ಶಿವಮೊಗ್ಗದಲ್ಲಿ ಅಂಗಡಿಗೆ ನುಗ್ಗಿ ಚಾಕುವಿನಿಂದ ಇರಿತ|ಸಯ್ಯದ ಬರ್ಕತ್ ಪ್ರಾಣಾಪಾಯದಿಂದ ಪಾರು|ಕೆಲವೇ ಗಂಟೆಗಳಲ್ಲಿ ಮೂವರು ದುಷ್ಕರ್ಮಿಗಳ ಬಂಧನ-UPDATED STORY
ಸಯ್ಯದ್ ಬರ್ಕತ್ ಅವರ ಮೇಲೆ ಹಲ್ಲೆ ನಡೆದ ನಂತರ ಅಮೀರ್ ಅಹಮದ್ ಸರ್ಕಲ್ ಸೇರಿದಂತೆ ಹಲವೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ದೊಡ್ಡಪೇಟೆ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಿವಮೊಗ್ಗ : ಹಳೆ ದ್ವೇಷದ ಹಿನ್ನಲೆಯಲ್ಲಿ ಗುಂಪೊಂದು ಯುವಕನೋರ್ವನಿಗೆ ಚಾಕುವಿನಿಂದ ಇರಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ನಡೆದಿದೆ.
ಅಮೀರ್ ಅಹಮ್ಮದ್ ಸರ್ಕಲ್ ಬಳಿ ಸಿನಿಮೀಯ ರೀತಿಯಲ್ಲಿ ಮೊಬೈಲ್ ಅಂಗಡಿಯೊಂದಕ್ಕೆ ನುಗ್ಗಿದ್ದ ದುಷ್ಕರ್ಮಿಗಳು ಏನಾಗುತ್ತಿದೆ ಎಂದು ಅನ್ನುವಷ್ಟರಲ್ಲಿ ಸಯ್ಯದ್ ಬರ್ಕತ್ (32) ಎಂಬುವರಿಗೆ ಚಾಕುವಿನಿಂದ ಇರಿದಿದ್ದಾರೆ. ಘಟನೆಯ ಪರಿಶೀಲನೆ ನಡೆಸಿರುವ ದೊಡ್ಡಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗಾಯಗೊಂಡಿದ್ದ ಸಯ್ಯದ್ ಬರ್ಕತ್ ಅವರನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.
ಚಾಕು ಇರಿತ ಹಿನ್ನಲೆ| ಬಿಗಿ ಬಂದೋಬಸ್ತ್|
ಈ ಮಧ್ಯೆ ಸಯ್ಯದ್ ಬರ್ಕತ್ ಅವರ ಮೇಲೆ ಹಲ್ಲೆ ನಡೆದ ನಂತರ ಅಮೀರ್ ಅಹಮದ್ ಸರ್ಕಲ್ ಸೇರಿದಂತೆ ಹಲವೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಯಾವುದೇ ಅಹಿತಕರ ಘಟನೆ ನಡೆಯದಂತೆ ದೊಡ್ಡಪೇಟೆ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಲ್ಲೆ ನಡೆಸಿದ್ದ ಮೂವರು ದುಷ್ಕರ್ಮಿಗಳ ಬಂಧನ (UPDATED)
ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ದೊಡ್ಡಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೊಹಮ್ಮದ್ ಶಾಬಾಜ್ (22), ಆಕಾಶ್ (20) ಹಾಗೂ ದಾದಾಪೀರ್ ಬಂಧಿತ ಆರೋಪಿಗಳಾಗಿದ್ದಾರೆ. ಇದರಲ್ಲಿ ಮೂರನೇ ಆರೋಪಿ ದಾದಾಪೀರ್ ಮೊದಲಿಬ್ಬರು ಆರೋಪಿಗಳಿಗೆ ಚಾಕು ನೀಡಿದ್ದ ಎಂದು ತಿಳಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನಕುಮಾರ್, ವೈಯಕ್ತಿಕ ವೈಷಮ್ಯದ ಹಿನ್ನೆಲೆಯಲ್ಲಿ ಘಟನೆ ನಡೆದಿದ್ದು, ಗಾಯಾಳು ಹಾಗೂ ಆರೋಪಿಗಳು ಪರಸ್ಪರ ಪರಿಚಯದವರಾಗಿದ್ದಾರೆ.
ಇರಿತಕ್ಕೊಳಗಾಗಿರುವ ಸೈಯದ್ ಬರ್ಕತ್ ಅವರಿಗೆ ಸಣ್ಣ ಪ್ರಮಾಣದ ಗಾಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನಕುಮಾರ್ ಪತ್ರಿಕಾ ಪ್ರಕಟಣೆ ಮೂಲಕ ಅಧಿಕೃತವಾಗಿ ತಿಳಿಸಿದ್ದಾರೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ̤








