Shivmogga: ಮೃಗಾಲಯದ ನೀರಾನೆಗೆ ಬಲಿಯಾದ ವೈದ್ಯೆ ಸಾವಿಗೆ ಸಿಕ್ಕಿತು ಸಾಕ್ಷಿ!ಡಾ.ಸಮೀಕ್ಷಾ ಸಾವಿಗೆ ಅಧಿಕಾರಿಗಳೇ ಕಾರಣ?ಪೊಲೀಸ್ ತನಿಖೆಗೆ ಪಶು ವೈದ್ಯರ ಆಗ್ರಹ
ಡಾ.ಸಮೀಕ್ಷಾ ನೀರಾನೆಗೆ ಬಲಿಯಾದ ಸಂದರ್ಭದಲ್ಲಿಯೇ "ನ್ಯೂಇಂಡಿಯಾ ಕನ್ನಡ" ಇದರ ಹಿಂದೆ ಹಲವು ಅನುಮಾನ ವ್ಯಕ್ತಪಡಿಸಿ ಸುದ್ದಿಯನ್ನು ಪ್ರಕಟಿಸಿತ್ತು. ಈಗ ಕರ್ನಾಟಕ ಪಶು ವೈದ್ಯಕೀಯ ಸಂಘವು ಅದೇ ಧಾಟಿಯಲ್ಲಿ ಆರೋಪ ಮಾಡಿದೆ.
ಶಿವಮೊಗ್ಗ: ತ್ಯಾವರೆಕೊಪ್ಪ ಮೃಗಾಲಯದಲ್ಲಿ ಇತ್ತೀಚೆಗೆ ನೀರಾನೆ ದಾಳಿಗೆ ಬಲಿಯಾದ ಡಾ.ಸಮೀಕ್ಷಾ ರೆಡ್ಡಿ ಪ್ರಕರಣ ಈಗ ಹೊಸ ತಿರುವು ಪಡೆದಿದೆ.
ತರಬೇತಿ ವೈದ್ಯೆಯಾಗಿ ಸೇರ್ಪಡೆಯಾಗಿ ಒಂದೇ ತಿಂಗಳ ಅವಧಿಯಲ್ಲಿ ನೀರಾನೆಗೆ ಆಹಾರವಾಗಲು ಮೃಗಾಲಯದಲ್ಲಿರುವ ಆಡಳಿತ ಲೋಪವೇ ಕಾರಣ ಎಂದು ಕರ್ನಾಟಕ ಪಶು ವೈದ್ಯಕೀಯ ಸಂಘದ ಶಿವಮೊಗ್ಗ ಘಟಕ ಗಂಭೀರ ಆರೋಪ ಮಾಡಿದೆ.

ಆಂತರಿಕ ತನಿಖೆ ನಡೆದರೇ ನ್ಯಾಯ ಸಿಗುವದಿಲ್ಲ ಎಂದಿರುವ ಪಶು ವೈದ್ಯರು, ಪೊಲೀಸ್ ತನಿಖೆ ನಡೆಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಡಾ.ಸಮೀಕ್ಷಾ ರೆಡ್ಡಿ ಸಾವಿನ ಹಿಂದೆ ಅನುಮಾನ!
ಪಶು ವೈದ್ಯಕೀಯ ಸಂಘದ ಆಕ್ರೋಶ|
ಡಾ.ಸಮೀಕ್ಷಾ ನೀರಾನೆಗೆ ಬಲಿಯಾದ ಸಂದರ್ಭದಲ್ಲಿಯೇ “ನ್ಯೂಇಂಡಿಯಾ ಕನ್ನಡ” ಇದರ ಹಿಂದೆ ಹಲವು ಅನುಮಾನ ವ್ಯಕ್ತಪಡಿಸಿ ಸುದ್ದಿಯನ್ನು ಪ್ರಕಟಿಸಿತ್ತು. ಈಗ ಕರ್ನಾಟಕ ಪಶು ವೈದ್ಯಕೀಯ ಸಂಘವು ಅದೇ ಧಾಟಿಯಲ್ಲಿ ಆರೋಪ ಮಾಡಿದೆ.

ಸೋಮವಾರದಂದು ಪ್ರೆಸ್ ಟ್ರಸ್ಟ್‌ನಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಪಶುವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಕೆಂಡೇಶ್, ಮೃಗಾಲಯದ ಆಡಳಿತ ವ್ಯವಸ್ಥೆಯಲ್ಲಿನ ಲೋಪದೋಷಗಳಿಂದಾಗಿಯೇ ಯುವ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ನೇರ ಆರೋಪ ಮಾಡಿದ್ದಾರೆ.

