ಶಿವಮೊಗ್ಗ:ಸರ್ಕಾರಿ ದೇವಸ್ಥಾನಗಳಲ್ಲಿ ನಿಲ್ಲದ ಭ್ರಷ್ಟಾಚಾರ|ಶ್ರೀ ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯ ವಿರುದ್ದ ತನಿಖೆಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ
ಶ್ರೀ ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯದಲ್ಲಿ, ಸಾರ್ವಜನಿಕರಿಂದ ಸೇವಾ ಹಣ ಪಡೆದು ನಂತರ ದೇವಸ್ಥಾನದ ಖಾತೆಗೆ ಜಮಾ ಮಾಡದೇ ಇರುವ ಕುರಿತು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಶಿವಮೊಗ್ಗ ಡಿ.05, ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳನ್ನು ಸ್ವಂತ ಆಸ್ತಿ ಎಂಬಂತೆ ಬಳಸುತ್ತಿರುವ ಆರ್ಚಕರ ವಿರುದ್ದ ಶಿವಮೊಗ್ಗ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
ಭಕ್ತರು ನೀಡುವ ಕಾಣಿಕೆಗಳಿಗೆ ಸೇವಾ ರಸೀದಿ ನೀಡದೇ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿರುವ ನೌಕರರು ಹಾಗು ಆರ್ಚಕರ ವಿರುದ್ದ ಕ್ರಮ ಜರುಗಿಸಬೇಕೆಂದು ಆಯಾ ತಾಲೂಕು ತಹಶೀಲ್ದಾರ ಅವರಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಖಡಕ ಸೂಚನೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿನ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಕೇಳಿ ಬಂದ ದೂರುಗಳ ಹಿನ್ನಲೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಭಾಗವಹಿಸಿದ ಮಾತನಾಡಿದರು.
ಶ್ರೀ ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯ
ಸೇವಾ ಹಣಕ್ಕೆ ರಶೀದಿ ನೀಡದ ವಿರುದ್ದ ಕ್ರಮಕ್ಕೆ ಸೂಚನೆ
ಅಧಿಸೂಚಿತ ದೇವಾಲಯ ವ್ಯಾಪ್ತಿಯಲ್ಲಿ ಬರುವ ಶ್ರೀ ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯದಲ್ಲಿನ ಅರ್ಚಕರು ಮತ್ತು ನೌಕರರು ಸೇವಾದರ ಪಟ್ಟಿಯನ್ನು ಆಳವಡಿಸದೇ ನಿಯಮ ಉಲ್ಲಂಘಿಸಿದ್ದಾರೆ ಎಂದರು.

ಇನ್ನು ದೇಣಿಗೆ ನೀಡಿದ ಭಕ್ತಾಧಿಗಳಿಗೆ ರಶೀದಿಯನ್ನು ನೀಡಿರುವದಿಲ್ಲ. ಇದರಿಂದ ದೇವಾಲಯದ ಆದಾಯಕ್ಕೆ ಕುಂಠಿತವಾಗಿದೆ.
ಸಕ್ಷಮ ಪ್ರಾಧಿಕಾರದಿಂದ ಅನುಮತಿಯನ್ನು ಪಡೆಯದೇ, ದೇವಸ್ಥಾನದ ರಥೋತ್ಸವದ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿದ್ದು, ಹಾಗೂ ಪತ್ರಿಕೆಯಲ್ಲಿ ಸೇವಾವಿವರದ ಮೊತ್ತವನ್ನು ಸ್ವ- ಇಚ್ಛೆಯಿಂದ ಮುದ್ರಿಸಿರುತ್ತಾರೆ ಎಂಬ ಆರೋಪ ಕೇಳಿ ಬಂದಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಹೀಗೆ ಸಾರ್ವಜನಿಕರಿಂದ ಸಾಕಷ್ಟು ಹಣ ಪಡೆದು ನಂತರ ದೇವಸ್ಥಾನದ ಖಾತೆಗೆ ಜಮಾ ಮಾಡದೇ ಇರುವ ಕುರಿತು ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಜರುಗಿಸುವದಲ್ಲದೇ ವಿವರವಾದ ವರದಿಯನ್ನು ನೀಡಲು ಶಿವಮೊಗ್ಗ ತಹಶೀಲ್ದಾರ್ ಅವರಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚಿಸಿದರು.
