ಹೆಚ್ಚುವರಿ ಅವಧಿ ಗೌರವಧನಕ್ಕೆ ಕೊಕ್, ಸೇವಾಪತ್ರ ನೀಡಲು ತಕರಾರು|ಪ್ರಾಂಶುಪಾಲರ ಹಠಮಾರಿ ಧೋರಣೆ|ಸರ್ಕಾರಿ ಪದವಿ ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ
ಗುಂಪುಗಾರಿಕೆ ತಾರತಮ್ಯ ಧೋರಣೆ ಅನುಸರಿಸುವ ಪ್ರಾಂಶುಪಾಲರಿಂದಾಗಿ ದೇವ್ರು ವರಕೊಟ್ರೂ ಪೂಜಾರಿ ಕೊಡದಂತಾಗಿದೆ ಎಂದು ರಾಜ್ಯ ಪದವಿ ಕಾಲೇಜು ಅತಿಥಿ ಉಪನ್ಯಾಸಕ ಸಮನ್ವಯ ಸಮಿತಿ ಅಧ್ಯಕ್ಷ ಡಾ.ಸೋಮಶೇಖರ್ ಶಿವಮೊಗ್ಗಿ ಆರೋಪಿಸಿದರು.

ಶಿವಮೊಗ್ಗ: ಹೆಚ್ಚುವರಿಯಾಗಿ ಪರೀಕ್ಷಾ ಕಾರ್ಯ ನಿರ್ವಹಿಸಿರುವ ಅವಧಿಯ ಗೌರವಧನ ಮತ್ತು ಸೇವಾಪ್ರಮಾಣ ಪತ್ರ ನೀಡದೇ ಸತಾಯಿಸುತ್ತಿರುವ ಇಬ್ಬರು ಪ್ರಾಂಶುಪಾಲರ ಕ್ರಮವನ್ನು ಖಂಡಿಸಿ , ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರದಂದು ಸಾಂಕೇತಿಕ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಉಪನ್ಯಾಸಕರು ಹೇಳೋದೇನು?
ಕಾರ್ಯನಿರ್ವಹಣೆ ಅವಧಿ ಮತ್ತು ಪರೀಕ್ಷಾ ಕಾರ್ಯನಿರ್ವಹಿಸಿದ ಅವಧಿಯವರೆಗೂ ಗೌರವಧನ ಬಿಡುಗಡೆ ಮಾಡಬೇಕೆಂದು ಸ್ವತಃ ಕಾಲೇಜು ಶಿಕ್ಷಣ ಇಲಾಖೆ ಆದೇಶವಿದ್ದರೂ ಸಾಗರ ಹಾಗೂ ರಿಪ್ಪನಪೇಟೆ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರು ಕ್ಯಾರೇ ಅನ್ನುತ್ತಿಲ್ಲ ಎಂದು ಅತಿಥಿ ಉಪನ್ಯಾಸಕರು ಆರೋಪಿಸದರು.
ಪ್ರಾಂಶುಪಾಲರಿಂದ ಗುಂಪುಗಾರಿಕೆ|
ತಾರತಮ್ಯ ಧೋರಣೆ -ಆರೋಪ|
ಗುಂಪುಗಾರಿಕೆ ತಾರತಮ್ಯ ಧೋರಣೆ ಅನುಸರಿಸುವ ಪ್ರಾಂಶುಪಾಲರಿಂದಾಗಿ ದೇವ್ರು ವರಕೊಟ್ರೂ ಪೂಜಾರಿ ಕೊಡದಂತಾಗಿದೆ ಎಂದು ರಾಜ್ಯ ಪದವಿ ಕಾಲೇಜು ಅತಿಥಿ ಉಪನ್ಯಾಸಕ ಸಮನ್ವಯ ಸಮಿತಿ ಅಧ್ಯಕ್ಷ ಡಾ.ಸೋಮಶೇಖರ್ ಶಿವಮೊಗ್ಗಿ ಆರೋಪಿಸಿದರು.
ಕಾಲೇಜಿನ ಶೈಕ್ಷಣಿಕ ಸೇವಾವಧಿ ಮುಗಿದ ದಿನದ ಬಳಿಕ ಹಲವು ಉಪನ್ಯಾಸಕರು ಬೇರೆ ಬೇರೆ ಕಾಲೇಜುಗಳಲ್ಲಿ ಪರೀಕ್ಷಾ ಕಾರ್ಯ ನಿರ್ವಹಿಸಿದ್ದರೂ 8 ದಿನಗಳ ಗೌರವಧನಕ್ಕೆ ಕೊಕ್ಕೆ ಹಾಕಲಾಗಿದೆ. ಪ್ರಾಂಶುಪಾಲರು ಗೌರವಧನ ನೀಡದಿರಲು ಕಾರಣವೇ ಇಲ್ಲ ಎಂದು ಹೇಳಿದರು.

ಪ್ರಾಂಶುಪಾಲರನ್ನು ಪ್ರಶ್ನಿಸಿದವರಿಗೆ ಮುಂದಿನ ನೇಮಕಾತಿ ವೇಳೆ ಪರಿಗಣಿಸುವುದಿಲ್ಲವೆಂಬ ಬೆದರಿಕೆ ಹಾಕಲಾಗುತ್ತಿದೆ ಎಂದು ಪ್ರತಿಭಟನಾನಿರತ ಉಪನ್ಯಾಸಕರು ಅಳಲು ತೋಡಿಕೊಂಡರು.
ಈಗಾಗಲೇ ಹಲವು ಬಾರಿ ಪ್ರಾದೇಶಿಕ ಜಂಟಿ ಆಯುಕ್ತರು, ಇಲಾಖೆ ನಿರ್ದೇಶಕರು ಅಷ್ಟೇ ಏಕೆ ಸ್ಥಳೀಯ ಶಾಸಕರು ಕೂಡ ನಮ್ಮ ಗೌರವಧನ ಪಾವತಿಸಲು ಒತ್ತಾಯಿಸಿದ್ದರೂ ನ್ಯಾಯಯುತ ಹಣ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟಾರೆ, ಅತಿಥಿ ಉಪನ್ಯಾಸಕರಿಗೆ ಪ್ರಾಂಶುಪಾಲರಿಂದಾಗುತ್ತಿರುವ ತಾರತಮ್ಯ, ಸರ್ವಾಧಿಕಾರಿ ಧೋರಣೆಗೆ ಕಡಿವಾಣ ಹಾಕಬೇಕು. ಗೌರವಧನ ತಡೆಹಿಡಿದ ಪ್ರಾಂಶುಪಾಲರ ಕ್ರಮವನ್ನ ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸೂಕ್ತ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







