ಶಿವಮೊಗ್ಗ: ನೀರಾನೆ ದಾಳಿಗೆ ಪಶು ವೈದ್ಯೆ ಬಲಿ| ಡಾ.ಸಮೀಕ್ಷಾ ರೆಡ್ಡಿ ಸಾವಿನ ಸುತ್ತ ಹಲವು ಅನುಮಾನ|ತನಿಖೆಗೆ ಸೂಚಿಸಿದ ಸಚಿವ ಈಶ್ವರ ಖಂಡ್ರೆ
ಕರ್ತ್ಯವ್ಯದಲ್ಲಿದ್ದ ಡಾ.ಸಮೀಕ್ಷಾ ರೆಡ್ಡಿ ಅವರು, ನೀರಾನೆಯ ದೇಹದ ಉಷ್ಣತೆಯನ್ನು ಥರ್ಮಲ್ ಕ್ಯಾಮೆರಾ ಮೂಲಕ ಪರೀಕ್ಷಿಸಲು ಆವರಣದ ಒಳಗೆ ಹೋದ ಸಂದರ್ಭದಲ್ಲಿ ನೀರಾನೆ ಹಠಾತ್ ದಾಳಿ ನಡೆಸಿದೆ ಎಂದು ಹೇಳಲಾಗಿದೆ.

ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಟ್ರೇನಿ ವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಪಶುವೈದ್ಯೆ ನೀರಾನೆ ದಾಳಿಗೆ ಬಲಿಯಾಗಿದ್ದಾರೆ.
ಬೆಂಗಳೂರು ಮೂಲದ ಡಾ.ಸಮೀಕ್ಷಾ ರೆಡ್ಡಿ (27) ಮೃತ ಪಶುವೈದ್ಯೆ ಎಂದು ಗುರುತಿಸಲಾಗಿದೆ. ಡಾ.ಸಮೀಕ್ಷಾ ಅವರು ಸಫಾರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಫೆಬ್ರವರಿ1 ರಂದು ತರಬೇತಿ ಪಡೆಯಲು ನೇಮಕಗೊಂಡಿದ್ದರು ಎಂದು ತಿಳಿದುಬಂದಿದೆ.

8 ತಿಂಗಳ ಗರ್ಭಿಣಿ ನೀರಾನೆ!
ಇನ್ನು ಕೆಲವೇ ದಿನಗಳಲ್ಲಿ ಈಗ ದಾಳಿ ನಡೆಸಿರುವ ನೀರಾನೆ ತನ್ನ ಮಗುವಿಗೆ ಜನ್ಮ ನೀಡಬೇಕಿತ್ತು. ಆದರೆ ಗುರುವಾರ ರಾತ್ರಿ 11:45ರ ಸುಮಾರಿಗೆ ಅದರ ದೇಹಸ್ಥಿತಿ ಹದಗೆಟ್ಟಿರುವ ವಿಷಯ ತಿಳಿದಿದೆ.

