
ಬೆಂಗಳೂರು: ಎಸ್ಎಸ್ಎಲ್ಸಿ ಹಿಂದಿ ಭಾಷೆ ಸೇರಿದಂತೆ ತೃತೀಯ ವಿಷಯಗಳಿಗೆ ಗ್ರೇಡ್ ಬದಲಿಗೆ ಅಂಕಗಳನ್ನು ನೀಡುವಂತೆ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಅವರಿದ್ದ ಏಕಸದಸ್ಯಪೀಠವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಇತ್ತೀಚೆಗೆ ನೀಡಿದ್ದ ತೀರ್ಪಿನ ವಿರುದ್ದ ರಾಜ್ಯ ಸರ್ಕಾರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಮಂಗಳವಾರದಂದು ನಡೆಸಿದ ಏಕಸದಸ್ಯ ಪೀಠವು, ತನ್ನ ತೀರ್ಪನ್ನು ಪ್ರಕಟಿಸಿದೆ.
ಈ ಮೂಲಕ ಗ್ರೇಡ್ ನೀಡಲು ಹಠ ಹಿಡಿದಿದ್ದ ರಾಜ್ಯ ಸರ್ಕಾರ ಮುಖಭಂಗ ಅನುಭವಿಸುವಂತಾಗಿದೆ.
ಗ್ರೇಡ್ ಮತ್ತು ಅಂಕಗಳನ್ನು ನೀಡುವದರ ಬಗ್ಗೆ ಉಂಟಾಗಿದ್ದ ಗೊಂದಲಕ್ಕೆ ತೆರೆಬಿದ್ದಿದೆ.
ಗ್ರೇಡ್ ಪರ ಪಟ್ಟು ಹಿಡಿದ ಸರ್ಕಾರ!
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ, ಹಿಂದಿ ಭಾಷೆಯಲ್ಲಿ ಲಕ್ಷಕ್ಕೂ ಹೆಚ್ಚು ಜನ ಅನುತ್ತೀರ್ಣಗೊಂಡಿದ್ದರು.

ಹೀಗಾಗಿ ವಿದ್ಯಾರ್ಥಿಗಳ ಒತ್ತಡ ಕಮ್ಮಿ ಮಾಡುವ ಉದ್ದೇಶದಿಂದ ವಿದ್ಯಾರ್ಥಿಗಳ ಹಿತ ಕಾಯಲು ಗ್ರೇಡ್ ನೀಡುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ ಎಂದು ಹೇಳಿದರು.
ಈಗಾಗಲೇ ಸೂಕ್ತ ತಿದ್ದುಪಡಿಯೊಂದಿಗೆ ನಿಯಮ ರೂಪಿಸಲಾಗುತ್ತಿದ್ದು, ಕರಡು ಪ್ರತಿ ಸಿದ್ದಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ತರಾಟೆಗೆ ತೆಗೆದುಕೊಂಡ ಹೈಕೋರ್ಟ್!
ರಾಜ್ಯ ಸರ್ಕಾರವು ಏಕಾಏಕಿ ಪರೀಕ್ಷೆ ನಡೆಯುವ ಕಾಲದಲ್ಲಿ ಗ್ರೇಡ್ ನೀಡುವ ಆದೇಶ ಹೊರಡಿಸಿದ್ದಕ್ಕೆ ಹೈಕೋರ್ಟ್ನ ಏಕಸದಸ್ಯ ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಪರೀಕ್ಷಾ ಅಧಿಸೂಚನೆ ವೇಳೆ ಈ ನಿಯಮವನ್ನು ಉಲ್ಲೇಖಿಸಲಾಗಿತ್ತಾ ಎಂದು ನ್ಯಾಯಮೂರ್ತಿ ಇಂದಿರೇಶ್ ಅವರು ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ ಅವರನ್ನು ಪ್ರಶ್ನಿಸಿದರು.