ಲಯನ್ ಸಫಾರಿಯಲ್ಲಿ ಒಬ್ಬರೂ ನುರಿತ ಖಾಯಂ ಪಶು ವೈದ್ಯರಿಲ್ಲ ಎಂದು ಹೇಳಿದ ಅವರು, ತರಬೇತಿ ಅವಧಿಯಲ್ಲಿದ್ದ ಮಹಿಳಾ ವೈದ್ಯೆಯನ್ನು ರಾತ್ರಿ 11 ಗಂಟೆಗೆ ಯಾವುದೇ ಸುರಕ್ಷತಾ ವ್ಯವಸ್ಥೆ ಕಲ್ಪಿಸದೇ ವಾಹನ ಚಾಲಕನೊಂದಿಗೆ ನೀರಾನೆ ತಪಾಸಣೆಗೆ ಕಳುಹಿಸಿದ್ದು ನಿಯಮದ ಉಲ್ಲಂಘನೆ ಎಂದು ಹೇಳಿದರು.
ಗಾಳಿಗೆ ತೂರಿದ ನಿಯಮಾವಳಿ!
ವನ್ಯಜೀವಿಗಳ ಪಾಲನೆ ಪೋಷಣೆ ಚಿಕಿತ್ಸೆ, ಸಾಗಣೆ ವಿಚಾರದಲ್ಲಿ ಕಾರ್ಯಸೂಚಿ ನಿಯಮಗಳಿವೆ ಎಂದು ಪ್ರತಿಪಾದಿಸಿರುವ ಅವರು, ಸಮೀಕ್ಷಾ ರೆಡ್ಡಿ ವಿಚಾರದಲ್ಲಿ ಎಲ್ಲ ನಿಯಮಗಳನ್ನ ಗಾಳಿತೂರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಖಾಯಂ ಪಶುವೈದ್ಯರ ನೇಮಕ ಮತ್ತು ವನ್ಯಜೀವಿ ವಿಭಾಗದಲ್ಲಿ ಪಿಜಿ ಮಾಡಿದ ಅಭ್ಯರ್ಥಿಗಳನ್ನೇ ಮೃಗಾಲಯಗಳಲ್ಲಿ ಪೂರ್ಣಾವಧಿಗೆ ನೇಮಿಸಿದರೆ ಮಾತ್ರ ವ್ಯವಸ್ಥೆ ಲೋಪದೋಷಗಳಿಗೆ ಮುಕ್ತಿ ಸಿಗಬಹುದೆಂದು ಎಂದು ಅಭಿಪ್ರಾಯಪಟ್ಟರು.
ಖಾಯಂ ವನ್ಯಜೀವಿ ತಜ್ಞರ ಅಡಿಯಲ್ಲಿಯೇ ಗುತ್ತಿಗೆ ಆಧಾರಿತ ಪಶುವೈದ್ಯರ ನೇಮಕಾತಿ, ತರಬೇತಿ ನಡೆಯಬೇಕು. ಆದರೆ ಇಲ್ಲಿ ಖಾಯಂ ವನ್ಯಜೀವಿ ತಜ್ಞರ ನೇಮಕವಾಗಿಲ್ಲ.

ಈ ಹಿಂದೆ ಇದ್ದ ಮುರಳಿ ಮನೋಹರ್ ಗುತ್ತಿಗೆ ಆಧಾರಿತ ವನ್ಯಜೀವಿ ತಜ್ಞರಾಗಿದ್ದರು ಅವರು ರಾಜೀನಾಮೆ ಸಲ್ಲಿಸಿ 4 ತಿಂಗಳು ಕಳೆದಿವೆ ಈ ಪ್ರಕರಣದಲ್ಲಿ ಹೊಣೆಗಾರಿಕೆ ಎಂಬುದೇ ಇಲ್ಲವಾಗಿದೆ ಎಂದರು.
18 ಸಾವಿರ ಸಂಬಳಕ್ಕೆ ಬಂದು
ಜೀವವನ್ನೆ ಕಳೆದುಕೊಂಡ ಡಾ.ಸಮೀಕ್ಷಾ|
ತ್ಯಾವರೆಕೊಪ್ಪ ಹುಲಿಸಿಂಹಧಾಮ ವಿರಳ ಪ್ರಭೇಧದ ಪ್ರಾಣಿ ಪಕ್ಷಿ, ಸರೀಸೃಪ ಸಂಕುಲ ಹೊಂದಿದೆ. ಇಲ್ಲಿ ಸ್ನಾತ್ತಕೋತ್ತರ ಪದವಿ ಪಡೆದ ವನ್ಯಜೀವಿ ತಜ್ಞರೇ 24 ಗಂಟೆ ಸೇವೆ ಸಲ್ಲಿಸಬೇಕಿದೆ.
