CrimeDistrictKarnatakaShivamogga

ಭುಗಿಲೆದ್ದ ವಿದ್ಯಾರ್ಥಿಗಳ ಅಸಮಾಧಾನ|ರಣರಂಗವಾದ ಕುವೆಂಪು ವಿವಿ ಆವರಣ|ಉಪಕುಲಪತಿಗಳನ್ನೇ ಎಳೆದಾಡಿದ ವಿದ್ಯಾರ್ಥಿಗಳು

ಆಡಳಿತಾತ್ಮಕ ,ತಾಂತ್ರಿಕ ಅವ್ಯವಸ್ಥೆ ಸರಿಪಡಿಸಲು ವಿಫಲರಾಗಿರುವ ಉಪಕುಲಪತಿಯನ್ನು ವಜಾಗೊಳಿಸಬೇಕು ಮತ್ತು ಈ ವಿಷಯದಲ್ಲಿ ರಾಜ್ಯಪಾಲರು ಮಧ್ಯೆ ಪ್ರವೇಶಿಸಬೇಕೆಂದು ಎನ್‌ಎಸ್‌ಯುಐ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್ ಆಗ್ರಹಿಸಿದ್ದಾರೆ.

ಶಿವಮೊಗ್ಗ: ಮಲೆನಾಡು ಭಾಗದ ಪ್ರತಿಷ್ಠಿತ ಕುವೆಂಪು ವಿಶ್ವವಿದ್ಯಾಲಯದ ಆವರಣ ಬುಧವಾರದಂದು ಅಕ್ಷರಶಃ ಉದ್ವಿಗ್ನಗೊಂಡಿತ್ತು.

ಉಪಕುಲಪತಿಗಳಿಗೆ ಘೇರಾವ್‌ ಹಾಕಿ ಅವರ ಕಚೇರಿ ಪೀಠೋಪಕರಣಗಳ ಧ್ವಂಸ, ನಾಲಫಲಕಕ್ಕೆ ಮಸಿ ಹಾಕುವದರೊಂದಿಗೆ ಕೊನೆಗೆ ವಿದ್ಯಾರ್ಥಿಗಳ ಮೇಲೆ ಎಫ್‌ಐಆರ್‌ ದಾಖಲಾಗುವದರೊಂದಿಗೆ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ.

ಪ್ರತಿಭಟನೆ, ಮನವಿಗಳಿಂದ ಸಮಸ್ಯೆ ಬಗೆಹರಿಯದ ಹಿನ್ನಲೆ ಹಾಗೂ ವಿದ್ಯಾರ್ಥಿ ವಿರೋಧಿ ಧೋರಣೆ ಹಾಗೂ ಆಡಳಿತಾತ್ಮಕ ವೈಫಲ್ಯಗಳನ್ನು ಖಂಡಿಸಿ ಬುಧವಾರ ಎನ್‌ಎಸ್‌ಯುಐ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡ ಘಟನೆ ನಡೆದಿದೆ.

ಕುವೆಂಪು ವಿವಿಯ ಆಂತರಿಕ ಕಿತ್ತಾಟದಿಂದಲೇ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗುತ್ತಿದೆ. 1, 3 ಮತ್ತು 5ನೇ ಸೆಮಿಸ್ಟರ್ ಪರೀಕ್ಷೆ ಫಲಿತಾಂಶ ಐದು ತಿಂಗಳು ಕಳೆದರೂ ಪ್ರಕಟಿಸಿಲ್ಲ.

3 ವರ್ಷಗಳಿಂದ ಪದವಿ ಅಂಕಪಟ್ಟಿ ವಿತರಿಸದೇ ಉನ್ನತ ವ್ಯಾಸಂಗಕ್ಕೆ ಅಡಚಣೆ , ಮೌಲ್ಯಮಾಪನಗಳಲ್ಲಿನ ಎಡವಟ್ಟುಗಳು ವಿದ್ಯಾರ್ಥಿಗಳ ಆಕ್ರೋಶದ ಕಟ್ಟೆ ಒಡೆಯಲು ಬುಧವಾರದ ಘಟನೆಗೆ ಕಾರಣವಾಗಿತ್ತು.

