ಬೆಂಗಳೂರು: ದ್ವಿತೀಯ ಪಿಯೂಸಿ ಪೂರ್ವಸಿದ್ದತಾ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದರೂ ಸಹ ಪರೀಕ್ಷೆ ನಡೆಸಿದ ರಾಜ್ಯ ಪಿಯೂಸಿ ಮಂಡಳಿ ನಡೆಗೆ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ರಾಜ್ಯದಲ್ಲಿ ಇಂದು ಮಂಗಳವಾರದಂದು ನಡೆದ ದ್ವಿತೀಯ ಪಿಯುಸಿ ಪೂರ್ವಸಿದ್ಧತಾ ಗಣಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಪರೀಕ್ಷೆಗೂ ಮುನ್ನವೇ ನಿನ್ನೆ ಸೋಮವಾರದಂದು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದೆ.

ಈಗ ಲೀಕ್ ಆಗಿರುವ ಪತ್ರಿಕೆಯಲ್ಲಿರುವ 47 ಪ್ರಶ್ನೆಗಳೂ ಇಂದು ಪರೀಕ್ಷಾ ಕೇಂದ್ರಗಳಲ್ಲಿ ನೀಡಲಾದ ಪತ್ರಿಕೆಯಲ್ಲಿ ಯಥಾವತ್ತಾಗಿ ಇರುವುದು ದೃಢಪಟ್ಟಿದೆ.
ಪೋಷಕರು ಮತ್ತು ಪ್ರಾಮಾಣಿಕ ವಿದ್ಯಾರ್ಥಿಗಳಲ್ಲಿ ಇದು ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಅತ್ಯಂತ ಪ್ರಮುಖವಾದ ‘ಗಣಿತ’ ವಿಷಯದ ಪ್ರಶ್ನೆ ಪತ್ರಿಕೆಯು ಪರೀಕ್ಷೆಗೂ ಮೊದಲೇ ಸೋರಿಕೆಯಾಗಿದ್ದು ರಾಜ್ಯ ಪಿಯು ಮಂಡಳಿ ನಡೆಸುತ್ತಿರುವ ದ್ವಿತೀಯ ಪಿಯುಸಿ ಪೂರ್ವಸಿದ್ಧತಾ ಪರೀಕ್ಷಾ ಪಾವಿತ್ರ್ಯತೆಗೆ ಈಗ ಧಕ್ಕೆ ತಂದಿದೆ.

80 ಅಂಕಗಳ ಪ್ರಶ್ನೆ ಪತ್ರಿಕೆಯು ನಿನ್ನೆ ಸಂಜೆಯೇ ವಿದ್ಯಾರ್ಥಿಗಳ ವಾಟ್ಸಾಪ್‌ಗ್ರೂಪ್‌ಗಳಲ್ಲಿ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿ ಎಲ್ಲೆಡೆ ಹರಿದಾಡಿದೆ.
ಇದು ಪಿಯುಸಿ ಬೋರ್ಡ ಗಮನಕ್ಕೆ ಬಂದರೂ ಸಹ ಅದೇ ಪ್ರಶ್ನೆಪತ್ರಿಕೆ ನೀಡಿ ಇಂದು ಪರೀಕ್ಷೆ ನಡೆಸಿದೆ. ಪರೀಕ್ಷಾ ಮಂಡಳಿಯ ಕಾರ್ಯವೈಖರಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ತಿಂಗಳುಗಟ್ಟಲೆ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ದೊಡ್ಡ ಅನ್ಯಾಯವಾಗಲಿದೆ.
ಹಣ ನೀಡಿ ಪ್ರಶ್ನೆ ಪತ್ರಿಕೆ ಪಡೆದವರು ಸುಲಭವಾಗಿ ಅಂಕ ಗಳಿಸುತ್ತಾರೆ’ ಎಂದು ಪೋಷಕ ವಲಯ ಹಾಗೂ ಸಾರ್ವಜನಿಕರು ಪಿಯೂ ಬೋರ್ಡ್ ನಿರ್ಲಕ್ಷ್ಯದ ವಿರುದ್ದ ಕಿಡಿಕಾರಿದ್ದಾರಲ್ಲದೇ ಈ ಕುರಿತು ತನಿಖೆಗೆ ಆಗ್ರಹಿಸಿದ್ದಾರೆ.
ವರದಿ: ಸೌಮ್ಯ ರೆಡ್ಡಿ
ನ್ಯೂಇಂಡಿಯಾ ಕನ್ನಡ







