ನ್ಯಾಷನಲ್ ಹೆರಾಲ್ಡ್ ಪ್ರಕರಣ|ಸೋನಿಯಾ,ರಾಹುಲ್ ಗಾಂಧಿ ವಿರುದ್ದ ದ್ವೇಷದ ರಾಜಕಾರಣ|ಕೇಂದ್ರದ ಕ್ರಮ ಖಂಡಿಸಿ, ಕಾಂಗ್ರೆಸ್‌ನಿಂದ ಬಿಜೆಪಿ ಕಚೇರಿ ಮುತ್ತಿಗೆ ಯತ್ನ
ಪೊಲೀಸರಿಂದ ತಪ್ಪಿಸಿಕೊಂಡು ಬ್ಯಾರಿಕೇಡ್ ದಾಟಿ ಬಿಜೆಪಿ ಕಚೇರಿ ಮುತ್ತಿಗೆಗೆ ಯತ್ನಿಸಿದ ಜವಳಿ ನಿಗಮದ ಅಧ್ಯಕ್ಷ ಚೇತನ್ ಗೌಡ, ಪ್ರಸನ್ನಕುಮಾರ್ ರಂಗನಾಥ್ ಸೇರಿದಂತೆ ಹಲವು ಮುಖಂಡರನ್ನು ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ ವಿರುದ್ದ ಕೇಂದ್ರ ಸರ್ಕಾರವು, ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಿತಲ್ಲದೇ ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆಗೆ ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ.
ಬುಧವಾರದಂದು ಜೈಲ್ ವೃತ್ತದಿಂದ ದೀನದಯಾಳ ರಸ್ತೆಯಲ್ಲಿರುವ ಬಿಜೆಪಿ ಕಚೇರಿ ಇರುವ ಸ್ಥಳದವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ಸಾವಿರಾರು ಸಂಖ್ಯೆಯಲ್ಲಿದ್ದ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಜ್ಯೋತಿಗಾರ್ಡನ್‌ವರೆಗೆ ಧಾವಿಸಿದರು.
ಬಳಿಕ ಅದಾಗಲೇ ಬ್ಯಾರಿಕೇಡ್ ಹಾಕಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಬಲವಂತವಾಗಿ ತಡೆದರು.

ಪೊಲೀಸರಿಂದ ತಪ್ಪಿಸಿಕೊಂಡು ಬ್ಯಾರಿಕೇಡ್ ದಾಟಿ ಬಿಜೆಪಿ ಕಚೇರಿ ಮುತ್ತಿಗೆಗೆ ಯತ್ನಿಸಿದ ಜವಳಿ ನಿಗಮದ ಅಧ್ಯಕ್ಷ ಚೇತನ್ ಗೌಡ, ಪ್ರಸನ್ನಕುಮಾರ್ ರಂಗನಾಥ್ ಸೇರಿದಂತೆ ಹಲವು ಮುಖಂಡರನ್ನು ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದರು.
ಇದರಿಂದ ಮತ್ತಷ್ಟು ಕೆರಳಿದ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯಲ್ಲಿಯೇ ಕುಳಿತು ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದರು.
ಕೇಂದ್ರ ಸರ್ಕಾರವು, ತನಿಖಾ ಸಂಸ್ಥೆಗಳನ್ನು ಬಳಸಿ ನಾಯಕರ ವಿರುದ್ದ ಪಿತೂರಿ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು. ಗೃಹಸಚಿವ ಅಮಿತಾ ಶಾ ವಿರುದ್ದ ಘೋಷಣೆಗಳನ್ನ ಕೂಗಿದರು.
ನರೇಗಾ ಯೋಜನೆಯ ಹೆಸರನ್ನು ಬದಲಾಯಿಸುವ ಮೂಲಕ ಕೇಂದ್ರ ದ್ವೇಷ ರಾಜಕಾರಣ ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಬಿಜೆಪಿ ಕಚೇರಿ ಮುತ್ತಿಗೆ ಹಾಕಲು ಮುಂದಾದ ನೂರಾರು ಕಾಂಗ್ರೆಸ್ ಕಾರ್ಯಕರ್ತರನ್ನು ಬಳಿಕ ನಾಲ್ಕು ಪೊಲೀಸ್ ವಾಹನಗಳಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದು ಬಳಿಕ ಬಿಡುಗಡೆ ಮಾಡಲಾಯಿತು.
ಮಹಿಳಾ ಪೋಲೀಸ್ ಮಾಂಗಲ್ಯಸರ ಕಳವು!
ಕಾಂಗ್ರೆಸ್ ಪ್ರತಿಭಟನೆ ವೇಳೆ ಬಂದೋಬಸ್ತ್ ಕರ್ತವ್ಯ ನಿರ್ವಹಣೆಗೆ ಬಂದಿದ್ದ ಮಹಿಳಾ ಪೊಲಿಸ್ ಅಧಿಕಾರಿ ಎಎಸ್ಐ ಅಮೃತಾಬಾಯಿಯ ಚಿನ್ನದ ಸರ ಕಳುವಾದ ಘಟನೆ ನಡೆದಿದೆ.

60 ಗ್ರಾಂ ತೂಕದ ಮಾಂಗಲ್ಯ ಸರ ಕಳೆದುಕೊಂಡ ಮಹಿಳಾ ಪೊಲೀಸ್ ಅಧಿಕಾರಿ ಕಣ್ಣೀರು ಹಾಕಿದರು. ನೂಕುನುಗ್ಗಲಿನ ಲಾಭ ಪಡೆದು ಕಳ್ಳರು ಕೈಚಳ ತೋರಿದ್ದಾರೆ ಎನ್ನಲಾಗಿದೆ.
ಸರವು 7 ಲಕ್ಷರೂ. ಮೌಲ್ಯದ್ದಾಗಿದ್ದು, ಸರ ಕಳುವಾಗಿರೋದು ತಿಳಿದ ಕೂಡಲೆ ಸಮೀಪದ ಸಿಸಿ ಕ್ಯಾಮೆರಾಗಳು ಮತ್ತು ಮಾಧ್ಯಮಗಳ ವಿಡಿಯೋ ತುಣುಕು ಪರಿಶೀಲಿಸಿಲಾಯಿತು. ಆದರೂ ಈವರೆಗೆ ಕಳ್ಳರ ಪತ್ತೆ ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.
ದೊಡ್ಡಪೇಟೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‌ಐ ಅಮೃತಾಬಾಯಿ, ಇತ್ತೀಚೆಗಷ್ಟೇ ಹೊಸ ಮಾಂಗಲ್ಯಸರ ಖರೀದಿಸಿದ್ದರು ಎಂದು ತಿಳಿದುಬಂದಿದೆ.
ಪ್ರತಿಭಟನೆಯಲ್ಲಿ ಕೆಪಿಸಿಸಿ ರಾಜ್ಯ ಸಂಯೋಜಕ ಮಂಜುನಾಥ್, ಮಾಜಿ ಮಹಾನಗರ ಪಾಲಿಕೆ ಸದಸ್ಯ ಯೋಗೀಶ್ , ವಿಶ್ವನಾಥ್ ಕಾಶಿ, ಕಾಂಗ್ರೆಸ್ ಮುಖಂಡರಾದ ಮರಿಯಪ್ಪ , ಆರ್ ಎಂ ಮಂಜುನಾಥಗೌಡ, ಮಧುಸೂದನ್, ಜಿಲ್ಲಾ ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಕಾರ್ಯಕರ್ತರು ಭಾಗಿಯಾಗಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







