DistrictEducationKarnatakaShivamogga

ಎಸ್.ಎಸ್.ಎಲ್.ಸಿಯಲ್ಲಿ ತೃತೀಯ ಭಾಷೆ ಇನ್ಮುಂದೆ ಗ್ರೇಡಿಂಗ್‌|ಪಾಸ್‌-ಫೇಲ್ ಪದ್ದತಿ ರದ್ದು-ಸಚಿವ ಎಸ್. ಮಧು ಬಂಗಾರಪ್ಪ

ಇದುವರೆಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಒಟ್ಟು 625 ಅಂಕಗಳಿಗೆ ನಡೆಯುತ್ತಿತ್ತು. ಆದರೆ ಈಗ ಹಿಂದಿ ವಿಷಯದ 100 ಅಂಕಗಳನ್ನು ಹೊರಗಿಟ್ಟಿರುವುದರಿಂದ, ವಿದ್ಯಾರ್ಥಿಗಳ ಫಲಿತಾಂಶ ಕೇವಲ 525 ಅಂಕಗಳಿಗೆ ಮಾತ್ರ ಪರಿಗಣಿಸಲಸ್ಪಡುತ್ತದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಬೆಂಗಳೂರು: ರಾಜ್ಯದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರವು ಗುರುವಾರದಂದು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಇನ್ಮುಂದೆ ಎಸ್.ಎಸ್.ಎಲ್.ಸಿ ಪರೀಕ್ಷೆಗಳಲ್ಲಿ ‘ತೃತೀಯ ಭಾಷೆ’ಯನ್ನು ಗ್ರೇಡಿಂಗ್ ವ್ಯವಸ್ಥೆಗೆ ಒಳಪಡಿಸಲಾಗುವುದು ಎಂದು ಹೇಳಿದರು.

ಇದುವರೆಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಒಟ್ಟು 625 ಅಂಕಗಳಿಗೆ ನಡೆಯುತ್ತಿತ್ತು. ಆದರೆ ಈಗ ಹಿಂದಿ ವಿಷಯದ 100 ಅಂಕಗಳನ್ನು ಹೊರಗಿಟ್ಟಿರುವುದರಿಂದ, ವಿದ್ಯಾರ್ಥಿಗಳ ಫಲಿತಾಂಶ ಕೇವಲ 525 ಅಂಕಗಳಿಗೆ ಮಾತ್ರ ಪರಿಗಣಿಸಲಸ್ಪಡುತ್ತದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಇನ್ಮುಂದೆ ತೃತೀಯ ಭಾಷೆಯಲ್ಲಿ ಪಾಸ್ ಅಥವಾ ಫೇಲ್ ಎಂಬ ಪದ್ಧತಿ ಇರುವುದಿಲ್ಲ. ಅಂತಿಮ ಫಲಿತಾಂಶದ ಅಂಕಗಳಿಗೆ ತೃತೀಯ ಭಾಷೆಯ ಅಂಕಗಳನ್ನು ಪರಿಗಣಿಸದೇ, ಗ್ರೇಡಿಂಗ್ ಪದ್ದತಿಯಲ್ಲಿ ಎ, ಬಿ, ಸಿ, ಡಿ ಎಂದು ನೀಡಲಾಗುವುದು ಎಂದು ಹೇಳಿದರು.

ಹಿಂದಿ, ಸಂಸ್ಕೃತ, ತುಳು, ಮರಾಠಿ, ಅರೇಬಿಕ್ ಸೇರಿದಂತೆ ಪಠ್ಯಕ್ರಮದಲ್ಲಿರುವ ಎಲ್ಲಾ ತೃತೀಯ ಭಾಷೆಗಳಿಗೂ ಈ ನಿಯಮ ಅನ್ವಯವಾಗಲಿದೆ. ಈ ಕುರಿತು ಅಧಿಕೃತ ಆದೇಶವನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ತಿಳಿಸಿದರು.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಉಚಿತವಾಗಿ ‘ನೈತಿಕ ಶಿಕ್ಷಣ’ ಪುಸ್ತಕಗಳನ್ನು ಒದಗಿಸಲಾಗುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಇದು ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ಸರ್ಕಾರದ ಹೆಜ್ಜೆಯಾಗಿದೆ ಎಂದರು.