ಆದರೆ ಗುತ್ತಿಗೆ ಆಧಾರಲ್ಲಿ ಇಬ್ಬರು ಪಶುವೈದ್ಯರನ್ನ ಕೇವಲ 18 ಸಾವಿರ ರೂಗಳಿಗೆ ನೇಮಕ ಮಾಡಿಕೊಂಡು ಅವರಿಂದ ಕಾರ್ಯನಿರ್ವಹಿಸಲಾಗುತ್ತಿದೆ.
ಸಮೀಕ್ಷಾ ರೆಡ್ಡಿ ಪ್ರಕರಣದಲ್ಲಿ ಮೇಲ್ನೋಟಕ್ಕೆ ಅಧಿಕಾರಿಗಳ ನಿರ್ಲಕ್ಷ ಧೋರಣೆ , ಹಾಗೂ ಕರ್ತವ್ಯಲೋಪಗಳು ಕಂಡುಬಂದಿದ್ದು ಆಂತರಿಕ ತನಿಖೆಯಿಂದ ನ್ಯಾಯ ಸಿಗುವ ಭರವಸೆಯಿಲ್ಲ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲು ಪೊಲೀಸ್ ತನಿಖೆ ಮಾಡುವಂತೆ ಪಶುವೈದ್ಯಾಧಿಕಾರಿಗಳ ಸಂಘ ಸರ್ಕಾರವನ್ನ ಒತ್ತಾಯಿಸಿದೆ..
ಸಂಜೆ ಮೇಲೆ ಪ್ರಾಣಿಗಳ ಬಳಿ ಹೋಗೋ ಹಾಗಿಲ್ಲ!
ಡಾ.ಸಮೀಕ್ಷಾ ಸಾವಿಗೆ ಯಾರು ಹೊಣೆ?
ಮೃಗಾಲಯದ ನಿಯಮಾವಳಿ ಪ್ರಕಾರ ಸಂಜೆ 6 ರನಂತರ ಮಹಿಳಾ ಪಶುವೈದ್ಯರನ್ನು ಪ್ರಾಣಿಗಳ ತಪಾಸಣೆ ಕೆಲಸಕ್ಕೆ ಕಳಿಸುವಂತಿಲ್ಲ ಎಂಬ ನಿಯಮವಿದೆ ಎಂದು ಇದೇ ವೇಳೆ ಡಾ.ಕೆಂಡೇಶ್ ಹೇಳಿದರು.
ವನ್ಯಜೀವಿಗಳ ಪ್ರೇಮದಿಂದ ಶಿವಮೊಗ್ಗದಲ್ಲಿ ಸೇವೆಗೆ ಬಂದಿದ್ದ ಯುವ ವೈದ್ಯೆ ಮುಂದೆ ಇಲಾಖೆಗೆ ದೊಡ್ಡ ಸಂಪತ್ತಾಗುತ್ತಿದ್ದರು ಎಂದು ಹೇಳಿದ ಅವರು, ಡಾ.ಸಮೀಕ್ಷಾ ಅವರು ಸಾವು ಪಶು ವೈದ್ಯರ ಸುರಕ್ಷತೆ ಬಗ್ಗೆ ರಾಜ್ಯದಲ್ಲಿ ಆತಂಕ ಮೂಡಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬಹುಶಃ ತ್ಯಾವರೆಕೊಪ್ಪ ಮೃಗಾಲಯದಲ್ಲಿ ನಿಯಮಾವಳಿ ಪಾಲಿಸಿದ್ದರೇ ಡಾ.ಸಮೀಕ್ಷಾ ಅವರ ಪ್ರಾಣ ಉಳಿಯುತ್ತಿತ್ತು ಎಂಬ ಮಾತು ಈಗ ಕೇಳಿ ಬರುತ್ತಿದೆ. ಒಟ್ಟಾರೇ, ಯಾರೋ ಮಾಡಿದ ತಪ್ಪಿಗೆ ಡಾ.ಸಮೀಕ್ಷಾ ಸಾವನ್ನಪ್ಪುವಂತಾಗಿದ್ದು ಮಾತ್ರ ದುರದೃಷ್ಟಕರ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂ ಇಂಡಿಯಾ ಕನ್ನಡ
ಶಿವಮೊಗ್ಗ.







