CrimeDistrictKarnatakaShivamogga

ಶಿವಮೊಗ್ಗದಲ್ಲಿ ಆನ್‌ಲೈನ್‌ ವಂಚಕರ ಜಾಲ ಪತ್ತೆ|ಟೀ-ಶಾಪ್‌ ಅಂಗಡಿಯವನ ಅಕೌಂಟ್‌ನಲ್ಲಿ 55 ಕೋಟಿ ದುಡ್ಡು|ಬ್ಯಾಂಕ್‌ ಖಾತೆ ಕೊಟ್ಟರೆ, ಭರ್ಜರಿ ಕಮಿಷನ್|‌ಆರೋಪಿ ಬಂಧನ..

ಹೀಗೆ ಬ್ಯಾಂಕ್‌ ಅಕೌಂಟ್‌ ಪಡೆದವರಿಗೆ ಈ ಬಗ್ಗೆ ಮಾಹಿತಿ ಇಲ್ಲ ಎನ್ನಲು ಆಗೋದಿಲ್ಲ. ವಂಚಕರು 15 ದಿನಗಳಿಗೊಮ್ಮೆ ಕಮಿಷನ್ ನೀಡುವ ಬಗ್ಗೆ ಕರಾರು ಮಾಡಿಕೊಂಡ ನಂತರವೇ, ಬ್ಯಾಂಕ್‌ ಅಕೌಂಟ್‌ ಹಾಗೂ ಅದಕ್ಕೆ ಲಿಂಕ್‌ ಆದ ಸಿಮ್‌ ನಂ ಅನ್ನು ಸಹ ವಂಚಕರಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಶಿವಮೊಗ್ಗ: ಕಮಿಶನ್‌ ಹಣದ ಆಸೆಗೆ ಬಿದ್ದು ಆನಲೈನ್‌ ವಂಚಕರಿಗೆ ಬ್ಯಾಂಕ್‌ ಖಾತೆಯನ್ನೆ ಸುಪರ್ದಿಗೆ ಒಪ್ಪಿಸುತ್ತಿದ್ದ ಜನರು ಈಗ ತಮ್ಮ ಬುಡಕ್ಕೆ ಬರುತ್ತಿದ್ದಂತೇ ಪೊಲೀಸ್‌ ಠಾಣೆ ಮೆಟ್ಟಿಲೇರತೊಡಗಿದ್ದಾರೆ.

ಆನ್‌ಲೈನ್‌ ವಂಚಕರ ವಿರುದ್ದ ಸಮರ ಸಾರಿರುವ ಸೈಬರ್‌ ಪೊಲೀಸರು, ಕಮಿಷನ್‌ ಪಡೆದು ಬ್ಯಾಂಕ್‌ ಖಾತೆಯನ್ನು ನೀಡಿದವರನ್ನು ವಶಕ್ಕೆ ಪಡೆದುಕೊಂಡು ಪೊಲೀಸ್‌ ಸ್ಟೈಲ್‌ನಲ್ಲಿ ವಿಚಾರಣೆ ನಡೆಸಿದ ಪರಿಣಾಮ, ಭಾರಿ ವಂಚನೆಗಳು ಬಯಲಿಗೆ ಬಂದಿವೆ.

ಇದರ ಮಧ್ಯೆ ಶಿವಮೊಗ್ಗದ ನಿವಾಸಿವೊಬ್ಬರು ತಮ್ಮ ಖಾತೆಯ ಡಿಟೇಲ್ಸ್‌ ಪಡೆದು ವಂಚಿಸಲಾಗಿದೆ ಎಂದು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಶಿವಮೊಗ್ಗದಲ್ಲಿಯು ಆನ್‌ಲೈನ್‌ ವಂಚಕರ ಜಾಲ ಹರಡಿರುವುದು ಬಯಲಿಗೆ ಬಂದಿದೆ. ಸುಮಾರು 55 ಕೋಟಿರೂ.ಗಳಷ್ಟು ಹಣದ ಅಕ್ರಮ ವರ್ಗಾವಣೆಗೆ ಸಾರ್ವಜನಿಕರ ಬ್ಯಾಂಕ್ ಅಕೌಂಟ್‌ ಡೀಟೇಲ್ಸ್‌ ಪಡೆಯಲಾಗಿದೆ.

