DistrictNationalNew DelhiShivamogga

“ನಾರಿಶಕ್ತಿ ವಂದನಾ ಅಧಿನಿಯಮ” ಜಾರಿಗೆ ಕ್ಷಣಗಣನೆ| 270 ಕ್ಷೇತ್ರಗಳು ಮಹಿಳೆಯರಿಗೆ ಮೀಸಲು-ಸಂಸದ ಬಿ.ವೈ.ರಾಘವೇಂದ್ರ

2029ರ ಚುನಾವಣೆಗೆ 270 ಕ್ಷೇತ್ರಗಳು ಮಹಿಳೆಯರಿಗೆ ಮೀಸಲಿಡುವ ಮಹತ್ವದ ಹೆಜ್ಜೆಗೆ ಗುರುವಾರದ ಅಧಿವೇಶನ ನಾಂದಿಯಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಶಿವಮೊಗ್ಗ: ನೆನೆಗುದಿಗೆ ಬಿದ್ದಿದ್ದ ಶೇ.33% ಮಹಿಳಾ ಮೀಸಲಾತಿ ಕಾನೂನು ಶೀಘ್ರದಲ್ಲೇ ಜಾರಿಯಾಗಲಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

ಏಪ್ರಿಲ್ 16 ರಿಂದ 18 ರವರೆಗೆ 3 ದಿನಗಳ ಕಾಲ ನಡೆಯಲಿರುವ ವಿಶೇಷ ಸಂಸತ್ ಅಧಿವೇಶನದಲ್ಲಿ ನಾರಿ ಶಕ್ತಿ ವಂದನಾ ಅಧಿನಿಯಮ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆಯಲಿದೆ ಎಂದು ತಿಳಿಸಿದ್ದಾರೆ.

ಬುಧವಾರದಂದು ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಐತಿಹಾಸಿಕ ನಿರ್ಧಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುವದಾಗಿ ತಿಳಿಸಿದರು.

ಲೋಕಸಭೆ, ರಾಜ್ಯ ವಿಧಾನಸಭೆಗಳಲ್ಲಿ ಸಮಾನ ಮಹಿಳಾ ಪ್ರಾತಿನಿಧ್ಯದ ಕೂಗಿಗೆ ನರೇಂದ್ರಮೋದಿ ನೇತೃತ್ವದ ಸರ್ಕಾರವು ಸ್ಪಂದಿಸಿ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.

ಸಂಸತ್ತಿನಲ್ಲಿ 33% ಮಹಿಳಾ ಮೀಸಲಾತಿ ಕಾಲ ದೂರವಿಲ್ಲ. ತಮ್ಮ ಹಕ್ಕಿಗಾಗಿ ನಾರೀ ಶಕ್ತಿ ಮುಂದಿನ 10 ವರ್ಷ ಕಾಯಬೇಕಿಲ್ಲ. 2029ರ ಚುನಾವಣೆಗೆ 270 ಕ್ಷೇತ್ರಗಳು ಮಹಿಳೆಯರಿಗೆ ಮೀಸಲಿಡುವ ಮಹತ್ವದ ಹೆಜ್ಜೆಗೆ ಗುರುವಾರದ ಅಧಿವೇಶನ ನಾಂದಿಯಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ವಿಶೇಷ ಸಂಸತ್ ಅಧಿವೇಶನದಲ್ಲಿ 2011 ರ ಜನಗಣತಿ ದತ್ತಾಂಶದ ಆಧಾರ ಮೇಲೆ ಕ್ಷೇತ್ರ ಮರುವಿಂಗಡನೆ, ಸಮಗ್ರ ಚರ್ಚೆ ಮೂಲಕ ಶಾಸನ ಸಭೆಯಲ್ಲಿ ಮೂರನೇ ಒಂದು ಭಾಗ ಮಹಿಳಾ ಪ್ರಾತಿನಿಧ್ಯದ ಕಾನೂನು ಜಾರಿಗೆ ಬರಲಿದೆ ಎಂದರು.

ಲೋಕಸಭಾ ಸೀಟುಗಳ ಸಂಖ್ಯೆ 543 ರಿಂದ 850 ಕ್ಕೆ ಏರಿಕೆಯಾಗಲಿದ್ದು, 270 ಕ್ಕೂ ಅಧಿಕ ಸೀಟು ಮಹಿಳೆಯರ ಪಾಲಾಗಲಿದೆ ಎಂದರು.

ನಾನೂ ಕೂಡ ನಾರಿ ಶಕ್ತಿ ವಂದನಾ ಅಧಿನಿಯಮದ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದೇನೆ. ಶಾಸನ ಸಭೆಯಲ್ಲಿ ಸ್ತ್ರೀ ಶಕ್ತಿಗೆ ಧ್ವನಿಯಾಗುವ ಐತಿಹಾಸಿಕ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸದ ವಿಚಾರ. ಕ್ಷೇತ್ರದ ಪ್ರತಿನಿಧಿಯಾಗಿ ಆಶೀರ್ವದಿಸಿದ ಎಲ್ಲ ಮಹಿಳೆಯರಿಗೂ, ಸಹೋದರಿಯರಿಗೂ ತಾಯಂದಿರಿಗೂ ವಿಶೇಷವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಮಾಲತೇಶ್, ಶಿವರಾಜ್, ಮಹಿಳಾ ಮೋರ್ಚಾದ ಗಾಯಿತ್ರೀ ಶಿವಾನಂದ್ , ಚಂದ್ರಶೇಖರ್ ಪದ್ಮಿನಿ, ಸುರೇಖಾ ಮುರಳೀಧರ್, ಶಿಲ್ಪ, ಸೇರಿದಂತೆ ಹಲವು ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.

Follow Us

Leave a Reply

Your email address will not be published. Required fields are marked *

Back to top button