ಉಪಕುಲಪತಿ ಶರತ್ ಅನಂತಮೂರ್ತಿ ಅವರ ವಿದ್ಯಾರ್ಥಿ ವಿರೋಧಿ ನಡೆ ಖಂಡಿಸಿ ಎನ್ಎಸ್‌ಯುಐ ಕಾರ್ಯಕರ್ತರು, ಉಪಕುಲಪತಿ ಕಚೇರಿಗೆ ಮುತ್ತಿಗೆ ಹಾಕಿದ್ದಲ್ಲದೇ ಪೀಠೋಪಕರಣ ಧ್ವಂಸಗೊಳಿಸಿ ನಾಮಫಲಕಕ್ಕೆ ಮಸಿ ಬಳಿದರು.

ಅಂಕಪಟ್ಟಿ ಇಲ್ಲದೆ ಪದವೀಧರರು ಉನ್ನತ ವ್ಯಾಸಂಗ ಹಾಗೂ ಉದ್ಯೋಗಕ್ಕೆ ಸೇರಲು ಪರದಾಡುವಂತಾಗಿದೆ.

ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಉಪಕುಲಪತಿ ಸ್ಪಂದಿಸದೆ, ಆಂತರಿಕ ಕಚ್ಚಾಟದಲ್ಲಿ ಕಾಲಹರಣ ಮಾಡುತ್ತಿದ್ದಾರೆಂದು ಆರೋಪಿಸಿರುವ ವಿದ್ಯಾರ್ಥಿಗಳು, ಉಪಕುಲಪತಿ ಶರತ್ ಅನಂತಮೂರ್ತಿಗೆ ಘೇರಾವ್ ಹಾಕಿದರು.

ಇದರಿಂದ ಪರಿಸ್ಥಿತಿ ನಿಯಂತ್ರಿಸಲು ಬಂದ ಭದ್ರತಾ ಸಿಬ್ಬಂದಿಯನ್ನು ಪ್ರತಿಭಟನಾಕಾರರು ತಡೆದಿದ್ದರಿಂದ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

ಕುವೆಂಪು ವಿವಿ ರಾಜ್ಯದ ಯಾವ ವಿಶ್ವವಿದ್ಯಾನಿಲಯವೂ ವಿಧಿಸದೇ ಇರುವಷ್ಟು ಪರೀಕ್ಷಾ ಹಾಗೂ ಪ್ರವೇಶ ಶುಲ್ಕ ಹೆಚ್ಚಿಸಿದೆ. ಇದು ಬಡ ವಿದ್ಯಾರ್ಥಿಗಳಿಗೆ ಹೊರೆಯಾಗುವಂತೆ ಮಾಡಿದೆ.

ಡಿಜಿಟಲ್ ಮೌಲ್ಯಮಾಪನದ ತಾಂತ್ರಿಕ ಲೋಪ ಫಲಿತಾಂಶಗಳಲ್ಲಿ ಗೊಂದಲ ಏರ್ಪಟ್ಟಿದ್ದು, ಪಾಸ್ ಆದವರಿಗೂ ಫೇಲ್ ಎಂದು ತೋರಿಸುತ್ತಿದೆ.

ಸ್ನಾತ್ತಕೋತ್ತರ ಪದವಿಗೆ ಸೇರುವಾಗ ಪಾಸಾದ ಅಂಕಪಟ್ಟಿ ದಾಖಲಾದ ಬಳಿಕ ಫೇಲ್ ಎಂಬ ಅಂಕಪಟ್ಟಿ ನೀಡಿದೆ.

ಸಾವಿರಾರು ವಿದ್ಯಾರ್ಥಿಗಳಿಗೆ ಇದರಿಂದ ತೀವ್ರ ಸಮಸ್ಯೆ ಎದುರಿಸುವಂತೇ ಆಗಿದ್ದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿತ್ತು.

ಆಡಳಿತಾತ್ಮಕ ,ತಾಂತ್ರಿಕ ಅವ್ಯವಸ್ಥೆ ಸರಿಪಡಿಸಲು ವಿಫಲರಾಗಿರುವ ಉಪಕುಲಪತಿಯನ್ನು ವಜಾಗೊಳಿಸಬೇಕು ಮತ್ತು ಈ ವಿಷಯದಲ್ಲಿ ರಾಜ್ಯಪಾಲರು ಮಧ್ಯೆ ಪ್ರವೇಶಿಸಬೇಕೆಂದು ಎನ್‌ಎಸ್‌ಯುಐ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್ ಆಗ್ರಹಿಸಿದ್ದಾರೆ.

