ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಧರಣಿ|ಡಿಸಿ ಕಚೇರಿಗೆ ನುಗ್ಗಲು ವಿಫಲ ಯತ್ನ|ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರಿಕೃಷ್ಣ ಮಾತನಾಡಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣ ನುಂಗಿದ ಸಚಿವ ನಾಗೇಂದ್ರ ಅವರು ದಲಿತನೆಂಬ ಜಾತಿ ಪ್ಲೇಕಾರ್ಡ್ ಬಳಸಿ ರಕ್ಷಣೆ ಪಡೆಯಲು ಮೊರೆ ಹೋಗಿದ್ದಾರೆ ಎಂದು ಆರೋಪಿಸಿದರು.

ಶಿವಮೊಗ್ಗ: ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಭಾಗಿಯಾಗಿರುವ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಬಿಜೆಪಿ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಗುರುವಾರದಂದು 4 ನೇ ದಿನಕ್ಕೆ ಕಾಲಿಟ್ಟಿದೆ.
ಇಡೀ ದಿನ ಘೋಷಣೆ, ಭಾಷಣಕ್ಕೆ ಸೀಮಿತವಾಗಿದ್ದ ಪ್ರತಿಭಟನೆ, ಸಂಜೆ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆದಿದೆ.
ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು.
ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ನೇತೃತ್ವದಲ್ಲಿ ಪ್ರತಿಭಟನಾಕಾರರು ಪೊಲೀಸ್ ಭದ್ರತೆಗೆ ಹಾಕಿದ್ದ ಬ್ಯಾರಿಕೇಡ್ ತಳ್ಳಿ ಡಿಸಿ ಕಚೇರಿಯೊಳಗೆ ನುಗ್ಗುವ ವಿಫಲ ಯತ್ನ ನಡೆಸಿದರು.
ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ತಡೆಯುವಲ್ಲಿ ಯಶಸ್ವಿಯಾದರು.
ಈ ವೇಳೆ ಪ್ರತಿಭಟನಾ ನಿರತ ಕಾರ್ಯಕರ್ತರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಲಾಯಿತು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರಿಕೃಷ್ಣ ಮಾತನಾಡಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣ ನುಂಗಿದ ಸಚಿವ ನಾಗೇಂದ್ರ ಅವರು ದಲಿತನೆಂಬ ಜಾತಿ ಪ್ಲೇಕಾರ್ಡ್ ಬಳಸಿ ರಕ್ಷಣೆ ಪಡೆಯಲು ಮೊರೆ ಹೋಗಿದ್ದಾರೆ ಎಂದು ಆರೋಪಿಸಿದರು.
ಇದನ್ನು ವಾಲ್ಮೀಕಿ ಸಮಾಜ ಒಪ್ಪಲ್ಲ ಎಂದ ಹರಿಕೃಷ್ಣ , ಸಿಎಂ ತಕ್ಷಣ ರಾಜೀನಾಮೆ ಪಡೆಯದೇ ಇಂತವರ ರಕ್ಷಣೆಗೆ ಮುಂದಾದರೆ ವಾಲ್ಮೀಕಿ ಸಮುದಾಯ ದಂಗೆ ಏಳುವ ಕಾಲ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.
ಅನಿರ್ದಿಷ್ಟಾವಧಿ ಧರಣಿಯಲ್ಲಿ ಸರಣಿಯಲ್ಲಿ ವಿವಿಧ ತಾಲೂಕುಗಳ ಬಿಜೆಪಿ ಮುಖಂಡರು ಪಾಲ್ಗೊಳ್ಳುತ್ತಿದ್ದು, ಇಂದು ಗ್ರಾಮಾಂತರ ಕ್ಷೇತ್ರದ ಕಾರ್ಯಕರ್ತರು ಮುಖಂಡರು ಭಾಗಿಯಾಗಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ






