ಮಾಜಿ ಡಿಸಿಎಂ ಈಶ್ವರಪ್ಪಗೆ ಜೀವಬೆದರಿಕೆ ಭೀತಿ!’ವೈ’ ಕೆಟಗೆರಿ ಭದ್ರತೆ ನೀಡಲು ಎಸ್‌ಪಿಗೆ ಮನವಿ|ಸಿನಿಮಾದವರ ಶೋಕಿಗೂ ‘ವೈ’ ಭದ್ರತೆ ದುರುಪಯೋಗ?
ಮೂರು ತಿಂಗಳ ಹಿಂದಷ್ಟೇ ಕಾಂಗ್ರೆಸ್ ಸರ್ಕಾರ ತಮಗೆ ನೀಡಿದ್ದ ವೈ ಸೆಕ್ಯೂರಿಟಿ ಭದ್ರತೆ ಹಿಂಪಡೆದ ನಂತರ ದೇಶದ್ರೋಹಿ ಸಂಘಟನೆಗಳು ತಮಗೆ ಮತ್ತೆ ಕರೆ ಮಾಡಲು ಶುರು ಮಾಡಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ : ವಿದೇಶದಿಂದ ತಮ್ಮ ಮೊಬೈಲ್‌ಗೆ ಕರೆಗಳು ಬರುತ್ತಿರುವದರಿಂದ ಆ ನಂಬರಿನ ಜಾಡು ಹಿಡಿದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ.
ಈ ಕುರಿತು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಅವರನ್ನು ಭೇಟಿಯಾಗಿರುವ ಕೆ.ಎಸ್.ಈಶ್ವರಪ್ಪ, ತಮಗೆ ಈ ಮೊದಲು ನೀಡಲಾಗಿದ್ದ ‘ವೈ’ ಕೆಟಗೆರಿ ಭದ್ರತೆಯನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ.
ರಾಷ್ಟ್ರ ಭಕ್ತರ ಬಳಗದ ಸದಸ್ಯರೊಂದಿಗೆ ಎಸ್‌ಪಿ ಕಚೇರಿಗೆ ಆಗಮಿಸಿದ್ದ ಕೆ.ಎಸ್.ಈಶ್ವರಪ್ಪ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜನೆವರಿ 7 ರಂದು ಫಿನ್‌ಲ್ಯಾಂಡ್ ದೇಶದಿಂದ +348465445069 ನಂಬರನಿಂದ ಕರೆ ಬಂದಿದೆ.
ಇದು ತಮಗೆ ಜೀವ ಬೆದರಿಕೆ ನೀಡಲು ಕರೆ ಮಾಡಿರುವ ಶಂಕೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಹಿಂದೆಯು ಇದೇ ರೀತಿ ತಮಗೆ ವಿದೇಶದಿಂದ ಕರೆಗಳು ಬಂದಿರುತ್ತವೆ. ಆಗ ಎರಡು ಬಾರಿ ತಮಗೆ ಜೀವ ಬೆದರಿಕೆ ಹಾಕಲಾಗಿತ್ತು ಎಂದು ಹೇಳಿದರು.
ಮೂರು ತಿಂಗಳ ಹಿಂದಷ್ಟೇ ಕಾಂಗ್ರೆಸ್ ಸರ್ಕಾರ ತಮಗೆ ನೀಡಿದ್ದ ‘ವೈ’ ಸೆಕ್ಯೂರಿಟಿ ಭದ್ರತೆ ಹಿಂಪಡೆದ ನಂತರ ದೇಶದ್ರೋಹಿ ಸಂಘಟನೆಗಳು ತಮಗೆ ಮತ್ತೆ ಕರೆ ಮಾಡಲು ಶುರು ಮಾಡಿದ್ದಾರೆ ಆತಂಕ ವ್ಯಕ್ತಪಡಿಸಿದರು.
ಈ ಹಿಂದೆಯು ಸಹ ದೂರು ನೀಡಿದ್ದರೂ ಪೂರ್ಣಪ್ರಮಾಣದ ತನಿಖೆ ನಡೆದಿಲ್ಲ ಎಂದು ಆರೋಪಿಸಿದರು.
‘ವೈ’ ಕೆಟಗೆರಿಯಿಂದ ‘ಎಕ್ಸ್’ ಗೆ ಹಿಂಬಡ್ತಿ|
ಈ ಹಿಂದೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರಿಗೆ ‘ವೈ’ ಕೆಟಗೆರಿಯನ್ನು ನೀಡಲಾಗಿತ್ತು. ಕೆ.ಎಸ್.ಈಶ್ವರಪ್ಪ ಅವರ ಬೆಂಗಳೂರು ಹಾಗೂ ಶಿವಮೊಗ್ಗ ಮನೆಗಳಿಗೆ ಕಮಾಂಡೋ ಸಮೇತ ಪೊಲೀಸರ ಭದ್ರತೆಯನ್ನು ನೀಡಲಾಗಿತ್ತು.
ಅಲ್ಲದೇ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಮನೆಯಿಂದ ಹೊರಟು ವಾಪಸು ಬರುವ ತನಕ ಅವರಿಗೆ ಬೆಂಗಾವಲು ಎಸ್ಕಾರ್ಟ್ ಪಡೆ ರಕ್ಷಣೆ ಒದಗಿಸಲಾಗಿತ್ತು.
ಆದರೆ ಕಾಂಗ್ರೆಸ್ ಸರ್ಕಾರ ಬಂದ ನಂತರ ಸಮೀಕ್ಷೆ ನಡೆಸಿ, ಈ ಹಿಂದೆ ಇದ್ದಷ್ಟು ಬೆದರಿಕೆಗಳು ಕೆ.ಎಸ್.ಈಶ್ವರಪ್ಪ ಅವರಿಗೆ ಈಗಿಲ್ಲ ಎಂಬ ಗುಪ್ತಚರ ಇಲಾಖೆಯಿಂದ ಮಾಹಿತಿ ಆಧರಿಸಿ ವೈ ಕೆಟಗರಿ ವಾಪಸು ಪಡೆಯಲು ನಿರ್ಧಾರ ಮಾಡಿತ್ತು ಎಂದು ಹೇಳಲಾಗಿದೆ.
ಬಳಿಕ ಮೂರು ತಿಂಗಳ ಹಿಂದಷ್ಟೇ, ಈಶ್ವರಪ್ಪನವರಿಗೆ ನೀಡಲಾಗಿದ್ದ ‘ವೈ’ ಭದ್ರತೆಯನ್ನು ವಾಪಸು ಪಡೆದು ʼಎಕ್ಸ್ʼ ದರ್ಜೆಗೆ ಭದ್ರತೆಯನ್ನು ಇಳಿಸಿತ್ತು.
ಆದರೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಹೇಳುವ ಪ್ರಕಾರ, ‘ಎಕ್ಸ್’ ಭದ್ರತೆ ತಮಗೆ ಸಾಲದು. ‘ವೈ’ ಕೆಟಗೆರಿ ಭದ್ರತೆಯನ್ನು ನೀಡಬೇಕು ಎಂದು ಈಗ ಮತ್ತೆ ಮನವಿ ಮಾಡಿದ್ದಾರೆ.
ಈ ಮಧ್ಯೆ ‘ವೈ’ ಕೆಟಗೆರಿ ಭದ್ರತೆ ಕೇಳಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಮನವಿಯನ್ನು ಸ್ವೀಕರಿಸಿರುವ ಶಿವಮೊಗ್ಗ ನೂತನ ಎಸ್‌ಪಿ ಬಿ.ನಿಖಿಲ್ ಅವರು, ಈ ಕುರಿತು ಗೃಹ ಇಲಾಖೆಗೆ ವರದಿ ನೀಡುವದಾಗಿ ತಿಳಿಸಿದ್ದಾರೆ.
ರಾಜಕಾರಣಿಗಳಿಗೆ ಬೇಕು ‘ವೈ’ ಕೆಟಗೆರಿ
ಅಂತಸ್ತು, ಪ್ರತಿಷ್ಠೆಗೆ ಭದ್ರತೆ ದುರುಪಯೋಗ?
ಈ ಹಿಂದೆ ಪೊಲೀಸರು ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಸಚಿವರು ಮತ್ತು ಇತರೆ ಅಧಿಕಾರ ಹೊಂದಿದ ರಾಜಕಾರಣಿಗಳ ಕಾರಿಗೆ ಕೆಂಪು ದೀಪದ ಗೂಟ ಹಾಕಿಕೊಂಡು ಓಡಾಡುವದೇ ಒಂದು ಅಂತಸ್ತು ಆಗಿತ್ತು.

ಮುಂದೆ ಕೇಂದ್ರ ಸರ್ಕಾರ ಕೆಂಪು ದೀಪ ಹಾಕುವಂತಿಲ್ಲ ಎಂದು ಆದೇಶ ಹೊರಡಿಸಿತು.
ಇದು ರಾಜಕಾರಣಿಗಳಿಗೆ ಸೇರಿದಂತೆ ಇದನ್ನು ಬಳಸುತ್ತಿದ್ದ ಎಲ್ಲರಿಗೂ ಒಳಗೊಳಗೆ ಅಸಮಾಧಾನ ಉಂಟು ಮಾಡಿತ್ತು.
ಆದರೆ ಕ್ರಮೇಣ ರಂಗೋಲಿ ಒಳಗೆ ತೂರಿಕೊಂಡ ಈ ವರ್ಗ, ಬ್ಲಿಂಕ್ ಆಗುವ ಬಣ್ಣದ ದೀಪವನ್ನು ಬಳಸಲು ಶುರು ಮಾಡಿದರು. ಅಸಲಿಗೆ ಇದನ್ನು ರಾಜಕಾರಣಿಗಳು ಬಳಸುವಂತಿಲ್ಲ.
ಇದೇ ವೇಳೆ ರಾಜಕಾರಣಿಗಳಿಗೆ ಸಮಾಜದಲ್ಲಿ ಸಾಕಷ್ಟು ವಿರೋಧಿಗಳು ಹುಟ್ಟಿಕೊಂಡಿದ್ದರಿಂದ ತಮಗೆ ರಕ್ಷಣೆ ನೀಡಬೇಕೆಂದು ಪಟ್ಟು ಹಿಡಿದರು.
ಒಬ್ಬರ ಹಿಂದೆ ನಾಲ್ಕು, ಐದು ಜನರಿಂದ ಹಿಡಿದು ಮೂವತ್ತು ನಾಲ್ವತ್ತು ಅದಕ್ಕಿಂತ ಹೆಚ್ಚಿನ ಭದ್ರತೆಯನ್ನು ನೀಡಲಾಯಿತು.
ಇದರಲ್ಲಿ ಕಮಾಂಡೋಗಳು ಸೇರಿದಂತೆ ಸ್ಥಳೀಯ ಪೊಲೀಸರು ಇದ್ದಾರೆ. ಒಮ್ಮೆ ರಾಜಕಾರಣಿ ಮನೆಯಿಂದ ಹೊರಟರೇ ಅವರಿಗೆ ಬೆಂಗಾವಲಾಗಿ ಭದ್ರತಾ ಪಡೆಗಳ ಕಾರುಗಳ ಸಾಲನ್ನು ಜನ ನಿಂತು ನೋಡುತ್ತಿದ್ದರು. ಕೆಲವರು ಈ ಭದ್ರತೆ ತಮಗಿರುವ ಪ್ರತಿಷ್ಠೆಯೆಂದು ಭಾವಿಸತೊಡಗಿದರು.
ಇದರಿಂದ ನಿಜವಾದ ಬೆದರಿಕೆ ಇರುವ ವ್ಯಕ್ತಿಗಳಿಗೆ ಸರ್ಕಾರ ಭದ್ರತೆ ನೀಡದೇ ವಶೀಲಿ ಮಾಡುವ ರಾಜಕಾರಣಿಗಳಿಗೆ ನೀಡುತ್ತಿರುವದು ಈ ಭದ್ರತೆಯ ದುರುಪಯೋಗವಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಲೇ ಇವೆ.
‘ವೈ’ ಕೆಟಗರಿ ಭದ್ರತೆ ವಿಶೇಷವೇನು?
ಸಿನಿಮಾದವರಿಗೂ ವೈ ಭದ್ರತೆ!