ಇಲ್ಲಿ ಹೀಗೆ ಬ್ಯಾಂಕ್‌ ಅಕೌಂಟ್‌ ಪಡೆದವರಿಗೆ ಈ ಬಗ್ಗೆ ಮಾಹಿತಿ ಇಲ್ಲ ಎನ್ನಲು ಆಗೋದಿಲ್ಲ. ವಂಚಕರು 15 ದಿನಗಳಿಗೊಮ್ಮೆ ಕಮಿಷನ್ ನೀಡುವ ಬಗ್ಗೆ ಕರಾರು ಮಾಡಿಕೊಂಡ ನಂತರವೇ, ಬ್ಯಾಂಕ್‌ ಅಕೌಂಟ್‌ ಹಾಗೂ ಅದಕ್ಕೆ ಲಿಂಕ್‌ ಆದ ಸಿಮ್‌ ನಂ ಅನ್ನು ಸಹ ವಂಚಕರಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಈಗ ಪೊಲೀಸ್‌ರಿಗೆ ದೂರು ನೀಡಿರುವ ವ್ಯಕ್ತಿಯೊಬ್ಬರು ಕಳೆದ ದಿನಾಂಕ 06-02-2026 ರಂದು, ಸೈಬರ್‌ ಕ್ರೈಂ ಠಾಣೆಗೆ ಬಂದು, ವಿನೋಬನಗರದ ಇಂಡಿಯನ್ ಓವರ್ಸಿಸ್ ಬ್ಯಾಂಕ್ ಬ್ರಾಂಚ್ ನಲ್ಲಿ ಗಣೇಶ್ ಟಿ-ಶಾಪ್ ಹೆಸರಿನಲ್ಲಿ ಖಾತೆಯನ್ನು ತೆರೆದು ಬಳಸಲಾಗುತ್ತಿದ್ದ ಖಾತೆಯನ್ನು ತಮ್ಮ ಸ್ನೇಹಿತ ಶರತ್ @ ಗುಂಡ ಎಂಬುವವರು ತಮಗೆ 15 ದಿನಗಳಿಗೊಮ್ಮೆ ಕಮಿಷನ್ ಕೊಡುತ್ತೇನೆ ಎಂದು ಹೇಳಿದ್ದರಿಂದ ಬ್ಯಾಂಕ್‌ ಖಾತೆಯ ಪಾಸ್ ಬುಕ್, ಎ.ಟಿ.ಎಂ ಕಾರ್ಡ ಮತ್ತು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿರುವ ಮೊಬೈಲ್ ನಂಬರ್ 9902039655 ನ್ನು ಕೊಟ್ಟಿದ್ದೇನೆ.

ತಮ್ಮ ಈ ಖಾತೆಯನ್ನು ಪಡೆದುಕೊಂಡು ಶರತ್‌ ಅವರು, ಲಕ್ಷಾಂತರರೂ. ಹಣವನ್ನು ವರ್ಗಾವಣೆ ಮಾಡಲು ದುರುಪಯೋಗಪಡಿಸಿದ್ದಾರೆ.ಆದಕಾರಣ ಸ್ನೇಹಿತ ಶರತ್ ಕುಮಾರ್ ಎಂಬುವವನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ.

ಇದರನ್ವಯ ಸಿಇಎನ್ ಪೊಲೀಸ್ ಠಾಣೆ ಗುನ್ನೆ ನಂ 19/2026 ಕಲಂ 66(D) IT ಆಕ್ಟ್ & 318(4),319(2) BNS ರೀತ್ಯಾ ಪ್ರಕರಣ ದಾಖಲಿಸಲಾಗಿದೆ.

ಸೈಬರ್‌ ಅಪರಾಧಗಳ ವಿರುದ್ದ ಸಮರ ಸಾರಿರುವ ಪೊಲೀಸರು ರಾಜ್ಯಾದ್ಯಂತ ಹೆಕ್ಕಿ ಹೆಕ್ಕಿ ಅಪರಾಧಿಗಳನ್ನು ಅವರಿಗೆ ಸಹಾಯ ಮಾಡಿದವರನ್ನು ವಶಕ್ಕೆ ಪಡೆದು ಹೆಡೆಮುರಿ ಕಟ್ಟುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಆಟೋ ಚಾಲಕನೊಬ್ಬ ತನ್ನ ಬ್ಯಾಂಕ್‌ ಖಾತೆ ನೀಡಿ ವಂಚಕರಿಗೆ ಸಹಾಯ ಮಾಡಿದ್ದ ಆರೋಪದ ಮೇಲೆ ಬಂಧಿಸಲಾಗಿದೆ.

ಆತನ ಅಕೌಂಟನಿಂದ ಕೋಟ್ಯಾಂತರ ಹಣ ವರ್ಗಾವಣೆಯಾಗಿದೆ. ಕಮಿಷನ್‌ ಆಸೆಗೆ ಬಿದ್ದಿದ್ದ ಆ ವ್ಯಕ್ತಿ, ಈಗ ವಂಚಕರ ಹೆಸರನ್ನು ಬಾಯಿ ಬಿಟ್ಟಿದ್ದಾನೆ. ಪೊಲೀಸರು ಬಲೆಗೆ ಇನ್ನೇನು ಅವರು ಬಿದ್ದಿದ್ದಾರೆಂದು ಹೇಳಲಾಗಿದೆ.