ಇನ್ನು ಶ್ರೀ ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯದ ಆಸ್ತಿಯನ್ನು ಸರ್ವೆ ಮಾಡಿ ವರದಿ ಸಲ್ಲಿಸುವಂತೆ ಈ ಕೂಡಲೇ ಕ್ರಮವಹಿಸಬೇಕೆಂದು ತಹಶೀಲ್ದಾರಿಗೆ ಆದೇಶ ನೀಡಿದರು.
ಮುಜರಾಯಿ ನಾಮಫಲಕ-ಸಿಸಿ ಟಿವಿ ಅಳವಡಿಸಲು ಡಿಸಿ ಸೂಚನೆ
ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ಮುಜರಾಯಿ ದೇವಾಲಯಗಳಲ್ಲಿ ಕಡ್ಡಾಯವಾಗಿ ಧಾರ್ಮಿಕ ದತ್ತಿ ಇಲಾಖೆ ಮುಜರಾಯಿ ದೇವಾಲಯ ಕರ್ನಾಟಕ ಸರ್ಕಾರ ಎಂದು ನಾಮಫಲಕ ಅಳವಡಿಸಲು ಆಯಾ ತಾಲೂಕಿನ ತಹಶೀಲ್ದಾರುಗಳು ಕ್ರಮ ವಹಿಸಬೇಕು.

ಅದೇ ರೀತಿ ಮುಜರಾಯಿ ದೇವಾಲಯಗಳಲ್ಲಿ ಕಡ್ಡಾಯವಾಗಿ ಸಿ.ಸಿ ಟಿ.ವಿ ಅಳವಡಿಸುವಂತೆ ಮತ್ತು ಅಧಿಸೂಚಿತ ದೇವಾಲಯಗಳಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ನಿಷೇದಿತ ದೇವಾಲಯದ ಎಂದು ನಾಮಫಲಕ ಅಳವಡಿಸುಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಭದ್ರಾವತಿಯಲ್ಲಿ ವೈಕುಂಠ ಏಕಾದಶಿ ಹೆಸರಲ್ಲಿ ಹಣ ಗುಳುಂ
ವರದಿ ನೀಡಲು ತಹಶೀಲ್ದಾರರಿಗೆ ಡಿಸಿ ಸೂಚನೆ
ಭದ್ರಾವತಿ ತಾಲ್ಲೂಕು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಕಾರ್ಯಕ್ರಮದಲ್ಲಿ ನಡೆದ ಹಣ ದುರುಪಯೋಗದ ಕೂಡಲೇ ತಕ್ಷಣದ ವರದಿಯನ್ನು ಸಲ್ಲಿಸಬೇಕೆಂದು ಭದ್ರಾವತಿ ತಹಶೀಲ್ದಾರ್ ಅವರಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬ ದೇವಾಲಯ
ಭಕ್ತರೊಂದಿಗೆ ಒರಟಾಗಿ ವರ್ತಿಸುವ ಕಾರ್ಯನಿರ್ವಹಣಾಧಿಕಾರಿ
ತಕ್ಷಣ ವರದಿ ನೀಡಿ, ಕ್ರಮಕ್ಕೆ ಡಿಸಿ ಸೂಚನೆ
ಸೊರಬ ತಾಲ್ಲೂಕಿನ ಶ್ರೀ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಭ ದೇವಾಲಯಕ್ಕೆ ಹರಿಕೆ ರೂಪದಲ್ಲಿ ಬಂದಂತಹ ಸೀರೆಗಳನ್ನು ಶಿಷ್ಠಾಚಾರದ ನೆಪದಲ್ಲಿ ಕಾರ್ಯನಿರ್ವಹಣಾಧಿಕಾರಿ ಅವರು, ಮನಬಂದಂತೆ ಹಂಚಿಕೆ ಮಾಡುತ್ತಿರುವುದರ ಬಗ್ಗೆ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಹರಕೆ ರೂಪದಲ್ಲಿ ಸ್ವೀಕೃತವಾದ ಸೀರೆ, ಅಕ್ಕಿ, ಎಣ್ಣೆ ಇತರೆ ವಸ್ತುಗಳ ಬಗ್ಗೆ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಅವರು, ಯಾವುದೇ ರಿಜಿಸ್ಟರ್‌ಗಳ ನಿರ್ವಹಣೆ ಮಾಡಿರುವದಿಲ್ಲ.
