DistrictShivamogga

ಶಿವಮೊಗ್ಗ: ಫೆ.24ರಿಂದ ಕೋಟೆ ಮಾರಿಕಾಂಬಾ ದೇವಿ ಜಾತ್ರೆ| ಸಾಂಪ್ರದಾಯಿಕ ‘ಸಾರಾ’ ಹಾಕುವ ಕಾರ್ಯಕ್ರಮಕ್ಕೆ ಚಾಲನೆ|10 ಲಕ್ಷ ಜನರು ಸೇರುವ ನಿರೀಕ್ಷೆ-ಎನ್‌.ಮಂಜುನಾಥ್‌

ಸಾರಾ ಹಾಕುವುದು ಎಂದರೆ ಅದು ದೇವಿಯ ಹೆಸರಿನಲ್ಲಿ ಇಡೀ ನಗರಕ್ಕೆ ವಿಧಿಸಲಾಗುವ ಒಂದು ಪವಿತ್ರ ಆಜ್ಞೆಯಾಗಿದೆ. ಜಾತ್ರೆಯ ಅವಧಿಯಲ್ಲಿ ಯಾವುದೇ ವಿಘ್ನಗಳು ಎದುರಾಗದಂತೆ ಮತ್ತು ಊರಿನ ಜನತೆಗೆ ಯಾವುದೇ ಸಂಕಷ್ಟಗಳು ಬರದಂತೆ ತಡೆಯಲು ಈ ಗಡಿ ನಿರ್ಣಯದ ಪದ್ಧತಿಯನ್ನು ಅನುಸರಿಸಲಾಗುತ್ತದೆ.

ಶಿವಮೊಗ್ಗ: ಪ್ರಸಿದ್ದ ಕೋಟೆ ಮಾರಿಕಾಂಬಾ ದೇವಿಯ ಜಾತ್ರೆಗೆ ದಿನಗಣನೆ ಶುರುವಾಗಿದೆ. ಇದೇ ಫೆ.24ರಿಂದ 28 ರವರೆಗೆ 5 ದಿನಗಳ ಕಾಲ ನಡೆಯಲಿರುವ ಜಾತ್ರಾ ಸಡಗರಕ್ಕೆ ಪೋಸ್ಟರ್ ಪ್ರಚಾರ ಸೇರಿದಂತೆ ಪೂರ್ವ ಸಿದ್ದತೆ ವಿಧಿವಿಧಾನಗಳು ಭರದಿಂದ ಸಾಗಿದ್ದು, ಮೊದಲ ಸಾಂಪ್ರದಾಯಿಕ ಆಚರಣೆಯಾದ ಸಾರಾ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಈ ಕುರಿತು ಮಂಗಳವಾದಂದು ಮಾಧ್ಯಮದವರೊಂದಿಗೆ ಮಾತನಾಡಿದ ದೇವಾಲಯ ಸಮಿತಿಯ ಅಧ್ಯಕ್ಷ ಎಸ್.ಕೆ.ಮರಿಯಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್, ಜಾತ್ರೆಯ ಪರಂಪರೆ ಅದರ ವಿಶಿಷ್ಟತೆ ಮತ್ತು ಈ ಬಾರಿ ಕೋಟೆಮಾರಿಕಾಂಬಾ ಜಾತ್ರೆಯ ಆಕರ್ಷಣೆ ಕುರಿತು ಮಾಹಿತಿ ನೀಡಿದ್ದಾರೆ.

ಬಂಗಾರ ಬಲು ದುಬಾರಿಯಾಗಿದ್ದರೂ, ಈ ಬಾರಿಯ ಜಾತ್ರೆಯ ವಿಶೇಷ ಆಕರ್ಷಣೆಯಾಗಿ ದೇವಿಗೆ ಸುಮಾರು 1.6 ಕೆಜಿ ತೂಕದ ನೂತನ ಬಂಗಾರದ ಮುಖಕವಚ ಸಮರ್ಪಣೆ, 16 ಕೆಜಿ ತೂಕದ ಬೆಳ್ಳಿ ತೋರಣ ಮಾಡಿಸಲಾಗಿರುವುದು ವಿಶೇಷ.

20 ಅಡಿಯ ಕಾಳಿ ಅವತಾರದ ಮಹಾದ್ವಾರ ನಿರ್ಮಾಣವಾಗಲಿದ್ದು, ಪ್ರಸಿದ್ದ ಶಿಲ್ಪಿ ಜೀವನ್ ಕೈಚಳಕದಲ್ಲಿ ಮೂಡಿಬರಲಿರುವುದು ಜಾತ್ರೆಯ ವಿಶೇಷತೆಗಳಲ್ಲೊಂದು.

ಭಕ್ತರ ಅನುಕೂಲಕ್ಕಾಗಿ ಬಿ.ಎಚ್. ರಸ್ತೆ ಮತ್ತು ಗಾಂಧಿ ಬಜಾರ್‌ನಲ್ಲಿ ಸುಸಜ್ಜಿತ ಜರ್ಮನ್ ಟೆಂಟ್‌ಗಳು ಹಾಗೂ ಆಕರ್ಷಕ ಮಹಾದ್ವಾರಗಳನ್ನು ನಿರ್ಮಿಸಲಾಗುತ್ತಿದೆ.