ಕುವೆಂಪು ವಿವಿಯಲ್ಲಿ ವಿದ್ಯಾರ್ಥಿ ಸಂಘಟನೆಗಳು ನಡೆಸಿದ ಪ್ರತಿಭಟನೆ ಹಿಂದೆ ಯಾರೋ ಇದ್ದಾರೆಂಬ ಸಂಶಯವನ್ನು ಉಪಕುಲಪತಿ ಶರತ್ ಅನಂತಮೂರ್ತಿ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕಚೇರಿ ಹಾನಿ ಮಾಡಿರುವವರ ವಿರುದ್ಧ ಎಫ್‌ಐಆರ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಏಕಾಏಕಿ ಮಾಹಿತಿ ನೀಡದೇ ಈ ರೀತಿ ಪ್ರತಿಭಟನೆ ಹೆಸರಿನಲ್ಲಿ ಕುವೆಂಪು ವಿವಿ ಆವರಣದಲ್ಲಿ ಈ ರೀತಿಯ ಗಲಭೆ ಮಾಡಿರುವುದನ್ನ ತೀವ್ರವಾಗಿ ಖಂಡಿಸುತ್ತೇನೆ ಎಂದರು.

ಇದರ ಹಿಂದೆ ಯಾರದ್ದೋ ಕುಮ್ಮಕ್ಕು ಇದೆ. ನಮ್ಮ ವಿದ್ಯಾರ್ಥಿಗಳು ಈ ರೀತಿ ಮಾಡಲ್ಲ, ತಮ್ಮನ್ನ ಘೇರಾವ್ ಮಾಡಿ ತಳ್ಳಾಡಿದ್ದಾರೆ.

ಕುವೆಂಪು ವಿವಿ ರಾಜ್ಯದ ವಿವಿಗಳಲ್ಲೇ ನ್ಯಾಕ್ ರ್ಯಾಂಕಿಂಗನಲ್ಲಿ ಎರಡನೇ ಸ್ಥಾನ ಪಡೆದು ಹೆಸರುಗಳಿಸಿದೆ. ಪ್ರತಿಭಟನೆ ಹೆಸರಿನಲ್ಲಿ ಕುವೆಂಪು ವಿವಿಯ ಘನತೆಗೆ ಮಸಿಬಳಿಯುವುದು ಸರಿಯಲ್ಲ ಎಂದರು.

ವಿವಿಯಲ್ಲಿ ಫಲಿತಾಂಶ ಸೇರಿದಂತೆ ಕೆಲ ಸಮಸ್ಯೆಗಳಿವೆ ‌.ಶೀಘ್ರವೇ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಕುವೆಂಪು ವಿವಿಯಲ್ಲಿ ಪೀಠೋಪಕರಣ ಧ್ವಂಸ, ಹಾಗೂ ಧಾಂದಲೆ ನಡೆಸಿದ್ದಾರೆಂದು ವಿದ್ಯಾರ್ಥಿ ಕಾಂಗ್ರೆಸ್‌ನ ಮುಖಂಡರ ವಿರುದ್ದ ಭದ್ರಾವತಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಟ್ಟಾರೇ, ವಿವಿಯಲ್ಲಿನ ಲೋಪದೋಷಗಳು ಹಾಗೂ ವಿದ್ಯಾರ್ಥಿಗಳನ್ನು ಸಮಾಧಾನ ಮಾಡುವಲ್ಲಿ ಆಡಳಿತ ಮಂಡಳಿ ವಿಫಲವಾಗಿದ್ದು ಮೇಲ್ನೋಟಕ್ಕೆ ಸಾಬೀತಾಗಿದೆ.

ಉಪಕುಲಪತಿ ಅವರನ್ನೇ ಎಳೆದಾಡುವ ಮಟ್ಟಕ್ಕೆ ವಿದ್ಯಾರ್ಥಿಗಳು ಹೋಗಿದ್ದರಿಂದ ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಬೇಕಿದೆ.

Follow Us

Leave a Reply

Your email address will not be published. Required fields are marked *

Back to top button