Updated Version: ಭಾರತದಲ್ಲಿ ತಯಾರಾದ ಚಿಕ್ಕ ”ಚಿಪ್” ವಿಶ್ವದಲ್ಲಿ ಅತಿದೊಡ್ಡ ಬದಲಾವಣೆಗೆ ಕಾರಣವಾಗಲಿದೆ-Narendra Modi
ಸೆಮಿಕಾನ್ ಇಂಡಿಯಾ - 2025 ಸೆಪ್ಟೆಂಬರ್ 2 ರಿಂದ 4 ರವರೆಗೆ ನಡೆಯುವ ಮೂರು ದಿನಗಳ ಸಮ್ಮೇಳನದಲ್ಲಿ ಮುಖ್ಯವಾಗಿ ಭಾರತದಲ್ಲಿ ದೃಢವಾದ, ಸ್ಥಿತಿಸ್ಥಾಪಕ ಮತ್ತು ಸುಸ್ಥಿರ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಮುನ್ನಡೆಸುವತ್ತ ಗಮನಹರಿಸಲಿದೆ.

ಜಪಾನ್ ಹಾಗೂ ಚೀನಾ ಯಶಸ್ವಿ ಪ್ರವಾಸದಿಂದ ಸೋಮವಾರ ರಾತ್ರಿ ಭಾರತಕ್ಕೆ ವಾಪಸಾಗಿರುವ ಪ್ರಧಾನಿ ನರೇಂದ್ರ ಮೋದಿ ಪ್ರವಾಸದ ದಣಿವಿನ ಮಧ್ಯೆಯು ಇಂದು ಮಂಗಳವಾರದಂದು ‘ಸೆಮಿಕಾನ್ ಇಂಡಿಯಾ – 2025’ ಅನ್ನು ನವದೆಹಲಿಯ ಯಶೋಭೂಮಿಯಲ್ಲಿ ಉದ್ಘಾಟಿಸಿದರು.

ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ವೇಗವರ್ಧಿಸುವ ಗುರಿಯನ್ನು ಹೊಂದಿರುವ ಈ ಸೆಮಿಕಾನ ಇಂಡಿಯಾ ಸಮಾವೇಶದಲ್ಲಿ ವಿವಿಧ ದೇಶಗಳ ಗಣ್ಯ ಅತಿಥಿಗಳು, ನವೋದ್ಯಮಗಳೊಂದಿಗೆ ಸಂಬಂಧ ಹೊಂದಿರುವ ಉದ್ಯಮಿಗಳು ಮತ್ತು ದೇಶಾದ್ಯಂತ ವಿವಿಧ ರಾಜ್ಯಗಳಿಂದ ಬಂದಿದ್ದ ಯುವ ವಿದ್ಯಾರ್ಥಿಗಳೂ ಭಾಗವಹಿಸಿದ್ದಾರೆ.
ಈ ಸಂದಭ೯ದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ತಂತ್ರಜ್ಞಾನದ ಬಗೆಗಿನ ತಮ್ಮ ಉತ್ಸಾಹ ಯಾವಾಗಲೂ ಸದಾಕಾಲ ಮುಂದುವರೆಯುತ್ತದೆ.
ಇತ್ತೀಚೆಗೆ ಜಪಾನ್ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರೊಂದಿಗೆ ಟೋಕಿಯೊ ಎಲೆಕ್ಟ್ರಾನ್ ಕಾರ್ಖಾನೆಗೆ ಭೇಟಿ ನೀಡುವ ಅವಕಾಶ ಸಿಕ್ಕಿತು ಎಂದು ಹೇಳಿದರು. ಆ ಕಂಪನಿಯ ಸಿಇಒ ಇಂದು ಇಲ್ಲಿ ಪ್ರೇಕ್ಷಕರ ನಡುವೆ ಇದ್ದಾರೆ ಎಂದರು.
ಸೆಮಿಕಾನ್ ಇಂಡಿಯಾದಲ್ಲಿ ಭಾಗವಹಿಸಿದ್ದ ಎಲ್ಲಾ ಗಣ್ಯ ಅತಿಥಿಗಳನ್ನು ಪ್ರಧಾನಿ ಸ್ವಾಗತಿಸಿದರು ಮತ್ತು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ರಾಷ್ಟ್ರದತ್ತ ಭಾರತದ ಪ್ರಯಾಣದಲ್ಲಿ ಅವರು ಪ್ರಮುಖ ಪಾಲುದಾರರು ಎಂದು ದೃಢಪಡಿಸಿದರು.
ಇನ್ನು ಇತ್ತೀಚೆಗೆ ಬಿಡುಗಡೆಯಾದ ಈ ವರ್ಷದ ಮೊದಲ ತ್ರೈಮಾಸಿಕದ ಜಿಡಿಪಿ ಅಂಕಿಅಂಶಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಮತ್ತೊಮ್ಮೆ, ಭಾರತವು ಪ್ರತಿಯೊಂದು ನಿರೀಕ್ಷೆ, ಪ್ರತಿಯೊಂದು ಅಂದಾಜು ಮತ್ತು ಪ್ರತಿಯೊಂದು ಮುನ್ಸೂಚನೆಯನ್ನು ಮೀರಿಸಿ ಬೆಳಿದಿದೆ ಎಂದು ಹೇಳಿದರು.
ಪ್ರಪಂಚದಾದ್ಯಂತದ ಆರ್ಥಿಕತೆಗಳು ಆರ್ಥಿಕ ಸ್ವಾರ್ಥದಿಂದ ನಡೆಸಲ್ಪಡುವ ಕಳವಳಗಳು ಮತ್ತು ಸವಾಲುಗಳನ್ನು ಎದುರಿಸುತ್ತಿರುವಾಗ, ಭಾರತವು ಶೇಕಡಾ 7.8 ರಷ್ಟು ಬೆಳವಣಿಗೆಯ ದರವನ್ನು ಸಾಧಿಸಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾರತದ ತ್ವರಿತ ಬೆಳವಣಿಗೆಯು ಕೈಗಾರಿಕೆಗಳಲ್ಲಿ ಮತ್ತು ಪ್ರತಿಯೊಬ್ಬ ನಾಗರಿಕರಲ್ಲಿ ಹೊಸ ಶಕ್ತಿಯನ್ನು ತುಂಬುತ್ತಿದೆ ಈ ಬೆಳವಣಿಗೆಯ ಪಥವು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ವೇಗವಾಗಿ ಮುನ್ನಡೆಸುತ್ತಿದೆ ಎಂದು ಪ್ರಧಾನಿ ಮೋದಿ ದೃಢ ಆಶಯ ವ್ಯಕ್ತಪಡಿಸಿದರು.
21 ನೇ ಶತಮಾನದ ಶಕ್ತಿಯು ಈಗ ಸಣ್ಣ ಚಿಪ್ನಲ್ಲಿ ಕೇಂದ್ರೀಕೃತವಾಗಿದೆ ಎಂದ ಪ್ರಧಾನಿ ಮೋದಿ, ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಈ ಚಿಪ್ಗಳು ಜಾಗತಿಕ ಪ್ರಗತಿಯನ್ನು ಗಮನಾರ್ಹವಾಗಿ ವೇಗಗೊಳಿಸುವ ಸಾಮರ್ಥ್ಯವನ್ನು ಹೊಂದಿವೆ. ಜಾಗತಿಕ ಸೆಮಿಕಂಡಕ್ಟರ್ ಮಾರುಕಟ್ಟೆ ಈಗಾಗಲೇ $600 ಬಿಲಿಯನ್ ತಲುಪಿದೆ ಮತ್ತು ಮುಂಬರುವ ವರ್ಷಗಳಲ್ಲಿ ಇದು $1 ಟ್ರಿಲಿಯನ್ ಮೀರುವ ನಿರೀಕ್ಷೆಯಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರುಗಳಾದ ಅಶ್ವಿನಿ ವೈಷ್ಣವ್, ಜಿತನ್ ಪ್ರಸಾದ್ , ದೆಹಲಿ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ, ಒಡಿಸಾ ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಝಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
ವರದಿ: ವಿಜಯೀಂದ್ರ ಹುನಗುಂದ್
ಪ್ರಧಾನ ಸಂಪಾದಕರು,
ನ್ಯೂ ಇಂಡಿಯಾ ಕನ್ನಡ.ಕಾಮ್