ಆ ಕೂಡಲೇ ಕರ್ತ್ಯವ್ಯದಲ್ಲಿದ್ದ ಡಾ.ಸಮೀಕ್ಷಾ ರೆಡ್ಡಿ ಅವರು, ನೀರಾನೆಯ ದೇಹದ ಉಷ್ಣತೆಯನ್ನು ಥರ್ಮಲ್ ಕ್ಯಾಮೆರಾ ಮೂಲಕ ಪರೀಕ್ಷಿಸಲು ಆವರಣದ ಒಳಗೆ ಹೋದ ಸಂದರ್ಭದಲ್ಲಿ ನೀರಾನೆ ಹಠಾತ್ ದಾಳಿ ನಡೆಸಿದೆ ಎಂದು ಹೇಳಲಾಗಿದೆ.
ಆಸ್ಪತ್ರೆಯಲ್ಲಿ ಪಶುವೈದ್ಯೆ ಸಾವು!
ನೀರಾನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಡಾ.ಸಮೀಕ್ಷಾ ರೆಡ್ಡಿ ಅವರನ್ನು ಆ ಕೂಡಲೇ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರದಂದು ಬೆಳಿಗ್ಗೆ 6:30ರ ಸುಮಾರಿಗೆ ಸಾವನ್ನಪ್ಪಿದ್ದಾರೆಂದು ಶಿವಮೊಗ್ಗ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೃಗಾಲಯದಯ ಅಧಿಕಾರಿ ಹೇಳೋದೇನು?
ಪಕ್ಷಿಯ ಚಿಕಿತ್ಸೆಗೆಂದು ಮೃಗಾಲಯಕ್ಕೆ ತೆರಳಿದ್ದ ವೈದ್ಯೆ ಸಮೀಕ್ಷಾ ರಾತ್ರಿ ವೇಳೆ ನೀರಾನೆ ಬಳಿ ತೆರಳಲು ಹಿರಿಯ ಪಶುವೈದ್ಯಾಧಿಕಾರಿಗಳು ಅನುಮತಿ ನೀಡಿದ್ದರಾ ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ.
ಆಂತರಿಕ ತನಿಖೆ ನಡೆಯುತ್ತಿದೆ ಬಳಿಕ ಪೂರ್ತಿ ವಿಷಯ ಗೊತ್ತಾಗಲಿದೆ ಎಂದು ಹುಲಿ ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷ ತಿಳಿಸಿದ್ದಾರೆ.
ತನಿಖೆಗೆ ಆದೇಶ ನೀಡಿದ ಈಶ್ವರ ಖಂಡ್ರೆ!
ಮೃಗಾಲಯದಲ್ಲಿ ಚಿಕಿತ್ಸೆ ನೀಡಲು ತೆರಳಿದ್ದ ಸಂದರ್ಭ ನೀರಾನೆ ದಾಳಿಯಿಂದ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಮೃತಪಟ್ಟ ದುರಂತ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

ದುರ್ಘಟನೆ ಬಗ್ಗೆ ಹಿರಿಯ ಪಶುವೈದ್ಯರು ಹಾಗೂ ಅರಣ್ಯಾಧಿಕಾರಿಗಳ ತಂಡವು ಕೂಲಂಕುಷವಾಗಿ ತನಿಖೆ ನಡೆಸಲಿದೆ. ಘಟನೆಗೆ ಕಾರಣ, ಮತ್ತು ಸುರಕ್ಷತಾ ಲೋಪದ ಬಗ್ಗೆ ಪರಾಮರ್ಶಿಸಿ, 7 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸಚಿವರು ಸೂಚಿಸಿದ್ದಾರೆ.
ಮೃತ ವೈದ್ಯೆಯ ಕುಟುಂಬಕ್ಕೆ
ಪರಿಹಾರ ಘೋಷಣೆ|
ಮೃತ ವೈದ್ಯೆಯ ಕುಟುಂಬಕ್ಕೆ ನಿಯಮಾನುಸಾರ ತಕ್ಷಣವೇ ಪರಿಹಾರ ವಿತರಿಸುವಂತೆ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದು ದುರದೃಷ್ಟಕರ ಘಟನೆ. ಪ್ರತಿ ಜೀವವೂ ಅಮೂಲ್ಯ. ಸರ್ಕಾರವು ಮೃತ ವೈದ್ಯರ ಕುಟುಂಬದ ಪರವಾಗಿ ನಿಲ್ಲಲಿದೆ, ಎಂದು ಸಂತಾಪ ಸೂಚಿಸಿದ್ದಾರೆ.
ವನ್ಯಜೀವಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭ ಪಾಲಿಸಬೇಕಾದ ಪ್ರಮಾಣಿತ ಕಾರ್ಯಚರಣೆ ವಿಧಾನವನ್ನು ಎಲ್ಲಾ ಮೃಗಾಲಯಗಳಲ್ಲಿ ಕಡ್ಡಾಯವಾಗಿ ಜಾರಿಗೊಳಿಸಲು ಸೂಚಿಸಿದ್ದಾರೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







