DistrictShivamogga

ಶಿವಮೊಗ್ಗ: ಮೋದಿ ವಿರುದ್ದ ಅವಮಾನಕರ ಅಣಕು ಪ್ರದರ್ಶನ ಆರೋಪ| ಯುವ ಕಾಂಗ್ರೆಸಿಗರ ಮೇಲೆ ಕ್ರಮಕ್ಕೆ ಬಿಜೆಪಿ ಯುವಮೋರ್ಚಾದಿಂದ ಎಸ್ಪಿಗೆ ದೂರು ಸಲ್ಲಿಕೆ

ಪ್ರಧಾನಿ ಹುದ್ದೆಗೆ ಘನತೆಗೆ ಧಕ್ಕೆ ತರುವ ಹಾಗೂ ಅವಮಾನಕಾರಿಯಾಗಿ ಅಣಕು ಪ್ರದರ್ಶನ ನಡೆಸಿರುವುದನ್ನ ಬಿಜೆಪಿ‌ ಯುವ ಮೋರ್ಚಾ ಕಾರ್ಯಕರ್ತರನ್ನು ಕೆರಳಿಸುವಂತೆ ಮಾಡಿತ್ತು.

ಶಿವಮೊಗ್ಗ: ಅಡುಗೆ ಅನಿಲ ದರ ಏರಿಕೆ ವಿರೋಧಿಸಿ ಯುವ ಕಾಂಗ್ರೆಸ್‌ ನಡೆಸಿದ್ದ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಅಣಕು ಪ್ರದರ್ಶನ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಆಗ್ರಹಿಸಿದೆ. ಈ ಕುರಿತು ಬುಧವಾರದಂದು ಎಸ್ಪಿ ಬಿ.ನಿಖಿಲ್ ಅವರನ್ನು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಭೇಟಿಯಾಗಿ ಮನವಿ ಸಲ್ಲಿಸಿದರು.

ಮಾರ್ಚ್10 ರಂದು ನಗರದ ಗೋಪಿ ವೃತ್ತದಲ್ಲಿ ಕೆಲ ಯುವ ಕಾಂಗ್ರೆಸ್ ಕಾರ್ಯಕರ್ತರು ಗ್ಯಾಸ್ ಬೆಲೆ ಏರಿಕೆ ಖಂಡಿಸಿ ನಡೆಸಿದ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಅಣಕು ಪ್ರದರ್ಶನ ಮಾಡಿದ್ದರು. ಪ್ರಧಾನಿ ಹುದ್ದೆಗೆ ಘನತೆಗೆ ಧಕ್ಕೆ ತರುವ ಹಾಗೂ ಅವಮಾನಕಾರಿಯಾಗಿ ಅಣಕು ಪ್ರದರ್ಶನ ನಡೆಸಿರುವುದನ್ನ ಬಿಜೆಪಿ‌ ಯುವ ಮೋರ್ಚಾ ಕಾರ್ಯಕರ್ತರನ್ನು ಕೆರಳಿಸುವಂತೆ ಮಾಡಿತ್ತು.

ಈ ಘಟನೆ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ಗಮನಕ್ಕೆ ಬಂದಿದೆ ಎಂದು ದೂರಿನಲ್ಲಿ ತಿಳಿಸಿರುವ ಕಾರ್ಯಕರ್ತರು, ದೇಶದ ಪ್ರಧಾನಿ ಹುದ್ದೆಗೆ ಅವಮಾನಿಸುವ ಕೃತ್ಯಗಳು ಸಮಾಜದಲ್ಲಿ ವೈಮನಸ್ಸು ಉಂಟುಮಾಡುವ, ಉದ್ದೇಶಪೂರ್ವಕವಾಗಿ ಅವಮಾನ ಮಾಡುವ ಹಾಗೂ ಸಾರ್ವಜನಿಕರಲ್ಲಿ ಅಶಾಂತಿ ಸೃಷ್ಟಿಸುವ ಪ್ರಚೋದನಾತ್ಮಕ ನಡೆ ಆಗಿದ್ದು, ಇಂತಹ ಹೀನ ರಾಜಕೀಯ ಸಂಸ್ಕೃತಿ ಸ್ವೀಕಾರಾರ್ಹವಲ್ಲ ಎಂದು ಮನವಿಯಲ್ಲಿ ತಿಳಿಸಿದೆ.

ಘಟನೆಯಲ್ಲಿ ಭಾಗವಹಿಸಿದವರನ್ನು ಗುರುತಿಸಿ ಸಮಗ್ರ ತನಿಖೆ ನಡೆಸಿ, ಪ್ರಚಲಿತ ಕಾನೂನುಗಳ ಪ್ರಕಾರ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ಯುವ ಮೋರ್ಚಾ ಮನವಿ ಮೂಲಕ ಆಗ್ರಹಿಸಿದೆ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದೇ ವೇಳೆ ದೊಡ್ಡಪೇಟೆ ಪೊಲೀಸ್‌ ಠಾಣೆಗೂ ತೆರಳಿ ಕಾರ್ಯಕರ್ತರು ಮನವಿ ಸಲ್ಲಿಸಿದರು.

ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್‌ ಕುಕ್ಕೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದರ್ಶನ್‌ ಆರ್‌.ವಿ, ಅರುಣ್‌ ಕುಗ್ವೆ, ನಗರ ಅಧ್ಯಕ್ಷ ರಾಹುಲ್‌ ಬಿದರೆ, ಗ್ರಾಮಾಂತರ ಅಧ್ಯಕ್ಷ ಅನಿಲ್‌ ಲಕ್ಕಿನಕೊಪ್ಪ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button