ನಗರದ ಬಹುತೇಕ ಕಡೆ ವಿದ್ಯುತ್ ದೀಪಗಳಿಂದ ಝಗಮಗಿಸಲಿದೆ. ಸಮಿತಿಯು ಸಾರ್ವಜನಿಕರಿಂದ ಯಾವುದೇ ಚಂದಾ ಅಥವಾ ವಂತಿಗೆ ಸಂಗ್ರಹಿಸದೇ ಅದ್ದೂರಿಯಾಗಿ ಜಾತ್ರೆ ನಡೆಸುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಎಸ್.ಕೆ.ಮರಿಯಪ್ಪ ಸ್ಪಷ್ಟಪಡಿಸಿದರು.

ಬಳಿಕ ಕೋಟೆ ಮಾರಿಕಾಂಬಾ ದೇವಾಲಯದ ಹೊರಾಂಗಣದಲ್ಲಿ ಜಾತ್ರಾ ಮಹೋತ್ಸವದ ಹಿನ್ನಲೆ ಸಾರಾ, ಅಂಕೆ ಹಾಕುವ ಕಾರ್ಯಕ್ರಮವು ಜರುಗಿತು. ದೇವಾಲಯ ಸಮಿತಿಯ ಅಧ್ಯಕ್ಷಎಸ್. ಕೆ. ಮರಿಯಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಅವರು ಡೋಲು ಬಾರಿಸುವ ಮೂಲಕ ಈ ಧಾರ್ಮಿಕ ವಿಧಿಗೆ ಚಾಲನೆ ನೀಡಿದರು.

ಭಕ್ತರ ಅನುಕೂಲಕ್ಕಾಗಿ ಎಲ್ಲೆಡೆ ಕುಡಿಯುವ ನೀರು, ಶೌಚಾಲಯ ಮತ್ತು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸ್ವಚ್ಚತೆಗೂ ಅಧ್ಯತೆ ನೀಡಲಾಗಿದೆ. ಹಿರಿಯರಿಗೆ ಮತ್ತು ಮಕ್ಕಳಿಗೆ ವಿಶೇಷ ಸಾಲಿನಲ್ಲಿ ತೆರಳಿ ದರ್ಶನ ವ್ಯವಸ್ಥೆ ಮನವಿ ಪರಿಗಣಿಸಿದ್ದೇವೆ ಎಂದು ತಿಳಿಸಿದರು.

ಬಳಿಕ ಮಾತನಾಡಿದ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್, ತವರು ಮನೆ ಗಾಂಧೀ ಬಜಾರ್ ನಲ್ಲಿ ಪ್ರತಿಷ್ಠಾನೆಗೊಂಡ ತಾಯಿ ಮಾರಿಕಾಂಬೆ ಐದು ದಿನ ಭಕ್ತರಿಗೆ ದರ್ಶನ ನೀಡುತ್ತಾಳೆ ಎಂದು ಹೇಳಿದರು. ಈ ಬಾರಿ 10 ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎಂದರು.

ಸಾರಾ ಹಾಕುವುದು ಎಂದರೆ ಅದು ದೇವಿಯ ಹೆಸರಿನಲ್ಲಿ ಇಡೀ ನಗರಕ್ಕೆ ವಿಧಿಸಲಾಗುವ ಒಂದು ಪವಿತ್ರ ಆಜ್ಞೆಯಾಗಿದೆ. ಜಾತ್ರೆಯ ಅವಧಿಯಲ್ಲಿ ಯಾವುದೇ ವಿಘ್ನಗಳು ಎದುರಾಗದಂತೆ ಮತ್ತು ಊರಿನ ಜನತೆಗೆ ಯಾವುದೇ ಸಂಕಷ್ಟಗಳು ಬರದಂತೆ ತಡೆಯಲು ಈ ಗಡಿ ನಿರ್ಣಯದ ಪದ್ಧತಿಯನ್ನು ಅನುಸರಿಸಲಾಗುತ್ತದೆ.

ಕೆಳದಿ ಅರಸರ ಕಾಲದಿಂದಲೂ ನಡೆದುಬಂದಿರುವ ಈ ಸಂಪ್ರದಾಯವು ಊರಿನ ರಕ್ಷಣೆಗಾಗಿ ಕೈಗೊಳ್ಳುವ ‘ಗಡಿ ಕಟ್ಟುವುದು’ ಎಂಬ ನಂಬಿಕೆಯ ಪ್ರತೀಕವಾಗಿದೆ. ಹಳೆಯ ಕಾಲದಲ್ಲಿ ಈ ಸಾರಾ ಹಾಕಿದ ನಂತರ ಗ್ರಾಮಸ್ಥರು ಊರು ಬಿಟ್ಟು ಹೋಗದಂತೆ ಮತ್ತು ಹೊರಗಿನವರು ಅಶುದ್ಧತೆಯಿಂದ ಬರದಂತೆ ಅನುಸರಿದುತ್ತಿದ್ದ ಪದ್ದತಿಯಾಗಿತ್ತು.

ಫೆ.24ರ ಮುಂಜಾನೆ 5 ಗಂಟೆಗೆ ಗಾಂಧಿ ಬಜಾರ್‌ನಲ್ಲಿ ದೇವಿಯ ಪ್ರತಿಷ್ಠಾಪನೆ ನಡೆಯಲಿದೆ. ನಾಡಿಗೇರ ಕುಟುಂಬದವರಿಂದ ಪೂಜೆ ಮತ್ತು ವಿಶ್ವಕರ್ಮ ಸಮಾಜದವರಿಂದ ಮಾಂಗಲ್ಯ ಧಾರಣೆ ನಡೆದ ಬಳಿಕ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುತ್ತದೆ.

Follow Us

Leave a Reply

Your email address will not be published. Required fields are marked *

Back to top button