‘ವೈ’ ಕೆಟಗೆರಿ ಭದ್ರತಾ ವ್ಯಾಪ್ತಿಯಲ್ಲಿ ಇಬ್ಬರು ಕಮಾಂಡೋಗಳು ಸೇರಿದಂತೆ 8 ರಿಂದ 11 ಭದ್ರತಾ ಸಿಬ್ಬಂದಿ ನಿಯೋಜನೆಯಾಗಿರುತ್ತಾರೆ. ಇದರಲ್ಲಿ ಇಬ್ಬರು ವೈಯಕ್ತಿಕ ಭದ್ರತಾ ಅಧಿಕಾರಿಗಳು (ಕಮಾಂಡೋಗಳು) ಇರುತ್ತಾರೆ.
ಭಾರತದಲ್ಲಿ ಅನೇಕ ವಿಐಪಿಗಳಿಗೆ ‘ವೈ’ ಕೆಟಗರಿ ಭದ್ರತಾ ರಕ್ಷಣೆ ನೀಡಲಾಗಿದೆ. ಇನ್ನು ಪ್ರಚೋದಿತ ಹೇಳಿಕೆ ನೀಡಿ ಬೆದರಿಕೆ ಎದುರಿಸುತ್ತಿರುವವರಿಗೂ ‘ವೈ’ ಕೆಟಗೆರಿ ಭದ್ರತೆ ನೀಡಲಾಗಿದೆ.

ಅದರಲ್ಲಿ ಈಗ ಸಿನಿಮಾದ ವ್ಯಕ್ತಿಗಳು ಈ ಭದ್ರತಾ ಶೋಕಿಗೆ ಮರುಳಾಗಿದ್ದಾರೆ. ನಟಿ ಕಂಗನಾ ರಣಾವತ್, ದಿ ಕಾಶ್ಮೀರ್ ಫೈಲ್ಸ್‌ನ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಸೇರಿದಂತೆ ತಮ್ಮ ವಶೀಲಿಗೆ ತಕ್ಕಂತೆ ಇನ್ನಿತರ ಗಣ್ಯರು? ವೈ ವ್ಯಾಪ್ತಿಯ ಭದ್ರತೆ ಹೊಂದಿದ್ದಾರೆ.
ಇವತ್ತಿಗೆ ಈ ತರಹದ ಭದ್ರತೆಗಳು ಪ್ರತಿಷ್ಠೆ ಹಾಗೂ ಫ್ಯಾಶನ್ ಆಗಿ ಮಾರ್ಪಟ್ಟಿದೆ ಎಂಬುದು ಮಾತ್ರ ಸುಳ್ಳಲ್ಲ. ನೈಜ ವಿರೋಧ ಹಾಗೂ ಜೀವ ಬೆದರಿಕೆ ಇರುವವರಿಗೆ ಭದ್ರತೆ ಒದಗಿಸುವಲ್ಲಿ ಹಲವೆಡೆ ಸರ್ಕಾರಗಳು ವಿಫಲವಾಗಿವೆ ಎಂಬ ಮಾತು ಕೇಳಿ ಬರುತ್ತಿದೆ.
ಇತ್ತೀಚೆಗೆ ಮಾಜಿ ಸಚಿವ ಜನಾರ್ಧನ್ ರೆಡ್ಡಿ ಅವರು ತಮ್ಮನ್ನು ಕೊಲ್ಲಲು ರಿವಾಲ್ವರ ಬಳಸಿದ್ದಾರೆ ರಕ್ಷಣೆ ಕೊಡಿ ಎಂದು ದುಂಬಾಲು ಬಿದ್ದರೇ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರು ಜೀವಬೆದರಿಕೆಯಿಂದ ರಕ್ಷಣೆ ಕೊಡಿ ಎಂದು ಮನವಿ ಮಾಡಿದ್ದಾರೆ.
ಸರ್ಕಾರ ಈ ಕೂಡಲೇ ನೈಜ ಜೀವಬೆದರಿಕೆ ಇರುವವರಿಗೆ ಭದ್ರತೆ ನೀಡುತ್ತಾರಾ? ಕಾದು ನೋಡಬೇಕಿದೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







