EducationKarnatakaShivamogga

ಕನ್ನಡ ಶಾಲೆಗಳಿಗೆ ಅನುದಾನದ ತಾರತಮ್ಯ|ಮುಚ್ಚುವ ಭೀತಿಯಲ್ಲಿ ಶಾಲೆಗಳು|ಮಧು ಬಂಗಾರಪ್ಪ ನಿವಾಸಕ್ಕೆ ಮುತ್ತಿಗೆಗೆ ನಿರ್ಧಾರ

ಇದೇ ಜೂನ್ ಮುಂಗಾರು ವಿಧಾನಸಭಾ ಅಧಿವೇಶನಕ್ಕೂ ಮುನ್ನ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ 1995 ರ ನಂತರದ ಶಾಲಾ ಕಾಲೇಜುಗಳಿಗೆ ಅನುದಾನ ಒದಗಿಸುವ ತೀರ್ಮಾನ ಕೈಗೊಳ್ಳಬೇಕೆಂದು ಒಕ್ಕೂಟದ ರಾಜ್ಯಾದ್ಯಕ್ಷ ಬಿ.ಸಿ ಶಿವಪ್ಪ ಒತ್ತಾಯಿಸಿದರು.

ಶಿವಮೊಗ್ಗ: ಕನ್ನಡ ಮಾಧ್ಯಮ ಖಾಸಗಿ ಶಾಲಾ ಕಾಲೇಜುಗಳಿಗೆ ವೇತನಾನುದಾನದ ಹುಸಿ ಭರವಸೆ ನೀಡುತ್ತಿರುವ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಕ್ರಮವನ್ನು ಖಂಡಿಸಿರುವ ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾಕಾಲೇಜು ಆಡಳಿತಮಂಡಳಿ ಮತ್ತು ನೌಕರರ ಒಕ್ಕೂಟವು, ಜೂನ್‌ 5ರಂದು ಸಚಿವ ಮಧು ಬಂಗಾರಪ್ಪ ಅವರ ಬೆಂಗಳೂರು ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದೆ.

ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ನ ಪತ್ರಿಕಾ ಭವನದಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯಾದ್ಯಕ್ಷ ಬಿ.ಸಿ ಶಿವಪ್ಪ, ಅನುದಾನರಹಿತ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಿಗೆ ಕಳೆದ 30 ವರ್ಷಗಳಿಂದಲೂ ವೇತನಾನುದಾನಕ್ಕೊಳಪಡಿಸದೇ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ಕಳೆದ ಬೆಳಗಾವಿ ವಿಧಾಸಭಾ ಅಧಿವೇಶನದ ಸಂದರ್ಭದಲ್ಲಿ 1995 ರಿಂದ 2020 ರವರೆಗಿನ ಅನುದಾನರಹಿತ ಶಾಲಾಕಾಲೇಜುಗಳಿಗೆ ಅನುದಾನ ನೀಡುವುದಾಗಿ ಶಿಕ್ಷಣ ಸಚಿವ ಮಧುಬಂಗಾರಪ್ಪ ನೀಡಿದ ಭರವಸೆ ಈಗ ಹುಸಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಧ್ಯಮಗಳ ಮುಂದೆ ಕನ್ನಡ ಶಾಲೆ ಉಳಿವಿಗೆ ಆದ್ಯತೆ ನೀಡುವದಾಗಿ ತಮ್ಮ ರಕ್ತದಲ್ಲೇ ಕನ್ನಡವಿದೆ ಇನ್ನು ಕನ್ನಡಕ್ಕೆ ಮೊದಲ ಆದ್ಯತೆ ಎನ್ನುವುದು ಸಚಿವ ಮಧು ಬಂಗಾರಪ್ಪನವರ ಹೇಳಿಕೆ ಕೇವಲ ಪತ್ರಿಕಾ ಪ್ರಕಟಣೆಗೆ ಮಾತ್ರ ಸೀಮಿತವಾಗಿದೆ ಎಂದು ಒಕ್ಕೂಟದ ರಾಜ್ಯಾದ್ಯಕ್ಷ ಬಿ.ಸಿ ಶಿವಪ್ಪ ಕಿಡಿಕಾರಿದರು.

