CrimeDistrictShivamogga

ವಿದ್ಯಾರ್ಥಿ ಸಂಕೇತ್ ಸಮಾಧಿ ಕಟ್ಟೆ ಧ್ವಂಸ|ಪುಂಡರ ಕೃತ್ಯಕ್ಕೆ ಮಾಜಿ ಡಿಸಿಎಂ ಈಶ್ವರಪ್ಪ, ಆರಗ ಜ್ಞಾನೇಂದ್ರ, ಚೆನ್ನಬಸಪ್ಪ ಆಕ್ರೋಶ, ಬಂಧನಕ್ಕೆ ಒತ್ತಾಯ

ಸಂಕೇತ್‌ ಸಾವಿನಿಂದ ನೊಂದಿರುವ ತಂದೆ ಶಿವಕುಮಾರ್‌, ಸಂಕೇತ್ ಸಮಾಧಿ ಧ್ವಂಸಗೊಳಿಸಿರುವ ಕಿಡಿಗೇಡಿಗಳನ್ನ ತಕ್ಷಣ ಪತ್ತೆ ಹಚ್ಚಿ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಶಿವಮೊಗ್ಗ: ಇತ್ತೀಚೆಗೆ ಹಲ್ಲೆಯಿಂದ ಸಾವಿಗೀಡಾಗಿದ್ದ ವಿದ್ಯಾರ್ಥಿ ಸಂಕೇತ್ ಸಮಾಧಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ಗುಡ್ಡೆಮರಡಿಯಲ್ಲಿ ನಡೆದಿದೆ.

ಸಂಕೇತ್ ಸಮಾಧಿ ಕಟ್ಟೆ ಧ್ವಂಸ ಘಟನೆಗೆ ಮಾಜಿ ಡಿಸಿಎಂ ಈಶ್ವರಪ್ಪ, , ಮಾಜಿ ಗೃಹ ಮಂತ್ರಿ ಆರಗ ಜ್ಞಾನೇಂದ್ರ, ಶಾಸಕ ಚೆನ್ನಬಸಪ್ಪ ಕಿಡಿಗೇಡಿಗಳ ಕೃತ್ಯಕ್ಕೆ ಪ್ರತ್ಯೇಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳನ್ನ ಶೀಘ್ರ ಬಂಧಿಸಲು ಆಗ್ರಹಿಸಿದ್ದಾರೆ.

ಕಳೆದ ಫೆಬ್ರವರಿ 24ರಂದು ಊರಗಡೂರಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಂಕೇತ್‌ನ ಹತ್ಯೆ ಮಾಡಲಾಗಿತ್ತು. ಬಳಿಕ ಸಮೀಪದ ಗುಡ್ಡೆಮರಡಿಯ ಹಿಂದೂ ರುದ್ರಭೂಮಿಯಲ್ಲಿ ಸಂಕೇತ್‌ನ ಅಂತ್ಯೆಕ್ರಿಯೆ ನೆರವೇರಿತ್ತು.

ನಂತರ ಸಂಕೇತನ ಸಮಾಧಿಗೆ ಮಾರ್ಚ್‌ 26ರಂದು ಕಟ್ಟೆ ಕಟ್ಟಿಸಲಾಗಿತ್ತು. ಕುಟುಂಬದವರು ಸುತ್ತಲು ಗ್ರಾನೈಟ್‌ ಕಲ್ಲು ಹಾಕಿಸಿದ್ದರಲ್ಲದೇ, ಮುಂಭಾಗದಲ್ಲಿ ದೀಪ ಇಡಲು ವ್ಯವಸ್ಥೆ ಮಾಡಿದ್ದರು. ಹಿಂಬದಿಯಲ್ಲಿ ಸಂಕೇತ್‌ನ ಫೋಟೊ ಇರಿಸಲಾಗಿತ್ತು. ಕುಟುಂಬದವರು ಪ್ರತಿ ಸಂಜೆ ಸಮಾಧಿ ಸ್ಥಳಕ್ಕೆ ಹೋಗಿ ಪೂಜೆ ಮಾಡಿ ಬರುತ್ತಿದ್ದರು ಎನ್ನಲಾಗಿದೆ.

ಸಂಕೇತ್‌ಗೆ ಬುಧವಾರ ಅಂದರೆ ಪ್ರೀತಿ. ಆತ ಪ್ರತಿ ಬುಧವಾರ ಬೆಳಗ್ಗೆ ಬೇಗ ಎದ್ದು ಸ್ನಾನ ಮುಗಿಸಿ ಪೂಜೆ ಮಾಡುತ್ತಿದ್ದ. ಹಾಗಾಗಿ ಈ ಬುಧವಾರ ಸಮಾಧಿ ಸ್ಥಳಕ್ಕೆ ಕುಟುಂಬದವರೆಲ್ಲ ತೆರಳಿ ಪೂಜೆ ಸಲ್ಲಿಸುವ ಯೋಚನೆಯಲ್ಲಿದ್ದರು.

ಆದರೆ ಮಂಗಳವಾರ ಸಂಜೆ ಸಮಾಧಿ ಕಟ್ಟೆಯ ಒಂದು ಭಾಗವನ್ನ ಕಿಡಿಗೇಡಿಗಳು ಒಡೆದು ಹಾಕಿದ್ದಾರೆ. ಈ ಬಗ್ಗೆ ಆಕ್ರೋಶಗೊಂಡ ಸಂಕೇತ್‌ನ ಪೋಷಕರು ತುಂಗಾ ನಗರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಂಕೇತ್‌ ಸಾವಿನಿಂದ ನೊಂದಿರುವ ತಂದೆ ಶಿವಕುಮಾರ್‌, ಸಂಕೇತ್ ಸಮಾಧಿ ಧ್ವಂಸಗೊಳಿಸಿರುವ ಕಿಡಿಗೇಡಿಗಳನ್ನ ತಕ್ಷಣ ಪತ್ತೆ ಹಚ್ಚಿ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಈ ಮಧ್ಯೆ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಸಹ ಘಟನೆಯನ್ನು ಖಂಡಿಸಿದ್ದಾರೆ. ಮಾಜಿ ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಅವರ ಮುಖವನ್ನ ಸಾರ್ವಜನಿಕರಿಗೆ ಪರಿಚಯಿಸಬೇಕು ಎಂದರು.

ಶಾಸಕ ಚೆನ್ನಬಸಪ್ಪ ಮಾತನಾಡಿ, ವಿದ್ಯಾರ್ಥಿ ಸಂಕೇತನನ್ನು ನೆಮ್ಮದಿಯಾಗಿ ಬದುಕಲು ಬಿಡಲಿಲ್ಲ ಈಗ ಸತ್ತಮೇಲೆ ಸಮಾಧಿಯಲ್ಲಾದರೂ ನೆಮ್ಮದಿಯಾಗಿರಲು ಬಿಡದ ಕಿಡಿಗೇಡಿಗಳ ಬಗ್ಗ ತೀವ್ರ ಅಸಮಾಧಾನ ಹೊರಹಾಕಿದರು.

Follow Us

Leave a Reply

Your email address will not be published. Required fields are marked *

Back to top button