ಶಿವಮೊಗ್ಗ ನಿವಾಸಿಗಳೇ ಎಚ್ಚರ..|ನೀವು ತಿನ್ನೋ ಆಹಾರದಲ್ಲಿ ಇದೆ ಕ್ಯಾನ್ಸರ್ಕಾರಕ ಅಂಶ|ಟೇಸ್ಟಿಂಗ್ ಪೌಡರ್ ಬಳಕೆ ವಿರುದ್ದ ಎನ್ಎಸ್ಯುಐ ಪ್ರತಿಭಟನೆ
ತಿಂಡಿ ತಿನಿಸುಗಳನ್ನು ತಯಾರಿಸುವ ಹೊಟೇಲ್, ತಳ್ಳುಗಾಡಿಗಳು ಮತ್ತು ಫಾಸ್ಟ್ಫುಡ್ಗಳೀಗೆ ತೆರಳಿ ಪರಿಶೀಲನೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಬೇಕೆಂದು ಪಾಲಿಕೆ ಆಯುಕ್ತ ಮಾಯಣ್ಣಗೌಡರಿಗೆ ಪ್ರತಿಭಟನಾಕಾರರು ಆಗ್ರಹಿಸಿದರು.

ಶಿವಮೊಗ್ಗ: ಆಹಾರದಲ್ಲಿ ರಾಸಾಯನಿಕ ಬಣ್ಣ ಮತ್ತು ಟೇಸ್ಟಿಂಗ್ ಪೌಡರ ಬಳಕೆ ಮಾಡುವದನ್ನು ತಡೆಗಟ್ಟುವಲ್ಲಿ ಮಹಾನಗರಪಾಲಿಕೆ ವಿಫಲವಾಗಿದೆ ಎಂದು ಆರೋಪಿಸಿ ಜಿಲ್ಲಾ ಎನ್.ಎಸ್.ಯು.ಐ ಕಾರ್ಯಕರ್ತರು ಬುಧವಾರದಂದು ಪ್ರತಿಭಟನೆ ನಡೆಸಿದರು.

ಶಿವಮೊಗ್ಗ ಮಹಾನಗರಪಾಲಿಕೆ ಆವರಣದಲ್ಲಿ ಜಮಾಯಿಸಿದ್ದ ಹಲವಾರು ವಿದ್ಯಾರ್ಥಿ ಕಾಂಗ್ರೆಸ್ ಕಾರ್ಯಕರ್ತರು, ಮಹಾನಗರ ಪಾಲಿಕೆ ವ್ಯಾಪ್ತಿಯ ಬಹುತೇಕ ಫಾಸ್ಟ್ ಫುಡ್ ಸೆಂಟರ್ಗಳಲ್ಲಿ, ತಳ್ಳುಗಾಡಿಗಳಲ್ಲಿ, ಮತ್ತು ಕೆಲವು ಹೊಟೇಲ್ಗಳಲ್ಲಿ ಆಹಾರದಲ್ಲಿ ಬಣ್ಣ, ಟೇಸ್ಟಿಂಗ್ ಪೌಡರ್ ಅನ್ನು ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಆಹಾರ ಸುರಕ್ಷತಾ ಕಾಯ್ದೆ ಪ್ರಕಾರ ಹಾನಿಕಾರಕವಾದ ರಾಸಾಯನಿಕ ಬಣ್ಣ, ಟೇಸ್ಟಿಂಗ್ ಪೌಡರ್ ಬಳಕೆಯನ್ನು ನಿಷೇಧಿಸಲಾಗಿದೆ.

ಆದರೆ ಶಿವಮೊಗ್ಗ ಪಾಲಿಕೆ ಅಧಿಕಾರಿಗಳೂ ಇದನ್ನು ತಡೆಗಟ್ಟುವಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಕೂಡಲೇ ತಿಂಡಿ ತಿನಿಸುಗಳನ್ನು ತಯಾರಿಸುವ ಹೊಟೇಲ್, ತಳ್ಳುಗಾಡಿಗಳು ಮತ್ತು ಫಾಸ್ಟ್ಫುಡ್ ಮಳಿಗೆಗಳಿಗೆ ತೆರಳಿ ಪರಿಶೀಲನೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಬೇಕೆಂದು ಪಾಲಿಕೆ ಆಯುಕ್ತ ಮಾಯಣ್ಣಗೌಡರಿಗೆ ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎನ್ಎಸ್ಯುಐ ಜಿಲ್ಲಾ ಅಧ್ಯಕ್ಷ ವಿಜಯ್ ಕುಮಾರ್, ನಗರ ಅಧ್ಯಕ್ಷ ರವಿಕುಮಾರ್, ಮಧುಸೂದನ್, ಆದಿತ್ಯ ಸುಭಾನ್, ವಿಕ್ರಂ, ವಿಕಾಸ್ ಹಾಲಸ್ವಾಮಿ, ಕೌಶಿಕ್ ಮತ್ತಿತರು ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







