ್ಕಾರದ ಕ್ರಮ ಅವೈಜ್ಞಾನಿಕ-ಕನ್ನಡ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆಕ್ರೋಶ

ರಾಜ್ಯದಲ್ಲಿ ಶಿಕ್ಷಣ ಕಲಿಕಾ ಗುಣಮಟ್ಟ ಕುಸಿಯಬಾರದೆಂಬ ಕಳಕಳಿಯಿಂದ "ನ್ಯೂಇಂಡಿಯಾ ಕನ್ನಡ ಡಿಜಿಟಲ್‌ಪತ್ರಿಕೆ" ವತಿಯಿಂದ ಹಮ್ಮಿಕೊಂಡಿರುವ "ಶಿಕ್ಷಣ ಗುಣಮಟ್ಟ ಉಳಿಸಿ" ಅಭಿಯಾನಕ್ಕೆ ಈಗ ಭಾರೀ ಬೆಂಬಲ ವ್ಯಕ್ತವಾಗಿದೆ.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಕನಿಷ್ಠ ಉತ್ತೀರ್ಣ ಅಂಕಗಳನ್ನು ಶೇ. 33 ಕ್ಕೆ ಇಳಿಸಿರುವ ರಾಜ್ಯ ಸರ್ಕಾರದ ಅವೈಜ್ಞಾನಿಕ ನಿರ್ಧಾರಕ್ಕೆ ನಾಡಿನಾದ್ಯಂತ ತಡವಾದರೂ ಸಹ ವಿರೋಧ ವ್ಯಕ್ತವಾಗತೊಡಗಿದೆ.

ನಾಡಿನ ಅನೇಕ ಹಿರಿಯರು , ಸಾಹಿತಿಗಳು, ಬುದ್ದಿಜೀವಿಗಳು, ಶಿಕ್ಷಣ ತಜ್ಞರುಗಳು, ತೇರ್ಗಡೆ ಅಂಕ ಇಳಿಕೆಯಿಂದ ಭವಿಷ್ಯದಲ್ಲಿ ಆಗುವ ಪರಿಣಾಮಗಳ ಬಗ್ಗೆ “ನ್ಯೂ ಇಂಡಿಯಾ ಕನ್ನಡ” ಡಿಜಿಟಲ್‌ಪತ್ರಿಕೆ ಮುಂದೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳತೊಡಗಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ

ಬೆಂಗಳೂರಿನಲ್ಲಿ ಶನಿವಾರದಂದು ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು, ಸ್ವತಃ ಸರ್ಕಾರದ ಆಧೀನದಲ್ಲಿರುವ ಪ್ರಾಧಿಕಾರದ ಅಧ್ಯಕ್ಷರಾಗಿದ್ದರೂ ಸಹ ಸರ್ಕಾರದ ಅವೈಜ್ಞಾನಿಕ ನೀತಿಯನ್ನು ಖಂಡಿಸುವ ಮೂಲಕ ಮುಂದಾಗುವ ಅನಾಹುತದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಬೆಂಗಳೂರಿನ ಕಾರ್ಯಕ್ರಮದಲ್ಲಿ ಮಾತನಾಡಿದ ಯಥಾವತ್ತ ಹೇಳಿಕೆ ಈ ಕೆಳಗಿನಂತೆ ಇದೆ.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಕನಿಷ್ಠ ತೇರ್ಗಡೆ ಅಂಕಗಳನ್ನು ಶೇ. 33 ಕ್ಕೆ ಇಳಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವತಃ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತೀವ್ರವಾಗಿ ಖಂಡಿಸಿದ್ದಾರೆ.

ಸರ್ಕಾರದ ಈ ಕ್ರಮವನ್ನು ಅವೈಜ್ಞಾನಿಕ ಮತ್ತು ಕನ್ನಡ ಭಾಷಾ ಕಲಿಕೆಗೆ ಮಾರಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಾಥಮಿಕವಾಗಿ ಕೇಂದ್ರ ಪಠ್ಯಕ್ರಮ ಶಾಲೆಗಳೊಂದಿಗೆ ಸಮಾನತೆಯನ್ನು ಸಾಧಿಸುವ ಗುರಿಯನ್ನು ಹೊಂದಿರುವ ಈ ತೇರ್ಗಡೆ ಅಂಕ ಕಡಿತವು, ಭಾಷಾ ಕಲಿಕೆಯ ಅಗತ್ಯ ಗಂಭೀರತೆಯನ್ನು ಕಸಿದುಕೊಳ್ಳುತ್ತದೆ ಎಂದು ಹೇಳಿದರು.

ಸರ್ಕಾರದ ನಿರ್ಧಾರವು ಮುಂಬರುವ ದಿನಗಳಲ್ಲಿ ಶಿಕ್ಷಣದಲ್ಲಿ ಕನ್ನಡ ಭಾಷಾ ಕಲಿಕೆಗೆ ಹಾನಿಕಾರಕವಾಗಲಿದೆ ಎಂದ ಅವರು, ಇದನ್ನು ಎಲ್ಲರೂ ವಿರೋಧಿಸಬೇಕು ಎಂದು ಕರೆ ನೀಡಿದರು.

ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಆಧುನಿಕ ಯುಗಕ್ಕೆ ಪ್ರಸ್ತುತವಾಗಿಸಲು ತುರ್ತು ಸುಧಾರಣೆ, ಕೌಶಲ್ಯಪೂರ್ಣ ಸಮಾಜದ ಸೃಷ್ಟಿಯ ಮೇಲೆ ಈ ನಿರ್ಧಾರವು ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯದ ವಿದ್ಯಾರ್ಥಿಗಳು ಈಗಾಗಲೇ 21 ನೇ ಶತಮಾನದ ಕೌಶಲ್ಯಗಳಲ್ಲಿ ಹಿಂದುಳಿದಿದ್ದಾರೆ.

ಇಂತಹದರ ಮಧ್ಯೆ ಸರ್ಕಾರವು ತೇರ್ಗಡೆಗೆ ಕನಿಷ್ಟ ಅಂಕ ಜಾರಿಗೆ ತಂದರೇ ಕೌಶಲ್ಯಪೂರ್ಣ ಸಮಾಜದ ಸೃಷ್ಟಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದರು.

ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಆಧುನಿಕ ಯುಗಕ್ಕೆ ಪ್ರಸ್ತುತವಾಗಿಸಲು ತುರ್ತು ಸುಧಾರಣೆಗೆ ರಾಜ್ಯ ಸರ್ಕಾರವು ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಪುರುಷೋತ್ತಮ ಬಿಳಿಮಲೆ ಕರೆ ನೀಡಿದರು.

Leave a Reply

Your email address will not be published. Required fields are marked *

Back to top button