10ನೇ ದಿನಕ್ಕೆ ಕಾಲಿಟ್ಟ ಹೈಕೋರ್ಟ್ ಸಂಚಾರಿ ಪೀಠ ಹೋರಾಟ|ಶಿವಮೊಗ್ಗ ಪ್ರೆಸ್ ಟ್ರಸ್ಟ್ನಿಂದ ಬೆಂಬಲ, ಪ್ರತಿಭಟನೆಯಲ್ಲಿ ಭಾಗಿ|ಹೋರಾಟ ತೀವ್ರಗೊಳಿಸಲು ಅಧ್ಯಕ್ಷ ಎನ್.ಮಂಜುನಾಥ್ ಕರೆ
ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ವಕೀಲರು ನಡೆಸುತ್ತಿರುವ ಹೋರಾಟಕ್ಕೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಬೆಂಬಲಿಸುತ್ತದೆ ಎಂದು ಅಧ್ಯಕ್ಷ ಎನ್.ಮಂಜುನಾಥ್ ಘೋಷಿಸಿದರು.

ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯಾದರೇ ಸುತ್ತಮುತ್ತಲ ನಾಲ್ಕು ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ ಎಂದು ಕ್ರಾಂತಿದೀಪ ದಿನಪತ್ರಿಕೆ ಸಂಪಾದಕ ಹಾಗೂ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಹೇಳಿದ್ದಾರೆ.
ವಕೀಲರ ಸಂಘ ಪ್ರತಿಭಟನೆ ನಡೆಸುತ್ತಿರುವ ಜಿಲ್ಲಾ ನ್ಯಾಯಾಲಯದ ಆವರಣಕ್ಕೆ ಪ್ರೆಸ್ ಟ್ರಸ್ಟ್ನ ಸದಸ್ಯರ ಜೊತೆ ಆಗಮಿಸಿದ ಅವರು, ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯಾಗಬೇಕೆಂಬ ಹೋರಾಟಕ್ಕೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ನ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು.
ಬಳಿಕ ವಕೀಲರೊಂದಿಗೆ ಪ್ರತಿಭಟನೆಯಲ್ಲಿ ಪ್ರೆಸ್ ಟ್ರಸ್ಟ್ನ ಸದಸ್ಯರ ಜೊತೆ ಪಾಲ್ಗೊಂಡರು.

ಬಳಿಕ ಮಾತನಾಡಿದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಅವರು, ಶಿವಮೊಗ್ಗ ಜಿಲ್ಲೆ ಹಲವು ಹೋರಾಟಗಳ ಮೂಲಕವೇ ಇತಿಹಾಸದಲ್ಲಿ ಗುರುತಿಸಿಕೊಂಡಿದೆ. ಶಿವಮೊಗ್ಗ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಿಸಲು ಇದೇ ರೀತಿಯ ಹೋರಾಟ ನಡೆಸಿ ಯಶಸ್ವಿಯಾಗಿರುವದನ್ನು ಸ್ಮರಿಸಿದರು.

ಪಕ್ಷಾತೀತವಾಗಿ ಎಲ್ಲ ಸಂಘಟನೆಗಳು ಸೇರಿಕೊಂಡು ಹೋರಾಟ ನಡೆಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಕರೆ ನೀಡಿದರು.

ಶಿವಮೊಗ್ಗ ಟೈಮ್ಸ್ ಸಂಪಾದಕ ಚಂದ್ರಕಾಂತ್ ಮಾತನಾಡಿ, ಕಾಗೋಡು ರೈತ ಚಳವಳಿ, ಗೋಪಾಲಗೌಡರ ಸಮಾಜವಾದಿ ಹೋರಾಟ ಇವೆಲ್ಲ ಶಿವಮೊಗ್ಗದ ಹೆಸರನ್ನು ಉತ್ತುಂಗಕ್ಕೇರಿಸಿವೆ ಎಂದರು.
ಇಂತಹ ನೆಲದಲ್ಲಿ ವಕೀಲರ ಸಂಘ ಆರಂಭಿಸಿರುವ ಸಂಚಾರಿ ಪೀಠದ ಹೋರಾಟ ಈ ಹಿಂದಿನ ಚಳವಳಿಗಳಂತೆ ಯಶಸ್ವಿಯಾಗಲಿದೆ ಎಂದು ಹೇಳಿದರು.

ಕನ್ನಡಪ್ರಭ ದಿನಪತ್ರಿಕೆ ಜಿಲ್ಲಾ ವರದಿಗಾರ ಗೋಪಾಲ ಯಡಗೆರೆ ಮಾತನಾಡಿ, ಶಿವಮೊಗ್ಗದ ನೆಲದಲ್ಲಿ ಹೋರಾಟದ ಕಿಚ್ಚಿದೆ. ಈಗಾಗಲೇ ಹತ್ತಾರು ಸಂಘಟನೆಗಳು ಸಂಚಾರಿ ಹೈಕೋರ್ಟ್ ಪೀಠಕ್ಕೆ ಬೆಂಬಲ ನೀಡಿವೆ. ವಕೀಲರ ಹೋರಾಟ ಪ್ರಬಲಗೊಂಡು ಸಂಚಾರಿ ಪೀಠದ ಕನಸು, ಆಶಯ ಈಡೇರಲಿ ಎಂದರು.
ಶಿವಮೊಗ್ಗ ಪ್ರೆಸ್ ಟ್ರಸ್ಟಿನ ಉಪಾಧ್ಯಕ್ಷ ಹೊನ್ನಾಳಿ ಚಂದ್ರಶೇಖರ್, ಕಾರ್ಯದರ್ಶಿ ನಾಗರಾಜ ನೇರಿಗೆ, ಹಿರಿಯ ಪತ್ರಕರ್ತರಾದ ಜೇಸುದಾಸ್ ಪಿ, ಗಜೇಂದ್ರ ಸ್ವಾಮಿ, ದತ್ತಾತ್ರೇಯ ಹೆಗಡೆ, ಯೋಗೀಶ್ ಶಾನುಬೋಗನಹಳ್ಳಿ , ವಿ.ಸಿ.ಪ್ರಸನ್ನ, ಗೋವ ಮೋಹನ, ಶಿ.ಜು.ಪಾಶ, ಸ್ಪಂದನಾ ಚಂದ್ರು, ವೀರೇಂದ್ರ ಪಿ ಸೇರಿದಂತೆ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರಸ್ವಾಮಿ, ಹಿರಿಯ ನ್ಯಾಯವಾದಿಗಳಾದ ಬಸಪ್ಪ ಗೌಡರ, ಕೆ ಪಿ ಶ್ರೀಪಾಲ್ ಸೇರಿದಂತೇ ಹಲವರು ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ








