ಶಿವಮೊಗ್ಗದಲ್ಲಿ ಪಂಚಪೀಠ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ!ಮೇ 16 ಮತ್ತು 17 ರಂದು ನಡೆಸಲು ತೀರ್ಮಾನ|ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಸಕಲ ಸಿದ್ಧತೆ
ವೀರಶೈವ ಲಿಂಗಾಯತ ಸಮಾಜದ ಮುಖಂಡ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರ ಗೌರವ ಅಧ್ಯಕ್ಷತೆಯಲ್ಲಿ ಪಕ್ಷಾತೀತವಾಗಿ ಸಮಾಜದ ಎಲ್ಲರೂ ಒಂದಾಗಿ ಈ ಉತ್ಸವವನ್ನು ಯಶಸ್ವಿಯಾಗಿ ನಡೆಸಲು ಸಭೆ ತೀರ್ಮಾನಿಸಿತು.

ಶಿವಮೊಗ್ಗ: 32 ವರ್ಷಗಳ ಬಳಿಕ ಮತ್ತೆ ಪಂಚಪೀಠ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಶಿವಮೊಗ್ಗದಲ್ಲಿ ನಡೆಯಲಿದೆ.
ಈ ಹಿಂದೆ ಬಿ.ಎಸ್.ಯಡಿಯೂರಪ್ಪನವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಅವರ ನೇತೃತ್ವದಲ್ಲಿ ನಡೆದಿದ್ದ ಪಂಚಪೀಠ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ, ಈ ಬಾರಿ ಯುವನಾಯಕ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ನೇತೃತ್ವದಲ್ಲಿ ನಡೆಯಲಿರುವುದು ವಿಶೇಷ.

ಯಡೆಯೂರು ಹಾಗೂ ಬಿಳಕಿ ಶ್ರೀಗಳ ಸಾನ್ನಿಧ್ಯದಲ್ಲಿ ವೀರಶೈವ ಕಲ್ಯಾಣ ಮಂದಿರದಲ್ಲಿ ನಡೆದ ವೀರಶೈವ ಲಿಂಗಾಯತ ಸಮಾಜದ ಪ್ರಮುಖರ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ಶ್ರೀ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘ ಶತಮಾನೋತ್ಸವದ ಹಿನ್ನೆಲೆಯಲ್ಲಿ ನಡೆಯಲಿರುವ ಪಂಚಪೀಠ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವವನ್ನು ಅದ್ದೂರಿಯಾಗಿ ನಡೆಸಲು ಸಭೆಯಲ್ಲಿ ಪಕ್ಷಾತೀತವಾಗಿ ನಿರ್ಣಯಿಸಲಾಯಿತು.
ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದಲ್ಲಿ ಸಮಿತಿ ರಚನೆ|
ಹಬ್ಬದ ರೀತಿಯಲ್ಲಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ|
ವೀರಶೈವ ಲಿಂಗಾಯತ ಸಮಾಜದ ಮುಖಂಡ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರ ಗೌರವ ಅಧ್ಯಕ್ಷತೆಯಲ್ಲಿ ಪಕ್ಷಾತೀತವಾಗಿ ಸಮಾಜದ ಎಲ್ಲರೂ ಒಂದಾಗಿ ಈ ಉತ್ಸವವನ್ನು ಯಶಸ್ವಿಯಾಗಿ ನಡೆಸಲು ಸಭೆ ತೀರ್ಮಾನಿಸಿತು.

ಸ್ವಾಗತ ಸಮಿತಿ, ವೇದಿಕೆ ಸಮಿತಿ, ಹಣಕಾಸು ಸಮಿತಿ, ಮೆರವಣಿಗೆ ಸಮಿತಿ, ಪ್ರಚಾರ ಸಮಿತಿ, ದಾಸೋಹ ಸಮಿತಿ ಹೀಗೆ ವಿವಿಧ ಸಮಿತಿಗಳನ್ನು ರಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಮೇ 16 ಮತ್ತು 17 ರಂದು ಎರಡು ದಿನಗಳ ಕಾಲ ಹಬ್ಬದ ರೀತಿಯಲ್ಲಿ ಈ ಉತ್ಸವ ನಡೆಯಬೇಕು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಮಾಜಿ ಸಂಸದ ಆಯನೂರು ಮಂಜುನಾಥ್ ಮಾತನಾಡಿ, 32 ವರ್ಷಗಳ ಹಿಂದೆ ಬಿ.ಎಸ್. ಯಡಿಯೂರಪ್ಪನವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಪಂಚಪೀಠ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವವನ್ನು ಯಶಸ್ವಿಯಾಗಿ ಮಾಡಲಾಗಿತ್ತು.