ಮಾನಸಿಕ ಆರೋಗ್ಯ ಮತ್ತು ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿರ್ಬಂಧಿಸುವ ಮಹತ್ವದ ಪ್ರಸ್ತಾಪವನ್ನು ಸದನದಲ್ಲಿ ಚರ್ಚಿಸಲಾಗಿದ್ದು, ಎಲ್ಲರಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

ಈ ಸಮಸ್ಯೆಯು ಕೇವಲ ಸರ್ಕಾರದ ಮಟ್ಟದಲ್ಲಿ ಬಗೆಹರಿಯುವುದಿಲ್ಲ, ಪೋಷಕರು ತಮ್ಮ ಮಕ್ಕಳ ಮೊಬೈಲ್ ಬಳಕೆಯ ಮೇಲೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು ಸಚಿವ ಮಧು ಬಂಗಾರಪ್ಪ ಮನವಿ ಮಾಡಿದರು.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಸಚಿವ ಮಧು ಬಂಗಾರಪ್ಪ ಅವರು “ಹಿಂದಿ ಹೇರಿಕೆ ವಿರೋಧಿ ಕರ್ನಾಟಕ ಒಕ್ಕೂಟ” ದವರೊಂದಿಗೆ ಚರ್ಚೆ ನಡೆಸಿದರು.

ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಅಗ್ರಸ್ಥಾನವಿರಬೇಕು ಮತ್ತು ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳ ಮೇಲೆ ಅನ್ಯ ಭಾಷೆಯ ಹೇರಿಕೆ ಇರಬಾರದು ಎಂಬುದು ನಮ್ಮ ಸರ್ಕಾರದ ಸ್ಪಷ್ಟ ನಿಲುವಾಗಿದೆ ಎಂದು ಹೇಳಿದರು.

“ಪಾಸ್ ವಿಥೌಟ್ ಹಿಂದಿ” ಶಾಲಾ ಹಂತದಲ್ಲಿ ಹಿಂದಿ ವಿಷಯದಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿರಬಾರದು ಮತ್ತು ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಬಾರದು ಎಂಬ ಕಾನೂನು ಜಾರಿಗೊಳಿಸುವ ಕುರಿತು ಒಕ್ಕೂಟವು ಒತ್ತಾಯಿಸಿ, ಸಲ್ಲಿಸಿರುವ ಮನವಿಯನ್ನು ಸಕಾರಾತ್ಮಕವಾಗಿ ಸ್ವೀಕರಿಸಲಾಗಿದೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಶಿಕ್ಷಣ ಇಲಾಖೆಯ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕನ್ನಡ ಪರ ಸಂಘಟನೆಗಳು ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕುವ ನಿರ್ಧಾರವನ್ನು ತಕ್ಷಣವೇ ಕೈಬಿಡಬೇಕು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಾಂತಿಯುತವಾಗಿ ಸಹಕರಿಸಬೇಕು ಎಂಬ ಸಚಿವ ಮಧು ಬಂಗಾರಪ್ಪ ಅವರ ಮನವಿಗೆ ಹೋರಾಟಗಾರರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ನಮ್ಮ ನೆಲ, ನಮ್ಮ ಭಾಷೆ ಮತ್ತು ನಮ್ಮ ವಿದ್ಯಾರ್ಥಿಗಳ ಭವಿಷ್ಯ ಕಾಪಾಡಲು ಸರ್ಕಾರ ಬದ್ಧವಾಗಿದೆ. ಯಾವುದೇ ಕಾರಣಕ್ಕೂ ಅನ್ಯ ಭಾಷೆಯ ಹೇರಿಕೆಯನ್ನು ಸಹಿಸುವುದಿಲ್ಲ ಎಂದು ಇದೇ ವೇಳೆ ಮಧು ಬಂಗಾರಪ್ಪ ಅಭಯ ನೀಡಿದರು.

ಹಿರಿಯ ಕನ್ನಡ ಪರ ಹೋರಾಟಗಾರರಾದ ಸಾ.ರ ಗೋವಿಂದ್, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಧ್ಯಕ್ಷ ಶಿವರಾಮೇಗೌಡ, ರಾಧಾಕೃಷ್ಣ, ರಾಮಪ್ರಸಾದ್, ಪಾರ್ವತೀಶ್ ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಜರಿದ್ದರು.

Follow Us

Leave a Reply

Your email address will not be published. Required fields are marked *

Back to top button