ಕನ್ನಡ ಭಾಷೆ ಉಳಿವಿನ ಮಾತುಗಳು, ಹೇಳಿಕೆಗಳು ಕೇವಲ ನವೆಂಬರ್‌ಗೆ ಮಾತ್ರ ಸೀಮಿತವಾಗಿದೆ ಎಂದು ಆರೋಪಿಸಿದ ಅವರು, ಕನ್ನಡ ಸಾಹಿತ್ಯ ಸಮ್ಮೇಳನ ಹೆಸರಿನಲ್ಲಿ ನೂರು ಕೋಟಿ ವ್ಯಯಿಸುತ್ತಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಬೇಕಾದಷ್ಟು ಅನುದಾನ ನೀಡುತ್ತಾರೆ ಅದರೆ ಕನ್ನಡ ಮಾಧ್ಯಮ ಶಾಲೆ ನಡೆಸುತ್ತಿರುವ ಶಾಲೆಗಳಿಗೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Photo credit-The Hindu

ಕನ್ನಡ ಶಾಲೆಯ ಶಿಕ್ಷಕರ ಸ್ಥಿತಿ ಚಿಂತಾಜನಕವಾಗಿದೆ. ಈಗ ಕೆಪಿಎಸ್ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭದ ಮೂಲಕ ನಮ್ಮ ಕನ್ಮಡ ಮಾಧ್ಯಮ ಶಾಲೆಗಳಿಗೆ ಮುಚ್ಚುವ ಆತಂಕ ತಲೆದೋರಿದೆ ಎಂದು ಹೇಳಿದರು.

ಸದ್ಯ ರಾಜ್ಯದಲ್ಲಿ 6412ಪ್ರಾಥಮಿಕ, 989 ಪ್ರೌಢಶಾಲೆಗಳು, 3125ಪದವಿ ಪೂರ್ವಕಾಲೇಜುಗಳಿವೆ. ಅನುದಾನ ನೀಡಲು 341 ಕೋಟಿ ವೆಚ್ಚವಾಗಲಿದೆಯೆಂದು ಅಂದಾಜಿಸಲಾಗಿದೆ.

ಆದರೆ ಇಚ್ಛಾಶಕ್ತಿ ಕೊರತೆಯಿಂದಾಗಿ ಅನುದಾನಕ್ಕೊಳಪಡದೇ ನಾವೆಲ್ಲ ಅತಂತ್ರಪರಿಸ್ಥಿತಿಯಲ್ಲಿದ್ದೇವೆ ಎಂದು ಒಕ್ಕೂಟದ ರಾಜ್ಯಾದ್ಯಕ್ಷ ಬಿ.ಸಿ ಶಿವಪ್ಪ ಅಳಲು ತೋಡಿಕೊಂಡರು.

ಕನ್ನಡ ಮಾಧ್ಯಮ ಅನುದಾನರಹಿತ ಖಾಸಗಿ ಶಾಲಾ ಕಾಲೇಜುಗಳನ್ನು ಅನುದಾನಕ್ಕೊಳಪಡಿಸುವ ಇಚ್ಛಾಶಕ್ತಿ ತೋರದೇ ಎಲ್ಲ ಸರ್ಕಾರಗಳಿಂದಲೂ ನಿರಂತರ ಅನ್ಯಾಯವಾಗುತ್ತಿದೆಯೆಂದು ಅವರು ಆರೋಪಿಸಿದರು.

ಇದೇ ಜೂನ್ ಮುಂಗಾರು ವಿಧಾನಸಭಾ ಅಧಿವೇಶನಕ್ಕೂ ಮುನ್ನ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ 1995 ರ ನಂತರದ ಶಾಲಾ ಕಾಲೇಜುಗಳಿಗೆ ಅನುದಾನ ಒದಗಿಸುವ ತೀರ್ಮಾನ ಕೈಗೊಳ್ಳಬೇಕೆಂದು ಒಕ್ಕೂಟದ ರಾಜ್ಯಾದ್ಯಕ್ಷ ಬಿ.ಸಿ ಶಿವಪ್ಪ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಹೊರಗಿನ ಮಠ, ಗೌರವಾಧ್ಯಕ್ಷ ಬಾಲಮಂಗಲ ನಾಗರಾಜು, ಪದಾಧಿಕಾರಿಗಳಾದ ಪ್ರದೀಪ್, ನಂಜುಂಡಸ್ವಾಮಿ, ಧನಂಜಯ , ಸದಾನಂದ, ಸಂತೋಷ್ ಉಪಸ್ಥಿತರಿದ್ದರು

Follow Us

Leave a Reply

Your email address will not be published. Required fields are marked *

Back to top button