ಇನ್ನು ದೇವಾಲಯಕ್ಕೆ ಬರುವಂತಹ ಭಕ್ತಾಧಿಗಳೊಂದಿಗೆ ಅವರು ತುಂಬಾ ವರಟಾಗಿ ವರ್ತಿಸುತ್ತಿರುತ್ತಾರೆ ಎಂಬ ಗಂಭೀರ ದೂರನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಕೂಡಲೇ ವಿವರವಾದ ವರದಿಯನ್ನು ನೀಡುವಂತೆ ಸೊರಬದ ತಹಶೀಲ್ದಾರಿಗೆ ಸೂಚಿಸಿದರು.
ಇನ್ನು ಸಾಗರ ತಾಲ್ಲೂಕಿನ ಮಹಾಗಣಪತಿ ದೇವಾಲಯದ 2024-25ನೇ ಸಾಲಿನ ಜಾತ್ರಾ ಹೆಚ್ಚುವರಿ ಖರ್ಚು ಕುರಿತು ಹಾಗೂ 2025-26ನೇ ಸಾಲಿನಲ್ಲಿ ಸ್ಪಾಲ್ ಹರಾಜಿನಿಂದ ಸಂಗ್ರಹವಾದ ಮೊತ್ತವನ್ನು ವಿಳಂಬವಾಗಿ ದೇವಾಲಯದ ಖಾತೆಗೆ ಜಮಾ ಮಾಡಿರುವ ಕುರಿತು ವಿವರವಾದ ವರದಿಯನ್ನು ಸಲ್ಲಿಸುವ ಬಗ್ಗೆ ತಹಶೀಲ್ದಾರ ಅವರಿಗೆ ಆದೇಶ ನೀಡಿದರು.
ಸಭೆಯಲ್ಲಿ ಜಿಲ್ಲಾ ವ್ಯಾಪ್ತಿಯ ಮುಜರಾಯಿ “ಸಿ” ವರ್ಗದ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ರಚನೆ, ಜೀರ್ಣೋದ್ದಾರ ಹಾಗೂ ಅರ್ಚಕರ ನೇಮಕಾತಿ ಹಾಗೂ ಇತರೆ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು.
ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿ ‘ಸಿ’ ವರ್ಗದ ದೇವಸ್ಥಾನಗಳ ಸುಗಮ ಆಡಳಿತ ನಿರ್ವಹಣೆಗೆ ವ್ಯವಸ್ಥಾಪನಾ ಸಮಿತಿಯನ್ನು ರಚನೆ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಶ್ರೀ ಜೇನುಕಲ್ಲಮ್ಮ ದೇವಸ್ಥಾನ, ಹಾಗೂ “ಸಿ” ವರ್ಗದ 27 ಸಂಸ್ಥೆಗಳ ವ್ಯವಸ್ಥಾಪನಾ ಸಮಿತಿಯನ್ನ ರಚಿಸಲಾಯಿತು.
ಸಭೆಯಲ್ಲಿ ಧಾರ್ಮಿಕ ಪರಿಷತ್ ಸದಸ್ಯರಾದ ಸೆಲ್ವಕುಮಾರ್.ಸಿ, ವಿಧೂಶಿ ಗೀತಾದಾತಾರ್, ಎಂ.ಶಿವಲಿಂಗಪ್ಪ, ವರಲಕ್ಷ್ಮೀ, ಎನ್. ಉಮಾಪತಿ, ಎಸ್.ಡಿ ಪ್ರವೀಣ್ ಕುಮಾರ್, ಮುಜರಾಯಿ ತಹಶೀಲ್ದಾರರು ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂ ಇಂಡಿಯಾ ಕನ್ನಡ
ಶಿವಮೊಗ್ಗ.