ಈಗ ಇಂದಿನ ಯುವ ಪೀಳಿಗೆ ಈ ಉತ್ಸವವನ್ನು ಪರಿಚಯಿಸುವ ನಿಟ್ಟಿನಲ್ಲಿ ಇನ್ನಷ್ಟು ವಿಜೃಂಭಣೆಯಿಂದ ಉತ್ಸವ ಹಮ್ಮಿಕೊಳ್ಳಲು ವಿವಿಧ ಸಮಿತಿ ರಚಿಸಿ ಅಚ್ಚುಕಟ್ಟಾಗಿ ನಡೆಸಲು ಸಲಹೆ ನೀಡಿದರು.
ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್ ಹಾಗೂ ಕಾರ್ಯದರ್ಶಿ ಎಸ್.ಪಿ. ದಿನೇಶ್ ಸಭೆಯಲ್ಲಿ ಮಾತನಾಡಿ, ಪಂಚಪೀಠ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವದ ಜವಬ್ದಾರಿಯನ್ನು ಎಲ್ಲರ ಸಹಕಾರದೊಂದಿಗೆ ನಿರ್ವಹಿಸುವುದಾಗಿ ಘೋಷಿಸಿದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಮೂವತ್ತೇರಡು ವರ್ಷಗಳ ನಂತರ ಹಮ್ಮಿಕೊಳ್ಳುತ್ತಿರುವ ಅಡ್ಡ ಪಲ್ಲಕ್ಕಿ ಉತ್ಸವ ಇಡೀ ನಗರವನ್ನು ಶೃಂಗರಿಸಿ ಅದ್ದೂರಿಯಾಗಿ ಮಾಡೋಣ ಎಂದರು.
ಮೇ 17ರಂದು ಪಂಚಪೀಠ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ|

ಮೇ 16 ರಂದು ಪಂಚಪೀಠ ಶ್ರೀಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಹಾಗೂ ಮೇ 17ರಂದು ಹಾಗೂ ಸಮಾಜದಿಂದ ಪಂಚಪೀಠ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಧಾರ್ಮಿಕ ಸಭೆಯನ್ನು ನಡೆಸಲು ಸಭೆಯಲ್ಲಿ ಚರ್ಚಿಸಲಾಯಿತು.
ಅಡ್ಡಪಲ್ಲಕ್ಕಿ ಉತ್ಸವದ ಧಾರ್ಮಿಕ ಸಭೆಯನ್ನು ಎನ್‌ಇಎಸ್ ಮೈದಾನ ಅಥವಾ ಅಲ್ಲಮಪ್ರಭು ಮೈದಾನದಲ್ಲಿ 15 ರಿಂದ 20 ಸಾವಿರ ಜನರು ಸೇರುವಂತೆ ವ್ಯವಸ್ಥಿತವಾಗಿ ಆಯೋಜಿಸಲು ಹಾಗೂ ಅಡ್ಡಪಲ್ಲಕ್ಕಿ ಉತ್ಸವವನ್ನು ಗಾಂಧಿ ಬಜಾರ್‌ನಿಂದ ಪ್ರಾರಂಭಿಸಿ ಧಾರ್ಮಿಕ ಸಭೆಯ ವೇದಿಕೆವರೆಗೂ ಪೂರ್ಣಕುಂಭದೊಂದಿಗೆ ಸಾಗಲು ತೀರ್ಮಾನಿಸಲಾಯಿತು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾರ್ಗದರ್ಶನ|

ಉತ್ಸವ ಯಶಸ್ವಿಯಾಗಿ ನಡೆಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೆಆರ್‌ಡಿಎಲ್ ಅಧ್ಯಕ್ಷ ಸಂಗಮೇಶ್ ಸೇರಿದಂತೆ ಪಕ್ಷಾತೀತವಾಗಿ ಸಮಾಜದ ಪ್ರಮುಖರ ಮಾರ್ಗದರ್ಶನ ಸಲಹೆ, ಸಹಕಾರ ಪಡೆಯಲು ಸಭೆ ನಿರ್ಧರಿಸಿತು.
ಫೆಬ್ರವರಿ 19 ರಂದು ಈ ಕುರಿತು ಎರಡನೇ ಸಭೆ ನಡೆಸಲು ತೀರ್ಮಾನಿಸಲಾಯಿತು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಶ್ರೀ ಬಸವೇಶ್ವರ ಪಟ್ಟಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಳ್ಳಕೆರೆ ಸಂತೋಷ್, ಕಾಂಗ್ರೆಸ್ ಮುಖಂಡ ಹೆಚ್.ಸಿ. ಯೋಗೀಶ್, ಸಮಾಜದ ಪ್ರಮುಖರಾದ ರುದ್ರಮುನಿ ಸಜ್ಜನ್, ಹೆಚ್.ವಿ. ಮಹೇಶ್ವರಪ್ಪ, ವಿರುಪಾಕ್ಷಪ್ಪ, ಚಂದ್ರಯ್ಯ, ಬೆನಕಪ್ಪ, ಎಂ.ಆರ್. ಪ್ರಕಾಶ್ ಮತಿತ್ತರರು ಸಭೆಯಲ್ಲಿ ಉಪಸ್ಥಿತರಿದ್ದು ಉತ್ಸವಕ್ಕೆ ಸಲಹೆ ಸೂಚನೆ ನೀಡಿದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