ಪರೀಕ್ಷೆ ಅಧಿಸೂಚನೆಯಲ್ಲಿ ಇಲ್ಲದೇ ಇರುವ ನಿಯಮ ಈಗೇಕೆ ತರುತ್ತಿದ್ದೀರಿ? ಎಂದು ಖಾರವಾಗಿ ಕೇಳಿದರು.
ಸರ್ಕಾರದ ನೀತಿಗಳಿಂದಾಗಿ ಪಿಯುಸಿಯಲ್ಲಿ 83% ಉತ್ತೀರ್ಣರಾಗಿದ್ದಾರೆ. ಎಸ್ಎಸ್ಎಲ್ಸಿಯಲ್ಲಿ ಎಲ್ಲರನ್ನೂ ಪಾಸ್ ಮಾಡುವ ಉದ್ದೇಶವಿದ್ದರೆ ಪರೀಕ್ಷೆ ಯಾಕೆ ಬೇಕಿತ್ತು? ನಿಯಮ ರೂಪಿಸಿದ ಬಳಿಕವೇ ಪರೀಕ್ಷೆ ನಡೆಸಬೇಕಿತ್ತು.
ಕೊನೆಗಳಿಗೆಯಲ್ಲಿ ಬದಲಾವಣೆ ಮಾಡಿದ್ದು ಸುತಾರಾಂ ಸರಿಯಲ್ಲ ಎಂದು ಘನ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿತು.
ಈ ಪರಿಸ್ಥಿತಿಯಲ್ಲಿ ಅಂಕ ಪದ್ದತಿ ಬದಲಾವಣೆ ಸೂಕ್ತವಲ್ಲ ಎಂದು ಹೇಳಿದ ನ್ಯಾಯಾಲಯವು, ಪ್ರಸಕ್ತ 2025-26 ರಸಾಲಿನ ಪರೀಕ್ಷೆಗೆ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕಗಳನ್ನು ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವ ಮೂಲಕ ಮರುಪರಿಶೀಲನಾ ಅರ್ಜಿಯನ್ನು ಇತ್ಯರ್ಥಗೊಳಿಸಿತು.
ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟ ಬೇಡ-ಶಶಿಕುಮಾರ್!
ತೃತೀಯ ಭಾಷೆ ಗ್ರೇಡ್ ವಿಚಾರದಲ್ಲಿ ಅಂಕವನ್ನೇ ನೀಡಬೇಕೆಂಬ ಹೈಕೋರ್ಟ್ ತೀರ್ಪ ನೀಡಿರುವದನ್ನು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಸ್ವಾಗತಿಸಿದ್ದಾರೆ.
ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳ ಜೀವನದೊಂದಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಸಚಿವರು ಚೆಲ್ಲಾಟವಾಡಬಾರದೆಂಬ ಎಂದು ಹೇಳಿದರು.
ವಿದ್ಯಾರ್ಥಿ, ಪೋಷಕರಲ್ಲಿ ಸಂಭ್ರಮ!
ರಾಜ್ಯ ಸರ್ಕಾರದ ತಪ್ಪು ನಿರ್ಧಾರದಿಂದ ಮುಂದಿನ ಭವಿಷ್ಯದ ಬಗ್ಗೆ ಚಿಂತೆಯಲ್ಲಿದ್ದ ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಹೈಕೋರ್ಟಿನ ತೀರ್ಮಾನದಿಂದ ಸಂಭ್ರಮ ಮನೆ ಮಾಡಿದೆ.

ವಿದ್ಯಾರ್ಥಿನಿ ಸಹನಾ ನಾಯಕ್ ಹಾಗೂ ಇತರರು ಹೂಡಿದ್ದ ಮೊಕದ್ದಮೆಯಿಂದಾಗಿ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳು ಬೀಸೋ ದೊಣ್ಣೆಯಿಂದ ಪಾರಾಗಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡದೇ ಸರ್ಕಾರ ಈಗಲಾದರೂ ತನ್ನ ಹಠ ಬಿಡಬೇಕು ಎನ್ನುತ್ತಾರೆ ಪೋಷಕರು.
ವರದಿ: ಸೌಮ್ಯ ರೆಡ್ಡಿ
ಎಜ್ಯುಕೇಶನ್ ಬ್ಯುರೋ
ನ್ಯೂಇಂಡಿಯಾ ಕನ್ನಡ