ಆದರೆ ಶಿವಮೊಗ್ಗದಲ್ಲಿ ದೂರು ನೀಡಿರುವ ವ್ಯಕ್ತಿ ತನಗೆ ಮೋಸ ಮಾಡಲಾಗಿದೆ ಎಂದು ದೂರು ಕೊಟ್ಟಿದ್ದಾರೆ ನಿಜ. ಆದರೆ ಪೊಲೀಸರ ನೀಡಿರುವ ಮಾಹಿತಿಯಲ್ಲಿ 15 ದಿನಕ್ಕೊಮ್ಮೆ ಕಮಿಷನ್‌ ನೀಡುವದಾಗಿ ದೂರು ನೀಡಿದ ವ್ಯಕ್ತಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ಕಾನೂನಿನ ಪ್ರಕಾರ ಅಪರಾಧ ಮಾಡಿದವನು ಹಾಗೂ ಅದಕ್ಕೆ ಸಹಕಾರ ನೀಡಿದವರು ಸಹ ಅಪರಾಧಿಗಳೇ! ಆಗಿರುತ್ತಾರೆ. ಹೀಗಿರುವಾಗ ಶಿವಮೊಗ್ಗದಲ್ಲಿ ಇಷ್ಟು ದಿನ ಕಮಿಷನ್‌ ಪಡೆದ ವ್ಯಕ್ತಿಯನ್ನು ಸಹ ಪೊಲೀಸರು ವಿಚಾರಣೆ ಮಾಡಬೇಕಿದೆ.

ಸದ್ಯ ನ್ಯಾಯಾಂಗ ವಶದಲ್ಲಿರುವ ಆರೋಪಿ ಶರತ್ ಬಿನ್ ಕೃಷ್ಣ ರೆಡ್ಡಿ , ಕೆಳಗಿನ ತುಂಗಾ ನಗರ , ನಿವಾಸಿಯನ್ನು ಈಗಾಗಲೇ ದಸ್ತಗಿರಿ ಮಾಡಿ ವಿಚಾರಣೆ ಮಾಡಿರುವ ಪೊಲೀಸರಿಗೆ ಈವರೆಗೆ ಸಿಕ್ಕ ಮಾಹಿತಿ ಪ್ರಕಾರ,

ಆತನ ಮನೆ ಮೇಲೆ ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಆರೋಪಿತನ ಬಳಿ ವಿವಿಧ ಹೆಸರಿನಲ್ಲಿರುವ ವಿವಿಧ ಬ್ಯಾಂಕ್ 19 ಬ್ಯಾಂಕ್‌ ಅಕೌಂಟ್‌ಗಳು, 18 ಪಾಸ್‌ ಬುಕ್‌, 07 ಚೆಕ್‌ ಬುಕ್‌ಗಳು, 25 ಎಟಿಎಮ್‌ ಕಾರ್ಡ್‌ಗಳು, ಎರಡು ಕ್ವೂ ಆರ್‌ ಕೋಡ್‌ ಸ್ಕ್ಯಾನರಗಳು, ಹಾಗೂ ಎರಡು ಮೊಬೈಲ್‌ಗಳನ್ನು ವಶಪಡಿಸಕೊಳ್ಳಲಾಗಿದೆ.
ಇನ್ನು ಈತನ ಬಳಿ ಸಿಕ್ಕಿರುವ ಬ್ಯಾಂಕ್‌ ಅಕೌಂಟ್‌ಗಳನ್ನು ಪರಿಶೀಲಿಸಿದಾಗ ದೇಶಾದ್ಯಂತ ಒಟ್ಟು 96 ಕ್ಕೂ ಹೆಚ್ಚು ವಂಚನೆಯ ಪ್ರಕರಣಗಳಿಂದ ಹಣ ವರ್ಗಾವಣೆ ನಡೆದಿರುವದು ಪತ್ತೆಯಾಗಿದೆ. ಒಟ್ಟಾರೇ ವಂಚನೆಯ ಹಣವನ್ನು 55,43,56,248/- ರೂ ಎಂದು ಅಧಿಕೃತವಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ಒಟ್ಟಾರೇ, ಆನಲೈನ್‌ ವಂಚಕರು ನಡೆಸುವ ಮೋಸದಾಟಕ್ಕೆ ಅಮಾಯಕ ಜನರು ಬಲಿಯಾಗುವುದನ್ನು ತಪ್ಪಿಸಲು ಅದೇಷ್ಟೋ ಜಾಗೃತಿ ಮೂಡಿಸಲಾಗುತ್ತಿದ್ದರೂ ತಡೆಯಲು ಆಗುತ್ತಿಲ್ಲ.

ಸಾವಿರಾರು ಕಿಲೋಮೀಟರ್‌ ದೂರದಿಂದ ಮೋಸ ಮಾಡುವ ವ್ಯಕ್ತಿ ನಮಗೂ ಮತ್ತು ಪೊಲೀಸರಿಗೆ ಸಿಗೋದು ತುಂಬಾ ಕಷ್ಟ. ಆದರೆ ಅಂತಹವರೊಂದಿಗೆ ಕಮಿಷನ್‌ ವ್ಯವಹಾರ ನಡೆಸುವ ಜನರ ಹೆಡೆಮುರಿ ಕಟ್ಟಿದರೇ ಪಾತಾಳದಲ್ಲಿದ್ದರೂ ಮೂಲ ವಂಚಕನನ್ನು ಹಿಡಿಯಬಹುದು ಎಂಬುದು ಜನರ ಆಶಯ.

Follow Us

Leave a Reply

Your email address will not be published. Required fields are marked *

Back to top button